







ಪುತ್ತೂರು:ವಾಣಿಜ್ಯ ನಗರಿ ಮುಂಬಯಿಯಲ್ಲಿ ಪಡ್ನೂರಿನ ಕುಂಜಾರು ನಿವಾಸಿ ಉದ್ಯಮಿ, ಸಮಾಜ ಸೇವಕರಾಗಿರುವ ವಸಂತ ಸಪಲ್ಯ ಅವರ ಸಾರಥ್ಯದಲ್ಲಿ ನಡೆಯುತ್ತಿರುವ ಸಾರ್ವಜನಿಕ ಗಣೇಶೋತ್ಸವವು ದಶಮಾನೋತ್ವವನ್ನು ಕಳೆದ ಈ ಬಾರಿ 11ನೇ ವರ್ಷದ ಗಣೇಶೋತ್ಸವವನ್ನು ಸಂಭ್ರಮಿಸಿದೆ.


ಕಳೆದ 25 ವರ್ಷಗಳಿಂದ ಮುಂಬಯಿಯಲ್ಲಿ ವಾಸ್ತವ್ಯ ಇರುವ ವಸಂತ ಸಪಲ್ಯ ಅವರು ಹೊಟೇಲ್, ಎಕ್ಸ್ಪೋರ್ಟ್, ಆರ್ಕಿಟೆಕ್ಚರ್ ಉದ್ಯಮಿಯಾಗಿದ್ದಾರೆ. ತನ್ನ ಉದ್ಯಮದ ಜೊತೆಗೆ ಗಿರಿಜಾ ವೆಲ್ಫೇರ್ ಅಸೋಸಿಯೇಶನ್ ಮೂಲಕ ಸಮಾಜದಲ್ಲಿರುವ ಅನಾಥ ಮಕ್ಕಳು, ವಯೋವೃದ್ಧಿರಿಗೆ ಆಶ್ರಯ ತಾಣವಾಗಿದ್ದಾರೆ.




ಮಾನವನ ಸಂಕಷ್ಟಗಳನ್ನು ನಿವಾರಿಸುವ ಮತ್ತು ಸಮಾಜದ ನಿರ್ಗತಿಕರಿಗೆ ನೆರವಾಗುವ ಉದ್ದೇಶದಿಂದ ವಸಂತ ಸಪಲ್ಯ ಮತ್ತು ಅವರ ಸ್ನೇಹಿತರ ತಂಡದಿಂದ 2004 ರಲ್ಲಿ ಮಹಾರಾಷ್ಟ್ರ ರಾಜ್ಯದ ನವಿ ಮುಂಬೈಯ ಖಾರ್ಘರ್ ಎಂಬಲ್ಲಿ ಗಿರಿಜಾ ವೆಲ್ಫೇರ್ ಅಸೋಸಿಯೇಶನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದರು. ಈ ಸಂಸ್ಥೆಯ ಪ್ರಮುಖ ಸೇವೆಗಳಾದ ತಂದೆ-ತಾಯಿ ಇಲ್ಲದ ಹಾಗೂ ಹಿಂದುಳಿದ ವರ್ಗಗಳ ಅನಾಥ ಮಕ್ಕಳಿಗೆ ಉಚಿತ ವಸತಿ, ಆಹಾರ, ಬಟ್ಟೆ ಮತ್ತು ಶಿಕ್ಷಣದ ವ್ಯವಸ್ಥೆ ಒದಗಿಸಲು ಅನಾಥ ಮಕ್ಕಳ ಆಶ್ರಯ, ಸಮಾಜದಲ್ಲಿ ಅಥವಾ ಕುಟುಂಬದಿಂದ ನಿರ್ಲಕ್ಷಿಸಲ್ಪಟ್ಟ ಹಿರಿಯ ನಾಗರಿಕರಿಗೆ ಆಶ್ರಯ ನೀಡಿ, ಅವರ ಕೊನೆಯ ದಿನಗಳನ್ನು ಗೌರವಯುತವಾಗಿ ಕಳೆಯಲು ವೃದ್ಧಾಶ್ರಮವನ್ನು ಮುನ್ನಡೆಸುತ್ತಿದ್ದಾರೆ. ಪ್ರಸ್ತುತ 200ಕ್ಕೂ ಅಧಿಕ ಮಂದಿ ನಿರ್ಗತಿಕ ಮಕ್ಕಳು ಹಾಗೂ ವಯೋವೃದ್ಧ ವಸಂತ ಸಪಲ್ಯ ಅವರ ಗಿರಿಜಾ ವೆಲ್ಪೇರ್ ಅಸೋಸಿಯನ್ ಮುಖಾಂತರ ಆಶ್ರಯ ಪಡೆದಿರುತ್ತಾರೆ. 5 ಆಶ್ರಮ ಕೇಂದ್ರಗಳನ್ನು ನಡೆಸುತ್ತಿದ್ದಾರೆ. ಕ್ಯಾನ್ಸರ್ ಪೀಡಿತರು ಹಾಗೂ ಹೆಚ್ಐವಿ/ಏಡ್ಸ್ನಿಂದ ಬಳಲುತ್ತಿರುವ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆ ಮತ್ತು ಅಗತ್ಯ ನೆರವು ನೀಡುತ್ತದೆ. ಉಚಿತ ವೈದ್ಯಕೀಯ ಶಿಬಿರಗಳನ್ನು ಸಹ ಆಯೋಜಿಸುತ್ತಿದ್ದಾರೆ. ಇದಕ್ಕಾಗಿ ಪ್ರತಿ ತಿಂಗಳಿಗೆ ರೂ.12ಲಕ್ಷ ವ್ಯಯಿಸಲಾಗುತ್ತಿದೆ. ತನ್ನ ಆದಾಯದಲ್ಲಿ ಈ ಎಲ್ಲಾ ಸೇವಾ ಕಾರ್ಯಗಳನ್ನು ನಡೆಸಲಾಗುತ್ತಿದೆ ಎನ್ನುತ್ತಾರೆ ವಸಂತ ಸಪಲ್ಯ ಅವರು.
ತನ್ನ ಸಾಮಾಜಿಕ ಸೇವಾ ಕಾರ್ಯಗಳ ಜೊತೆಗೆ ಧಾರ್ಮಿಕವಾಗಿಯೂ ತನ್ನನ್ನು ತೊಡಗಿಸಿಕೊಂಡಿರುವ ವಸಂತ ಸಪಲ್ಯ ಅವರು ಕಳೆದ 11 ವರ್ಷಗಳಿಂದ ಗಣೇಶೋತ್ಸವವನ್ನು ಆಯೋಜಿಸುತ್ತಿದ್ದಾರೆ. ನವಿ ಮುಂಬಯಿ ಖಾರ್ಘರ್ನಲ್ಲಿ 2015ರಲ್ಲಿ ಪ್ರಾರಂಭಗೊಂಡಿರುವ ಗಣೇಶೋತ್ಸವವು ಈ ಬಾರಿ 11ನೇ ವರ್ಷದ ಸಂಭ್ರಮವನ್ನು ಕಂಡಿದೆ. ಸೆ.14ರಂದು ಪ್ರಾರಂಭಗೊಂಡಿರುವ ಗಣೇಶೋತ್ಸವವು ಏಳು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸೆ.20ರಂದು ವೈಭವದ ಶೋಭಾಯಾತ್ರೆಯೊಂದಿಗೆ 11ನೇ ವರ್ಷದ ಗಣೇಶೋತ್ಸವವು ಸಂಪನ್ನಗೊಂಡಿತ್ತು. ಶೋಭಾಯಾತ್ರೆಯಲ್ಲಿ ಮಿತ್ತೂರು ಚಾಮುಂಡೇಶ್ವರಿ ಬಳಗದಿಂದ ಹುಲಿ ಕುಣಿತ. ಕೇರಳದ ಚೆಂಡೆ. ಉಡುಪಿಯ ನಾದಸ್ವರ ವಿಶೇಷ ಮೆರುಗ ನೀಡಿತ್ತು
ಪಡ್ನೂರಿನವರು ಭಾಗಿ:
ಈ ಬಾರಿ ನಡೆದ 11ನೇ ವರ್ಷದ ಗಣೇಶೋತ್ಸವದಲ್ಲಿ ಕಾರ್ಯಕ್ರಮದಲ್ಲಿ ಪಡ್ನೂರಿನ ಕುಂಜಾರು ಮದಗ ಶ್ರೀಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಧಾಕೃಷ್ಣ ಗೌಡ ಕುಂಜಾರು. ಕುಂಜಾರು ಗಣೇಶೋತ್ಸವ ಸಮಿತಿ ಅಧ್ಯಕ್ಷ ಶ್ರೀಧರ್ ಕುಂಜಾರು, ಯಶೋಧರ ಕುಂಜಾರು, ಪ್ರದೀಪ್ ಕುಂಜಾರು ಭಾಗವಹಿಸಿದ್ದದ್ದರು. ವಸಂತ ಸಪಲ್ಯ ಕುಂಜಾರು, ಅವರ ಪತ್ನಿ ಸುಮಿತ್ರಾ ಸಪಲ್ಯ ಹಾಗೂ ಪುತ್ರ ಭವಿಶ್ ಉಪಸ್ಥಿತರಿದ್ದರು.










