







ಪುತ್ತೂರು: ಪುತ್ತೂರು ಸಿಟಿಒ ಗುಡ್ಡೆಯಲ್ಲಿ ನಿರ್ಮಾಣವಾಗಿರುವ ಅಲ್ಪಸಂಖ್ಯಾತ ಸೇವಾ ಕೇಂದ್ರದ ಕಟ್ಟಡವನ್ನು ಶಾಸಕ ಅಶೋಕ್ ರೈ ಅವರು ಸೋಮವಾರ ಪರಿಶೀಲಿಸಿ, ಕಟ್ಟಡದ ಮುಂದಿನ ಬಳಕೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.


ಪುತ್ತೂರು ನಗರದ ಕೇಂದ್ರ ಭಾಗದಿಂದ ದೂರದಲ್ಲಿರುವ ಗುಡ್ಡದ ಮೇಲ್ಭಾಗದಲ್ಲಿ ಸೇವಾ ಕೇಂದ್ರ ಆರಂಭಿಸಿದರೆ ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ಬರುವ ಸಾರ್ವಜನಿಕರಿಗೆ ತೊಂದರೆಯಾಗಬಹುದು ಎಂಬ ಕಾರಣದಿಂದ ಕಟ್ಟಡವನ್ನು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಹಾಸ್ಟೆಲ್ ಆಗಿ ಪರಿವರ್ತಿಸಬೇಕೆಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮುಖಂಡರು ಶಾಸಕರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ಅಶೋಕ್ ರೈ ಅವರು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಶಿಫಾರಸು ಪತ್ರ ಕಳುಹಿಸಿದ್ದರು. ಈ ನಡುವೆ ಕಟ್ಟಡವನ್ನು ಮೂಲ ಉದ್ದೇಶಕ್ಕೇ ಬಳಸಬೇಕೆಂದು ಎಸ್ಡಿಪಿಐ ಆಗ್ರಹಿಸಿರುವ ಹಿನ್ನೆಲೆಯಲ್ಲಿ, ಸೆ.28ರಂದು ಶಾಸಕರು ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.




ಹಾಸನದಲ್ಲೂ ಹಾಸ್ಟೆಲ್:
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಮಹಮ್ಮದ್ ಫಾರೂಕ್ ಅವರು ಮಾಹಿತಿ ನೀಡಿ, ಸೇವಾ ಕೇಂದ್ರದ ಕಟ್ಟಡವನ್ನು ಹಾಸ್ಟೆಲ್ ಆಗಿ ಪರಿವರ್ತಿಸುವ ಕುರಿತು ಸರಕಾರಕ್ಕೆ ಶಿಫಾರಸು ಕಳುಹಿಸಲಾಗಿದೆ. ಅಲ್ಪಸಂಖ್ಯಾತ ಸೇವಾ ಕೇಂದ್ರಗಳ ಮೂಲಕ ನೀಡಲಾಗುತ್ತಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ಇದೀಗ ರಾಜ್ಯದ ಹಜ್ ಭವನಗಳಲ್ಲಿ ನಡೆಸಲು ಸರಕಾರ ನಿರ್ಧರಿಸಿದೆ ಎಂದು ತಿಳಿಸಿದರು. ಹಾಸನದಲ್ಲಿಯೂ ಇದೇ ಮಾದರಿಯ ಸೇವಾ ಕೇಂದ್ರದ ಕಟ್ಟಡ ನಿರ್ಮಾಣವಾಗಿದ್ದು, ಇದೀಗ ಅದನ್ನು ಹಾಸ್ಟೆಲ್ ಆಗಿ ಪರಿವರ್ತಿಸಲಾಗಿದೆ. ಬೆಂಗಳೂರಿನಲ್ಲಿ ಹಜ್ ಭವನದಲ್ಲೇ ತರಬೇತಿ ಸೇರಿದಂತೆ ವಿವಿಧ ಚಟುವಟಿಕೆಗಳು ನಡೆಯುತ್ತಿವೆ. ಮಂಗಳೂರಿಗೂ ಹಜ್ ಭವನ ಮಂಜೂರಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದ ಯುವಕರಿಗೆ ನೀಡಲಾಗುವ ತರಬೇತಿಗಳನ್ನು ಅಲ್ಲಿಯೇ ನಡೆಸಲು ಉದ್ದೇಶಿಸಲಾಗಿದೆ ಎಂದರು.
ಮೆಡಿಕಲ್ ಕಾಲೇಜು ಹಾಸ್ಟೆಲ್ಗೂ ಬಳಕೆಯ ಚಿಂತನೆ
ಪುತ್ತೂರಿನ ಸೇವಾ ಕೇಂದ್ರದ ಕಟ್ಟಡವನ್ನು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಹಾಸ್ಟೆಲ್ ಆಗಿ ಬಳಸಬೇಕೆಂದು ಸ್ಥಳದಲ್ಲಿದ್ದ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಮುಖಂಡರು ಶಾಸಕರನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಶಾಸಕ ಅಶೋಕ್ ರೈ ಮಾತನಾಡಿ, ಪುತ್ತೂರಿನಲ್ಲಿ ನಿರ್ಮಾಣವಾಗಲಿರುವ ಸರಕಾರಿ ಮೆಡಿಕಲ್ ಕಾಲೇಜಿಗೆ ಪ್ರತ್ಯೇಕ ಹಾಸ್ಟೆಲ್ ನಿರ್ಮಾಣವಾಗಲಿದೆ. ಒಂದು ವೇಳೆ ಮೆಡಿಕಲ್ ಕಾಲೇಜು ಹಾಸ್ಟೆಲ್ ನಿರ್ಮಾಣಕ್ಕೂ ಮೊದಲೇ ಆರಂಭಗೊಂಡರೆ, ಇಲಾಖೆಯ ಅನುಮತಿ ಪಡೆದು ಈ ಕಟ್ಟಡವನ್ನು ಒಂದು ವರ್ಷದ ಮಟ್ಟಿಗೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಆಗಿ ಬಳಸುವ ಚಿಂತನೆಯಿದೆ. ಇಂತಹ ಸಂದರ್ಭ ಎದುರಾದರೆ ಅಲ್ಪಸಂಖ್ಯಾತ ಸಮುದಾಯದವರು ಸಹಕರಿಸಬೇಕು ಎಂದು ಮನವಿ ಮಾಡಿದರು. ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎಚ್. ಮಹಮ್ಮದ್ ಆಲಿ, ಪುತ್ತೂರು ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಜಾದ್, ಮುಖಂಡರಾದ ಶಕೂರ್ ಹಾಜಿ, ಯಾಕೂಬ್ ಮಲಾರ್, ಅರ್ಷದ್ ದರ್ಬೆ, ಫಾರೂಕ್ ಬಾಯಬ್ಬೆ, ನಝೀರ್ ಮಠ ಮತ್ತಿತರರು ಉಪಸ್ಥಿತರಿದ್ದರು.










