ಕೌಕ್ರಾಡಿ ಗ್ರಾ.ಪಂ.ಸಾಮಾಜಿಕ ಪರಿಶೋಧನೆಯ ಗ್ರಾಮಸಭೆ

0

ನೆಲ್ಯಾಡಿ: ಕೌಕ್ರಾಡಿ ಗ್ರಾಮ ಪಂಚಾಯತ್‌ನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಕೇಂದ್ರ 15ನೇ ಹಣಕಾಸು ಹಾಗೂ ರಾಜ್ಯ ಹಣಕಾಸು ಯೋಜನೆಯ 2026-27ನೇ ಸಾಲಿನ ಪ್ರಥಮ ಮತ್ತು ದ್ವಿತೀಯ ಹಂತದ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.


ಸಾಮಾಜಿಕ ಪರಿಶೋಧನೆಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕಿ ಪವಿತ್ರಾ ಅವರು ಮಾಹಿತಿ ನೀಡಿ, ಸಾಮಾಜಿಕ ಪರಿಶೋಧನೆಯ ತಂಡ ಕೌಕ್ರಾಡಿ ಗ್ರಾ.ಪಂ.ಗೆ ಭೇಟಿ ನೀಡಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ, ಕೇಂದ್ರ 15ನೇ ಹಣಕಾಸು ಹಾಗೂ ರಾಜ್ಯ ಹಣಕಾಸು ಯೋಜನೆಯ ಅನುದಾನದಲ್ಲಿ ನಡೆದ ಕಾಮಗಾರಿಗಳ ಹಾಗೂ ನಿರ್ವಹಿಸಿದ ದಾಖಲೆಗಳ ಪರಿಶೀಲನೆ ನಡೆಸಿದೆ. ಏಳೆಂಟು ಕಾಮಗಾರಿಗಳ ನಿರ್ವಹಣೆಯಲ್ಲಿ ಲೋಪಗಳು ಕಂಡುಬಂದಿರುವುದಾಗಿ ತಿಳಿಸಿದರು. ಈಗ ವಿಬಿ ಜಿ ರಾಮ್ ಜಿ ಯೋಜನೆ ಜಾರಿಗೆ ಬಂದಿದ್ದು ನಿಯಮ, ಮಾರ್ಗಸೂಚಿಗಳು ಬದಲಾಗಿವೆ. ವರ್ಷದಲ್ಲಿ ಕಾಮಗಾರಿ ನಿರ್ವಹಿಸಬಹುದಾದ ದಿನಗಳ ಸಂಖ್ಯೆ 125ಕ್ಕೆ ಏರಿಕೆಯಾಗಿದೆ. ಕೂಲಿ ಮೊತ್ತವೂ ಏರಿಕೆಯಾಗಿದೆ. ಯೋಜನೆಯ ಬಗ್ಗೆ ಸಮರ್ಪಕವಾಗಿ ಮಾಹಿತಿ ಪಡೆದುಕೊಂಡು ಅನುಷ್ಠಾನ ಮಾಡುವಂತೆ ಹೇಳಿದರು.


ತೋಟಗಾರಿಕಾ ಇಲಾಖೆ ಇಂಜಿನಿಯರ್ ಸವಿತಾ ಲೋಬೋ ಅವರು ಮಾತನಾಡಿ, ವಿಬಿ ಜಿ ರಾಮ್ ಜಿ ಯೋಜನೆ ಕ್ಲಿಷ್ಠಕರವಾಗಿದೆ. ಫಲಾನುಭವಿಗಳು ಕೆಲಸ ಆರಂಭಿಸುವ ಮೊದಲು ಯೋಜನೆಯ ಕುರಿತು ಸರಿಯಾಗಿ ಮಾಹಿತಿ ಪಡೆದುಕೊಳ್ಳಬೇಕೆಂದು ಹೇಳಿದರು. ಫಲಾನುಭವಿ ಅಬೂಬಕ್ಕರ್ ಸಿದ್ದೀಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲಾ ಗ್ರಾಮಸ್ಥರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು. ಗ್ರಾ.ಪಂ.ಆಡಳಿತಾಧಿಕಾರಿ ಆದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಮೋಹನ್‌ಕುಮಾರ್ ಜಿ. ಸ್ವಾಗತಿಸಿ, ಕಾರ್ಯದರ್ಶಿ ದೇವಿಕಾ ವಂದಿಸಿದರು. ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ರಮ್ಯ, ಸವಿತಾ, ಪ್ರಣಮ್ಯ, ಪ್ರತಿಭಾ, ಜಯಮಣಿ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.

28.46 ಲಕ್ಷ ರೂ.ಖರ್ಚು;
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಏ.1, 2025ರಿಂದ ಮಾ.31, 2026ರ ತನಕ ಕೌಕ್ರಾಡಿ ಗ್ರಾ.ಪಂ.ನಲ್ಲಿ 82 ಕಾಮಗಾರಿ ನಿರ್ವಹಿಸಲಾಗಿದ್ದು 25,85,392 ರೂ.ಕೂಲಿ ಮೊತ್ತ ಹಾಗೂ 2,60,905 ಸಾಮಾಗ್ರಿ ಮೊತ್ತ ಸೇರಿ ಒಟ್ಟು 28,46,297 ರೂ. ಖರ್ಚು ಆಗಿದೆ. 174 ಕುಟುಂಬದ 324 ಜನ ಕಾಮಗಾರಿ ನಿರ್ವಹಿಸಿದ್ದು 6991 ಮಾನವ ದಿನ ಸೃಜನೆಯಾಗಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು. ಅದೇ ರೀತಿ 15ನೇ ಹಣಕಾಸು ಯೋಜನೆಯಡಿ 35 ಕಾಮಗಾರಿಗಳಿಗೆ 24,46,262 ರೂ.ಖರ್ಚು ಹಾಗೂ ರಾಜ್ಯ ಹಣಕಾಸು ಯೋಜನೆಯಡಿ ತಾ.ಪಂ.ನ 5,58,633 ರೂ.ಅನುದಾನದಲ್ಲಿ 3 ಕಾಮಗಾರಿ ನಿರ್ವಹಿಸಲಾಗಿದೆ ಎಂದು ಮಾಹಿತಿ ನೀಡಲಾಯಿತು.

LEAVE A REPLY

Please enter your comment!
Please enter your name here