ಕಣ್ಣಿಗೆ ಬಟ್ಟೆ ಕಟ್ಟಿ 30 ಗಂಟೆ ಸ್ಯಾಂಡ್ ಆರ್ಟ್ -ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನತ್ತ ವರ್ಣಕುಟೀರದ ವಿದ್ಯಾರ್ಥಿನಿಯರ ಹೆಜ್ಜೆ

0

ಪುತ್ತೂರು: ಕಣ್ಣುಗಳಿಗೆ ಬಟ್ಟೆ ಕಟ್ಟಿಕೊಂಡರೂ ಕಲ್ಪನೆಗೆ ಕಣ್ಣುಗಳಿರುತ್ತವೆ ಎಂಬುದನ್ನು ಸಾಬೀತುಪಡಿಸುವ ವಿಶಿಷ್ಟ ಸಾಹಸಕ್ಕೆ ಪುತ್ತೂರಿನ ಕಲ್ಲಾರೆಯ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರು ಸಜ್ಜಾಗಿದ್ದಾರೆ. `ಮೂರನೇ ಕಣ್ಣಿನಿಂದ ನೋಡುವ ವಿದ್ಯೆ’ ಎಂದೇ ಪರಿಗಣಿಸಲ್ಪಡುವ ಗಾಂಧಾರಿ ವಿದ್ಯೆ (ಸ್ಯಾಂಡ್ ಆರ್ಟ್ ಕಲಾ ವಿನ್ಯಾಸ)ಯಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಿರಂತರ 30 ಗಂಟೆಗಳ ಕಾಲ ಸ್ಯಾಂಡ್ ಆರ್ಟ್ ರಚಿಸುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನತ್ತ ಹೆಜ್ಜೆಯಿಡಲು ಸಂಸ್ಥೆಯ ಮೂವರು ವಿದ್ಯಾರ್ಥಿನಿಯರು ಸಿದ್ಧರಾಗಿದ್ದಾರೆ.

ಈ ಹಿಂದೆ ವರ್ಣಕುಟೀರದ ವಿದ್ಯಾರ್ಥಿನಿ ಶಮಿಕ ಎಂ.ಕೆ. ಅವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹಿನ್ನೆಲೆ ಗಾಯನದೊಂದಿಗೆ ನಿರಂತರ 24 ಗಂಟೆಗಳಲ್ಲಿ ಸುಮಾರು 300 ಸ್ಯಾಂಡ್ ಆರ್ಟ್ ಕಲಾಕೃತಿಗಳನ್ನು ರಚಿಸಿ ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ನಿರ್ಮಿಸಿದ್ದರು. ಇದೀಗ ಆ ಸಾಧನೆಯ ಮುಂದುವರಿದ ಭಾಗವಾಗಿ ಮೂವರು ವಿದ್ಯಾರ್ಥಿನಿಯರು ಮತ್ತೊಂದು ವಿಶಿಷ್ಟ ದಾಖಲೆ ನಿರ್ಮಿಸಲು ಮುಂದಾಗಿದ್ದಾರೆ.

ಸೆ.26ರಿಂದ 30 ಗಂಟೆಗಳ ಕಲಾ ಸಾಧನೆ:
ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯ ಸಂಚಾಲಕ ಪ್ರವೀಣ್ ವರ್ಣಕುಟೀರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಸೆ.26ರ ಬೆಳಿಗ್ಗೆ 7ರಿಂದ ಸೆ.27ರ ಮಧ್ಯಾಹ್ನದವರೆಗೆ ಒಟ್ಟು 30 ಗಂಟೆಗಳ ಕಾಲ ಕಣ್ಣುಗಳಿಗೆ ಬಟ್ಟೆ ಕಟ್ಟಿಕೊಂಡು ಮೂವರು ವಿದ್ಯಾರ್ಥಿನಿಯರು ನಿರಂತರವಾಗಿ ಸ್ಯಾಂಡ್ ಆರ್ಟ್ ರಚಿಸಲಿದ್ದಾರೆ ಎಂದು ತಿಳಿಸಿದರು. 6ನೇ ತರಗತಿಯ ಭುವಿಕ ಆರ್.ಪಿ., ಆಂಶಿ ಸಂತೋಷ್ ಕುಮಾರ್ ಹಾಗೂ ವಿಷ್ಮಾ ಅವರು ಈ ಸಾಹಸದಲ್ಲಿ ಭಾಗವಹಿಸಲಿದ್ದಾರೆ. ಸುಮಾರು 400 ಹಾಡುಗಳಿಗೆ ಅನುಗುಣವಾಗಿ ಮಕ್ಕಳು 400 ಸ್ಯಾಂಡ್ ಆರ್ಟ್ ಕಲಾಕೃತಿಗಳನ್ನು ರಚಿಸಲಿದ್ದು, ಕಲಾ ಪ್ರದರ್ಶನಕ್ಕೆ ಸಂಗೀತವೂ ನಿರಂತರ ಸಾಥ್ ನೀಡಲಿದೆ. ಇದೇ ವೇಳೆ ಸಂಸ್ಥೆಯ ವಿದ್ಯಾರ್ಥಿಗಳಾದ ಹಿಮಾಂಶು ಕೃಷ್ಣ ಅಮ್ಮಣ್ಣಾಯ ಹಾಗೂ ಸೋಹನ್ ಕೆ. ಅವರು ಕಣ್ಣು ತೆರೆದು ನಿರಂತರ 30 ಗಂಟೆಗೂ ಅಧಿಕ ಕಾಲ ಸ್ಯಾಂಡ್ ಆರ್ಟ್ ಮಾಡುವ ಮೂಲಕ ಮತ್ತೊಂದು ದಾಖಲೆಯ ಪ್ರಯತ್ನ ನಡೆಸಲಿದ್ದಾರೆ.

30 ಗಂಟೆ ನಿರಂತರ ಹಿನ್ನೆಲೆ ಗಾಯನ
ಈ ದಾಖಲೆಯ ಪ್ರಯತ್ನಕ್ಕೆ ಹಿನ್ನೆಲೆ ಗಾಯನವೂ ವಿಶೇಷ ಆಕರ್ಷಣೆಯಾಗಲಿದೆ. ಸಂಸ್ಥೆಯ ಅಧ್ಯಕ್ಷೆ ಗೀತಾಲಕ್ಷ್ಮೀ ಕೆದಿಮಾರು ಹಾಗೂ ಗಾಯಕಿ ಅನುಷಾ ಅಮ್ಮಣ್ಣಾಯ ಅವರು 30 ಗಂಟೆಗಳ ಕಾಲ ನಿರಂತರವಾಗಿ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಸಂಗೀತದ ಬೆಂಬಲ ನೀಡಲಿದ್ದಾರೆ. ಸುಮಾರು 400 ಹಾಡುಗಳನ್ನು ಈ ಅವಧಿಯಲ್ಲಿ ಹಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪ್ರವೀಣ್ ವರ್ಣಕುಟೀರ ಅವರು ತಿಳಿಸಿದರು.

ದಾಖಲೆ ವೀಕ್ಷಣೆಗೆ ಗಣ್ಯರ ಉಪಸ್ಥಿತಿ
ಕಾರ್ಯಕ್ರಮಕ್ಕೆ ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಅಶೋಕ್ ಕುಮಾರ್ ರೈ, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ವಿಜಯ ಸಾಮ್ರಾಟ್ ಸ್ಥಾಪಕ ಅಧ್ಯಕ್ಷ ಸಹಜ್ ರೈ ಬಳಜ್ಜ, ಡಿಡಿಪಿಒ ಶಶಿಧರ್ ಜಿ.ಎಸ್., ಬಿ.ವಿ. ನಾರಾಯಣ ಭಟ್ ಹಾಗೂ ಸಿವಿಲ್ ಇಂಜಿನಿಯರ್ ಹರಿಪ್ರಸಾದ್ ರೈ ಸೇರಿದಂತೆ ಗಣ್ಯರು ಆಗಮಿಸಲಿದ್ದಾರೆ. ಏಷ್ಯನ್ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನ ಮುಖ್ಯಸ್ಥ ಮನೀಷ್ ವೈಷ್ಣೋವಿ ಅವರು ಕಾರ್ಯಕ್ರಮವನ್ನು ವೀಕ್ಷಿಸಲಿದ್ದಾರೆ ಎಂದು ಪ್ರವೀಣ್ ವರ್ಣಕುಟೀರ ಅವರು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಗೀತಾಲಕ್ಷ್ಮೀ ಕೆದಿಮಾರು, ಗಾಯಕಿ ಅನುಷಾ ಅಮ್ಮಣ್ಣಾಯ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here