ಸೆ.28ರಂದು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರಿಂದ ಮುಷ್ಕರ – ಪುತ್ತೂರು ತಾಲೂಕು ಸಂಘದ ಬೆಂಬಲ

0

ಪುತ್ತೂರು: ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದ.ಕ. ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಸೆ.28ರಂದು ನಡೆಸಲು ಉದ್ಧೇಶಿಸಿರುವ ಒಂದು ದಿನದ ಮುಷ್ಕರಕ್ಕೆ ಬೆಂಬಲ ನೀಡಿ ಮುಷ್ಕರದಲ್ಲಿ ಪಾಲ್ಗೊಳ್ಳುವ ಕುರಿತು ಪುತ್ತೂರು ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ತುರ್ತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಸಂಘದ ಸಭೆಯು ಪುತ್ತೂರು ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ಅಧ್ಯಕ್ಷೆ ಕಮಲರವರ ಅಧ್ಯಕ್ಷತೆಯಲ್ಲಿ ನೆಲ್ಲಿಕಟ್ಟೆ ಅಂಗನವಾಡಿಯಲ್ಲಿ ನಡೆಯಿತು.


ಆಗಸ್ಟ್ ತಿಂಗಳಿನಿಂದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ಗೌರವಧನ ಪಾವತಿಯಾಗಿರುವುದಿಲ್ಲ. 1975ರಲ್ಲಿ ಆರಂಭಗೊಂಡ ಅಂಗನವಾಡಿಗಳ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಇಂದಿಗೂ ಗೌರವಧನದ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ವಿಷಾದನೀಯ. ಸರಕಾರದ ಪ್ರತೀ ಯೋಜನೆಗಳನ್ನು ಸಮುದಾಯಕ್ಕೆ ತಲುಪಿಸುವುದು ಅಂಗನವಾಡಿ ಕಾರ್ಯಕರ್ತೆಯರು. ಇವರನ್ನು ಕೂಲಿ ಆಳುಗಳಂತೆ ಸರಕಾರ ದುಡಿಸುತ್ತಿದೆ. ಸರಕಾರ ಕೊಡುವ 12 ಸಾವಿರ ರೂ ಹಾಗೂ 6 ಸಾವಿರ ರೂ. ರಾಜಕಾರಣಿಗಳು ಸಾಕುವ ನಾಯಿಗಳ ಬಿಸ್ಕತ್ತಿಗೂ ಸಾಲದು. ಇಂದಿನ ದಿನದಲ್ಲಿ ಪ್ರತಿಯೊಂದು ವಸ್ತುವಿನ ಬೆಲೆಯೂ ಗಗನಕ್ಕೇರಿದೆ. ಇವರು ಕೊಡುವ ಗೌರವಧನದಲ್ಲಿ ಬದುಕಲು ಕಷ್ಟ. ಅದೆಷ್ಟೋ ಕಾರ್ಯಕರ್ತೆ, ಸಹಾಯಕಿಯರು ಬ್ಯಾಂಕ್‌ಗಳಿಂದ ಸಾಲ ಪಡೆದು ಮರುಪಾವತಿಗಾಗಿ ಕಷ್ಟಪಡುತ್ತಿದ್ದಾರೆ. ಆದುದರಿಂದ ಪುತ್ತೂರು ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ ದ.ಕ.ಜಿಲ್ಲಾ ಸಂಘದ ವತಿಯಿಂದ ಸೆ.28ರಂದು ನಡೆಯಲಿರುವ ಮುಷ್ಕರದಲ್ಲಿ ಪಾಲ್ಗೊಳ್ಳುವುದೆಂದು ಸಭೆಯಲ್ಲಿ ನಿರ್ಣಯಿಸಲಾಗಿದೆ.


ದ.ಕ.ಜಿಲ್ಲಾಧ್ಯಕ್ಷೆ ತಾರಾ ಬಲ್ಲಾಳ್ ಮುಷ್ಕರದ ಕುರಿತು ಮಾಹಿತಿ ನೀಡಿದರು. ಮಾಜಿ ಜಿಲ್ಲಾಧ್ಯಕ್ಷೆ ಅರುಣ ಡಿ. ಬೀರಿಗ, ಪುತ್ತೂರು ಸಂಘದ ಮಾಜಿ ಅಧ್ಯಕ್ಷರಾದ ಮಲ್ಲಿಕಾ ಆಳ್ವ, ಸುಲೋಚನಾ, ಕಾರ್ಯದರ್ಶಿ ಶೈಲಜಾ ಹಾಗೂ ವಲಯ ಪ್ರತಿನಿಽಗಳು, ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಜತೆ ಕಾರ್ಯದರ್ಶಿ ಜಯಂತಿ ಸ್ವಾಗತಿಸಿ ಖಜಾಂಜಿ ಚಂದ್ರಿಕ ವಂದಿಸಿದರು.

LEAVE A REPLY

Please enter your comment!
Please enter your name here