ಸುದಾನ ಪ.ಪೂ ಕಾಲೇಜಿನಲ್ಲಿ ಯೂತ್ ರೆಡ್ ಕ್ರಾಸ್ ಓರಿಯಂಟೇಶನ್, ಸ್ವಚ್ಛತಾ ಅಭಿಯಾನ

0

ಪುತ್ತೂರು: ಪುತ್ತೂರಿನ ನೆಹರು ನಗರದಲ್ಲಿರುವ ಸುದಾನ ಪದವಿ ಪೂರ್ವ ಕಾಲೇಜಿನ ವತಿಯಿಂದ ಯೂತ್ ರೆಡ್ ಕ್ರಾಸ್ ಓರಿಯಂಟೇಶನ್ ಕಾರ್ಯಕ್ರಮವನ್ನು ಸೆ.19 ರಂದು ಪ್ರಜ್ಞಾಶ್ರಮದಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಬಳಿಕ ಬೀರಮಲೆ ಬೆಟ್ಟದಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸಲಾಯಿತು. ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಸ್ವಚ್ಛತೆ, ಸೇವಾ ಮನೋಭಾವ ಹಾಗೂ ಸಾಮಾಜಿಕ ಹೊಣೆಗಾರಿಕೆಯ ಮಹತ್ವವನ್ನು ಅರಿತುಕೊಂಡರು.

ಮುಖ್ಯ ಅತಿಥಿಗಳಾದ ಬೀರಮಲೆ ಬೆಟ್ಟ ಅಭಿವೃದ್ಧಿ ಯೋಜನೆಯ ಅಧ್ಯಕ್ಷ ಜಗಜೀವನ್ ದಾಸ್ ರೈ ಮಾತನಾಡಿ, ಯುವಜನತೆ ಸಮಾಜದ ಬಗ್ಗೆ ಕಾಳಜಿ ಹೊಂದಿ ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕು. ವಿದ್ಯಾರ್ಥಿಗಳು ತಮ್ಮ ಜ್ಞಾನ ಮತ್ತು ಸಾಮರ್ಥ್ಯವನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳಬೇಕು ಎಂದರು.

ಗೌರವ ಅತಿಥಿಗಳಾದ ಬೀರಮಲೆ ಬೆಟ್ಟ ಅಭಿವೃದ್ಧಿ ಯೋಜನೆಯ ಕೋಶಾಧಿಕಾರಿ ಪ್ರೊ|ದತ್ತಾತ್ರೇಯ ರಾವ್ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಜ್ಞಾನಕ್ಕೆ ಸೀಮಿತವಾಗದೆ, ಸಮಾಜದ ಒಳಿತಿಗಾಗಿ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು. ಸ್ವಚ್ಛತೆ ಎನ್ನುವುದು ಕೇವಲ ಒಂದು ದಿನದ ಕಾರ್ಯಕ್ರಮವಾಗಿರದೆ, ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಭಾಗವಾಗಬೇಕು. ಇಂತಹ ಸಮಾಜಮುಖಿ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತವೆ ಎಂದರು.

ಸುದಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಪ್ರೀತ್ ಕೆ. ಸಿ. ಮಾತನಾಡಿ, ಶಿಕ್ಷಣವು ಕೇವಲ ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ, ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ಹಾಗೂ ಸಮಾಜಮುಖಿ ನಾಗರಿಕರನ್ನಾಗಿ ರೂಪಿಸಬೇಕು ಎಂದರು.

ಕಾರ್ಯಕ್ರಮದ ನಿರೂಪಣೆ, ಸ್ವಾಗತ ಭಾಷಣ ಹಾಗೂ ವಂದನಾರ್ಪಣೆಯನ್ನು ವಿದ್ಯಾರ್ಥಿಗಳೇ ನಿರ್ವಹಿಸಿದ್ದರು.

ಸನ್ಮಾನ..
ಇದೇ ಸಂದರ್ಭದಲ್ಲಿ ಪ್ರಜ್ಞಾ ಆಶ್ರಮವನ್ನು ನೋಡಿ ಕೊಳ್ಳುತ್ತಿರುವ ಅಣ್ಣಪ್ಪ ದಂಪತಿಗಳ ಸೇವೆಯನ್ನು ವಿಶೇಷವಾಗಿ ಗುರುತಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮವು ಕೇವಲ ಶೈಕ್ಷಣಿಕ ಚಟುವಟಿಕೆಯಾಗಿರದೆ, ವಿದ್ಯಾರ್ಥಿಗಳಿಗೆ ನೈಜ ಬದುಕಿನ ಅನುಭವವನ್ನು ಪರಿಚಯಿಸುವ ಸಮಾಜಮುಖಿ ಪ್ರಯತ್ನವಾಗಿ ಮೂಡಿಬಂದಿತು. ಸುದಾನ ಪದವಿ ಪೂರ್ವ ಕಾಲೇಜು ಶೈಕ್ಷಣಿಕ ಸಾಧನೆಯೊಂದಿಗೆ ಇಂತಹ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಮಾನವೀಯತೆ, ಸೇವಾ ಮನೋಭಾವ, ಪರಿಸರ ಕಾಳಜಿ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.

LEAVE A REPLY

Please enter your comment!
Please enter your name here