ತುಳುವಿಗೆ ಮಾನ್ಯತೆ, ಮೆಡಿಕಲ್ ಕಾಲೇಜಿಗೆ 549.79 ಕೋಟಿ : ‘ಬಹಳ ವರ್ಷದ ಕನಸು ಇಂದು ನನಸಾಗಿದೆ’-ಶಾಸಕ ಅಶೋಕ್ ಕುಮಾರ್ ರೈ

0

ಪುತ್ತೂರು: ರಾಜ್ಯ ಸಚಿವ ಸಂಪುಟ ಸಭೆ ಹಿನ್ನೆಲೆಯಲ್ಲಿ ಮಂಗಳೂರಿಗೆ ಆಗಮಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪುತ್ತೂರು ಸೇರಿದಂತೆ ಕರಾವಳಿ ಭಾಗಕ್ಕೆ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಪುತ್ತೂರು ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ₹549.79 ಕೋಟಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ₹5 ಕೋಟಿ ವಿಶೇಷ ಅನುದಾನ ಘೋಷಿಸಲಾಗಿದೆ.

ವಿಟ್ಲ ಪಟ್ಟಣಕ್ಕೆ ₹94 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆ, ಬಂಟ್ವಾಳದ ಸಂಗಬೆಟ್ಟು ಸೇರಿದಂತೆ 65 ಹಾಗೂ ಕರೋಪಾಡಿಯ 79 ಜನವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ₹14.90 ಕೋಟಿ (81,525 ಜನರಿಗೆ ಅನುಕೂಲ), ಹಾಗೂ ಮಾಣಿಲ-ಪೂವನಡ್ಕ ಸಂಪರ್ಕಕ್ಕೆ ಸಿರಿಯ ನದಿಗೆ ಅಡ್ಡಲಾಗಿ ₹26 ಕೋಟಿ ವೆಚ್ಚದ ಸೇತುವೆ ನಿರ್ಮಾಣಕ್ಕೆ ಸಂಪುಟ ಅನುಮೋದನೆ ನೀಡಿದೆ. ಇದರ ಬೆನ್ನಲ್ಲೇ ತುಳು ಭಾಷೆಗೆ ರಾಜ್ಯದ 2ನೇ ಅಧಿಕೃತ ಭಾಷಾ ಸ್ಥಾನಮಾನ ದೊರೆತಿರುವುದು ಕರಾವಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ.

ಬಹಳ ವರ್ಷದ ಕನಸು ಇಂದು ನನಸಾಗಿದೆ-ಶಾಸಕ ಅಶೋಕ್ ಕುಮಾರ್ ರೈ
ಈ ಕುರಿತು ಪ್ರತಿಕ್ರಿಯಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, “ಬಹಳ ವರ್ಷದ ಕನಸು ಇಂದು ನನಸಾಗಿದೆ. ತುಳು ನಮ್ಮ ಮಾತೃ ಭಾಷೆ. ರಾತ್ರಿ ನಿದ್ದೆ ಬರ್ಲಿಲ್ಲ ಅಂದ್ರೆ ತುಳು ಹಾಡು ಕೇಳಿದ್ರೆ ಸಾಕು ನಿದ್ದೆ ಬರ್ತದೆ. ಇಂದು ಜೀವನದ ಅತ್ಯಂತ ಸಂತೋಷದ ದಿನ. ಇಷ್ಟು ದಿವಸ ತುಳುವಿನ ಬಗ್ಗೆ ಮೈಕ್ ನಲ್ಲಿ ಮಾತನಾಡಿ ಹೋದವರೇ ಜಾಸ್ತಿ, ಕೆಲಸ ಮಾಡಿದವರು ಯಾರೂ ಇಲ್ಲ. ನಾವು ಕಡತ ತಯಾರಿಸಿ ಮುಖ್ಯಮಂತ್ರಿಗಳ ಬಳಿ, ಇದು ಅಶೋಕ್ ರೈ ಒಬ್ಬನದ್ದಲ್ಲ, ಇಡೀ ಕರಾವಳಿ ಭಾಗದ ಜನರ ಮನವಿ ಎಂದು ಮನವಿ ಮಾಡಿದ್ದೆವು. ಇಂದು ಮನ್ನಣೆ ಸಿಕ್ಕಿದ್ದು ಹೋರಾಟಕ್ಕೆ ಜಯ ಸಿಕ್ಕಂತಾಗಿದೆ” ಎಂದರು.

LEAVE A REPLY

Please enter your comment!
Please enter your name here