ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ

0

9/11, ಜಾಗ ಖರೀದಿಯಲ್ಲಿ ಅವ್ಯವಹಾರ, ಅನಧಿಕೃತ ಹಣ ವರ್ಗಾವಣೆಗಳ ಬಗ್ಗೆ ತನಿಖೆಗೆ ಆಗ್ರಹ

ಪುತ್ತೂರು: ಸಹಕಾರ ಸಂಘದ ನಿವೇಶನದ 9/11 ಮಾಡುವುದು, ಸಂಘದ ನಿವೇಶನ ಖರೀದಿಯಲ್ಲಿ ಅವ್ಯವಹಾರ ಹಾಗೂ ಸಂಘದ ಖಾತೆಯ ಮೂಲಕ ಅನಧಿಕೃತ ಹಣ ವರ್ಗಾವಣೆ ಆಗಿರುವ ಪ್ರಕರಣಗಳ ಬಗ್ಗೆ ಸುದೀರ್ಘ ಚರ್ಚೆ ನಡೆದ ಸೂಕ್ತ ತನಿಖೆ ಆಗ್ರಹಿಸಿರುವ ಘಟನೆ ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆಯಲ್ಲಿ ನಡೆದಿದೆ.


ಸಭೆಯು ಸೆ.20ರಂದು ಸಂಘದ ಅಧ್ಯಕ್ಷ ನವೀನ್ ಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕೇಂದ್ರ ಕಚೇರಿಯ ನಿವೇಶನದ 9/11ಗೆ ರೂ.2.80ಲಕ್ಷ ಪಾವತಿಯಾಗಿರುವುದು, ಸಂಘಕ್ಕೆ ಖರೀದಿಸಿದ ನಿವೇಶನದ ವಿಸ್ತೀರ್ಣದಲ್ಲಿ ವ್ಯತ್ಯಾಸ, ಅದರಲ್ಲಿ ರೂ.8.75ಲಕ್ಷ ಅವ್ಯವಹಾರ ಮತ್ತು ಸಂಘದ ಖಾತೆಯ ಮೂಲಕ ಅನಧಿಕೃತವಾಗಿ ರೂ.1.09ಕೋಟಿಒ ಹಣ ವರ್ಗಾವಣೆ ಆಗಿರುವ ಪ್ರಕರಣಗಳ ಬಗ್ಗೆ ಸುದೀರ್ಘ ಕಾಲ ಚರ್ಚೆ ನಡೆದು ಈ ಪ್ರಕರಣಗಳನ್ನು ಸೂಕ್ತ ತನಿಖೆ ನಡೆಸುವಂತೆ ಸದಸ್ಯರು ಆಗ್ರಹಿಸಿದ್ದಾರೆ.


9/11ಗೆ ರೂ.2.85ಲಕ್ಷ ಖರ್ಚು-ಭ್ರಷ್ಠಾಚಾರದ ತನಿಖೆಗೆ ಆಗ್ರಹ;
ಸದಸ್ಯ ಸುಧಾಕರ ಕುಲಾಲ್ ಮಾತನಾಡಿ, ವರದಿಯಲ್ಲಿ 9/11ಗೆ ರೂ.2.85ಲಕ್ಷ ಖರ್ಚು ಆಗಿರುವುದು ಉಲ್ಲೇಖವಿದೆ. ಯಾವ ಪಂಚಾಯತ್‌ನಲ್ಲಿಯೂ ಅಷ್ಟು ಖರ್ಚಾಗುವುದಿಲ್ಲ. ಆದರೂ ಇಷ್ಟೊಂದು ಖರ್ಚಾಗಿರುವುದು ಹೇಗೆ ಎಂದು ಪ್ರಶ್ನಿಸಿದರು. ಉತ್ತರಿಸಿದ ಅಧ್ಯಕ್ಷ ನವೀನ್ ಅವರು ಸಂಘದ ಕೇಂದ್ರ ಕಛೇರಿಯ 9/11 ಮಾಡಲಾಗಿತ್ತು. ಆಡಳಿತ ಮಂಡಳಿ ಸಭೆಯಲ್ಲಿ ಇದನ್ನು ಕಡಿಮೆ ಖರ್ಚಿನಲ್ಲಿ ಮಾಡುವುದಾಗಿ ನಿರ್ದೇಶಕ ಬಾಬು ಶೆಟ್ಟಿಯವರು ತಿಳಿಸಿದ್ದು ಅವರಿಗೆ ಜವಾಬ್ದಾರಿ ನೀಡಿ ಅವರ ಮುಖಾಂತರ ನಡೆಸಲಾಗಿದೆ ಎಂದು ತಿಳಿಸಿದರು. ನಿರ್ದೇಶಕ ಬಾಬು ಶೆಟ್ಟಿಯವರು ಮಾತನಾಡಿ, ಸಂಘದ ಕೇಂದ್ರ ಕಚೇರಿಯ 14 ಸೆಂಟ್ಸ್ ಜಾಗಕ್ಕೆ 9/11 ಆಗಬೇಕಿತ್ತು. ವಕೀಲರ ಮೂಲಕ ಕಡತವು ಪೂಡಾಕ್ಕೆ ಹೋಗಿತ್ತು. ಕಮರ್ಷಿಯಲ್ ಕನ್ವರ್ಷನ್ ಆಗದೇ ಇರುವುದರಿಂದ ಕಡತ ತಿರಸ್ಕೃತಗೊಂಡಿತ್ತು. ವಕೀಲರು 14 ಸೆಂಟ್ಸ್ ಜಾಗದ 9/11ಗೆ ರೂ.2ಲಕ್ಷ ವೆಚ್ಚವಾಗುವುದಾಗಿ ಹೇಳಿದ್ದರು. ಪಿಡಿಓರವರಲ್ಲಿ ಮಾಹಿತಿ ಕೇಳಿದಾಗ ಪ್ರತ್ಯೇಕ ಪ್ರತ್ಯೇಕ ಮಾಡಬೇಕೆಂದು ಹೇಳಿದ್ದರು. ಬೇರೆ ಯಾವುದೇ ದಾರಿ ಇಲ್ಲದ ಕಾರಣ ಸಂಘದ ದಾಖಲೆಯ ಭದ್ರತೆಗಾಗಿ ಮಾಡಲಾಗಿದೆ. ಇದರಲ್ಲಿ ನನ್ನ ಪಾತ್ರವಿಲ್ಲ ಎಂದು ತಿಳಿಸಿದರು. ಇದೇ ವಿಚಾರದಲ್ಲಿ ನಿರ್ದೇಶಕ ಬಾಬು ಶೆಟ್ಟಿ ಹಾಗೂ ಸದಸ್ಯ ಸುಧಾಕರ ಕುಲಾಲ್ ಮಧ್ಯೆ ಮಾತಿನ ಚಕಮಕಿ ನಡೆದು ನೀವು ಯಾವ ದೇವಸ್ಥಾನಕ್ಕೆ ಪ್ರಮಾಣಕ್ಕೆ ಬರುತ್ತೀರಿ ಎಂದು ನಿರ್ದೇಶಕ ಬಾಬು ಶೆಟ್ಟಿಯವರು ಕೇಳಿದರು. ಇದೇ ರೀತಿ ನೀವು ಈ ಹಿಂದೆಯೂ ಹಲವು ಬಾರಿ ದೇವಸ್ಥಾನಕ್ಕೆ ಕರೆದಿರುವುದಾಗಿ ಸುಧಾಕರ ಕುಲಾಲ್ ಹೇಳಿದರು. ಇಲ್ಲಿ ಸಹಕಾರಿ ಸಂಘದ ಸಭೆ ನಡೆಯುತ್ತಿದ್ದು ಇಲ್ಲಿ ದೇವಸ್ಥಾನಕ್ಕೆ ಕರೆಯುವ ವಿಚಾರ ಬೇಡ. ಸಂಘದ ವಿಚಾರದ ಬಗ್ಗೆ ಚರ್ಚೆಯಾಗಲಿ ಎಂದು ಅಶ್ರಫ್ ಮೊದಲಾದವರು ತಿಳಿಸಿದರು. ರೂ.20ಸಾವಿರ ಮಾತ್ರ ಪಂಚಾಯತ್‌ಗೆ ಪಾವತಿಯಾಗಿದೆ. ಉಳಿದ ಮೊತ್ತಗಳು ಸೆಲ್ಫ್ ಚೆಕ್‌ಮೂಲಕ ಪಾವತಿಯಾಗಿದೆ. ಅದರಲ್ಲಿ 9/11ಗೆ ಅಂತ ಉಲ್ಲೇಖವಿದೆ. ಸಂಘದಲ್ಲಿರುವ ರೈತರ ಹಣವನ್ನು ಪಾವತಿಸಿದ್ದು 9/11ನಲ್ಲಿ ಭ್ರಷ್ಠಾಚಾರವಾಗಿದ್ದು ದೊಡ್ಡ ಮೊತ್ತದ ಹಣ ಪಾವತಿಯಾಗಿದೆ. ಇದರ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸುಧಾಕರ ಕುಲಾಲ್ ಆಗ್ರಹಿಸಿದರು.


ಹಣ ವರ್ಗಾವಣೆ ಉನ್ನತ ಮಟ್ಟದ ತನಿಖೆಯಾಗಲಿ;
ಸಂಘದಲ್ಲಿ ಅನಧಿಕೃತವಾಗಿ ಹಣ ವರ್ಗಾವಣೆಯಾಗಿದೆ ಎಂದು ಕೆಲ ಸಮಯಗಳ ಹಿಂದೆ ಸಂಘದವರೇ ಪತ್ರಿಕಾಗೋಷ್ಠಿ ಮಾಡಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಮಾನಹಾನಿಯಾಗುವಂತೆ ಮಾಡಲಾಗಿದೆ ಎಂದು ಸದಸ್ಯ ಸುಬ್ರಾಯ ಶೆಟ್ಟಿಮಜಲು ಹೇಳಿದರು. ಈ ಘಟನೆಯ ಬಗ್ಗೆ ಪೊಲೀಸ್ ಅಧೀಕ್ಷಕರು ಹಾಗೂ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದು ತನಿಖಾ ಹಂತದಲ್ಲಿದೆ. ತನಿಖೆಯ ವರದಿ ಬಂದ ಬಳಿಕವೇ ಸ್ಪಷ್ಟಣೆ ನೀಡಲಾಗುವುದು ಎಂದು ಅಧ್ಯಕ್ಷ ನವೀನ್ ಡಿ ತಿಳಿಸಿದರು. ಸದಸ್ಯ ರವೀಂದ್ರ ರೈಯವರು ಮಾತನಾಡಿ, ಸಂಘದ ವಿಚಾರವನ್ನು ಗುಪ್ತವಾಗಿಡಬೇಕಿತ್ತು. ಆದರೂ ಅನಾಮದೇಯ ವ್ಯಕ್ತಿಯಿಂದ ಸಂಘದ ಖಾತೆಗೆ ಜಮೆ ಮಾಡಿರುವ ಉದ್ದೇಶ ತಿಳಿಯಬೇಕಿತ್ತು. ಇದರಲ್ಲಿ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು. ಸಂಘಕ್ಕೆ ಹಣ ಪಾವತಿ ಮಾಡಿದ ಸ್ಕಿçÃನ್ ಶಾಟ್ ಇಟ್ಟು ವರ್ಗಾವಣೆ ಮಾಡಿರುವುದಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಧುಕರ್ ತಿಳಿಸಿದರು. ಸಂಘದ ಖಾತೆಗೆ ಹಣ ಜಮೆಯಾದಾಗ ಸಿಬ್ಬಂದಿ ವರ್ಗಾವಣೆ ಮಾಡಲು ಹೇಗೆ ಸಾಧ್ಯ. ಹಲವು ಬಾರಿ ದೊಡ್ಡ ಮೊತ್ತದಲ್ಲಿ ಹಣ ಪಾವತಿಯಾಗಿದ್ದು ಆದಾಯ ತೆರಿಗೆ ಇಲಾಖೆಯವರು ದಾಳಿ ಮಾಡಿದರೆ ಏನು ಮಾಡುವುದು. ಅನಾಮದೇಯ ವ್ಯಕ್ತಿಯಿಂದ ಜಮೆಯಾಗಿರುವುದಕ್ಕೆ ಸಿಬ್ಬಂದಿ ಮೇಲೆ ಕ್ರಮ ಯಾಕೆ. ಇಲ್ಲಿ ಕಾನೂನಿನ ಉಲ್ಲಂಘನೆಯಾಗಿದೆ. ಯಾರೂ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು ಎಂದು ರವೀಂದ್ರ ರೈಯವರು ತಿಳಿಸಿದರು. ಹಣ ವರ್ಗಾವಣೆ ಆಗಿರುವುದಕ್ಕೆ ಸಂಬಂಧಿಸಿದಂತೆ ದಾಖಲೆಗಳು ನಮ್ಮ ಬಳಿಯಿದೆ. ಸ್ಕ್ರೀನ್ ಶಾಟ್‌ಗಳು ಸಿಬ್ಬಂದಿ ಜಯರಾಮ ಅವರ ನಂಬರ್‌ಗೆ ಬಂದಿದೆ. ಇದರಲ್ಲಿ ಅವರ ಪಾತ್ರವಿರುವುದು ನಮ್ಮ ಗಮನಕ್ಕೆ ಬಂದಿದ್ದು ಅವರ ಮೇಲೆ ಕ್ರಮಕೈಗೊಳ್ಳಲಾಗಿದೆ ಎಂದು ಅಧ್ಯಕ್ಷ ನವೀನ್ ತಿಳಿಸಿದರು. ಇದರ ಬಗ್ಗೆಯೂ ಸರಕಾರದ ಉನ್ನತ ಮಟ್ಟದಲ್ಲಿ ತನಿಖೆಯಾಬೇಕು ಎಂದು ಸದಸ್ಯ ರವೀಂದ್ರ ರೈಯವರು ಆಗ್ರಹಿಸಿದರು.


ಹಿಂದಿನ ಆಡಳಿತ ಮಂಡಳಿ ಅವಧಿಯ ಜಾಗ ಖರೀದಿಯಲ್ಲಿ ವ್ಯತ್ಯಾಸ:
ಸಹಕಾರಿ ಸಂಘಕ್ಕೆ ಖರೀದಿ ಮಾಡಿದ ನಿವೇಶನದ ವಿಸ್ತೀರ್ಣದಲ್ಲಿ ವ್ಯತ್ಯಾಸ ಇರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಡಿರುವ ಬಗ್ಗೆ ಮಾಹಿತಿ ನೀಡುವಂತೆ ಸದಸ್ಯ ಸುಬ್ರಾಯ ಶೆಟ್ಟಿಮಜಲು ತಿಳಿಸಿದರು. ಅಧ್ಯಕ್ಷ ನವೀನ್ ಡಿ ಮಾತನಾಡಿ, ಸಂಘಕ್ಕೆ 50 ಸೆಂಟ್ಸ್ ನಿವೇಶನ ಖರೀದಿ ಪ್ರಕ್ರಿಯೆಗಳು ಹಿಂದಿನ ಆಡಳಿತ ಮಂಡಳಿಯ ಅವಧಿಯಲ್ಲಿ ನಡೆದಿರುತ್ತದೆ. ಈಗ ಅಳತೆ ಮಾಡುವ ಸಂದರ್ಭದಲ್ಲಿ ಆ ನಿವೇಶನದಲ್ಲಿ ಸುಮಾರು 5 ಸೆಂಟ್ಸ್ನಷ್ಟು ಜಾಗ ಕಡಿಮೆ ಬರುತ್ತಿದೆ ಎಂದು ತಿಳಿಸಿದರು. ಸುಬ್ರಾಯ ಶೆಟ್ಟಿಮಜಲು ಮಾತನಾಡಿ, 5 ಸೆಂಟ್ಸ್ ಜಾಗವಾದರೂ ಈಗಿನ ದರದಲ್ಲಿ ಸುಮಾರು ರೂ.40ಲಕ್ಷ ಬೆಲೆಯಿದೆ. ಇದಕ್ಕೆ ಸಂಘದಲ್ಲಿರುವ ರೈತರ ಹಣ ನೀಡಿರುವುದು. ಅಲ್ಲಿ ಜಾಗ ಕಡಿಮೆಯಿದ್ದರೆ ಸಂಸ್ಥೆಗಾಗಿರುವ ಅಷ್ಟು ದೊಡ್ಡ ಮೊತ್ತದ ನಷ್ಟಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದರು. ನಿಕಟಪೂರ್ವ ಅಧ್ಯಕ್ಷರು, ಹಾಲಿ ನಿರ್ದೇಶಕರಾಗಿರುವ ಬಾಬು ಶೆಟ್ಟಿಯವರು ಮಾತನಾಡಿ, 2023ರಲ್ಲಿ 46 ಮತ್ತು 4 ಒಟ್ಟು 50 ಸೆಂಟ್ಸ್ ಜಾಗವನ್ನು ಅಳತೆ ಮಾಡಿಯೇ ಸೆಂಟ್ಸ್ ಒಂದಕ್ಕೆ 2.07ಲಕ್ಷದಂತೆ ಹಿರಿಯ ಸದಸ್ಯ ರತ್ನಾಕರ ಅವರ ಉಪಸ್ಥಿತಿಯಲ್ಲಿ ಸೀತಾರಾಮ ಗೌಡ ಅವರು ಮುಖಾಂತರ ಖರೀದಿಸಲಾಗಿದೆ. ಈಗ ಅಳತೆ ಮಾಡುವಾಗ ಕಡಿಮೆ ಬರುತ್ತಿದೆ ಎಂದು ಹೇಳುತ್ತಿರುವುದಾಗಿ ಅವರು ತಿಳಿಸಿದರು. ನಿವೇಶನದ ಸುತ್ತ ಮುತ್ತಲಿನಲ್ಲಿ ಸೆಂಟ್ಸ್ ಸುಮಾರು ರೂ.8ಲಕ್ಷದಷ್ಟು ಬೆಲೆಯಿದೆ. ಇಲ್ಲಿ ಅಳತೆಯಲ್ಲಿ ವ್ಯತ್ಯಾಸವಿದ್ದು ಸಂಸ್ಥೆಗೆ ಆಗಿರುವ ನಷ್ಟವನ್ನು ಭರಿಸುವವರು ಯಾರು ಎಂದು ಸುಬ್ರಾಯ ಶೆಟ್ಟಿಮಜಲು ಪ್ರಶ್ನಿಸಿದರು. ನನ್ನ ಮೇಲಿನ ಧ್ವೇಷದಿಂದ ಈ ರೀತಿ ಆರೋಪ ಮಾಡುತ್ತಿದ್ದಾರೆ. ನನ್ನ ಮೇಲೆ ವೈಯಕ್ತಿಕ ಧ್ವೇಷ ಮಾಡಿ. ಆದರೆ ಸಂಘದ ಹೆಸರು ಬಳಸಬಾರದು. ಹಿರಿಯರು ಕಟ್ಟಿ ಬೆಳೆಸಿದ ಸಂಸ್ಥೆ ಉಳಿಯಬೇಕು ಎಂದು ಹೇಳಿದರು. ಹಿರಿಯ ಸದಸ್ಯ ರತ್ನಾಕರ ಪಿ.ಎಸ್ ಮಾತನಾಡಿ, ಜಾಗ ಖರೀದಿದುವ ಸಮಯದಲ್ಲಿ ಅಳತೆ ಮಾಡಿಯೇ ಖರೀದಿಸಲಾಗಿದೆ. ಅದರಲ್ಲಿ 46 ಮತ್ತು 4 ಒಟ್ಟು 50 ಸೆಂಟ್ಸ್ ಜಾಗ ಇರುವುದಾಗಿ ಸರ್ವೆಯರ್ ವರದಿ ನೀಡಿದ್ದಾರೆ ಎಂದರು. ನಿವೇಶನದಲ್ಲಿ ವ್ಯತ್ಯಾಸವಿರುದನ್ನು ಸರಿಪಡಿಸುವಂತೆ ಸಹಾಯಕ ಆಯುಕ್ತರಿಗೆ ಮೇಲ್ಮನವಿ ಸಲ್ಲಿಸಬೇಕು ಎಂದು ಸುಬ್ರಾಯ ಶೆಟ್ಟಿಮಜಲು ಸಲಹೆ ನೀಡಿದರು.


ನಿವೇಶನ ಖರೀದಿಯಲ್ಲಿ ರೂ.8.75ಲಕ್ಷ ಅವ್ಯವಹಾರ ಆರೋಪ:
ಹಿಂದಿನ ಆಡಳಿತ ಮಂಡಳಿಯ ಅವಧಿಯಲ್ಲಿ ಖರೀದಿಸಿದ ನಿವೇಶನದಲ್ಲಿ 50ಸೆಂಟ್ಸ್ಗೆ ರೂ.1,03,78,000ವನ್ನು ಚೆಕ್ ರೂಪದಲ್ಲಿ ಜಾಗದ ಮ್ಹಾಲಕರಿಗೆ ನೀಡಲಾಗಿದೆ. ಇದರಲ್ಲಿ ರೂ.95ಲಕ್ಷವನ್ನು ಜಾಗದ ಮ್ಹಾಲಕರು ಉಳಿಸಿಕೊಂಡು ಉಳಿದ ರೂ.8.75ಲಕ್ಷವನ್ನು 3 ಚೆಕ್‌ನಲ್ಲಿ ಜಾಗದ ಮ್ಹಾಲಕರು ಹಿಂತಿರುಗಿಸಿದ್ದಾರೆ. ಇದರ ಬಗ್ಗೆ ಚೆಕ್ ನಂಬರ್ ಸಹಿತ ದಾಖಲೆಗಳು ನಮ್ಮಲ್ಲಿದೆ. ಜಾಗದ ಅಗ್ರಿಮೆಂಟ್‌ನಲ್ಲಿಯೂ ರೂ.95ಲಕ್ಷದ ವ್ಯವಹಾರದ ಉಲ್ಲೇಖವಿದ್ದರೂ ಸಂಸ್ಥೆಯಿAದ ರೂ.1,03,75,000ಪಾವತಿಸಲಾಗಿದೆ. ರೂ.8.75ಲಕ್ಷ ಯಾರಿಗೆ ಹೋಗಿದೆ ಎಂದು ಸುಬ್ರಾಯ ಅವರು ಪ್ರಶ್ನಿಸಿದರು. ನಾವು ಜಾಗ ಖರೀದಿಯ ಸಮಯದಲ್ಲಿ ಮ್ಹಾಲಕರಿಗೆ ರೂ.1,03,75,000ವನ್ನು ನೀಡಲಾಗಿದೆ. ಇದರಲ್ಲಿ ದೇವರಾಣೆಗೂ ನನಗೇನು ಕೊಟ್ಟಿಲ್ಲ. ಅವರಲ್ಲಿಯೇ ಕೇಳಬೇಕು. ರೂ.8.75ಲಕ್ಷ ಯಾರಿಗೆ ಕೊಟ್ಟಿದ್ದಾರೆ ಎಂದು ನನಗೇನು ಗೊತ್ತಿಲ್ಲ. ಚೆಕ್ ಯಾರಿಗೆ ಹೋಗಿದೆ ಎನ್ನುವುದು ಗೊತ್ತಿಲ್ಲ ಎಂದು ಬಾಬು ಶೆಟ್ಟಿ ಹೇಳಿದರು. ಜಾಗ ಖರೀದಿಗೆ ಸಂಬAದಿಸಿದ ಎಲ್ಲಾ ದಾಖಲೆಗಳು ನಮ್ಮ ಬಳಿಯಿದ್ದು ಇದರಲ್ಲಿ ಭ್ರಷ್ಟಾಚಾರ ನಡೆದಿರುವುದು ಕಂಡು ಬರುತ್ತಿದೆ. ಸಂಘದಲ್ಲಿರುವ ರೈತರ ಹಣ ಅವ್ಯವಹಾರ ಆಗಿದ್ದು ಇದರ ಬಗ್ಗೆ ಸಹಕಾರ ಇಲಾಖೆ ಜಂಟಿ ಆಯುಕ್ತರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಸುಬ್ರಾಯ ಶೆಟ್ಟಿಮಜಲು ಆಗ್ರಹಿಸಿದರು. ಸದಸ್ಯ ರವೀಂದ್ರ ರೈ ನೆಕ್ಕಿಲ ಮಾತನಾಡಿ, ಜಾಗದ 11ಇ ಆಗಿದ್ದರೆ ವಿಸ್ತೀರ್ಣದಲ್ಲಿ ವ್ಯತ್ಯಾಸ ಬರಲು ಸಾಧ್ಯವಿಲ್ಲ. ಸದಸ್ಯ ಶ್ಯಾಂ ಮಾತನಾಡಿ, ಜಾಗ ಖರೀದಿಯಲ್ಲಿ ಅವ್ಯವಹಾರ ಆಗಿರುವುದೇ ಆಗಿದ್ದಲ್ಲಿ ಆ ಹಣವನ್ನು ಸಂಬಂಧಪಟ್ಟವರಿಂದ ವಸೂಲಿ ಮಾಡಬೇಕು ಎಂದು ಆಗ್ರಹಿಸಿದರು.


ಸಂಘದಲ್ಲಿ ಭ್ರಷ್ಠಾಚಾರ ರಹಿತ ಆಡಳಿತ:
ಸಂಘದ ಈಗಿನ ಆಡಳಿತ ಮಂಡಳಿಯು ಕಳೆದ ಮೂರು ವರ್ಷಗಳಿಂದ ಉತ್ತಮ ಆಡಳಿತ ನಡೆಸುತ್ತಿದೆ. ರೈತರಿಗೆ ವಿವಿಧ ರೀತಿಯಲ್ಲಿ ಸವಲತ್ತುಗಳನ್ನು ಒದಗಿಸುತ್ತಿದೆ. ಸಂಘವು ಕಳೆದ ಮೂರು ವರ್ಷದಲ್ಲಿ ದಾಖಲೆಯ ಲಾಭ ಪಡೆಯುವುದಲ್ಲದೆ ಸದಸ್ಯರಿಗೆ ಅತೀ ಹೆಚ್ಚು ಡಿವಿಡೆಂಡ್ ನೀಡುತ್ತಿದೆ. ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಜನರ ಸ್ಪಂದನೆ ನೀಡುತ್ತಿದ್ದು ಸಂಘದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತಿದೆ. ಆದರೂ ಅಧ್ಯಕ್ಷ, ಉಪಾಧ್ಯಕ್ಷರ ಮೇಲೆ ಆರೋಪ ಬಂದಿದ್ದು ಸಂಘದಲ್ಲಿ ಯಾವುದೇ ಅವ್ಯವಹಾರಗಳು ನಡೆದಿಲ್ಲ ಎಂದು ಸದಸ್ಯ ನವೀನ್ ರೈ ತಿಳಿಸಿದರು. ರಾಜ್ಯ ಸರಕಾರ ಬಜೆಟ್‌ನಲ್ಲಿ ಶೂನ್ಯಬಡ್ಡಿಯ ಸಾಲವನ್ನು 3ರಿಂದ 5ಲಕ್ಷಕ್ಕೆ ಹಾಗೂ ಶೇ.3 ಬಡ್ಡಿಯ ಸಾಲವನ್ನು 10ರಿಂದ 15ಲಕ್ಷಕ್ಕೆ ಏರಿಕೆ ಮಾಡಿದ್ದು ಅದು ಇನ್ನೂ ಅನುಷ್ಟಾನಕ್ಕೆ ಬಂದಿಲ್ಲ. ರೈತರಿಗೆ ಹಿಂದಿನ ಮಾದರಿಯಲ್ಲೇ ಮುಂದುವರಿಯುತ್ತಿದೆ. ಇದನ್ನು ಶೀಘ್ರ ಅನುಷ್ಟಾನಕ್ಕೆ ಬರುವಂತೆ ಸರಕಾರ ಕ್ರಮಕೈಗೊಳ್ಳಬೇಕು ಎಂದು ಸದಸ್ಯ ಪ್ರವೀಣ್ ಸೇರಾಜೆ ಆಗ್ರಹಿಸಿದರು.


ಸದಸ್ಯ ಸಾಲಗಾರರಿಗೆ ಆರೋಗ್ಯ ವಿಮೆ ಮಾಡಿಸಬೇಕು ಎಂದು ಸದಸ್ಯ ಉದಯ ಕೋಲಾಡಿ ಸಲಹೆ ನೀಡಿದರು. ಇದರ ಬಗ್ಗೆ ವಿಮಾ ಕಂಪನಿಯೊAದಿಗೆ ಮಾತುಕತೆ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಮಾಡುವುದಾಗಿ ಅಧ್ಯಕ್ಷರು ಭರವಸೆ ನೀಡಿದರು.ಗಣೇಶೋತ್ಸವಕ್ಕೆ ದೇಣಿಗೆ ನೀಡಿರುವುದಕ್ಕೆ ಗಣೇಶೋತ್ಸವ ಸಮಿತಿ ಅಧ್ಯಕ್ಷ ಅನಿಲ್ ಮುಂಡೋಡಿ ಕೃತಜ್ಞತೆ ಸಲ್ಲಿಸಿದರು.


ಸಂಘದ ಉತ್ತಮ ಆಡಳಿತಕ್ಕೆ ಸದಸ್ಯರ ಶ್ಲಾಘನೆ;
ಸಹಕಾರಿ ಸಂಘದ ಆಡಳಿತ ಮಂಡಳಿಯವರ ಉತ್ತಮ ಆಡಳಿತ ಹಾಗೂ ಸಿಬ್ಬಂದಿ ವರ್ಗದವರು ಉತ್ತಮ ಸೇವೆ ನೀಡುತ್ತಿದ್ದಾರೆ. ಸಂಘದ ಕಾರ್ಯವೈಖರಿಯ ಬಗ್ಗೆ ಸದಸ್ಯರಾದ ಅಶ್ರಫ್, ನವೀನ್ ರೈ ಶಿಬರ, ವಸಂತ ಗೌಡ, ಕೃಷ್ಣರಾಜ, ಸಾವಿತ್ರಿ, ದಿನೇಶ್, ಸತೀಶ್ ಪ್ರಭು, ರಾಜರಾಮ ನೆಲ್ಲಿತ್ತಾಯ ಮೊದಲಾದವರು ಶ್ಲಾಘನೆ ವ್ಯಕ್ತಪಡಿಸಿದರು.


ಶೇ.19 ಡಿವಿಡೆಂಡ್ ಘೋಷಣೆ:
ವಾರ್ಷಿಕ ವರದಿಯಲ್ಲಿ ಸದಸ್ಯರಿಗೆ ಶೇ.18 ಡಿವಿಡೆಂಡ್ ನೀಡುವುದಾಗಿ ಉಲ್ಲೇಖ ಮಾಡಲಾಗಿತ್ತು. ಸಭೆಯಲ್ಲಿ ಸದಸ್ಯರಾದ ವೇದನಾಥ ಸುವರ್ಣ, ಕೃಷ್ಣರಾಜ ಮೊದಲಾದವರು ಸದಸ್ಯರ ಡಿವಿಡೆಂಡ್‌ನ್ನು ಶೇ.18ರಿಂದ 20ಕ್ಕೆ ಏರಿಕೆ ಮಾಡುವಂತೆ ಒತ್ತಾಯಿಸಿದರು. ಡಿವಿಡೆಂಡ್‌ನ್ನು ಶೇ.19 ನೀಡುವುದಾಗಿ ಅಧ್ಯಕ್ಷ ನವೀನ್ ಡಿ. ಘೋಷಣೆ ಮಾಡಿದರು. ಸಭೆಯು ಇದಕ್ಕೆ ಅನುಮೋದನೆ ನೀಡಿತು.


ಹಿರಿಯ ಸದಸ್ಯರಿಗೆ ಸನ್ಮಾನ;
ಸಂಘದ ಹಿರಿಯ ಸದಸ್ಯರಾದ ಸೇಸಪ್ಪ ಆಚಾರ್ಯ, ವನಿತ, ವಿಶ್ವನಾಥ ಪೂಜಾರಿ ಕೆ., ಸಂಜೀವ ಪೂಜಾರಿ ಬಿ., ಪ್ರಕಾಶ್ ತೋಳ್ಪಾಡಿ, ಸುಧಾಕರ ತೋಳ್ಪಾಡಿ, ವೆಂಕಟೇಶ್ ತೋಳ್ಪಾಡಿ, ಸೀತಾರಾಮ ಕೆ., ಸಾವಿತ್ರಿ, ಜಾನಕಿ ಎರುಕಡಪು, ಜಾನಕಿ, ಜಯರಾಜ್, ಮೊಯ್ದಿನ್ ಕುಂಞಿ, ವೀರಪ್ಪ ಪೂಜಾರಿ, ಬಾಬು ಪುರುಷ ಎಂ., ಸುಮಂಗಳಾ, ವಸಂತ ಕುಮಾರ್ ಪಿ., ಸಂಜೀವ ನಾಯಕ್, ಸುಂದರಿ, ನೇಮು ಪೂಜಾರಿ, ಬಾಬು ಗೌಡ ಬಿ., ವಿಜಯಲಕ್ಷ್ಮೀ, ಜಯಂತಿ, ಶಿವಣ್ಣ ಗೌಡ ಅವರನ್ನು ಮಹಾಸಭೆಯಲ್ಲಿ ಸನ್ಮಾನಿಸಲಾಯಿತು.


ನಿರ್ದೇಶಕರಾದ ಯಂ.ಪರಮೇಶ್ವರ ಭಂಡಾರಿ ಮಣಿಯ, ಕೆ.ಪ್ರವೀಣ್ ಕುಮಾರ್ ಶೆಟ್ಟಿ, ನಮಿತಾ ನಾೖಕ್, ದೇವಪ್ಪ ಗೌಡ ಓಲಾಡಿ, ದೇವಪ್ಪ ಪಜಿರೋಡಿ, ಬಿ.ಶಿವಪ್ರಸಾದ್ ನಾಯ್ಕ, ಚಂದ್ರ ಮಣಿಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯೆ ವಸಂತಿ ರೈ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ನವೀನ್ ಡಿ. ಸ್ವಾಗತಿಸಿದರು. ನಿರ್ದೇಶಕ ಜಯರಾಮ ಪೂಜಾರಿ ಒತ್ತೆಮುಂಡೂರು ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಧುಕರ ಯಚ್ ಕಾರ್ಯಕ್ರಮ ನಿರೂಪಿಸಿದರು. ಲೆಕ್ಕಿಗ ಸಂದೀಪ್ ಕೆ ವಾರ್ಷಿಕ ವರದಿ ಮಂಡಿಸಿದರು. ಉಪಾಧ್ಯಕ್ಷ ಪವಿತ್ರ ಕೆ.ಪಿ. ಹಾಗೂ ನಿರ್ದೇಶಕ ವಿಶ್ವನಾಥ ಬಲ್ಯಾಯ ಮುಂಡೋಡಿ ಸನ್ಮಾನಿತರ ಪರಿಚಯ ಮಾಡಿದರು. ಸಿಬ್ಬಂದಿಗಳಾದ ರೋಹಿತ್ ಪಿ., ಜಯರಾಮ ಬಿ., ಅಶ್ವಿತಾ ಎ., ರೇಶ್ಮಾ ಎಂ., ನಳಿನಿ ಬಿ.ಕೆ., ಮೇಘ, ಜಿತೇಶ್ ಎಸ್., ಶ್ರಾವ್ಯ ಎ. ಶಾಂತಿಗೋಡು ಸಹಕರಿಸಿದರು.


ರೂ.527.09 ವ್ಯವಹಾರ, 3.08ಕೋಟಿ ಲಾಭ:
2025-26ನೇ ಸಾಲಿನಲ್ಲಿ ಸಂಘವು 4,834 ಮಂದಿ ಸದಸ್ಯರಿಂದ ರೂ.6,18,82,6300 ಪಾಲು ಬಂಡವಾಳ ಹೊಂದಿದೆ. ರೂ.55,78,13,043 ಠೇವಣಿಗಳನ್ನು ಹೊಂದಿದೆ. ರೂ.100,31,93,150 ಸಾಲ ವಿತರಿಸಲಾಗಿದೆ. ಸದಸ್ಯರ ಸಾಲ ವಸೂಲಾತಿಯಲ್ಲಿ ಶೇ.98.33 ಸಾಧನೆ ಮಾಡಿದೆ. ವಾರ್ಷಿಕ ಒಟ್ಟು ರೂ.527.09 ಕೋಟಿ ವ್ಯವಹಾರ ನಡೆಸಿ ರೂ.3,08,81,770.72 ಲಾಭಗಳಿಸಿದೆ. ಆಡಿಟ್ ವರ್ಗಿಕರಣದಲ್ಲಿ `ಎ’ ಶ್ರೇಣಿಯನ್ನು ಪಡೆದುಕೊಂಡಿದೆ ಎಂದು ಅಧ್ಯಕ್ಷ ನವೀನ್ ಡಿ ತಿಳಿಸಿದರು.


113ನೇ ವರ್ಷದ ಸಂಭ್ರದಲ್ಲಿರುವ ಸಹಕಾರಿ ಸಂಘವು ಸದಸ್ಯ ಬಾಂಧವರ ಸಹಕಾರದಿಂದ ಪ್ರಗತಿಯನ್ನು ಕಂಡಿದೆ. ವರದಿ ವರ್ಷದಲ್ಲಿ ರೂ.3.08ಕೋಟಿ ಲಾಭಗಳಿಸಿದೆ. ಕಳೆದ ಸಾಲಿಗಿಂತ ರೂ.13.79ಲಕ್ಷ ಹೆಚ್ಚುವರಿ ಲಾಭ ಗಳಿಸಿದೆ. ಸುಸ್ತಿ ಸಾಲವು ಗಣನೀಯವಾಗಿ ಇಳಿಕೆ ಕಂಡಿದೆ. ಸರಕಾರ ಯೋಜನೆಗಳಾದ ಬೆಳೆಸಾಲ, ಕೃಷಿ ಅಭಿವೃದ್ಧಿ ಸಾಲ ನಿಯಮಾನುಸಾರ ವಿತರಿಸಲಾಗಿದೆ. ಸದಸ್ಯರು ಸಾಲ ಪಡೆದು ಆದಾಯ ಗಳಿಸಿ ಸಕಾಲದಲ್ಲಿ ಸಾಲ ಮರುಪಾವತಿಸಿ ಸರಕಾರದ ಬಡ್ಡಿ ಸಹಾಯಧನದ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಹೊಸ ಯೋಜನೆಯಾಗಿ ಸಂಘದ ನಿವೇಶನದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸುವ ಯೋಜನೆಯಿದೆ.
ನವೀನ್ ಡಿ. ಅಧ್ಯಕ್ಷರು

LEAVE A REPLY

Please enter your comment!
Please enter your name here