







ಭರತ ಖಂಡದ ಪುಣ್ಯಕ್ಷೇತ್ರಗಳಿಗೆ ಅದರದ್ದೇ ವಿಶೇಷತೆಗಳಿವೆ: ಶ್ರೀಕಾಂತ್ ಶೆಟ್ಟಿ


ಉಪ್ಪಿನಂಗಡಿ: ಉತ್ತರದ ಪ್ರಯಾಗದಲ್ಲಿ ನಡೆಯುವ ಕುಂಭಮೇಳದಷ್ಟೇ ಪವಿತ್ರವಾದ ದಕ್ಷಿಣದ ಉಪ್ಪಿನಂಗಡಿಯ ನೇತ್ರಾವತಿ ಕುಮಾರಧಾರಾ ನದಿ ಸಂಗಮ ಸ್ಥಳವು ಪ್ರಸಿದ್ಧವಾಗಿದೆ. ಇಲ್ಲಿ ವರ್ಷದ ಮಾಘ ಮಾಸದಲ್ಲಿ ನಡೆಯುವ ಮೂರು ಮಖೆ ಜಾತ್ರೆಗಳ ಮಖೆ ತೀರ್ಥ ಸ್ನಾನವು ಪವಿತ್ರವಾಗಿದ್ದು, ದೇವಾನುದೇವತೆಗಳು, ಋಷಿಮುನಿಗಳು, ದೈವಗಳೂ ಇಲ್ಲಿನ ತೀರ್ಥ ಸ್ನಾನಕ್ಕೆ ಆಗಮಿಸುತ್ತಾರೆನ್ನುವುದು ಪ್ರತಿಯೊಂದು ದೈವದ ಪಾಡ್ದನಗಳಲ್ಲಿ ಉಲ್ಲೇಖಿತವಾಗಿದೆ ಎಂದು ತುಳುನಾಡಿನ ದೈವಾರಾಧನೆಯ ಅಧ್ಯಯನಕಾರ, ಹಿಂದೂ ಜಾಗರಣವೇದಿಕೆಯ ಮುಂದಾಳು ಶ್ರೀಕಾಂತ್ ಶೆಟ್ಟಿ ಕಾರ್ಕಳ ತಿಳಿಸಿದರು.



ಉಪ್ಪಿನಂಗಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸೇವಾ ಟ್ರಸ್ಟ್ (ರಿ) ಇದರ ಆಶ್ರಯದಲ್ಲಿ ನಡೆದ 50 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ನಾಲ್ಕನೇ ದಿನವಾದ ಸೆ.೧೭ರಂದು ನಡೆದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಪಾವನ ಭೂಮಿ ಭರತಖಂಡದ ಪ್ರತಿಯೊಂದು ಪುಣ್ಯ ಕ್ಷೇತ್ರವೂ ಅದರದ್ದೇ ಆದ ವಿಶೇಷತೆಯನ್ನು ಹೊಂದಿದೆ. ಆ ವಿಶೇಷತೆಯನ್ನು ತಿಳಿದುಕೊಂಡು ಮುಂದಿನ ಪೀಳಿಗೆಗೂ ಅದರ ಮಹತ್ವದ ಅರಿವು ಮೂಡಿಸಿದಾಗ ಧಾರ್ಮಿಕ ಮೌಲ್ಯಗಳನ್ನು ಜೀವಂತಿಕೆಗೊಳಿಸಲು ಸಾಧ್ಯ ಎಂದರು.
ಅಂದು ಬ್ರಿಟೀಷರ ವಿರುದ್ದ ಜನಜಾಗೃತಿಯನ್ನು ಮೂಡಿಸಲು ಬಾಲಗಂಗಾಧರ ತಿಲಕರು ಮನೆಯಲ್ಲಿ ನಡೆಯುತ್ತಿದ್ದ ಗಣೇಶೋತ್ಸವವನ್ನು ಸಾರ್ವಜನಿಕಗೊಳಿಸಿದರು. ಇಂದು ೫೦ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಕಾರಣಕ್ಕೆ ಬಾಗಿ ಎಂಬ ಬಡ ಮಹಿಳೆಗೆ ಸುದೃಢವಾದ ಆರ್ಸಿಸಿ ಮನೆಯನ್ನು ನಿರ್ಮಿಸಿಕೊಡುವ ಮೂಲಕ ಉಪ್ಪಿನಂಗಡಿಯ ಸಮಿತಿಯವರು ಮಾದರಿ ಕಾರ್ಯಕ್ರಮವನ್ನು ಅನುಷ್ಠಾನಿಸಿದಂತಾಗಿದೆ ಎಂದು ಶ್ಲಾಘಿಸಿದರು.
ಮಾಜಿ ಶಾಸಕ ಸಂಜೀವ ಮಟಂದೂರು ಮಾತನಾಡಿ, ಇಲ್ಲಿನ ಶ್ರೀ ಗಣೇಶೋತ್ಸವ ಸಮಿತಿಯವರು ತನ್ನ 50 ನೇ ವರ್ಷಾಚರಣೆಯ ನಿಮಿತ್ತ ಬಡ ಮಹಿಳೆಗೆ ಮನೆ ನಿರ್ಮಿಸಿಕೊಡುವ ಮೂಲಕ ಬಡವರ ಸೇವೆಯಲ್ಲಿ ನೈಜ ದೇವತಾ ಸೇವೆಯನ್ನು ಕಂಡಂತಾಗಿದೆ ಎಂದರು.
ಶ್ರೀ ಲಕ್ಷ್ಮೀ ವೆಂಕಟರಮಣ ದೇವಳದ ಆಡಳಿತ ಮೊಕ್ತೇಸರ ಬಿ. ಗಣೇಶ್ ಶೆಣೈ , ಶ್ರೀ ಗಣೇಶೋತ್ಸವ ಸಮಿತಿಯು ಸಾಗಿ ಬಂದ 50 ವರ್ಷಗಳ ಅವಲೋಕನದ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಣ ಶಿಕ್ಷಕ ವಿಜೇತ್ ಕುಮಾರ್ ಜೈನ್ ಹಾಗೂ ಸೇವಾ ಸಂಸ್ಥೆಯಾಗಿರುವ ನಮ್ಮೂರು- ನಮ್ಮವರು ಮೈಂದಡ್ಕ ಸಂಸ್ಥೆಯನ್ನು ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಗತ 50 ವರ್ಷಗಳಲ್ಲಿ ಸಮಿತಿಯ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ 21 ಮಂದಿಯನ್ನು ಗೌರವಿಸಲಾಯಿತು. ವಿಗ್ರಹ ರಚನಾಕಾರ ಶ್ರೀನಿವಾಸ್ ಪ್ರಭು ರವರನ್ನು ಸನ್ಮಾನಿಸಲಾಯಿತು.
ಸೇವಾ ಟ್ರಸ್ಟ್ನ ಅಧ್ಯಕ್ಷ ಸುಧಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗೆಳೆಯರು- 94 ಸಂಘಟನೆಯ ರಾಧಾಕೃಷ್ಣ ಭಟ್ ಬೊಳ್ಳಾವು , ಪಟ್ಲ ಫೌಂಡೇಷನ್ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಕೆ. ಜಗದೀಶ್ ಶೆಟ್ಟಿ, 34 ನೇ ನೆಕ್ಕಿಲಾಡಿಯ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ಅಧ್ಯಕ್ಷ ಕೆ. ಉದಯ ಕುಮಾರ್ , ಶ್ರೀ ಮಾಧವ ಶಿಶು ಮಂದಿರದ ಅಧ್ಯಕ್ಷ ಹರಿರಾಮಚಂದ್ರ, ಬನ್ನೆಂಗಳ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಗುಣಕರ ಅಗ್ನಾಡಿ, ಕಾಳಿಕಾಂಬಾ ಭಜನಾ ಮಂಡಳಿಯ ಕಾರ್ಯದರ್ಶಿ ಜೆ. ಮಾಧವ ಆಚಾರ್ಯ, ಗಣೇಶೋತ್ಸವ ಸೇವಾ ಟ್ರಸ್ಟ್ ನ ಮಹಿಳಾ ಘಟಕದ ಅಧ್ಯಕ್ಷೆ ಅನುರಾಧಾ ಆರ್ ಶೆಟ್ಟಿ, ಸೇವಾ ಟ್ರಸ್ಟ್ ಕಾರ್ಯದರ್ಶಿ ಜಯಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಾದ ಚಂದ್ರಹಾಸ ಹೆಗ್ಡೆ, ಶರತ್ ಕೋಟೆ, ಕೀರ್ತನ್ ಕುಮಾರ್ ಶೆಟ್ಟಿ, ಯು ಯತೀಶ್ ಶೆಟ್ಟಿ, ಯು ಕೃಷ್ಣ , ಚಂದಪ್ಪ ಮೂಲ್ಯ, ಬಾಲಕೃಷ್ಣ ರೈ, ಬಾಲಚಂದ್ರ ಶೆಟ್ಟಿ, ಕಂಗ್ವೆ ವಿಶ್ವನಾಥ ಶೆಟ್ಟಿ , ತಿಮ್ಮಪ್ಪ ಭಂಡಾರಿ, ಉಪೇಂದ್ರ ಪೈ, ಶ್ರೀನಿವಾಸ್ ಪ್ರಭು, ಪುರುಷೋತ್ತಮ ಮುಂಗ್ಲಿಮನೆ , ವಿಜಯಕುಮಾರ್ ಕಲ್ಲಳಿಕೆ, ರಘುರಾಮ ಕೋಟೆ, ಸತೀಶ್ ಕಿಣಿ, ರವೀಶ್ ಎಚ್.ಟಿ. ಮೊದಲಾದವರು ಭಾಗವಹಿಸಿದ್ದರು. ರಾತ್ರಿ ಶ್ರೀ ದೇವರಿಗೆ ಮಹಾ ರಂಗಪೂಜೆ ನಡೆದು ಸಾರ್ವಜನಿಕ ಅನ್ನ ಸಂತರ್ಪಣೆಯು ಜರಗಿತು.










