







ನಿಡ್ಪಳ್ಳಿ: ನಿಡ್ಪಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಸೆ.19ರಂದು ಸಂಘದ ಅಧ್ಯಕ್ಷ ಆನಾಜೆ ರಾಧಾಕೃಷ್ಣ ರೈ ಅವರ ಅಧ್ಯಕ್ಷತೆಯಲ್ಲಿ ಸಂಘದ ವಠಾರದಲ್ಲಿ ನಡೆಯಿತು.


ವರದಿ ಸಾಲಿನಲ್ಲಿ ಸಂಘವು ರೂ. 1,62,044 ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಪ್ರತಿ ಲೀಟರ್ ಹಾಲಿಗೆ 71 ಪೈಸೆ ಬೋನಸ್ ನೀಡಲು ನಿರ್ಣಯಿಸಲಾಯಿತು. ಪ್ರತಿ ಸದಸ್ಯರ ಡಿವಿಡೆಂಡ್ ಮೊತ್ತವನ್ನು ಸದಸ್ಯರ ಒಪ್ಪಿಗೆ ಮೇರೆಗೆ ನೂತನ ಕಟ್ಟಡ ನಿರ್ಮಾಣಕ್ಕೆ ನೀಡುವ ಬಗ್ಗೆ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಿಸಲಾಯಿತು.



ಮುಖ್ಯ ಅತಿಥಿ ದ.ಕ. ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ವಿದ್ಯಾ ಅವರು ಮಾತನಾಡಿ, ಒಕ್ಕೂಟದಲ್ಲಿ ಹೈನುಗಾರರಿಗೆ ಸಿಗುವ ವಿವಿಧ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ, ಅದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಹೆಚ್ಚು ಗುಣಮಟ್ಟದ ಹಾಲು ಪೂರೈಸಿದರೆ ಸದಸ್ಯರು ಮತ್ತು ಸಂಘದ ಅಭಿವೃದ್ಧಿಯಾಗುತ್ತದೆ. ನೂತನ ಕಟ್ಟಡ ನಿರ್ಮಾಣ ಆದಷ್ಟು ಬೇಗ ಮಾಡಿ ಹೊಸ ಕಟ್ಟಡದಲ್ಲಿ ವ್ಯವಹಾರ ಆರಂಭವಾದ ಮೇಲೆ ಹೆಚ್ಚು ಹಾಲು ಪೂರೈಕೆಯಾಗಿ ಸಂಘದ ಬೆಳವಣಿಗೆಗೆ ಸಹಕರಿಸಬೇಕು ಎಂದರು.
ಸಂಘದ ಉಪಾಧ್ಯಕ್ಷ ಹರೀಶ್ ಕುಮಾರ್ ಪಿ, ನಿರ್ದೇಶಕರಾದ ಲೋಕನಾಥ ರೈ, ಗೀತಾ ನಾಯ್ಕ, ದೇವಕಿ, ಲಿಂಗಪ್ಪ ಗೌಡ, ಶೀನಪ್ಪ ಪೂಜಾರಿ, ಡೆಲ್ಫಿನ್ ಡಿ ಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹಾಯಕಿ ಪುಷ್ಪಾ ಪ್ರಾರ್ಥಿಸಿದರು, ನಿರ್ದೇಶಕ ಗಂಗಾಧರ ಸಿ.ಹೆಚ್. ಸ್ವಾಗತಿಸಿದರು, ಕಾರ್ಯದರ್ಶಿ ದಯಾಮಣಿ ಎಸ್.ರೈ ವರದಿ ವಾಚಿಸಿದರು, ನಿರ್ದೇಶಕ ಕಾಶ್ಮೀರ ಡಿ’ಸೋಜಾ ವಂದಿಸಿದರು.
ನೂತನ ಕಟ್ಟಡಕ್ಕೆ ಯೋಜನೆ
ನೂತನ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ನೆಲ ಸಮತಟ್ಟು ಮಾಡಲಾಗಿದೆ. ಕೆಎಂಎಫ್ ಅನುದಾನದೊಂದಿಗೆ ಸಂಘದಲ್ಲಿ ಮೀಸಲಿರಿಸಿದ ಮೊತ್ತ ಮತ್ತು ಇತರ ಸಂಸ್ಥೆಗಳಿಂದ ಸಿಗುವ ಅನುದಾನ ಪಡೆದು ಸುಮಾರು 12 ಲಕ್ಷ 35 ಸಾವಿರ ರೂ. ಮೊತ್ತದಲ್ಲಿ ನೂತನ ಕಟ್ಟಡವನ್ನು ಅತೀ ಶೀಘ್ರದಲ್ಲಿ ಪೂರ್ತಿಗೊಳಿಸಲು ಯೋಜಿಸಲಾಗಿದೆ ಎಂದು ಅಧ್ಯಕ್ಷ ಆನಾಜೆ ರಾಧಾಕೃಷ್ಣ ರೈ ತಿಳಿಸಿದರು.
ಬಹುಮಾನ ವಿತರಣೆ
ವರದಿ ಸಾಲಿನಲ್ಲಿ ಅತಿ ಹೆಚ್ಚು ಹಾಲು ಹಾಕಿದ ಸಂಘದ ನಿರ್ದೇಶಕ ಲಿಂಗಪ್ಪ ಗೌಡ ಪಳಂಬೆ ಪ್ರಥಮ, ಅಧ್ಯಕ್ಷ ಆನಾಜೆ ರಾಧಾಕೃಷ್ಣ ರೈ ದ್ವಿತೀಯ ಹಾಗೂ ನಿರ್ದೇಶಕಿ ಡೆಲ್ಫಿನ್ ಡಿ’ಸೋಜಾ ತೃತೀಯ ಸ್ಥಾನ ಪಡೆದರು. ಹಾಲು ಹಾಕಿದ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.










