







ಪುತ್ತೂರು: ಶ್ರೀಕೃಷ್ಣ ಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ ಸುದ್ದಿ ಅರಿವು ಕೇಂದ್ರದ ನೇತೃತ್ವದಲ್ಲಿ ಎಸ್.ಆರ್.ಕೆ. ಲ್ಯಾಡರ್ಸ್ ಪ್ರಾಯೋಜಕತ್ವದಲ್ಲಿ ಆಯೋಜಿಸಲಾಗಿದ್ದ `ಯಶೋದಾ ಕೃಷ್ಣ ಇನ್ಸ್ಟಾಗ್ರಾಮ್ ರೀಲ್ಸ್ ಸ್ಪರ್ಧೆ- 2026’ರ ಬಹುಮಾನ ವಿತರಣಾ ಸಮಾರಂಭವು ಸೆ.28ರಂದು ಸಂಜೆ ಮುಖ್ಯ ರಸ್ತೆಯ ವೆಂಕಟರಮಣ ಟವರ್ಸ್ನಲ್ಲಿರುವ ಸುದ್ದಿ ನ್ಯೂಸ್ ಸ್ಟುಡಿಯೋದಲ್ಲಿ ನಡೆಯಿತು.



ಸ್ಪರ್ಧೆಯ ತೀರ್ಪುಗಾರರೂ ಆಗಿದ್ದ ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥರಾಗಿರುವ ಡಾ| ವಿಜಯ ಸರಸ್ವತಿಯವರು ಮಾತನಾಡಿ, ನಮ್ಮ ಸಂಸ್ಕೃತಿ, ಆಚರಣೆಗಳು ಜೀವಂತವಾಗಿರಬೇಕಿದ್ದರೆ ಅದಕ್ಕೊಂದು ವೇದಿಕೆ ಬೇಕು. ಎಲ್ಲಿ ಆಚರಣೆ ಕೊನೆಯಾಗುತ್ತದೆಯೋ ಅಲ್ಲಿ ಸಂಸ್ಕೃತಿ ಕೊನೆಯಾಗುತ್ತದೆ ಎಂದು ಬಲ್ಲವರು ಹೇಳುತ್ತಾರೆ. ಸಂಸ್ಕೃತಿಯನ್ನು ಮುನ್ನೆಲೆಗೆ ತರುವ ದೃಷ್ಟಿಯಿಂದ ಇಂತಹ ಸ್ಪರ್ಧೆಯನ್ನು ಆಯೋಜಿಸಿದ ಸುದ್ದಿ ತಂಡಕ್ಕೆ ಅಭಿನಂದನೆಗಳು. ಸ್ಪರ್ಧೆಯ ತೀರ್ಪುಗಾರಿಕೆಯ ವೇಳೆ ಇಬ್ಬರೂ ತೀರ್ಪುಗಾರರು `ರೀಲ್ಸ್ನಿಂದ ರಿಯಲ್’ಗೆ ಎನ್ನುವಂತೆ ವಾಸ್ತವಕ್ಕೆ ಎಷ್ಟು ಹತ್ತಿರ ಎಂದು ನೋಡುವ ಪ್ರಯತ್ನ ಮಾಡಿದ್ದೇವೆ. ಬದುಕಿನಲ್ಲಿ ಬರುವ ಎಲ್ಲಾ ಸವಾಲುಗಳನ್ನು ಸಮಚಿತ್ತದಿಂದ ಸ್ವೀಕರಿಸಬೇಕು ಎನ್ನುವುದು ಶ್ರೀಕೃಷ್ಣನ ಸಂದೇಶ. ಯಾವುದೇ ಪರಿಕಲ್ಪನೆ, ಚಿಂತನೆಯಲ್ಲಿದ್ದಾಗ ಕೂಡ ಸವಾಲುಗಳ ಮಧ್ಯೆಯೂ ಕೂಡ ಹೊಸ ಚಿಂತನೆಗಳು, ಬದುಕಿಗೆ ಬೇಕಾದ ಮೌಲ್ಯಗಳು ಸಿಗಬಹುದು ಎನ್ನುವ ಸಂದೇಶ ನೀಡಿದವನು ಶ್ರೀಕೃಷ್ಣ ಪರಮಾತ್ಮ. ತಮ್ಮ ಬದುಕಿನಲ್ಲಿ ಶ್ರೀಕೃಷ್ಣನನ್ನು ಕಾಣುವ ಯಶೋದೆಯರ ಬದುಕಿನಲ್ಲಿ ಕೃಷ್ಣನ ಅನುಗ್ರಹ ಸದಾ ಇರಲಿ. ಇಂದು ನಾವು ರೀಲ್ಸ್ ಯುಗದಲ್ಲಿ 80ರ ದಶಕವನ್ನು ನೋಡುವ ಪ್ರಯತ್ನ ಮಾಡಿದೆವು. 80ರ ದಶಕದ ಚಿತ್ರ ನಮಗೆ ಎಷ್ಟು ಆಪ್ತವಾಗುತ್ತದೆಯೋ ಅಷ್ಟೇ ಹಿಂದಿನ ಜೀವನ ಪದ್ಧತಿ, ಮೌಲ್ಯಗಳು ಕೂಡ ಪ್ರಸ್ತುತವಾಗಲಿ ಎಂದು ಆಶಿಸಿದರು.




ಇನ್ನೋರ್ವ ತೀರ್ಪುಗಾರರಾಗಿದ್ದ, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಮಾತನಾಡಿ, ಸ್ಪರ್ಧೆಯ ವಿಜೇತರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಸ್ಪಧಿಗಳ ವೀಡಿಯೋಗಳನ್ನು ನೋಡುತ್ತಾ ನಮ್ಮನ್ನು ನಾವು ಕಳೆದುಕೊಂಡಿದ್ದೇವೆ. ಮಕ್ಕಳು ತಮ್ಮ ಬಾಲ್ಯವನ್ನು ಸಂಭ್ರಮಿಸಲು ಪೋಷಕರು ಅವಕಾಶ ನೀಡಬೇಕು. ಸುದ್ದಿ ಸಮೂಹ ಸಂಸ್ಥೆಯು ಮಾಧ್ಯಮವಾಗಿದ್ದುಕೊಂಡು ಸಮಾಜದ ಓರೆಕೋರೆಗಳನ್ನು ತಿದ್ದುವ ಜೊತೆಜೊತೆಗೆ ಕಲೆ, ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದೆ. ಇದಕ್ಕಾಗಿ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ಎಂದರು.

ಸುದ್ದಿ ಸಮೂಹ ಸಂಸ್ಥೆಗಳ ನಿರ್ದೇಶಕರಾದ ಶೋಭಾ ಶಿವಾನಂದ ಅವರು ಮಾತನಾಡಿ, ಎಲ್ಲಾ ಮಕ್ಕಳೂ ದೇವರ ಸ್ವರೂಪವೇ. ನಾವು ಹೇಗೆ ರೂಪು ನೀಡುತ್ತೇವೋ ಹಾಗೆ ಬೆಳೆಯುತ್ತಾರೆ. ಮಕ್ಕಳು ಬೆಳೆದಂತೆ ಅವರ ಮೇಲಿನ ಒತ್ತಡವೂ ಹೆಚ್ಚಾಗುತ್ತದೆ. ಮಕ್ಕಳಿಗೆ ಕೃಷ್ಣನ ವೇಷ ಹಾಕಿದಂತೆ ಕೃಷ್ಣನ ಸಂದೇಶಗಳನ್ನು ಮಕ್ಕಳಿಗೆ ತಿಳಿಸಿ, ಅದರಿಂದ ಅವರ ಜೀವನಕ್ಕೆ ಸಂಸ್ಕಾರವನ್ನು ಒದಗಿಸುವ ಜವಾಬ್ದಾರಿ ಮಕ್ಕಳ ಪೋಷಕರದ್ದಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿದ್ದ ಅತಿಥಿಗಳು ವಿಜೇತರಿಗೆ ಬಹುಮಾನ ವಿತರಿಸಿದರು. ಪೋಷಕರಾದ ಗುರುಕಿರಣ್ ಶೆಟ್ಟಿ ಸ್ಪರ್ಧೆಯ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸುದ್ದಿ ಪುತ್ತೂರು ಚಾನೆಲ್ ನೇರಪ್ರಸಾರ ವಿಭಾಗ ಮುಖ್ಯಸ್ಥರಾದ ಉಮೇಶ್ ಮಿತ್ತಡ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು. ಸುದ್ದಿ ಪುತ್ತೂರು ಚಾನೆಲ್ ಮುಖ್ಯಸ್ಥ ಗೌತಮ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುದ್ದಿ ಚಾನೆಲ್ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥರಾದ ಹಮೀದ್ ಪುತ್ತೂರು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಸುದ್ದಿ ಪುತ್ತೂರು ಚಾನೆಲ್ ಸಿಬ್ಬಂದಿಗಳಾದ ಕಾರ್ತಿಕ್ ಕರ್ಕೇರ, ಕವಿರಾಜ್ ಆಲಂಕಾರು, ವಿಶಾಲಾಕ್ಷಿ ಎಲ್., ರೇಷ್ಮಾ, ದಿನೇಶ್ ಎಂ., ಶ್ರಾವ್ಯ, ಆಶಾ ಸಹಕರಿಸಿದರು.

ಶ್ರೀಕೃಷ್ಣ ಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ ಸುದ್ದಿ ಅರಿವು ಕೇಂದ್ರದ ನೇತೃತ್ವದಲ್ಲಿ ಎಸ್.ಆರ್.ಕೆ. ಲ್ಯಾಡರ್ಸ್ನ ಪ್ರಾಯೋಜಕತ್ವದಲ್ಲಿ ಯಶೋದಾ ಕೃಷ್ಣ ಇನ್ಸ್ಟಾಗ್ರಾಮ್ ರೀಲ್ಸ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಮುದ್ದು-ಕೃಷ್ಣ ಯಶೋದೆ' ಮತ್ತು ತುಂಟ ಕೃಷ್ಣ ಯಶೋದೆ’ ಎನ್ನುವ ವಿಭಾಗದಲ್ಲಿ ಮುಖ್ಯ ಸ್ಪರ್ಧೆ ನಡೆದಿದ್ದು, 27 ಮಂದಿ ಸ್ಪಧಿಗಳು ಭಾಗವಹಿಸಿದ್ದರು. ಸೆ.9ರವರೆಗೆ ವೀಡಿಯೋ ಕಳುಹಿಸಲು ಅವಕಾಶ ನೀಡಲಾಗಿತ್ತು. ತೀರ್ಪುಗಾರರಾಗಿ ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥರಾಗಿರುವ ಡಾ| ವಿಜಯ ಸರಸ್ವತಿ ಮತ್ತು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಭಾಗವಹಿಸಿದ್ದು, ಸೆ.22ರಂದು ಫಲಿತಾಂಶ ಪ್ರಕಟಗೊಂಡಿದ್ದು, ಸೆ.28ರಂದು ಬಹುಮಾನ ವಿತರಿಸಲಾಯಿತು. ವಿಜೇತರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವಾಗಿ ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರ, ಉಡುಗೊರೆ ನೀಡಲಾಯಿತು. ಅತೀ ಹೆಚ್ಚು ಲೈಕ್ಸ್ ಪಡೆದ ಎರಡು ವೀಡಿಯೋಗಳಿಗೆ `ಪಾಪ್ಯುಲರ್ ರೀಲ್’ ಪ್ರೋತ್ಸಾಹಕ ಬಹುಮಾನವನ್ನು ನೀಡಲಾಯಿತು.

ವಿಜೇತರ ವಿವರ
`ಮುದ್ದು ಕೃಷ್ಣ-ಯಶೋದೆ’ ವಿಭಾಗ
ಪ್ರಥಮ: ಅಯಾನ್ಷ್ ವಿ.ಎ- ಅಕ್ಷಯ, ಆರೆಂಬಿ, ನಿಂತಿಕಲ್ಲು. ದ್ವಿತೀಯ: ಸಾನ್ಯಾ-ಸೋನಿಯಾ, ಜೆಪ್ಪು, ಮಂಗಳೂರು, ತೃತೀಯ: ಗ್ಯಾನ್- ಗೌತಮಿ, ಕಾಪು, ಉಡುಪಿ
ತುಂಟ ಕೃಷ್ಣ-ಯಶೋದೆ ವಿಭಾಗ
ಪ್ರಥಮ: ಅನಿಕಾ-ಭವ್ಯಾ, ನೆಲ್ಲಿಕಟ್ಟೆ, ಪುತ್ತೂರು
ಪಾಪ್ಯುಲರ್ ರೀಲ್ ವಿಭಾಗ
ಪ್ರಥಮ: ಆಧವನ್ ಕೃಷ್ಣ- ಗೀತಾ, ಅಬೀರ, ಕಾಣಿಯೂರು, ದ್ವಿತೀಯ: ಅಯಾನ್ಷ್ ವಿ.ಎ.,- ಅಕ್ಷಯ, ಆರೆಂಬಿ, ನಿಂತಿಕಲ್ಲು










