ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ಪ್ರಸಾದ ಬಲಿಪ ಸ್ಮರಣೆ- ಸನ್ಮಾನ

0

ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಪುತ್ತೂರು, ಯಕ್ಷ ಕಲಾಕೇಂದ್ರ (ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ಕಲೆಗಳ ಅಧ್ಯಯನ ಕೇಂದ್ರ) ಮತ್ತು ಬಲಿಪ ಪ್ರಸಾದ- ಸ್ಮರಣೆ ಮತ್ತು ಸಮ್ಮಾನ ಸಮಿತಿಯ ಸಹಯೋಗದಲ್ಲಿ ತೆಂಕುತಿಟ್ಟಿನ ಅಗ್ರಮಾನ್ಯ ಭಾಗವತ ಪ್ರಸಾದ ಬಲಿಪ ಸ್ಮರಣೆ ಮತ್ತು ಸನ್ಮಾನ ಕಾರ್ಯಕ್ರಮ ಕಾಲೇಜಿನ ಸ್ನಾತಕೋತ್ತರ ಸಭಾಭವನದಲ್ಲಿ ಸಂಪನ್ನಗೊಂಡಿತು.


ಯಕ್ಷಗಾನದ ಮೇರು ಭಾಗವತರಾಗಿ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸಿ, ಯಕ್ಷಗಾನದ ಪಾರಂಪರಿಕ ಭಾಗವತಿಕೆಗೆ ಅಮೂಲ್ಯ ಕೊಡುಗೆಯನ್ನು ನೀಡಿದ ಭಾಗವತ ಪ್ರಸಾದ ಬಲಿಪರ ನೆನಪಲ್ಲಿ ತೆಂಕುತಿಟ್ಟಿನ ಪ್ರಸಿದ್ಧ ವೇಷಧಾರಿ ಮತ್ತು ಬಲಿಪ ಪ್ರಸಾದರ ಒಡನಾಡಿ ಜಯಪ್ರಕಾಶ ಶೆಟ್ಟಿ ಪೆರ್ಮುದೆಯವರಿಗೆ ಬಲಿಪ ಪ್ರಸಾದ ಸ್ಮರಣೆ- ಸಮ್ಮಾನ ಮಾಡಲಾಯಿತು. ಬಲಿಪ ಪ್ರಸಾದರ ಸ್ಮರಣೆಯನ್ನು ಯಕ್ಷಗಾನ ಸಂಘಟಕ ಶಾಂತರಾಮ ಕುಡ್ವರವರು ನಿರ್ವಹಿಸಿದರು. ಪ್ರಸಾದ ಬಲಿಪ ಸ್ಮರಣೆ ಮತ್ತು ಸಮ್ಮಾನ ಕಾರ್ಯಕ್ರಮದ ಸಂಘಟಕ ಕೃಷ್ಣಕುಮಾರ್ ಪ್ರಾಸ್ತಾವಿಕ ಮಾತನಾಡಿ ಕಾಲೇಜಿನ ಪ್ರಾಂಶುಪಾಲರಾದ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋರವರ ಮಾರ್ಗದರ್ಶನದಲ್ಲಿ ನಡೆಯುವ ಯಕ್ಷ ಕಲಾಕೇಂದ್ರದ ಕಾರ್ಯಚಟುವಟಿಕೆಗಳು ಪ್ರಶಂಸನೀಯ. ಕಲೆ, ಸಂಸ್ಕ್ರತಿಯ ಬೆಳವಣಿಗೆಗೆ ಸಂಸ್ಥೆಯು ನೀಡುವ ಪ್ರೋತ್ಸಾಹಕ್ಕಾಗಿ ಅಭಿನಂದಿಸಿದರು. ಸಮ್ಮಾನ ಸ್ವೀಕರಿಸಿ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ ಮಾತನಾಡಿ ಪ್ರಸಾದ ಬಲಿಪರ, ಒಡನಾಟವನ್ನು ಸ್ಮರಿಸಿಕೊಂಡರು. ಸಮಿತಿಯ ಗೌರವ ಸಲಹೆಗಾರ ರುಕ್ಕಯ್ಯ ಪೂಜಾರಿ ಮಾತನಾಡಿ ಕಲಾ ಕ್ಷೇತ್ರದ ಬೆಳವಣಿಗೆಗೆ ನೀಡಿದ ಕೊಡುಗೆಗೆ ಸಂತ ಫಿಲೋಮಿನಾ ವಿದ್ಯಾಸಂಸ್ಥೆಯನ್ನು ಅಭಿನಂದಿಸಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಉಪಪ್ರಾಂಶುಪಾಲ ಡಾ| ವಿಜಯಕುಮಾರ ಮೊಳೆಯಾರರವರು ಬಲಿಪ ಶೈಲಿಯ ಬೆರಗು ಮತ್ತು ಯಕ್ಷಗಾನ ಕ್ಷೇತ್ರದ ಸಾಧಕರನ್ನು ಸಂತ ಫಿಲೋಮಿನಾ ಸಂಸ್ಥೆ ಸಮ್ಮಾನಿಸಿ ಕಲೆಯ ಬೆಳವಣಿಗೆಗೆ ನೀಡಿದ ಕೊಡುಗೆ ಸ್ಮರಿಸಿದರು. ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ರಿಚರ್ಡ್ ಕರ್ಡೋಜಾ ಉಪಸ್ಥಿತರಿದ್ದರು.


ಗುರುದಕ್ಷಿಣೆ ಯಕ್ಷ ಸಂವಾದ ಕಾರ್ಯಕ್ರಮ ಸಂಪನ್ನಗೊಂಡಿತು. ಬಲಿಪ ಪ್ರಸಾದ- ಸ್ಮರಣೆ ಸಮಿತಿಯವರು, ಕಾಲೇಜಿನ ಪ್ರಾಧ್ಯಾಪಕ ವೃಂದದವರು ಮತ್ತು ಯಕ್ಷಕಲಾ ಕೇಂದ್ರದ ಹಾಗೂ ಸಾಂಸ್ಕೃತಿಕ ಸಂಘದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಯಕ್ಷಕಲಾ ಕೇಂದ್ರ ನಿರ್ದೇಶಕ ಪ್ರಶಾಂತ ರೈ ಸ್ವಾಗತಿಸಿ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಭೌತಶಾಸ್ತ್ರ ವಿಭಾಗದ ಪೂಜಾಶ್ರೀ ರೈ ಕಾರ್ಯಕ್ರಮ ನಿರೂಪಿಸಿದರು. ಯಕ್ಷಕಲಾ ಕೇಂದ್ರದ ವಿದ್ಯಾರ್ಥಿಗಳು ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here