







ಪಾರದರ್ಶಕತೆ ಇಲ್ಲದೆ ಹಣಕಾಸು ವ್ಯವಹಾರ -ಮುರಳಿಕೃಷ್ಣ ಹಸಂತಡ್ಕ


ಪುತ್ತೂರು:ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಅಭಿವೃದ್ಧಿ ಸಮಿತಿಯ ಕಾರ್ಯವೈಖರಿ, ದೇವಸ್ಥಾನದ ಆಸ್ತಿ ಮತ್ತು ಕಟ್ಟಡಗಳ ತೆರವು, ಧಾರ್ಮಿಕ ಕಟ್ಟಡಗಳ ತೆರವು, ವಿವಿಧ ಕಾಮಗಾರಿಗಳು, ಹಣಕಾಸು ವ್ಯವಹಾರಗಳು, ಟೆಂಡರ್ ಪ್ರಕ್ರಿಯೆಗಳು ಹಾಗೂ 2024-25ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯಲ್ಲಿ ಉಲ್ಲೇಖಿಸಿರುವ ಆಕ್ಷೇಪಣೆಗಳ ಕುರಿತು ಸಮಗ್ರ ತನಿಖೆ ನಡೆಸಿ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಆಗ್ರಹಿಸಿದರು.



ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಸಮಿತಿಯ ಹಣಕಾಸು ವ್ಯವಹಾರ,ಕಾನೂನು ಉಲ್ಲಂಘನೆ ಮಾಡಿ ನಡೆಸಲಾಗುತ್ತಿರುವ ಕಾಮಗಾರಿಗಳ ಸಹಿತ ವಿವಿಧ ಆರೋಪಗಳ ವಿರುದ್ಧ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ, ಬಿಜೆಪಿಯಿಂದ ಪುತ್ತೂರು ಕಿಲ್ಲೆ ಮೈದಾನದ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಸೆ.29ರಂದು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು,ದೇವಸ್ಥಾನದ ಆಡಳಿತದಲ್ಲಿ ಪಾರದರ್ಶಕತೆ ಕೊರತೆಯಿದೆ.ದೇವಸ್ಥಾನದ ಅಭಿವೃದ್ಧಿ ಎಂದು ಹೇಳಿ ಧಾರ್ಮಿಕ ಕೇಂದ್ರದ ಕಟ್ಟಡ, ಗುಡಿಯನ್ನು ಧ್ವಂಸ ಮಾಡುತ್ತಿದ್ದಾರೆ.ದೇವಸ್ಥಾನದ ವಿಚಾರದಲ್ಲಿ ಇದುವರೆಗೆ ರಾಜಕೀಯ ಮಾಡಬಾರದು ಎಂಬ ಉದ್ದೇಶದಿಂದ ಬಿಜೆಪಿ ಮೌನವಾಗಿತ್ತು.ಆದರೆ ದೇವಸ್ಥಾನದ ಆಡಳಿತದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುವ ಅನಿವಾರ್ಯತೆ ಎದುರಾಗಿದೆ ಎಂದ ಅವರು, ದೇವಸ್ಥಾನದ ವಿಚಾರಕ್ಕೆ ಸಂಬಂಧಿಸಿದಂತೆ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.ಲೋಕಾಯುಕ್ತ ಸೇರಿದಂತೆ ಸಂಬಂಧಿಸಿದ ಇಲಾಖೆಗಳಿಗೂ ದೂರು ನೀಡಲಾಗಿದೆ.ಈ ಬಗ್ಗೆ ಅಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕು.ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಹಾಲಿಂಗೇಶ್ವರ ದೇವಸ್ಥಾನ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ದೇವಸ್ಥಾನದ ಆಡಳಿತ, ಹಣಕಾಸು ವ್ಯವಹಾರ ಹಾಗೂ ಇತರ ಚಟುವಟಿಕೆಗಳು ಸಂಬಂಧಿಸಿದ ಕಾನೂನು ಮತ್ತು ನಿಯಮಗಳಂತೆ ನಡೆಯಬೇಕು.ಆದರೆ ಪ್ರಸ್ತುತ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಇಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.ಈ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮತ್ತು ಅಧಿಕಾರಿಗಳ ಕಾರ್ಯವೈಖರಿ ಕುರಿತು ತನಿಖೆ ಅಗತ್ಯವಾಗಿದೆ ಎಂದ ಅವರು,ದೇವಸ್ಥಾನದ ಅಭಿವೃದ್ಧಿ ಹಾಗೂ ಬ್ರಹ್ಮಕಲಶೋತ್ಸವದಂತಹ ಕಾರ್ಯಕ್ರಮಗಳು ಎಲ್ಲ ಭಕ್ತರ ಸಹಭಾಗಿತ್ವದಲ್ಲಿ ನಡೆಯಬೇಕು.ನಿತ್ಯದ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಆಡಳಿತಾತ್ಮಕ ವಿಚಾರಗಳಲ್ಲಿ ಸೂಕ್ತ ವ್ಯವಸ್ಥೆ ಮತ್ತು ಪಾರದರ್ಶಕತೆ ಇರಬೇಕು.ಇಲ್ಲವಾದರೆ ಅದರ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ತನಿಖೆಗೆ ಆಗಮಿಸಬೇಕಾಗಿದ್ದ ಅಧಿಕಾರಿಗಳು ಬಂದಿಲ್ಲ ಯಾಕೆ?:
ಎಂಡೋಮೆಂಟ್ ಇಲಾಖೆಯ ಎಸಿಯವರು ಸೆ.25ರಂದು ತನಿಖೆಗಾಗಿ ಆಗಮಿಸಬೇಕಿದ್ದರೂ ಬಂದಿಲ್ಲ.ಯಾವ ಕಾರಣಕ್ಕೆ ತನಿಖೆ ನಡೆಯಲಿಲ್ಲ ಮತ್ತು ಯಾರ ಒತ್ತಡವಿತ್ತು ಎಂಬುದನ್ನು ಇಲಾಖೆ ಸ್ಪಷ್ಟಪಡಿಸಬೇಕು.ಮಾಹಿತಿ ಹಕ್ಕು ಕಾಯ್ದೆಯಡಿ ಸಂಗ್ರಹಿಸಿದ ದಾಖಲೆಗಳು ಹಾಗೂ ವರದಿಗಳನ್ನು ಅಧಿಕಾರಿಗಳಿಗೆ ನೀಡಿದ್ದರೂ ತನಿಖೆ ನಡೆಯದಿದ್ದರೆ, ಮೇಲ್ಮಟ್ಟದಲ್ಲಿ ತನಿಖೆ ನಡೆಸಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಮುರಳಿಕೃಷ್ಣ ಹಸಂತಡ್ಕ ಹೇಳಿದರು.
ಹಲವು ಅಭಿವೃದ್ಧಿ ಹಿಂದಿನ ಸಮಿತಿಯಿಂದಲೇ ಆಗಿದೆ:
ಕೇಶವಪ್ರಸಾದ್ ಮುಳಿಯ ಅವರು ಅಧ್ಯಕ್ಷರಾಗಿದ್ದ ಹಿಂದಿನ ವ್ಯವಸ್ಥಾಪನಾ ಸಮಿತಿಯು ಅವರ ಹಿಂದಿನ ಅವಧಿಯಲ್ಲಿದ್ದ ಎನ್.ಸುಧಾಕರ ಶೆಟ್ಟಿಯವರ ನೇತೃತ್ವದ ಸಮಿತಿಯವರು ಮಾಡಿದ್ದ ಅನೇಕ ಅಭಿವೃದ್ಧಿ ಕೆಲಸಗಳನ್ನು ಮುಂದುವರೆಸುವ ಕೆಲಸಗಳನ್ನು ಮಾಡಿದ್ದರು.ಸುಧಾಕರ್ ಶೆಟ್ಟಿಯವರ ಅವಧಿಯಲ್ಲಿ ಅರ್ಧದಲ್ಲಿ ನಿಲ್ಲಿಸಲಾಗಿದ್ದ ಅನ್ನಛತ್ರದ ಕಾಮಗಾರಿಯನ್ನು ಕೇಶವಪ್ರಸಾದ್ ಅವರ ಸಮಿತಿ ಪೂರ್ಣ ಮಾಡಿತು.ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯಲ್ಲಿರುವ ಕಟ್ಟೆ ಜೀರ್ಣಾವ್ಯವಸ್ಥೆಯಲ್ಲಿದೆ ಎಂದು ಹೊಸದಾಗಿ ಕಟ್ಟೆ ಮತ್ತು ಕೆರೆಯನ್ನು ಅಭಿವೃದ್ಧಿ ಪಡಿಸಲು ಸುಮಾರು 89 ಲಕ್ಷ ರೂಪಾಯಿಯ ಅಂದಾಜುಪಟ್ಟಿ ತಯಾರಿಸಿ ಇಲಾಖೆಯ ಅನುಮತಿಯನ್ನು ಪಡೆದು ಮುಂದುವರಿಸಿದ್ದರು.ಆಗ ಭಕ್ತರಿಂದ ಸುಮಾರು 55 ಲಕ್ಷ ರೂಪಾಯಿ ಸಂಗ್ರಹ ಮಾಡಿದ್ದನ್ನು ಈಗಿನ ವ್ಯವಸ್ಥಾಪನಾ ಸಮಿತಿ ಇಟ್ಟುಕೊಂಡಿದೆ ಹೊರತು ಕೆರೆಯ ಕೆಲಸವನ್ನು ಪೂರ್ಣಗೊಳಿಸಿಲ್ಲ.ದೇವಸ್ಥಾನಕ್ಕೆ ಗೋ ಶಾಲೆಗಾಗಿ ಒಂದೇ ಒಂದು ರೂಪಾಯಿ ಖರ್ಚು ಮಾಡದೆ ಹತ್ತೊಂಬತ್ತು ಎಕರೆ ಜಾಗವನ್ನು ಬಿಜೆಪಿ ಸರಕಾರ ಇದ್ದಾಗ, ನಳಿನ್ ಕುಮಾರ್ ಕಟೀಲ್ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಿದ್ದು ಸಂಜೀವ ಮಠಂದೂರು ಶಾಸಕರಾಗಿದ್ದಾಗ, ಕೇಶವಪ್ರಸಾದ್ ಮತ್ತು ತಂಡ ಇದ್ದಾಗ ನಾವು ಮಾಡಿದ್ದೆವು.ಅದು ಇಡೀ ರಾಜ್ಯದ ಇತಿಹಾಸದಲ್ಲಿ ಮೊದಲು ಎಂದ ಅವರು, ಈಗಿನ ವ್ಯವಸ್ಥಾಪನಾ ಸಮಿತಿ ಭಕ್ತರ ಹಣವನ್ನು ಯಾವುದೇ ಪಾರದರ್ಶಕತೆ ಇಲ್ಲದೆ ಖರ್ಚು ಮಾಡುತ್ತಿದೆ ಎಂದು ಆರೋಪಿಸಿದರು.
ಭಕ್ತರ ಭಾವನೆಗೆ ಗೌರವ ನೀಡಬೇಕು:
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಅವರು ಮಾತನಾಡಿ, ದೇವಸ್ಥಾನದ ಆಡಳಿತದಲ್ಲಿ ಪಾರದರ್ಶಕತೆ ಹಾಗೂ ರಾಜಕೀಯ ಹಸ್ತಕ್ಷೇಪದ ಕುರಿತು ಹಲವು ಪ್ರಶ್ನೆಗಳು ಉದ್ಭವಿಸಿವೆ.ದೇವಸ್ಥಾನದ ಹಣಕಾಸು ವ್ಯವಹಾರಗಳು ಹಾಗೂ ಆಡಳಿತದ ಬಗ್ಗೆ ಭಕ್ತರಿಗೆ ಸ್ಪಷ್ಟ ಮಾಹಿತಿ ದೊರೆಯಬೇಕಿದೆ ಎಂದು ಹೇಳಿದರು.ಅಯೋಧ್ಯೆಯಲ್ಲಿ ಹುಂಡಿ ಕಳವಾದಾಗ ಯೋಗಿ ಆದಿತ್ಯ ಅವರು ಎಸ್.ಐ.ಟಿ ತನಿಖೆ ಮಾಡಿದ್ದರು.ಅದೇ ರೀತಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ವಿರುದ್ಧವೂ ಮಾಡಬೇಕಾಗಿದೆ.ಪುತ್ತೂರಿನ ಅಭಿವೃದ್ಧಿ ಹಾಗೂ ದೇವಸ್ಥಾನದ ಅಭಿವೃದ್ಧಿಗೆ ಕೊಡುಗೆ ನೀಡಿದ ಮಾಜಿ ಶಾಸಕರಿಗೆ ಪ್ರಸಾದ ನೀಡಿದ ವಿಚಾರದಲ್ಲಿ ವ್ಯವಸ್ಥಾಪನಾ ಸಮಿತಿ ಹಾಗೂ ಶಾಸಕರು ನಡೆದುಕೊಂಡ ರೀತಿಯ ಬಗ್ಗೆ ಭಕ್ತರು ಗಮನಿಸಿದ್ದಾರೆ ಎಂದು ಹೇಳಿದರು. ಹಿಂದೆ ಪುತ್ತೂರನ್ನು ಪ್ರತಿನಿಧಿಸಿದ್ದ ಹಲವು ಶಾಸಕರು ದೇವಸ್ಥಾನದ ವಿಚಾರದಲ್ಲಿ ಭಕ್ತರ ಧಾರ್ಮಿಕ ಭಾವನೆಗಳಿಗೆ ಗೌರವ ನೀಡುತ್ತಾ ಬಂದಿದ್ದಾರೆ.ರಾಮ ಭಟ್, ವಿನಯ ಕುಮಾರ್ ಸೊರಕೆ, ಡಿ.ವಿ. ಸದಾನಂದ ಗೌಡ, ಮಲ್ಲಿಕಾ ಪ್ರಸಾದ್, ಶಕುಂತಳಾ ಶೆಟ್ಟಿ ಹಾಗೂ ಸಂಜೀವ ಮಠಂದೂರು ಸೇರಿದಂತೆ ಹಲವು ಶಾಸಕರ ಅವಽಯಲ್ಲಿ ದೇವಸ್ಥಾನದ ಆಡಳಿತದಲ್ಲಿ ರಾಜಕೀಯ ಹಸ್ತಕ್ಷೇಪ ನಡೆದಿರುವುದನ್ನು ತಾವು ಕಂಡಿಲ್ಲ.ಅದೇ ರೀತಿ ನಟ್ಟೋಜ ಕುಟುಂಬದ ಎನ್.ಕೆ.ಜಗನ್ನಿವಾಸ ರಾವ್, ಮುಳಿಯ ಕೇಶವಪ್ರಸಾದ್, ನನ್ಯ ಅಚ್ಚುತ ಮೂಡಿತ್ತಾಯ ಹಾಗೂ ಎನ್.ಸುಧಾಕರ ಶೆಟ್ಟಿ ಸೇರಿದಂತೆ ಹಿಂದಿನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರುಗಳೂ ದೇವಸ್ಥಾನದ ಧಾರ್ಮಿಕ ವಿಚಾರಗಳಿಗೆ ಗೌರವ ನೀಡುತ್ತಾ ಆಡಳಿತ ನಡೆಸಿದ್ದಾರೆ ಎಂದು ಹೇಳಿದರು.ಮಹಾಲಿಂಗೇಶ್ವರ ದೇವಸ್ಥಾನದ ನವೀಕರಣ ಹಾಗೂ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಽಯಲ್ಲಿ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ದೇವಸ್ಥಾನಕ್ಕೆ ಹೆಚ್ಚಿನ ಅನುದಾನ ದೊರೆತಿತ್ತು.ದೇವಸ್ಥಾನದ ಅಭಿವೃದ್ಧಿಗೆ ಹಿಂದಿನ ಸರಕಾರಗಳು ಹಾಗೂ ಭಕ್ತರು ನೀಡಿದ ಕೊಡುಗೆಗಳನ್ನು ಕಡೆಗಣಿಸಬಾರದು. ಪ್ರಸ್ತುತ ಕೇಳಿಬರುತ್ತಿರುವ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ಭಕ್ತರು ಹಾಗೂ ಸಾರ್ವಜನಿಕರ ಮುಂದೆ ಇಡಬೇಕು ಎಂದು ಅವರು ಆಗ್ರಹಿಸಿದರು.

ಧಾರ್ಮಿಕ ಕ್ಷೇತ್ರವನ್ನು ರಾಜಕೀಯ ಕ್ಷೇತ್ರವನ್ನಾಗಿ ಮಾಡಬೇಡಿ:
ಬಿಜೆಪಿ ಗ್ರಾಮಾಂತರ ಮಂಡಲದ ದಯಾನಂದ ಶೆಟ್ಟಿ ಉಜಿರೆಮಾರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಧಾರ್ಮಿಕ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೆಪ ಮಾಡುವುದನ್ನು ನಾವು ಖಂಡಿಸುತ್ತೇವೆ. ದೇವಳದ ಜೀರ್ಣೊದ್ದಾರ ಮತ್ತು ಅಭಿವೃದ್ದಿ ಸಂತೋಷ.ಆದರೆ ಅದರಲ್ಲಿ ರಾಜಕೀಯ ಹಸ್ತಕ್ಷೇಪ ಸಹಿಸುವುದಿಲ್ಲ.ದೇವಳದಲ್ಲಿ ಆಡಳಿತ ವ್ಯವಸ್ಥೆಯಲ್ಲಿ ನಡೆಯುವ ಕೆಲಸಗಳ ಸತ್ಯಾಸತ್ಯತೆಯನ್ನು ಸಮಾಜದ ಮುಂದೆ ತರಬೇಕು. ಧಾರ್ಮಿಕ್ಷೇತ್ರವನ್ನು ರಾಜಕೀಯ ಕ್ಷೇತ್ರವನ್ನಾಗಿ ಮಾಡಬೇಡಿ ಎಂದು ಹೇಳಿ, ಈ ಖಂಡನಾ ಸಭೆಯನ್ನು ಅತ್ಯಂತ ನೋವಿನಲ್ಲಿ ಮಾಡುತ್ತಿದ್ದೇವೆ ಎಂದರು.
ದೇವಸ್ಥಾನದ ಆಡಳಿತದಲ್ಲಿ ಪಾರದರ್ಶಕತೆ ಅಗತ್ಯ:
ಬಿಜೆಪಿ ಮಾಧ್ಯಮ ವಕ್ತಾರ ರಾಜೇಶ್ ಬನ್ನೂರು ಅವರು ಸ್ವಾಗತಿಸಿ ಮಾತನಾಡಿ ಇವತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಿಚಾರದಲ್ಲಿ ಜನರು ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿಲ್ಲ ಎಂಬುದನ್ನು, ದೇವಸ್ಥಾನದ ವಿಚಾರದಲ್ಲಿ ಜನರಿಗೆ ಆಸಕ್ತಿ ಇಲ್ಲ ಎಂದು ಅರ್ಥೈಸಬಾರದು.ಮಹಾಲಿಂಗೇಶ್ವರ ದೇವರು ಸೀಮೆಯ ಒಡೆಯ ಎಂಬ ಭಾವನೆ ಭಕ್ತರಲ್ಲಿದ್ದು, ದೇವಸ್ಥಾನದ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂಬ ಕಾರಣದಿಂದ ಜನರು ಮೌನವಾಗಿದ್ದಾರೆ ಎಂದು ಹೇಳಿದರು. ದೇವಸ್ಥಾನದ ಹಣಕಾಸು ವ್ಯವಹಾರಗಳು ಹಾಗೂ ಕಾಮಗಾರಿಗಳ ಕುರಿತು ಪಾರದರ್ಶಕತೆ ಇರಬೇಕು.ದೇವಸ್ಥಾನದ ಆಡಳಿತದಲ್ಲಿ ಯಾವುದೇ ರೀತಿಯ ಅವ್ಯವಹಾರ ಅಥವಾ ರಾಜಕೀಯ ಹಸ್ತಕ್ಷೇಪ ನಡೆದಿದ್ದರೆ ಅದರ ಬಗ್ಗೆ ಸಂಬಂಧಪಟ್ಟ ಅಽಕಾರಿಗಳು ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ದಿ ವಿಚಾರದ ಕುರಿತು ಸಮಗ್ರ ತನಿಖೆ ನಡೆಸಲು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಗೆ ಪುತ್ತೂರು ಸಹಾಯಕ ಕಮೀಷನರ್ ಮೂಲಕ ಮನವಿ ನೀಡಲಾಯಿತು.ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ.,ಬಿಜೆಪಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಚಾಕೋಟೆಯವರು ಮನವಿ ಸಲ್ಲಿಕೆ ಮಾಡಿದರು.ನ್ಯಾಯಾಂಗ ತನಿಖೆ ಮಾಡುವಂತೆ ಸರಕಾರಕ್ಕೆ ಒತ್ತಾಯ ಮಾಡುವಂತೆ ಸಂಜೀವ ಮಠಂದೂರು ಈ ಸಂದರ್ಭ ಮನವಿ ಮಾಡಿದರು.
ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಸುನಿಲ್ ದಡ್ಡು ಸ್ವಾಗತಿಸಿದರು.ಬಿಜೆಪಿ ಗ್ರಾಮಾಂತರ ಮಂಡಲದ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರಸಭೆ ಮಾಜಿ ಅಧ್ಯಕ್ಷ ಕೆ.ಜೀವಂಧರ್ ಜೈನ್,ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು,ಬಿಜೆಪಿ ಮಾಜಿ ಅಧ್ಯಕ್ಷ ಎಸ್.ಅಪ್ಪಯ್ಯ ಮಣಿಯಾಣಿ,ಜಿಲ್ಲಾ ಬಿಜೆಪಿ ಮಾಜಿ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಡಾ.ಪ್ರಸನ್ನ, ಸುರೇಶ್ ಆಳ್ವ,ಪ್ರಸನ್ನ ದರ್ಬೆ ಸಹಿತ ಹಲವು ಬಿಜೆಪಿ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನಾಕಾರರ ಬೇಡಿಕೆಗಳು
ಆಪಾದನೆಗಳ ಕುರಿತು ಸ್ವತಂತ್ರ ಹಾಗೂ ನಿಷ್ಪಕ್ಷಪಾತ ನ್ಯಾಯಾಂಗ ತನಿಖೆ ನಡೆಸಬೇಕು.2024-25ರ ಲೆಕ್ಕ ಪರಿಶೋಧನಾ ವರದಿಯಲ್ಲಿರುವ ಪ್ರತಿಯೊಂದು ಆಕ್ಷೇಪಣೆ ಕುರಿತು ಆಕ್ಷನ್ ಟೇಕನ್ ರಿಪೋರ್ಟ್ ಸಿದ್ಧಪಡಿಸಬೇಕು.ದೇವಸ್ಥಾನದ ಎಲ್ಲಾ ಬ್ಯಾಂಕ್ ಖಾತೆಗಳು,ಜೀರ್ಣೋದ್ಧಾರ/ಅಭಿವೃದ್ಧಿ ಸಮಿತಿಗಳ ಖಾತೆಗಳು ಹಾಗೂ ಹಣಕಾಸು ವ್ಯವಹಾರಗಳ ವಿಶೇಷ ಆಡಿಟ್ ನಡೆಸಬೇಕು.ದೇವಸ್ಥಾನದ ಆಭರಣಗಳು,ಚರಾಸ್ತಿಗಳು ಮತ್ತು ಚಿರಾಸ್ತಿಗಳ ಭೌತಿಕ ಪರಿಶೀಲನೆ ನಡೆಸಬೇಕು.ತೆರವುಗೊಳಿಸಿರುವ ಕಟ್ಟಡಗಳು ಮತ್ತು ಧಾರ್ಮಿಕ ಕಟ್ಟಡಗಳಿಗೆ ಸಂಬಂಧಿಸಿದ ಎಲ್ಲಾ ಅನುಮತಿ,ಪ್ಲ್ಯಾನ್, ಅಂದಾಜು, ಟೆಂಡರ್, ಬಿಲ್ ಮತ್ತು ಪಾವತಿ ದಾಖಲೆಗಳನ್ನು ಪರಿಶೀಲಿಸಬೇಕು.ಜೀರ್ಣೋದ್ಧಾರ/ಅಭಿವೃದ್ಧಿ ಸಮಿತಿ ರಚನೆ ಮತ್ತು ಅದರ ಬ್ಯಾಂಕ್ ಖಾತೆಯ ಕಾನೂನುಬದ್ಧತೆಯನ್ನು ಪರಿಶೀಲಿಸಬೇಕು.ತನಿಖೆ ಪೂರ್ಣಗೊಳ್ಳುವವರೆಗೆ ದಾಖಲೆಗಳು,ಲೆಕ್ಕಪುಸ್ತಕಗಳು,ಬ್ಯಾಂಕ್ ದಾಖಲೆಗಳು ಮತ್ತು ದೇವಸ್ಥಾನದ ಆಸ್ತಿ/ಆಭರಣಗಳ ಸುರಕ್ಷತೆಗೆ ಅಗತ್ಯ ಕ್ರಮಕೈಗೊಳ್ಳಬೇಕು.ತನಿಖೆಯಲ್ಲಿ, ಯಾವುದೇ ಹಣಕಾಸು ಅಥವಾ ಆಡಳಿತಾತ್ಮಕ ಅಕ್ರಮಗಳು ದೃಢಪಟ್ಟಲ್ಲಿ, ಜವಾಬ್ದಾರಿಯುತ ವ್ಯಕ್ತಿಗಳು/ಅಧಿಕಾರಿಗಳ ವಿರುದ್ಧ ಅನ್ವಯಿಸುವ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು.ದೇವಸ್ಥಾನದ ಧಾರ್ಮಿಕ ಸಂಪ್ರದಾಯ,ಪೂಜೆ,ಸೇವೆ ಮತ್ತು ಭಕ್ತಾದಿಗಳ ಧಾರ್ಮಿಕ ಭಾವನೆಗಳಿಗೆ ಸಂಬಂಽಸಿದ ವಿಷಯಗಳಲ್ಲಿ ಇಲಾಖೆಯ ಆಗಮ ತಜ್ಞರು/ಸಂಬಂಧಪಟ್ಟ ತಜ್ಞರ ಅಭಿಪ್ರಾಯ ಪಡೆದು ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.










