ಕೋಳಿ ಸಾಕಾಣೆಗಾರರಿಗೆ ಕೃಷಿ ಸವಲತ್ತು ಒದಗಿಸಲು ಸಂಘಟಿತ ಹೋರಾಟ ಅಗತ್ಯ – ಕೋಳಿ ಬೆಳೆಗಾರರ ಅಭಿವೃದ್ಧಿ ಒಕ್ಕೂಟ

0

ಪುತ್ತೂರು: ಕೋಳಿ ಸಾಕಾಣಿಕೆ ಕೃಷಿ ಕಸುಬಿನ ವ್ಯಾಪ್ತಿಗೆ ಬರುವುದರಿಂದ ಕೃಷಿಕರಿಗೆ ದೊರೆಯುವ ಸವಲತ್ತುಗಳನ್ನು ಕೋಳಿ ಬೆಳೆಗಾರರಿಗೂ ಒದಗಿಸಬೇಕು. ಹಲವು ಸೌಲಭ್ಯಗಳು ಇನ್ನೂ ದೊರೆಯದ ಹಿನ್ನೆಲೆಯಲ್ಲಿ ಕೋಳಿ ಬೆಳೆಗಾರರು ಸಂಘಟಿತರಾಗಿ ಹೋರಾಟ ನಡೆಸಬೇಕಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೋಳಿ ಬೆಳೆಗಾರರ ಅಭಿವೃದ್ಧಿ ಒಕ್ಕೂಟದ ಅಧ್ಯಕ್ಷ ಪ್ರಭಾಕರ ಸುವರ್ಣ ಹೇಳಿದರು.


ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದ ಹೇಮಂತ್ ಕುಮಾರ್ ಸಭಾಂಗಣದಲ್ಲಿ ಸೆ.25ರಂದು ನಡೆದ ಒಕ್ಕೂಟದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೋಳಿ ಸಾಕಾಣಿಕೆಗೆ ಉಚಿತ ವಿದ್ಯುತ್ ಒದಗಿಸಬೇಕು. ಕೋಳಿ ಶೆಡ್ ನಿರ್ಮಾಣಕ್ಕೆ ಶೇ.3ರ ಬಡ್ಡಿದರದಲ್ಲಿ ಗರಿಷ್ಠ 25 ಲಕ್ಷದವರೆಗೆ ಸಾಲ ಸೌಲಭ್ಯ ಕಲ್ಪಿಸಬೇಕು. ಯಂತ್ರೋಪಕರಣಗಳ ಖರೀದಿಗೆ ಸಹಾಯಧನ ಹಾಗೂ ಕೋಳಿ ಸಾಕಾಣಿಕೆದಾರರಿಗೆ ವಿಮಾ ಸೌಲಭ್ಯ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು. ಈ ಬೇಡಿಕೆಗಳ ಈಡೇರಿಕೆಗೆ ಬೆಳೆಗಾರರೆಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂದು ಅವರು ಹೇಳಿದರು.

ಮಹಾಸಭೆ ಉದ್ಘಾಟಿಸಿದ ಒಕ್ಕೂಟದ ಗೌರವ ಸಲಹೆಗಾರ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ, ಕೋಳಿ ಬೆಳೆಗಾರರು ಸಂಘಟಿತರಾಗಿ ಹೋರಾಟ ನಡೆಸಿದಾಗ ಮಾತ್ರ ಸರ್ಕಾರ ಹಾಗೂ ಸಂಬಂಧಪಟ್ಟ ಕಂಪನಿಗಳ ಗಮನ ಸೆಳೆಯಲು ಸಾಧ್ಯ. ಧನಾತ್ಮಕ ಚಿಂತನೆಯೊಂದಿಗೆ ಬೆಳೆಗಾರರ ಹಿತಾಸಕ್ತಿಗಾಗಿ ಸ್ವಂತ ಸಹಕಾರಿ ಸಂಘವನ್ನು ಸ್ಥಾಪಿಸಿ ಅದರ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದರು. ಒಕ್ಕೂಟದ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು ಮಾತನಾಡಿ, ಒಕ್ಕೂಟ ನಡೆದು ಬಂದ ಹಾದಿ ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ವಿವರಿಸಿದರು. ತಾಲೂಕು ಘಟಕಗಳ ಪದಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಕೋಳಿ ಬೆಳೆಗಾರರನ್ನು ಸಂಘಟಿಸುವ ಮೂಲಕ ಒಕ್ಕೂಟವನ್ನು ಇನ್ನಷ್ಟು ಬಲಪಡಿಸಬೇಕು ಎಂದು ಹೇಳಿದರು. ಕೋಶಾಧಿಕಾರಿ ಸನತ್ ಮುಳುಗಾಡು ಲೆಕ್ಕಪತ್ರ ಮಂಡಿಸಿದರು. ಜೈರಾಜ್ ಭಂಡಾರಿ ಸಂಘಟನೆಯ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ದಿವ್ಯನಾಥ್ ಶೆಟ್ಟಿ ಕಾವು, ಮಿತ್ರದಾಸ್ ರೈ, ದಿನೇಶ್ ಶೆಟ್ಟಿ ಕುಂಬ್ರ, ಸಚಿನ್ ರೈ ಬೆಳ್ಳಾರೆ ಹಾಗೂ ಪ್ರಕಾಶ್ ಉಜಿರೆ ಉಪಸ್ಥಿತರಿದ್ದರು.

ಕೆ.ಜಿ.ಗೆ 10 ರೂ. ನೀಡಲು ಆಗ್ರಹಿಸಿ ಪ್ರತಿಭಟನೆಗೆ ನಿರ್ಧಾರ
ಜಿಲ್ಲೆಯ ಕೋಳಿ ಬೆಳೆಗಾರರೆಲ್ಲ ದಕ್ಷಿಣ ಕನ್ನಡ ಜಿ ಕೋಳಿ ಬೆಳಗಾರರ ಅಭಿವೃದ್ಧಿ ಒಕ್ಕೂಟದ ಸದಸ್ಯರಾಗಬೇಕು. ಕೋಳಿ ಬೆಳೆಗಾರರಿಗೆ ಪ್ರತೀ ಕೆ.ಜಿ.ಗೆ 10 ರೂ. ನೀಡಬೇಕೆಂದು ಸರಕಾರ ಆದೇಶ ಮಾಡಿದರೂ ಖಾಸಗಿ ಕಂಪನಿಯವರು ಇದನ್ನು ಪರಿಗಣಿಸಿಲ್ಲ. ಹೀಗಾಗಿ ಅಖಿಲ ಕರ್ನಾಟಕ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಇತರ ಸಂಘಟನೆಗಳ ಜೊತೆ ಸೇರಿ ಪಶು ಸಂಗೋಪನಾ ಇಲಾಖೆಗೆ ಮನವಿ ಸಲ್ಲಿಸುವುದು. ಅಗತ್ಯ ಬಿದ್ದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದು ಎಂದು ಮಹಾಸಭೆ ನಿರ್ಧರಿಸಿತು.

LEAVE A REPLY

Please enter your comment!
Please enter your name here