ಸುಳ್ಯದಲ್ಲಿ ಪೌರ ಕಾರ್ಮಿಕರ ದಿನಾಚರಣೆ

0

ಸುಳ್ಯ: ಸುಳ್ಯ ನಗರ ಪಂಚಾಯತ್ ಮತ್ತು ಕರ್ನಾಟಕ ಪೌರ ಸೇವಾ ನೌಕರರ ಸಂಘದ ವತಿಯಿಂದ ಪೌರ ಕಾರ್ಮಿಕರ ದಿನಾಚರಣೆಯನ್ನು ಲಯನ್ಸ್ ಸೇವಾ ಸದನದಲ್ಲಿ ಆಚರಿಸಲಾಯಿತು.

ಮುಖ್ಯಾಧಿಕಾರಿ ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸುಳ್ಯ ತಹಶೀಲ್ದಾರ್ ಹಾಗೂ ನಗರ ಪಂಚಾಯತ್ ಆಡಳಿತಾಧಿಕಾರಿ ಮಂಜುಳಾ ಅವರು, ತನ್ನ ಆರೋಗ್ಯವನ್ನು ಲೆಕ್ಕಿಸದೆ ಸಾರ್ವಜನಿಕ ಆರೋಗ್ಯ ಕಾಪಾಡಲು ಸ್ವಚ್ಛತೆ ನಿರ್ವಹಿಸುವ ಪೌರ ಕಾರ್ಮಿಕರು ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಅವರನ್ನು ಗೌರವದಿಂದ ಕಾಣುವುದು ನಮ್ಮ ಕರ್ತವ್ಯ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಫ ಅವರು ಪೌರ ಕಾರ್ಮಿಕರು ಮತ್ತು ನೇರ ಪಾವತಿ ಕಾರ್ಮಿಕರನ್ನು ಸನ್ಮಾನಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ವಿನೋದ್ ಲಸ್ರಾದೊ ಶುಭ ಹಾರೈಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ನಾರಾಯಣ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

ವೇದಿಕೆಯಲ್ಲಿ ಪೌರ ಕಾರ್ಮಿಕರ ಮೇಲ್ವಿಚಾರಕ ಒ.ಎಸ್. ತಿಮ್ಮಪ್ಪ, ಹಿರಿಯ ಪೌರ ಕಾರ್ಮಿಕರು ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ಸುದೇವ ಸ್ವಾಗತಿಸಿ, ಎಸ್‌ಜೆಎಸ್‌ಆರ್‌ವೈ ಸಮುದಾಯ ಸಂಘಟಕಿ ಜಯಲಕ್ಷ್ಮಿ ವಂದಿಸಿದರು. ದಿಲೀಪ್ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪೌರ ಕಾರ್ಮಿಕರನ್ನು ಪುಷ್ಪವರ್ಷದೊಂದಿಗೆ ಸಭಾಂಗಣಕ್ಕೆ ಬರಮಾಡಿಕೊಳ್ಳಲಾಯಿತು. ಪೌರ ಕಾರ್ಮಿಕರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here