







ಕೊಂಬೆಟ್ಟು ಕ್ರೀಡಾಂಗಣದಲ್ಲಿ ಕಾರ್ಯಕ್ರಮ
ಬೆಳಿಗ್ಗೆ ದೋಸೆ, ಮಧ್ಯಾಹ್ನ ಊಟ, ಸಂಜೆ ದೋಸೆ
ಎಷ್ಟೇ ಜನರ ಬಂದರೂ ವಸ್ತ್ರ ವಿತರಣೆ
ಮಕ್ಕಳಿಗೆ ಗೂಡು ದೀಪ ಸ್ಪರ್ಧೆ
10 ಜನ ಬಡ ಸಾಧಕರಿಗೆ ಸನ್ಮಾನ


ಪುತ್ತೂರು: ಕಳೆದ ಬಾರಿಯ ಅಶೋಕ ಜನಮನ ಕಾರ್ಯಕ್ರಮದಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳಾಗಿತ್ತು. ಹೀಗಾಗಿ ಈ ಬಾರಿ ಬಹಳಷ್ಟು ಬದಲಾವಣೆ ಮಾಡಲಾಗಿದೆ. ವಿಪರೀತ ಜನಸಂದಣಿ ಆಗುವುದನ್ನು ನಿಯಂತ್ರಿಸಲು ಈ ಬಾರಿ ಅತಿಥಿಗಳು ಬರುವ ತನಕ ಕಾಯದೇ ಬೆಳಿಗ್ಗೆ 10ಗಂಟೆಗೆ ವಸ್ತ್ರ ವಿತರಣೆ ಪ್ರಾರಂಭಗೊಳ್ಳಲಿದ್ದು ಸಾರ್ವಜನಿಕರು ಬದಲಾವಣೆಯನ್ನು ಗಮನಿಸುವಂತೆ ಶಾಸಕರು, ರೈ ಎಸ್ಟೇಟ್ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ನ ಮುಖ್ಯಪ್ರವರ್ತಕರಾಗಿರುವ ಅಶೋಕ್ ಕುಮಾರ್ ರೈ ಹೇಳಿದರು.



ರೈ ಎಸ್ಟೇಟ್ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ನ ಮುಖ್ಯಪ್ರವರ್ತಕರಾಗಿರುವ ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ನವಂಬರ್ 8ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿರುವ ಅಶೋಕ ಜನಮನ ವಸ್ತ್ರ ವಿತರಣಾ ಕಾರ್ಯಕ್ರಮದ ಬಗ್ಗೆ ಸೆ.26ರಂದು ಶಾಸಕ ಕಛೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾಹಿತಿ ನೀಡಿದರು.
ಅಶೋಕ ಜನಮನ ಕಾರ್ಯಕ್ರಮದಲ್ಲಿ ದೊಡ್ಡ ಮಟ್ಟದಲ್ಲಿ ಜನ ಸೇರುತ್ತಿದ್ದು ಮೂರು ವಸ್ತುಗಳನ್ನು ಒಂದೇ ಕಡೆ ವಿತರಣೆ ಕಷ್ಟಸಾಧ್ಯ. ಹೀಗಾಗಿ ಬಟ್ಟಲು, ಸೀರೆ, ಬೆಡ್ ಶೀಟ್ ಪ್ರತ್ಯೇಕ ಕೌಂಟರ್ ಮಾಡಲಾಗುವುದು. ಒಂದು ಕೌಂಟರ್ನಲ್ಲಿ ಒಂದು ವಸ್ತು ಮಾತ್ರ ವಿತರಿಸಲಾಗುವುದು. ಕೈ ಬೆರಳಿಗೆ ಶಾಯಿ ಗುರುತು ಹಾಕಲಾಗುತ್ತಿದ್ದು ಒಂದು ಕೌಂಟರ್ನಲ್ಲಿ ಪಡೆದವರು ಇನ್ನೊಂದು ಕೌಂಟರ್ ಪಡೆಯಲು ಸಾಧ್ಯವಿಲ್ಲ. ಜನ ಒಂದೆಡೆ ಸೇರಿ ಗೊಂದಲವಾಗುವುದನ್ನು ತಪ್ಪಿಸಲು ದೊಡ್ಡದಾದ ಸರತಿ ಸಾಲು ಮಾಡಲಾಗುವುದು. ಬಟ್ಟಲು ಜೊತೆಗೆ ಬೆಡ್ಶೀಟ್ ನೀಡಲಾಗುವುದು. ಈ ಬಾರಿ ಗುಣಮಟ್ಟದ ಸೀರೆ, ಬೆಡ್ಶೀಟ್ಗಳನ್ನೇ ವಿತರಿಸಲಾಗುವುದು. ಎರಡು ವರ್ಷ ಗ್ಯಾರಂಟಿಯಿದೆ. ಕಳೆದ ಬಾರಿಯಂತೆ ಗೂಡುದೀಪ ಸ್ಪರ್ಧೆ, ಹತ್ತು ಜನ ಬಡ ಸಾಧಕರಿಗೆ ಸನ್ಮಾನ ನಡೆಯಲಿದೆ. ದೊಡ್ಡ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ಮೊಟಕುಗೊಳಿಸಿ ಸಂಗೀತ ರಸಮಂಜರಿ ಮಾತ್ರ ನಡೆಸಲಾಗುವುದು ಎಂದು ಹೇಳಿದರು.
ಬೆಳಿಗ್ಗೆಯಿಂದಲೇ ದೋಸೆ ವಿತರಣೆ:
ಊಟ, ಉಪಹಾರದ ಬಗ್ಗೆ ಮಾಹಿತಿ ನೀಡಿದ ಅಶೋಕ್ ರೈಯವರು ಕಾರ್ಯಕ್ರಮದಲ್ಲಿ ಊಟ, ಉಪಹಾರಗಳನ್ನು ನೀಡಲಾಗುತ್ತದ್ದು ಈ ಬಾರಿ ಬೆಳಿಗ್ಗೆ 10 ಗಂಟೆಗೆ ದೋಸೆ ವಿತರಣೆ ಪ್ರಾರಂಭಗೊಳ್ಳಲಿದೆ. 11.30ಕ್ಕೆ ಅನ್ನದಾನ ಪ್ರಾರಂಭಗೊಂಡು 3 ಗಂಟೆಯ ತನಕ ಅನ್ನದಾನ ನಡೆದ ನಂತರ ಮತ್ತೆ ದೋಸೆ ವಿತರಣೆ ಪ್ರಾರಂಭಗೊಳ್ಳಲಿದೆ. ಆರು ಗಂಟೆಯ ಒಳಗಾಗಿ ವಸ್ತ್ರ ವಿತರಣೆ ಮುಗಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ದೊಡ್ಡ ಟೀಕಾಕಾರರು ಸತ್ತಿದ್ದಾರೆ:
ಕಾರ್ಯಕ್ರಮದ ಬಗ್ಗೆ ಟೀಕೆ ಮಾಡಿದವರಿಗೆ ಉತ್ತರಿಸಿ ಶಾಸಕರು, ಜನಮನ ಕಾರ್ಯಕ್ರಮವನ್ನು 4ಕೋಟಿ ಖರ್ಚು ಆಯೋಜಿಸಲಾಗುತ್ತಿದೆ. ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಷ್ಟು ಖರ್ಚು ಮಾಡಿ ಕಾರ್ಯಕ್ರಮ ಮಾಡುವವರಿಲ್ಲ. ಸೀರೆ, ಬೆಡ್ಶೀಟ್ಗಳಿಗೆ ಈಗಾಗಲೇ ಮುಂಗಡ ಹಣ ಪಾವತಿಸಲಾಗಿದೆ. ಎಷ್ಟೇ ಜನಬಂದರೂ ವಿತರಿಸಲಾಗುವುದು. ನಮ್ಮನ್ನು ಸಹಿಸದ ಚಿಲ್ಲರೆ ವಿರೋಧಿಗಳು ಕಾರ್ಯಕ್ರಮದ ಬಗ್ಗೆ ಟೀಕೆ ಮಾಡಿ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ವಾಟ್ಸಪ್ಗಳನ್ನು ಛೂ ಬಿಡುತ್ತಿದ್ದಾರೆ. ದೊಡ್ಡ ದೊಡ್ಡ ಟೀಕೆ ಮಾಡುವವರೆಲ್ಲಾ ಸತ್ತಿದ್ದಾರೆ. ಚಿಕ್ಕ ಚಿಕ್ಕಪುಟ್ಟವರು ಮಾತ್ರ ಇದ್ದಾರೆ. ಅವರು ಅಬ್ಬರ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ. ಅವರ ನೈಜ ಚಿತ್ರಣ ನೋಡಿದರೆ ಮನುಷ್ಯ ಅವರ ಹತ್ತಿರ ಹೋಗಲು ಸಾಧ್ಯವಿಲ್ಲ ಎಂದರು.
ಪ್ರಚಾರ ನೀಡಿ, ಸಾಮಾಜಿಕ ಜಾಲತಾಣ ಬಳಸಿ:
ಕಾರ್ಯಕ್ರಮಕ್ಕೆ ಇನ್ನು ಒಂದು ತಿಂಗಳು ಮಾತ್ರವೇ ಬಾಕಿಯಿದ್ದು ಈ ಸಾಲಿನ ಕಾರ್ಯಕ್ರಮದ ಬದಲಾವಣೆಯ ಬಗ್ಗೆ ಗ್ರಾಮ ಮಟ್ಟದ ಪ್ರಚಾರ ಕಾರ್ಯದಲ್ಲಿ ಜನರಿಗೆ ಮಾಹಿತಿ ನೀಡಬೇಕು. ಬೆಳಿಗ್ಗೆ 10 ಗಂಟೆಗ ವಿತರಣೆ ಪ್ರಾರಂಭಗೊಳ್ಳುವ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು. ಟ್ರಸ್ಟ್ನ ಮೂಲಕ ಜೋಡಿಸಿಕೊಂಡು ಯೋಜನೆ ರೂಪಿಸಿ ಚಾರ್ಟ್ ಮಾಡಿಕೊಂಡು ವ್ಯವಸ್ಥಿತ ರೀತಿಯಲ್ಲಿ ಮನವರಿಕೆ ಮಾಡಬೇಕು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮಹಿಳೆಯರನ್ನು ಸೇರಿಸಿಕೊಳ್ಳಬೇಕು. ಕಳೆದ ಬಾರಿ ಆಗಿರುವ ಸಮಸ್ಯೆಗಳಿಗೆ ಈ ವರ್ಷ ಪರಿಹಾರ ಕಂಡುಕೊಳ್ಳಲು ಯೋಜನೆ ರೂಪಿಸಿಬೇಕು. ಮುಸ್ಲಿಂ ಬಾಂಧವರು ಮಸೀದಿಗಳಲ್ಲಿ, ಕ್ರೈಸ್ತರು ಚರ್ಚ್ಗಳಲ್ಲಿ ಪ್ರಚಾರ ನೀಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನೀಡಬೇಕು. ಜಾಲತಾಣಗಳಲ್ಲಿ ಬರುವ ಸಂದೇಶಗಳಿಗೆ ಲೈಕ್ ಕೊಡಬೇಕು. ಉತ್ತಮ ಕೆಲಸಗಳಿಗೆ ಬೆಂಬಲಿಸಿ. ಟೀಕೆ ಮಾಡಿದವರಿಗೆ ಸರಿಯಾಗಿ ಜಾಡಿಸಿ ಉತ್ತರಿಸುವಂತೆ ಶಾಸಕರು ತಿಳಿಸಿದರು.
ಮುಖ್ಯಮಂತ್ರಿ, ರಾಜ್ಯ, ರಾಷ್ಟ್ರ ನಾಯಕರನ್ನು ಆಹ್ವಾನಿಸಲು ಆಗ್ರಹ;
ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರುಗೊಂಡಿದ್ದು ಮುಖ್ಯಮಂತ್ರಿಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಜೊತೆಗೆ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಬೇಕು. ಅಲ್ಲದೆ ಕೆಪಿಸಿಸಿ ಅಧ್ಯಕ್ಷ ಬಿ,ಕೆ ಹರಿಪ್ರಸಾದ್ ಹಾಗೂ ರಾಷ್ಟ್ರೀಯ ನಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಎಂದು ಸಭೆಯಲ್ಲಿ ಆಗ್ರಹ ವ್ಯಕ್ತವಾಯಿತು.
ಅಶೋಕ್ ರೈಯವರಿಗೆ ಸಾರ್ವಜನಿಕ ಸನ್ಮಾನವಾಗಬೇಕು-ಕಾವು ಹೇಮನಾಥ ಶೆಟ್ಟಿ:
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಪುತ್ತೂರಿಗೆ ಈ ತನಕ ಯಾವುದೇ ಸಚಿವ ಸ್ಥಾನ ದೊರೆಯದೇ ಇದ್ದು ಅಭಿವೃದ್ಧಿ ಆಗಿಲ್ಲ. ಅಶೋಕ್ ರೈಯವರು ಕೇವಲ ಶಾಸಕರಾಗಿ ಸಚಿವರು ಮಾಡುವ ಕೆಲಸ ಮಾಡುತ್ತಿದ್ದಾರೆ. ಸಮೀಕ್ಷೆ ನಡೆಸಿದರೆ ಅಶೋಕ್ ರೈಯವರೇ ನಂಬರ್ ವನ್ ಶಾಸಕರಾಗಲಿದ್ದಾರೆ. ಪುತ್ತೂರಿಗೆ ಮೆಡಿಕಲ್ ಕಾಲೇಜು, ಕ್ರೀಡಾಂಗಣ, ಆರ್ಟಿಓ ಟ್ರ್ಯಾಕ್ ಸಹಿತ ಹಲವು ಬೆಂಚ್ ಮಾರ್ಕ್ನ ಯೋಜನೆಗಳನ್ನು ತಂದಿರುವ ಶಾಸಕ ಅಶೋಕ್ ಕುಮಾರ್ ರೈವರಿಗೆ ಸಾರ್ವಜನಿಕವಾಗಿ ಸನ್ಮಾನಿಸುವ ಕೆಲಸವಾಗಬೇಕು. ದೀಪಾವಳಿಯ ವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಉದ್ಯಮಿಗಳು, ಸಂಘ-ಸಂಸ್ಥೆಗಳು ಸೇರಿಕೊಂಡು ಮುಖ್ಯಮಂತ್ರಿ, ರಾಜ್ಯ, ರಾಷ್ಟ್ರ ನಾಯಕರ ಮೂಲಕ ಲಕ್ಷಾಂತರ ಜನರ ಸಮ್ಮುಖದಲ್ಲಿ ವಿಶೇಷವಾಗಿ ಸಾರ್ವಜನಿಕವಾಗಿ ಸನ್ಮಾನಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಶಾಸಕರಿಗೆ ಸಹಕಾರ ನೀಡಬೇಕು-ಎಂ.ಎಸ್ ಮಹಮ್ಮದ್:
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್ ಮಾತನಾಡಿ, ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ನಡೆಯುವ ಅಶೋಕ ಜನ ಮನವು ರಾಜ್ಯದಲ್ಲಿ ದೊಡ್ಡ ಕಾರ್ಯಕ್ರಮವಾಗಿ ಮೂಡಿಬಂದಿದೆ. ಕಳೆದ ವರ್ಷದ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಳೆಯ ಕಾರಣದಿಂದ ಆಗಿರುವ ಸಣ್ಣಪುಟ್ಟ ವಿಚಾರಗಳನ್ನು ವಿಘ್ನ ಸಂತೋಷಿಗಳು ಸಂಭ್ರಮಿಸಿದ್ದಾರೆ. ಇದಕ್ಕೆ ಯಾರೂ ತಲೆ ಕೆಡಿಸಿಕೊಳ್ಳದೇ ಈ ವರ್ಷದ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಶಾಸಕರಿಗೆ ಸಹಕಾರ ನೀಡಬೇಕು ಎಂದು ಹೇಳಿದ ಅವರು ಶಾಸಕ ಅಶೋಕ್ ಕುಮಾರ್ ರೈಯವರ ಸಾಧನೆಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ಪ್ರಮಾಣ ಪತ್ರ ನೀಡಿದ್ದಾರೆ ಎಂದರು.
ಇಲ್ಲಿಯವರೇ ಮುಖ್ಯಮಂತ್ರಿಯಾಗಿದ್ದರೂ ಮೆಡಿಕಲ್ ಶಾಪ್ ತರಲು ಸಾಧ್ಯವಾಗಿಲ್ಲ-ಮಹಮ್ಮದ್ ಬಡಗನ್ನೂರು:
ಅಕ್ರಮ-ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮಾತನಾಡಿ, ಮೂಡಬಿದರೆಯ ಆಳ್ವಾಸ್ನಲ್ಲಿ ಪ್ರಾರಂಭಗೊಂಡಿರುವ ವೈದ್ಯಕೀಯ ಕಾಲೇಜಿನಲ್ಲಿ ತುಳು ಕೋಟದಲ್ಲಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟ್ ಪಡೆಯುವ ಅವಕಾಶ ದೊರೆತಿದೆ. ಇದು ಶಾಸಕ ಅಶೋಕ್ ರೈಯವರ ಅವಿರತ ಪ್ರಯತ್ನದ ಫಲವಾಗಿ ತುಳು ಭಾಷೆ ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಸಚಿವ ಸಂಪುಟದಲ್ಲಿ ಅನುಮೋದನೆಯಾಗಿರುವುದರಿಂದ ಸಾಧ್ಯವಾಗಿದೆ. ಇಲ್ಲಿಯವರೇ ಮುಖ್ಯಮಂತ್ರಿಯಾಗಿದ್ದರೂ ಅವರಿಗೆ ಮೆಡಿಕಲ್ ಕಾಲೇಜು ಅಲ್ಲ. ಮೆಡಿಕಲ್ ಶಾಪ್ ತರಲು ಸಾಧ್ಯವಾಗಿಲ್ಲ. ಅಂತಹ ಸಾಧನೆಯನ್ನು ಅಶೋಕ್ ರೈಯವರು ಮಾಡಿದ್ದಾರೆ. ದೂಷಣೆಗಳು ಸಹಜ, ಟೀಕೆಗಳು ಸಾಯುತ್ತದೆ. ಉತ್ತಮ ಕೆಲಸಗಳು ಉಳಿಯುತ್ತದೆ. ಅಶೋಕ್ ರೈಯವರ ಮೂಲಕ ನಡೆಯುವ ಅಶೋಕ ಜನಮನ ವಸ್ತ್ರ ವಿತರಣೆಯು ಜನ ಮಾನಸಕ್ಕೆ ಹತ್ತಿರವಾಗುವ ಕಾರ್ಯಕ್ರಮವಾಗಿದೆ ಎಂದರು.
ಐತಿಹಾಸಿಕ ಕಾರ್ಯಕ್ರಮ ಆಯೋಜನೆ ಅಶೋಕ್ ರೈಯವರಿಂದ ಮಾತ್ರ ಸಾಧ್ಯ-ಕೃಷ್ಣಪ್ರಸಾದ್ ಆಳ್ವ:
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮಾತನಾಡಿ, ಅಶೋಕ್ ಕುಮಾರ್ ರೈಯವರ ಹತ್ತನೇ ವರ್ಷದ ವಸ್ತ್ರ ವಿತರಣಾ ಕಾರ್ಯಕ್ರಮದ ಮೂಲಕ ನಾವು ಸೇರಿಕೊಂಡಿದ್ದೇವೆ. ಅಶೋಕ್ ರೈಯವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಪಕ್ಷದವರೆಲ್ಲರೂ ಒಟ್ಟು ಸೇರಿಕೊಂಡು ನಮ್ಮದೇ ಕಾರ್ಯಕ್ರಮ ಎಂಬ ಭಾವಣೆಯಲ್ಲಿ ಅಶೋಕ ಜನಮನ ಕಾರ್ಯಕ್ರಮವನ್ನು ಸಂಭ್ರಮಿಸಲಾಗುತ್ತಿದೆ. ಐತಿಹಾಸಿಕವಾಗಿ ನಡೆಯುವ ವಸ್ತ್ರ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲು ಅವರಿಂದ ಮಾತ್ರ ಸಾಧ್ಯ. ಬೇರೆ ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಂದರ್ಬೋಚಿತವಾಗಿ ಮಾತನಾಡಿದರು. ಯೋಗೀಶ್ ಸಾಮಾನಿ ವಸ್ತ್ರ ವಿತರಣೆಯ ಕೌಂಟರ್ಗಳ ಮಾಹಿತಿ ನೀಡಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು, ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಭಂಡಾರಿ ಕೈಪ, ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು, ಕೃಷ್ಣಪ್ರಸಾದ್, ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಸದಸ್ಯ ಮಹಾಬಲ ರೈ ವಲತ್ತಡ್ಕ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾೖಕ್, ನ್ಯಾಯವಾದಿ ದುರ್ಗಾಪ್ರಸಾದ್ ರೈ ಕುಂಬ್ರ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಿಳೆಯರು, ಪುರುಷರು ಸೇರಿದಂತೆ ನೂರಾರು ಮಂದಿ ಸಭೆಯಲ್ಲಿ ಭಾಗವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ಸುದೇಶ್ ಆರ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಣೆಗೈದರು. ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ ವಂದಿಸಿದರು. ಬಾಲಕೃಷ್ಣ ಪೂಜಾರಿ ಕೊಡಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
ಡಿಸೆಂಬರ್ನಲ್ಲಿ ಕುಟುಂಬ ಸಮ್ಮಿಲನ
ಅಶೋಕ ಜನಮನ ಕಾರ್ಯಕ್ರಮದ ಯಶಸ್ಸಿಗೆ ಕಾರ್ಯಕರ್ತರು ಸಹಕರಿಸಬೇಕು. ಕಾರ್ಯಕರ್ತರಿಗೆ ಕೂಪನ್ ಕೊಡುವ ಯೋಚನೆಯಿತ್ತು. ಅದು ಎಲ್ಲರಿಗೂ ಅನುಕೂಲವಾಗಲು ಸಾಧ್ಯವಿಲ್ಲ ಎನ್ನುವ ಉದ್ದೇಶದಿಂದ ಕಾರ್ಯಕರ್ತರಿಗೆ ಭರ್ಜರಿ ಊಟ ಕೊಡುವುದಾಗಿ ತೀರ್ಮಾನಿಸಿ ಮುಂದಿನ ಡಿಸೆಂಬರ್ನಲ್ಲಿ ಕುಟುಂಬ ಸಮ್ಮಿಲನವನ್ನು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗುವುದು. ಕೇವಲ ರಾಜಕೀಯ ಮಾತ್ರವಲ್ಲ. ನಮ್ಮೊಳಗೆ ಒಗ್ಗಟ್ಟು ಮೂಡಿಸಬೇಕು. ಎಲ್ಲರನ್ನು ಒಟ್ಟು ಸೇರಿಸಿ ಸಂಭ್ರಮಿಸುವ ಈ ದೊಡ್ಡ ಮಟ್ಟದ ಕಾರ್ಯಕ್ರಮದಲ್ಲಿ ಹತ್ತು ಸಾವಿರ ಮಂದಿ ಕಾರ್ಯಕರ್ತರನ್ನು ಸೇರಿಸಲಾಗುವುದು. ಬೆಳಿಗ್ಗೆಯಿಂದ ಸಂಜೆ ತನಕ ನಡೆಯುವ ಕಾರ್ಯಕ್ರಮದಲ್ಲಿ ಊಟ, ಉಪಹಾರ, ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಲಿದೆ.
-ಅಶೋಕ್ ಕುಮಾರ್ ರೈ ಶಾಸಕರು
ಪರಿಶೀಲಿಸಿಯೇ ವಸ್ತ್ರ ವಿತರಣೆ-ಸುಮ ಅಶೋಕ್ ರೈ
ದೀಪಾವಳಿಗೆ ವಿತರಿಸಲಾಗುವ ಸೀರೆ ಹಾಗೂ ಬೆಡ್ ಶೀಟ್ಗಳ ಮಾದರಿಯನ್ನು ಪಡೆದುಕೊಂಡು ಅದನ್ನು ತೊಳೆದು ಒಣಗಿಸಿ, ಅದರ ಗುಣಮಟ್ಟವನ್ನು ಪರೀಕ್ಷಿಸಲಾಗುವುದು. ಅದರ ಗುಣಮಟ್ಟ ಉತ್ತಮವಾಗಿದ್ದರೆ ಮಾತ್ರ ಅದನ್ನು ಖರೀದಿಸಿ ಸಾರ್ವಜನಿಕರಿಗೆ ವಿತರಿಸಲಾಗುವುದು. ಕಳೆದ ವರ್ಷ ಕೆಲವೊಂದು ಸಣ್ಣ ಪುಟ್ಟ ಎಡವಟ್ಟುಗಳು ಆಗಿದೆ. ಕಾರ್ಯಕರ್ತರು ಉತ್ತಮ ಸಹಕಾರ ನೀಡಿದ್ದಾರೆ. ಪ್ರತಿಯೊಬ್ಬರೂ ಮನೆಯ ಕಾರ್ಯಕ್ರಮದಂತೆ ಸಹಕರಿಸಿದ್ದಾರೆ. ಹೀಗಾಗಿ ಈ ಬಾರಿ ಇನ್ನಷ್ಟು ವ್ಯವಸ್ಥಿತವಾಗಿ ನಡೆಸಲಾಗುವುದು. ಜನರ ಅನುಕೂಲಕ್ಕಾಗಿ ಬೆಳಿಗ್ಗೆ 10.30ಕ್ಕೆ ವಿತರಿಸಲು ಪ್ರಾರಂಭಿಸಲಾಗುವುದು. ಬೆಳಿಗ್ಗೆ ದೋಸೆ, ಮಧ್ಯಾಹ್ನ ಊಟ ಹಾಗೂ ಅಪರಾಹ್ನದಿಂದ ದೋಸೆ ವಿತರಣೆಯು ನಡೆಯಲಿದೆ ಎಂದು ಟ್ರಸ್ಟ್ನ ಪ್ರವರ್ತಕರಾಗಿರುವ ಸುಮಾ ಅಶೋಕ್ ರೈ ಹೇಳಿದರು.
ಜನಮನದ ಜನನೋಡಿ ಮೆಡಿಕಲ್ ಕಾಲೇಜು
ಕಳೆದ ಸಾಲಿನ ಅಶೋಕ ಜನಮನ ವಸ್ತ್ರ ವಿತರಣಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾರ್ಯಕ್ರಮದಲ್ಲಿ ನೆರೆದಿದ್ದ ಅಪಾರ ಜನಸ್ತೋಮವನ್ನು ಕಂಡು ಬಹಳಷ್ಟು ಸಂತೋಷಗೊಂಡ ಅವರು ವೇದಿಕೆಯಲ್ಲಿಯೇ ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರುಗೊಳಿಸುವುದಾಗಿ ಘೋಷಣೆ ಮಾಡಿದ್ದಾರೆ. ಈ ಬಾರಿ ಮತ್ತೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು ಪ್ರಯತ್ನಿಸಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.










