ಅಲ್ಪಸಂಖ್ಯಾತ ಸೇವಾ ಕೇಂದ್ರ 20 ದಿನದಲ್ಲಿ ಆರಂಭಿಸದಿದ್ದರೆ ಉಗ್ರ ಹೋರಾಟ – ಎಸ್‌ಡಿಪಿಐ ಎಚ್ಚರಿಕೆ

0

ಪುತ್ತೂರು: ಪುತ್ತೂರಿನಲ್ಲಿ ಅಲ್ಪಸಂಖ್ಯಾತ ಸೇವಾ ಕೇಂದ್ರವನ್ನು 20 ದಿನಗಳೊಳಗೆ ಕಾರ್ಯಾರಂಭಗೊಳಿಸದಿದ್ದರೆ ಶಾಸಕರ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಸ್‌ಡಿಪಿಐ ಪುತ್ತೂರು ನಗರ ಸಮಿತಿ ಅಧ್ಯಕ್ಷ ತಾಜುದ್ದೀನ್ ಸಾಲ್ಮರ ಎಚ್ಚರಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತ ಸೇವಾ ಕೇಂದ್ರದ ವಿಚಾರದಲ್ಲಿ ಎಸ್‌ಡಿಪಿಐ ವಿರುದ್ಧ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದವರು ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದರು. 2013ರಲ್ಲಿ ಯಾರು ಯಾರೊಂದಿಗೆ ‘ರಿಲೇ ಆಟ’ ಆಡಿದ್ದಾರೆ ಎಂಬುದು ಜನತೆಗೆ ತಿಳಿದಿದೆ. 1994ರಲ್ಲಿ ವಿನಯಕುಮಾರ್ ಸೊರಕೆ ಅವರು ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಅವರನ್ನು ಸೋಲಿಸಲು ಯಾರು ರಾಜಕೀಯ ಆಟ ನಡೆಸಿದ್ದರು ಎಂಬುದೂ ಗೊತ್ತಿದೆ ಎಂದು ಹೇಳಿದರು. ಪುತ್ತೂರಿನಲ್ಲಿ ಸಮಸ್ಯೆಗಳು ಎದುರಾದಾಗ ಕೆಲವರನ್ನು ಬಳಸಿಕೊಂಡು ಎಸ್‌ಡಿಪಿಐ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಾಗಿವೆ ಎಂದು ಟೀಕಿಸಿದರು. ಕಾಂಗ್ರೆಸ್ ಆಡಳಿತದ ವಿರುದ್ಧ ಬಿಜೆಪಿ ಏಕೆ ಧ್ವನಿ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಪುತ್ತೂರಿನಲ್ಲಿ ವಿರೋಧ ಪಕ್ಷದ ಪಾತ್ರವನ್ನು ಎಸ್‌ಡಿಪಿಐ ಮಾತ್ರ ನಿರ್ವಹಿಸುತ್ತಿದೆ ಎಂದು ಹೇಳಿದರು. ಅಲ್ಪಸಂಖ್ಯಾತ ಸಮುದಾಯದ ಮತಗಳಿಂದ ಶಾಸಕರು ಆಯ್ಕೆಯಾಗಿದ್ದರೂ, ಸಮುದಾಯದ ಸಮಸ್ಯೆಗಳನ್ನು ಪ್ರಶ್ನಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಹಣದ ಬಲದಿಂದ ಸಮಾಜವನ್ನು ಕಟ್ಟಿಹಾಕಲು ಸಾಧ್ಯವಿಲ್ಲ. ಶಾಸಕರು ಅಲ್ಪಸಂಖ್ಯಾತರಿಗೆ ಅಗತ್ಯವಿರುವ ಕೆಲಸಗಳನ್ನು ಮಾಡಬೇಕು ಎಂದು ಒತ್ತಾಯಿಸಿದರು. 20 ದಿನಗಳೊಳಗೆ ಅಲ್ಪಸಂಖ್ಯಾತ ಸೇವಾ ಕೇಂದ್ರವನ್ನು ಆರಂಭಿಸದಿದ್ದರೆ ಮುಂದಿನ ದಿನಗಳಲ್ಲಿ ಶಾಸಕರು ಭಾಗವಹಿಸುವ ಕಾರ್ಯಕ್ರಮಗಳಿಗೆ ಕಪ್ಪು ಬಟ್ಟೆ ಪ್ರದರ್ಶಿಸಿ ಮುತ್ತಿಗೆ ಹಾಕುವಂತಹ ಹೋರಾಟಗಳನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು.


ಸೇವಾ ಕೇಂದ್ರ ಸೈಬರ್ ಸೆಂಟರ್ ಅಲ್ಲ
ಎಸ್‌ಡಿಪಿಐ ಪುತ್ತೂರು ನಗರ ಸಮಿತಿ ಜೊತೆ ಕಾರ್ಯದರ್ಶಿ ಅರ್ಷದ್ ಹುಸೈನ್ ಮಾತನಾಡಿ, ದರ್ಬೆ ಸಿಟಿಒಯಲ್ಲಿರುವ ಅಲ್ಪಸಂಖ್ಯಾತರ ಸಾಮಾನ್ಯ ಸೇವಾ ಕೇಂದ್ರವನ್ನು ಸೈಬರ್ ಸೆಂಟರ್ ಎಂದು ಬಿಂಬಿಸಲಾಗುತ್ತಿದೆ ಎಂದು ಆರೋಪಿಸಿದರು. ಪ್ರಧಾನಮಂತ್ರಿ ಜನವಿಕಾಸ್ ಕಾರ್ಯಕ್ರಮದ ಪರಿಷ್ಕೃತ ಮಾರ್ಗಸೂಚಿಯಂತೆ ಈ ಕೇಂದ್ರದಲ್ಲಿ ಅಲ್ಪಸಂಖ್ಯಾತರಿಗೆ ತರಬೇತಿ, ಗ್ರಂಥಾಲಯ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುವ ಉದ್ದೇಶವಿದೆ. ಉಚಿತ ತರಬೇತಿಯೊಂದಿಗೆ ಸ್ಟೈಪಂಡ್ ನೀಡುವ ಅವಕಾಶವೂ ಇದೆ. ಈ ಕುರಿತು ಅಲ್ಪಸಂಖ್ಯಾತರ ನಿರ್ದೇಶನಾಲಯದ ವೆಬ್‌ಸೈಟ್‌ನಲ್ಲಿ ಮಾಹಿತಿ ಲಭ್ಯವಿದೆ ಎಂದು ಅವರು ಹೇಳಿದರು. ಕೇಂದ್ರವು ದೂರದ ಪ್ರದೇಶದಲ್ಲಿದೆ ಎಂಬ ಆರೋಪಕ್ಕೂ ಪ್ರತಿಕ್ರಿಯಿಸಿದ ಅವರು, ಸ್ತ್ರೀಶಕ್ತಿ ಭವನ, ಮೆಡಿಕಲ್ ಕಾಲೇಜು ಹಾಗೂ ನ್ಯಾಯಾಲಯ ಸಂಕೀರ್ಣಗಳಿಂದ ಈ ಕೇಂದ್ರ ಎಷ್ಟು ದೂರದಲ್ಲಿದೆ ಎಂಬುದನ್ನು ತಿಳಿದುಕೊಂಡು ಮಾತನಾಡಬೇಕು ಎಂದರು. ಕೇಂದ್ರದ ವಿಚಾರವಾಗಿ ಕೇಂದ್ರ ಸರಕಾರಕ್ಕೆ ದೂರು ಸಲ್ಲಿಸಲಾಗಿದ್ದು, ಅಲ್ಲಿಂದ ವರದಿಯೂ ಬಂದಿದೆ. ಕರ್ನಾಟಕ ಅಲ್ಪಸಂಖ್ಯಾತರ ಇಲಾಖೆಯಿಂದಲೂ ಕೇಂದ್ರದಲ್ಲಿ ಗ್ರಂಥಾಲಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುವ ಕುರಿತು ಮಾಹಿತಿ ದೊರೆತಿದೆ ಎಂದು ಅರ್ಷದ್ ಹುಸೈನ್ ಹೇಳಿದರು. ಕೇಂದ್ರವನ್ನು ಬಾಲಕರ ಹಾಸ್ಟೆಲ್‌ಗಾಗಿ ಬಳಸಲಾಗುವುದು ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದವರು ಹೇಳುತ್ತಿರುವುದು ಸರಿಯಲ್ಲ. ಸರಕಾರದ ಸುತ್ತೋಲೆಯ ಪ್ರಕಾರ ಅಲ್ಲಿ ಸೇವಾ ಕೇಂದ್ರ ಕಾರ್ಯನಿರ್ವಹಿಸಬೇಕಿದ್ದು, ಗ್ರಂಥಾಲಯ ಸೇರಿದಂತೆ ಅಲ್ಪಸಂಖ್ಯಾತರಿಗೆ ಅಗತ್ಯ ಸೇವೆಗಳನ್ನು ಒದಗಿಸಬೇಕಾಗಿದೆ ಎಂದು ಅವರು ಹೇಳಿದರು.


ಪುತ್ತೂರಿನ ಜನತೆ ವಿದ್ಯಾವಂತರಾಗಿದ್ದು, ತಪ್ಪು ಮಾಹಿತಿಯ ಮೂಲಕ ಅವರನ್ನು ದಾರಿತಪ್ಪಿಸುವ ಪ್ರಯತ್ನ ಮಾಡಬಾರದು. ಅಲ್ಪಸಂಖ್ಯಾತ ಘಟಕದ ನಾಯಕರು ಕೀಳುಮಟ್ಟದ ರಾಜಕೀಯದಿಂದ ದೂರವಿರಬೇಕು ಎಂದು ಅವರು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಪಿಐ ನಗರ ಸಮಿತಿ ಕಾರ್ಯದರ್ಶಿ ಇಫಾಸ್ ಬನ್ನೂರು, ಉಪಾಧ್ಯಕ್ಷ ಶಮೀರ್ ನಾಜೂಕ್ ಹಾಗೂ ಸದಸ್ಯ ಇಷಾನ್ ಗೋಳಿಕಟ್ಟೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here