






ಆಕರ್ಷಕ ಶೋಭಾಯಾತ್ರೆ : ಪುಣ್ಯನದಿ ಕುಮಾರಧಾರದಲ್ಲಿ ಜಲಸ್ಥಂಭನ: ಹರಿದು ಬಂದ ಭಕ್ತಸಾಗರ : ಆಕರ್ಷಕ ಸ್ಥಬ್ದಚಿತ್ರ


ಕಾಣಿಯೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸುಬ್ರಹ್ಮಣ್ಯ ಇದರ ವತಿಯಿಂದ 56ನೇ ವರ್ಷದ ಗಣೇಶೋತ್ಸವವು ವಿವಿಧ ವೈಧಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಿತು. ಈ ಧಾರ್ಮಿಕ ಕಾರ್ಯವು ಶ್ರೀ ಗಣಪತಿ ಶೋಭಾಯಾತ್ರೆ ಮೂಲಕ ಸಂಪನ್ನಗೊಂಡಿತು. ವೈಭವದ ಶೋಭಾಯಾತ್ರೆ ಮೂಲಕ ಗಣೇಶನನ್ನು ಕೊಂಡೊಯ್ದು ಪುಣ್ಯನದಿ ಕುಮಾರಧಾರದಲ್ಲಿ ಪುರೋಹಿತರು ವೈಧಿಕ ವಿದಿವಿಧಾನಗಳನ್ನು ನೆರವೇರಿಸಿದ ಬಳಿಕ ಶ್ರೀ ಜಲಸ್ಥಂಭನಗೊಳಿಸಲಾಯಿತು.




ಈ ಮೂಲಕ 56ನೇವರ್ಷದ ಗಣೇಶೋತ್ಸವವು ಸುಸಂಪನ್ನಗೊಂಡಿತು. ಸಹಸ್ರಾರು ಭಕ್ತರು ಭಕ್ತಿ ಸಡಗರದಿಂದ ಈ ದೇವತಾ ಕಾರ್ಯದಲ್ಲಿ ಪಾಳ್ಗೊಂಡರು.ಮೆರವಣಿಗೆಯ ಉದ್ದಕ್ಕೂ ಭಕ್ತಾಧಿಗಳು ಅಲ್ಲಲ್ಲಿ ಶ್ರೀ ದೇವರಿಗೆ ಹಣ್ಣುಕಾಯಿ ಮಂಗಳಾರತಿ ನೀಡಿದರು.

ಉಪಹಾರ ವ್ಯವಸ್ಥೆ
ಶ್ರೀ ಗಣಪತಿ ಶೋಭಾಯಾತ್ರೆಯು ಶ್ರೀ ದೇವಳದ ರಥಬೀದಿಯಿಂದ ಸಂಜೆ ಆರಂಭಗೊಂಡಿತು.ಆಕರ್ಷಕ ರಥದಲ್ಲಿ ಶ್ರೀ ಗಣಪತಿಯ ಶೋಭಾಯಾತ್ರೆ ನೆರವೇರಿತು. ಕಾಶಿಕಟ್ಟೆ, ದೇವಿದೇವಸ್ಥಾನ, ಕುಮಾರಧಾರದಲ್ಲಿ ಸಮಿತಿ ವತಿಯಿಂದ ಶ್ರೀ ದೇವರ ಪ್ರಸಾದ ರೂಪದಲ್ಲಿ ಶೋಭಾಯಾತ್ರೆಯಲ್ಲಿ ಭಾಗವಹಿಸಿದ ಭಕ್ತರಿಗೆ ಉಪಹಾರ ವಿತರಿಸಲಾಯಿತು. ಕುಕ್ಕೆಶ್ರೀ ಅಟೋ ಚಾಲಕ ಮಾಲಕರ ಸಂಘದಿಂದ ಮೂರು ಕಡೆ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಭಕ್ತರಿಗೆ ಪಾನಕ ವ್ಯವಸ್ಥೆ ಮಾಡಲಾಗಿತ್ತು.

ಆಕರ್ಷಕ ಸ್ತಬ್ಧಚಿತ್ರಗಳು
ಶೋಭಾಯಾತ್ರೆಯಲ್ಲಿ ಹಲವು ಸ್ತಬ್ದಚಿತ್ರಗಳು ಭಾಗವಹಿಸಿ ಮೆರವಣಿಗೆಯ ಮೆರುಗನ್ನು ಹೆಚ್ಚಿಸಿತು. ರಾಧಾಕೃಷ್ಣ ಆರ್ವಾರ ನೇತೃತ್ವದಲ್ಲಿ ಭಜರಂಗದಳ ಶಿವಾಜಿ ಶಾಖೆ ವತಿಯಿಂದ ಮಣಿಕಂಠನ ಮಹಿಮೆ ಸ್ತಬ್ದಚಿತ್ರ ಆಕರ್ಷಣೀಯವಾಗಿತ್ತು. ಮನೋಜ್ ಮತ್ತು ಉಮೇಶ್ ನೇತೃತ್ವದಲ್ಲಿ ಕುಕ್ಕೆ ಪ್ರೆಂಡ್ಸ್ ವತಿಯಿಂದ ಶ್ರೀರಾಮ ದಿಗ್ವಿಜಯ ಟ್ಯಾಬ್ಲೋ ಸುಂದರವಾಗಿ ಮೂಡಿ ಬಂದಿತ್ತು.ಪ್ರತಿರೂಪ ಪ್ರಕಾಶ್ ನೇತೃತ್ವದಲ್ಲಿ ಬೃಹತ್ ಗೋರಿಲ್ಲಾ, ಫಾಂಡಾ ಸಮಿತಿಯಿಂದ ಮಾಡಲಾಗಿತ್ತು.
ಕುಣಿತ ಭಜನೆ
ಸುಮಾರು ನೂರಕ್ಕೂ ಅಧಿಕ ಮಂದಿಯಿಂದ ಕುಣಿತ ಭಜನೆ ನೆರವೇರಿತು. ವಿಶೇಷ ಬ್ಯಾಂಡ್ ವಾದನ, ವಾಯಲಿನ್ ಸಮ್ಮಿಲನದಲ್ಲಿ ಕೇರಳದ ಚೆಂಡೆ ವಾದನ ಸಿಂಗಾರಿ ಮೇಳ, ಕುಕ್ಕೆಶ್ರೀ ನಾಸಿಕ್ ಬ್ಯಾಂಡ್, ವಿವಿಧ ತೆರನಾದ ಗೊಂಬೆಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿತ್ತು.
ಠಾಣಾಧಿಕಾರಿಗಳಿಗೆ ಶ್ಲಾಘನೆ
ಸುಬ್ರಹ್ಮಣ್ಯ ಠಾಣಾಧಿಕಾರಿ ಆಂಜನೇಯ ರೆಡ್ಡಿ ನೇತೃತ್ವದಲ್ಲಿ ಶಾಂತಿ ಸುವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಸುಬ್ರಹ್ಮಣ್ಯ ಪೋಲೀಸರು ಕೈಗೊಂಡಿದ್ದರು. ಠಾಣಾಧಿಕಾರಿಗಳು ನಿರಂತರ 6 ಗಂಟೆಗಳ ಕಾಲ ಮೆರವಣಿಗೆಯುದ್ದಕ್ಕೂ ಉಪಸ್ಥಿತರಿದ್ದು ಸೂಕ್ತ ಬಂದೋಬಸ್ತ್ ಒದಗಿಸಿದ್ದರು.ಅಲ್ಲದೆ ವಿಸರ್ಜನೆ ಸಮಯದಲ್ಲೂ ಸಾರ್ವಜನಿಕರೊಂದಿಗೆ ಇದ್ದ ಠಾಣಾಧಿಕಾರಿಗಳ ಕಾರ್ಯವೈಖರಿಯನ್ನು ಸಾರ್ವಜನಿಕರು ಮತ್ತು ಸಮಿತಿ ವಿಶೇಷವಾಗಿ ಶ್ಲಾಘಿಸಿದೆ.
ಮೆರವಣಿಗೆಯಲ್ಲಿ ಸಮಿತಿಯ ಸಮಿತಿಯ ಅಧ್ಯಕ್ಷ ಶ್ರೀಕೃಷ್ಣ ಶರ್ಮ, ಸಂಚಾಲಕರುಗಳಾದ ಎ.ವೆಂಕಟ್ರಾಜ್, ಯಜ್ಞೇಶ್ ಆಚಾರ್, ರಾಜೇಶ್ ಎನ್.ಎಸ್, ಕಾರ್ಯದರ್ಶಿ ರತ್ನಾಕರಸುಬ್ರಹ್ಮಣ್ಯ, ಪೂರ್ವಾಧ್ಯಕ್ಷರುಗಳಾದ ಉಮೇಶ್ ಕೆ.ಎನ್, ದಿನೇಶ್ ಮೊಗ್ರ, ರವಿ ಕಕ್ಕೆಪದವು, ವೆಂಕಟೇಶ್ ಎಚ್.ಎಲ್, ಚಿದಾನಂದ ಕಂದಡ್ಕ, ಲೋಕೇಶ್ ಬಿ.ಎನ್,ಲೋಕೇಶ್ ಎನ್.ಎಸ್, ದೀಪಕ್ ನಂಬಿಯಾರ್, ಗಿರಿಧರ್ ಸ್ಕಂದ, ಗಣೇಶ್ ಪ್ರಸಾದ್.ಎನ್, ಸೇರಿದಂತೆ ಟ್ರಸ್ಟ್ ಮತ್ತು ಸಮಿತಿಯ ಪದಾಧಿಕಾರಿಗಳು, ಸಮಿತಿ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು










