







ಗದಗ: ಇಲ್ಲಿನ ಕಪ್ಪತ್ತಗಿರಿ ಫೌಂಡೇಶನ್ (ರಿ) ಕಳಾಸಪುರ ಹಾಗೂ ಕಪ್ಪತ್ತಗಿರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾವೇದಿಕೆ ರಾಜ್ಯಘಟಕದ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನೀಡಲಾಗುವ ‘ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ 2026’ ಗೆ ಪ್ರಗತಿ ಸ್ಟಡಿ ಸೆಂಟರ್ನ ಪ್ರಾಂಶುಪಾಲರಾದ ಹೇಮಲತಾ ಗೋಕುಲ್ನಾಥ್ ಅವರು ಭಾಜನರಾಗಿದ್ದಾರೆ.
ಕಳೆದ 10 ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಜ್ಯದ ಸಾಧಕರನ್ನು ಗುರುತಿಸಿ, ಗೌರವಿಸುತ್ತಾ ಬಂದಿರುವ ಕಪ್ಪತ್ತಗಿರಿ ಫೌಂಡೇಶನ್, ಈ ವರ್ಷ ರಾಜ್ಯದ 20 ಜಿಲ್ಲೆಗಳಿಂದ ಆಯ್ಕೆಯಾದ ಸಾಧಕ ಶಿಕ್ಷಕರನ್ನು ಸನ್ಮಾನಿಸಿದೆ. ಸೆಪ್ಟೆಂಬರ್ 20 ರಂದು ಗದಗಿನ ಕೆ.ಸಿ. ರಾಣಿ ರಸ್ತೆಯಲ್ಲಿರುವ ವಿದ್ಯಾದಾನ ಸಮಿತಿ ಶಿಕ್ಷಣ ಸಂಸ್ಥೆಯಲ್ಲಿ ಜರುಗಿದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.


ಶ್ರೀಮತಿ ಹೇಮಲತಾ ಗೋಕುಲ್ನಾಥ್ ಅವರ 30 ವರ್ಷಗಳ ಸುದೀರ್ಘ ಶೈಕ್ಷಣಿಕ ಸೇವೆಯಲ್ಲಿ, ಅನುತ್ತೀರ್ಣಗೊಂಡ ವಿದ್ಯಾರ್ಥಿಗಳನ್ನು ವಿಶೇಷ ಕಾಳಜಿಯಿಂದ ಉತ್ತೀರ್ಣಗೊಳಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ ಶೈಕ್ಷಣಿಕ ಸಾಹಸ ಮತ್ತು ಅನನ್ಯ ಸೇವೆಯನ್ನು ಗುರುತಿಸಿ ಈ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.




ಈ ಕಾರ್ಯಕ್ರಮವು ಕಳಾಸಪುರ ಭೂ ಕೈಲಾಸದ ಷ.ಬ್ರ.ಶ್ರೀ ಫಕೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದಿದ್ದು, ಸಮ್ಮೇಳನಾಧ್ಯಕ್ಷರೂ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಕ್ಕಳ ಸಾಹಿತಿಗಳೂ ಆದ ಡಾ. ನಿಂಗು ಸೊಲಗಿ ಮುಂಡರಗಿ ಹಾಗೂ ಬಾಗಲಕೋಟೆ ವಿಶ್ವವಿದ್ಯಾಲಯದ ಕುಲಸಚಿವ ಸೋಮಲಿಂಗ ಗೆಣ್ಣೂರು, ಜಮಖಂಡಿ ಅವರ ಉಪಸ್ಥಿತಿಯಲ್ಲಿ ಹೇಮಲತಾ ಗೋಕುಲನಾಥ ಅವರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ಸಮಾರಂಭದ ಅಂಗವಾಗಿ ಗದಗಿನ ಪ್ರಸಿದ್ಧ ಚಿತ್ರಕಲಾವಿದ ಶಂಕರಗೌಡ ಪಾಟೀಲ ಅವರು ರಚಿಸಿದ ವಿವಿಧ ಜಾನಪದ ಪ್ರಕಾರಗಳ ‘ನವ್ಯರೇಖಾ ಚಿತ್ರಗಳ ಪ್ರದರ್ಶನ’ವನ್ನು ಪ್ರಗತಿ ಸ್ಟಡಿ ಸೆಂಟರ್ನ ಸ್ಥಾಪಕಾಧ್ಯಕ್ಷರಾದ ಗೋಕುಲ್ನಾಥ್ ಪಿ.ವಿ. ಅವರು ಉದ್ಘಾಟಿಸಿದರು. ಸಮಾರಂಭದಲ್ಲಿ ಕಪ್ಪತ್ತಗಿರಿ ಫೌಂಡೇಶನ್ನ ಸಂಸ್ಥಾಪಕ ಅಧ್ಯಕ್ಷರಾದ ಚಂದ್ರಕಲಾ ಇಟಗಿಮಠ, ಪ್ರಮುಖರಾದ ರವೀಂದ್ರನಾಥ ಜಿ. ದೊಡ್ಡಮೇಟಿ ಸೇರಿದಂತೆ ಹಲವು ಸಾಹಿತಿಗಳು, ಬರಹಗಾರರು, ರಾಜ್ಯ ಹಾಗೂ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.










