ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಪುಟಾಣಿ ಕೃಷ್ಣ–ರಾಧೆಯರ “ಶ್ರೀ ಕೃಷ್ಣ ಸಂಭ್ರಮ”

0

ಕಾಣಿಯೂರು: ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರು ನರ್ಸರಿ ವಿಭಾಗದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ “ಶ್ರೀ ಕೃಷ್ಣ ಸಂಭ್ರಮ” ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.


ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ಕೃಷ್ಣ ಹಾಗೂ ರಾಧೆಯರ ಆಕರ್ಷಕ ವೇಷಭೂಷಣ ಧರಿಸಿ ಎಲ್ಲರ ಗಮನ ಸೆಳೆದರು. ಕೃಷ್ಣನ ಬಾಲಲೀಲೆಗಳು, ರಾಧಾ–ಕೃಷ್ಣರ ವೇಷಧಾರಣೆ, ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಪುಟಾಣಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.


ಶಾಲಾ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಶಾಲಾ ಸಹ ಆಡಳಿತಾಧಿಕಾರಿ ಹೇಮಾನಾಗೇಶ್ ರೈ ಮಾಳ, ಕನ್ನಡ ಮಾಧ್ಯಮದ ಮುಖ್ಯಗುರು ವಿನಯ ವಿ. ಶೆಟ್ಟಿ, ಹಿರಿಯ ಶಿಕ್ಷಕಿಯರಾದ ಸವಿತಾ ಕೆ. ಹಾಗೂ ಧನ್ಯ ಎಂ.ಕೆ. ಅವರು ಮುದ್ದು ಕೃಷ್ಣ–ರಾಧೆಯ ವೇಷಧಾರಿ ಪುಟಾಣಿಗಳನ್ನು ಜೋಕಾಲಿಯಲ್ಲಿ ತೂಗುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.


ಶ್ರೀ ಕೃಷ್ಣನ ಬಾಲಲೀಲೆಗಳನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದವರ ಮನಸೂರೆಗೊಂಡವು. 10ನೇ ತರಗತಿಯ ವಿದ್ಯಾರ್ಥಿಗಳು ಅಟ್ಟಿ ಮಡಿಕೆ ಒಡೆಯುವ ಮೂಲಕ ಸಂಭ್ರಮಿಸಿದರು. ಅಸ್ಮಿ ಕೆ.ಪಿ (9ನೇ)ಹಾಗೂ ಜಾನ್ವಿ ಎಂ.ವಿ(9ನೇ) ಅವರ ಕೃಷ್ಣ–ರಾಧೆಯ ನೃತ್ಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.


ಕಾರ್ಯಕ್ರಮದಲ್ಲಿ ಶಾಲಾ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ, ಆಂಗ್ಲ ಮಾಧ್ಯಮದ ಮುಖ್ಯಗುರು ನಾರಾಯಣ ಭಟ್, ಸಂಸ್ಥೆಯ ಟ್ರಸ್ಟಿ ಹರಿಚರಣ್ ರೈ ಮಾದೋಡಿ ಹಾಗೂ ಪೋಷಕಬಂಧು ಸುಜಿತ್ ರೈ ಎಣ್ಮೂರು ಪಟ್ಟೆ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಿಕ್ಷಕಿ ಕವಿತಾ ಎಚ್. ರೈ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿಯರಾದ ಸುಚೇತ, ರಚನಾ, ಸವಿತಾ ಎಸ್. ಹಾಗೂ ಪ್ರತಿಭಾ ಅವರು ಕಾರ್ಯಕ್ರಮವನ್ನು ಸಂಘಟಿಸಿದರು.

LEAVE A REPLY

Please enter your comment!
Please enter your name here