ಕೊಯಿಲ ವಿದ್ಯುತ್ ಸಬ್ ಸ್ಟೇಷನ್ ಪರೀಕ್ಷಾರ್ಥ ಚಾಲನೆ

0

ರಾಮಕುಂಜ: ಕೊಯಿಲದಲ್ಲಿ ನಿರ್ಮಾಣವಾಗಿರುವ 33 ಕೆವಿ (33 ಸಾವಿರ ಓಲ್ಟೇಜ್ ಸಾಮರ್ಥ್ಯದ) ವಿದ್ಯುತ್ ಉಪಕೇಂದ್ರ ಕಾಮಗಾರಿ ಪೂರ್ಣಗೊಂಡಿದ್ದು, ಪರೀಕ್ಷಾರ್ಥ ಚಾಲನೆ ಆರಂಭಗೊಂಡಿರುತ್ತದೆ ಎಂದು ಮೆಸ್ಕಾಂ ಇಲಾಖಾ ಮೂಲಗಳು ತಿಳಿಸಿದೆ.


ಕೊಯಿಲದಲ್ಲಿ ಪಶು ಸಂಗೋಪನಾ ಕೇಂದ್ರದ ಅಂಚಿನಲ್ಲಿ ರಾಜ್ಯ ಸರ್ಕಾರದ 13 ಕೋಟಿ ರೂ. ಅನುದಾನದಲ್ಲಿ 33 ಸಾವಿರ ಓಲ್ಟೇಜ್ ಸಾಮಥ್ಯದ 33 ಕೆ.ವಿ. ವಿದ್ಯುತ್ ಉಪ ಕೇಂದ್ರ ನಿರ್ಮಾಣ ಆಗಿದೆ. ಇದಕ್ಕೆ 2 ಕೋಟಿ ರೂ.ಅನುದಾನದಲ್ಲಿ ಆಲಂಕಾರುನಿಂದ ಲಿಂಕ್ ಲೈನ್ ಕಾಮಗಾರಿಯೂ ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ಲೋಕಾರ್ಪಣೆಗೊಂಡು ಪೂರ್ಣ ಪ್ರಮಾಣದಲ್ಲಿ ಸಬ್ ಸ್ಟೇಷನ್ ಕಾರ್‍ಯಾಚರಿಸಲಿದೆ. ಇದೀಗ ಪರೀಕ್ಷಾರ್ಥವಾಗಿ ಲೈನ್ ಚಾರ್ಜ್, ಸಬ್ ಸ್ಟೇಷನ್ ಪರಿಶೀಲನೆ ನಡೆಸಿ ತಾಂತ್ರಿಕ ಸಮಸ್ಯೆ, ಲೋಪ ದೋಷಗಳಿದ್ದಲ್ಲಿ ಸರಿಪಡಿಸುವ ಕೆಲಸ ನಡೆಯಲಿದ್ದು, ಅದೆಲ್ಲವನ್ನು ಪಕ್ಕಾ ಮಾಡಲಾಗಿ ಲೋಕಾರ್ಪಣೆಗೆ ಮುಕ್ತ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

5 ಗ್ರಾಮ ವ್ಯಾಪ್ತಿಗೆ ಹಂಚಿಕೆ:
ಈ ಉಪಕೇಂದ್ರದ ಮೂಲಕ ಕೊಯಿಲ, ರಾಮಕುಂಜ, ಹಳೆನೇರೆಂಕಿ, ಹಿರೇಬಂಡಾಡಿ, ಬಜತ್ತೂರು ಹೀಗೆ 5 ಗ್ರಾಮ ವ್ಯಾಪ್ತಿಗೆ ಒಟ್ಟು 11 ಕೆವಿ (11 ಸಾವಿರ ಓಲ್ಟೇಜ್) ವಿದ್ಯುತ್ ಹಂಚಿಕೆಯಾಗಲಿದೆ. ಈ ಮೂಲಕ ಈ ಭಾಗದ ಜನರನ್ನು ನಿರಂತರವಾಗಿ ಕಾಡುತ್ತಿದ್ದ ವಿದ್ಯುತ್ ಕಡಿತ, ಓಲ್ಟೇಜ್ ಸಮಸ್ಯೆ ನಿವಾರಣೆಗೆ ಕಾಲ ಕೂಡಿ ಬಂದಂತಾಗಿದೆ.


ಮೆಸ್ಕಾಂನ ಆದೇಶ ಆಧಾರದಲ್ಲಿ ಲೋಕಾರ್ಪಣೆ
ಸಬ್ ಸ್ಟೇಷನ್ ಪರೀಕ್ಷಾರ್ಥ ಅವಧಿಯಲ್ಲಿದ್ದು, ಏನಾದರೂ ಲೋಪ-ದೋಷ ಇದೆಯೇ ಎಂದು ಕಂಡುಕೊಳ್ಳಲಾಗುವುದು. ತದ ನಂತರ ಮೆಸ್ಕಾಂ ಇಲಾಖಾ ಮುಖ್ಯಸ್ಥರ ಆದೇಶ ಆಧಾರದಲ್ಲಿ ಲೋಕಾರ್ಪಣೆ ನಡೆಯಲಿದೆ.
ರಾಮಚಂದ್ರ ಎ., ಕಾರ್‍ಯನಿರ್ವಾಹಕ ಇಂಜಿನಿಯರ್, ಮೆಸ್ಕಾಂ, ಪುತ್ತೂರು ಉಪ ವಿಭಾಗ

LEAVE A REPLY

Please enter your comment!
Please enter your name here