







ದಾಖಲೆ ಸಲ್ಲಿಸಲು 3 ದಿನಗಳ ಗಡುವು-ಕಾನೂನು ಕ್ರಮದ ಎಚ್ಚರಿಕೆ


ನೆಲ್ಯಾಡಿ: ಕಡಬ ತಾಲೂಕಿನ ಶಿರಾಡಿ ಗ್ರಾಮದ ಗುಂಡ್ಯ ಜಂಕ್ಷನ್ನಲ್ಲಿ ರಾಷ್ಟ್ರೀಯ ಹೆದ್ದಾರಿ 75ರ ಬದಿಯಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಅಂಗಡಿಗಳಿಗೆ ಉಪ್ಪಿನಂಗಡಿ ಪೊಲೀಸರು ನೋಟೀಸ್ ಜಾರಿಗೊಳಿಸಿದ್ದಾರೆ. ಮೂರು ದಿನದೊಳಗೆ ದಾಖಲೆ ಸಲ್ಲಿಸಲು ಅಂಗಡಿ ಮಾಲಕರಿಗೆ ಸೂಚನೆ ನೀಡಲಾಗಿದೆ.



ಪೊಲೀಸ್ ಇಲಾಖೆಯ ದೈನಂದಿನ ಗಸ್ತು ಹಾಗೂ ಸಾರ್ವಜನಿಕರಿಂದ ಬಂದಿರುವ ದೂರುಗಳ ಆಧಾರದ ಮೇಲೆ ಪೊಲೀಸ್ ಇಲಾಖೆ ಈ ಕ್ರಮ ಕೈಗೊಂಡಿದೆ. ಶಿರಾಡಿ ಗ್ರಾಮ ಪಂಚಾಯಿತಿಯಿಂದ ವ್ಯಾಪಾರ ಪರವಾನಿಗೆ ಪಡೆಯದೆ ವ್ಯಾಪಾರ ನಡೆಸಲಾಗುತ್ತಿದೆ. ಅಂಗಡಿಯ ಮುಂದೆ ಗ್ರಾಹಕರ ವಾಹನಗಳನ್ನು ನಿಲ್ಲಿಸಲು ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಗ್ರಾಹಕರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ವಾಹನ ನಿಲ್ಲಿಸುತ್ತಿದ್ದಾರೆ. ಅಂಗಡಿಯ ಮುಂಭಾಗದಲ್ಲಿ ಅನಧಿಕೃತವಾಗಿ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಸಂಚಾರ ದಟ್ಟಣೆ ಉಂಟಾಗುವುದಲ್ಲದೆ, ರಸ್ತೆ ಅಪಘಾತಗಳಿಗೆ ಕಾರಣವಾಗುವ ಸಾಧ್ಯತೆಯಿದೆ. ಇದರಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗಿ ಹೆದ್ದಾರಿ ಪ್ರಯಾಣಿಕರ ಸುರಕ್ಷತೆಗೂ ಅಪಾಯ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಸೆಕ್ಷನ್ 94ರ ಅಡಿಯಲ್ಲಿ ನೋಟಿಸ್ ಜಾರಿಗೊಳಿಸಲಾಗಿದ್ದು, ನೋಟಿಸ್ ತಲುಪಿದ ಮೂರು ದಿನಗಳೊಳಗೆ ಖುದ್ದಾಗಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಹಾಜರಾಗಿ ದಾಖಲೆಗಳ ಮೂಲ ಪ್ರತಿಗಳನ್ನು ಹಾಜರುಪಡಿಸುವಂತೆ ಸೂಚಿಸಲಾಗಿದೆ.
ಶಿರಾಡಿ ಗ್ರಾ.ಪಂ.ನಿಂದ ನೀಡಿರುವ ವ್ಯಾಪಾರ ಪರವಾನಿಗೆ, ಗ್ರಾಹಕರಿಗೆ ಸೂಕ್ತ ಪಾರ್ಕಿಂಗ್ ಸ್ಥಳವಿರುವುದನ್ನು ದೃಢಪಡಿಸುವ ಅನುಮೋದಿತ ಕಟ್ಟಡ ನಕ್ಷೆ ಹಾಗೂ ಪಾರ್ಕಿಂಗ್ ನಕ್ಷೆ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ವ್ಯಾಪಾರ ನಡೆಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಥವಾ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯಿಂದ ಪಡೆದ ನಿರಾಕ್ಷೇಪಣಾ ಪತ್ರ ಹಾಜರುಪಡಿಸುವಂತೆ ಸೂಚಿಸಲಾಗಿದೆ. ಗ್ರಾಹಕರಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು, ಅಂಗಡಿಯ ಮುಂಭಾಗದ ಎನ್.ಎಚ್.೭೫ರಲ್ಲಿ ಯಾವುದೇ ವಾಹನಗಳು ಅನಧಿಕೃತವಾಗಿ ನಿಲುಗಡೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ನೋಟಿಸ್ನಲ್ಲಿರುವ ಸೂಚನೆಗಳನ್ನು ಪಾಲಿಸದೆ ಸಂಚಾರಕ್ಕೆ ಉಂಟಾಗಿರುವ ಅಡ್ಡಿಯನ್ನು ನಿವಾರಿಸದಿದ್ದಲ್ಲಿ, ಯಾವುದೇ ಮುನ್ನೆಚ್ಚರಿಕೆ ಅಥವಾ ಹೆಚ್ಚುವರಿ ಸೂಚನೆ ನೀಡದೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ನೀಡಿರುವ ನೋಟೀಸ್ನಲ್ಲಿ ಎಚ್ಚರಿಕೆ ನೀಡಲಾಗಿದೆ.










