ರಾಮಕುಂಜ ಗ್ರಾಮಸಭೆ

0

ಸರಕಾರಿ ಶಾಲೆಗಳ ಕಟ್ಟಡ ದುರಸ್ತಿಗೆ ಆಗ್ರಹ

ರಾಮಕುಂಜ: ನಾದುರಸ್ತಿಯಲ್ಲಿರುವ ಸರಕಾರಿ ಶಾಲೆಗಳ ಕಟ್ಟಡ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ ಘಟನೆ ರಾಮಕುಂಜ ಗ್ರಾಮಸಭೆಯಲ್ಲಿ ನಡೆದಿದೆ.
ಸಭೆ ಸೆ.28ರಂದು ಆಡಳಿತಾಧಿಕಾರಿಯಾಗಿರುವ ಪಂಚಾಯತ್ ರಾಜ್ ಇಂಜಿನಿಯರಿಂಗ್ ಪುತ್ತೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಭರತ್ ಬಿ.ಎಂ.ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಶ್ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಸಭೆಯಲ್ಲಿ ಶಿಕ್ಷಣ ಇಲಾಖೆ ಪರವಾಗಿ ಮಾತನಾಡಿದ ರಾಮಕುಂಜ ಸರಕಾರಿ ಹಿ.ಪ್ರಾ.ಶಾಲೆಯ ಸಹಶಿಕ್ಷಕಿ ವಿಮಲ ಅವರು, ಶಾಲೆಗೆ ಕಟ್ಟಡದ ಅವಶ್ಯಕತೆ ಕುರಿತು ತಿಳಿಸಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ತಾ.ಪಂ.ಮಾಜಿ ಸದಸ್ಯ ಧರ್ಮಪಾಲ ರಾವ್ ಅವರು, ಹೊಸ ಕಟ್ಟಡ ನಿರ್ಮಾಣಕ್ಕಿಂತ ಹಳೆಯ ಕಟ್ಟಡಗಳ ಪರಿಶೀಲನೆ ನಡೆಸಿ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಹೇಳಿದರು. ರೋಹಿತ್ ಕಂಪ ಹಾಗೂ ಇತರರೂ ಶಾಲಾ ಕಟ್ಟಡಗಳ ಸುಸ್ಥಿತಿಗೆ ಆಗ್ರಹಿಸಿ, ಸರಕಾರಿ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡಬೇಕೆಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತಾಧಿಕಾರಿ ಭರತ್ ಬಿ.ಎಂ.ಅವರು, ಶಿಕ್ಷಣ ಇಲಾಖೆ ಹಾಗೂ ಇಂಜಿನಿಯರ್‌ಗಳ ತಂಡ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ. ತಾ.ಪಂ.,ಹಾಗೂ ಜಿ.ಪಂ.ಅನುದಾನದಲ್ಲಿ ದುರಸ್ತಿಗೆ ಕ್ರಮ ಕೈಗೊಳ್ಳಬಹುದು. ಹೊಸ ಕಟ್ಟಡ ಸರಕಾರದ ಮಟ್ಟದಲ್ಲಿ ಆಗಬೇಕಿರುವುದರಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಹೇಳಿದರು.

ರಸ್ತೆ ಅತಿಕ್ರಮಣ ತೆರವುಗೊಳಿಸಿ;
30 ಅಡಿ ಅಗಲ ಇದ್ದ ಗ್ರಾಮ ಪಂಚಾಯತ್ ರಸ್ತೆಗಳು ಅತಿಕ್ರಮಣ ಆಗಿ 20 ಅಡಿ ಅಗಲ ಆಗುತ್ತಿದೆ. ಆದ್ದರಿಂದ ಗ್ರಾಮ ಪಂಚಾಯತ್ ಹಾಗೂ ಕಂದಾಯ ಇಲಾಖೆ ಸೇರಿಕೊಂಡು ರಸ್ತೆ ಅತಿಕ್ರಮಣ ತೆರವುಗೊಳಿಸಬೇಕು. ಗ್ರಾಮ ಪಂಚಾಯತ್ ರಸ್ತೆಗಳು ದುರಸ್ತಿ ಆಗುತ್ತಿವೆ. ಆದರೆ ಗ್ರಾಮ ಪಂಚಾಯತ್ ರಸ್ತೆಗಳ ಸರಿಯಾದ ಮಾಹಿತಿ ಪಂಚಾಯತ್‌ನಲ್ಲಿ ಇಲ್ಲ. ಆದ್ದರಿಂದ ಗ್ರಾಮ ಪಂಚಾಯತ್ ರಸ್ತೆಗಳ ದಾಖಲೀಕರಣಕ್ಕೂ ಕ್ರಮ ಕೈಗೊಳ್ಳಬೇಕು ಎಂದು ತಾ.ಪಂ.ಮಾಜಿ ಸದಸ್ಯ ಧರ್ಮಪಾಲ ರಾವ್ ಒತ್ತಾಯಿಸಿದರು.

ರಸ್ತೆ ಪ್ಯಾಚ್ ವರ್ಕ್ ಮಾಡಿ;
ಗೋಕುಲನಗರದಿಂದ ವರ್ಣಡ್ಕ ಭಜನಾ ಮಂದಿರಕ್ಕೆ ಹೋಗುವ ರಸ್ತೆಯಲ್ಲಿ ಪಾದೆಯಿಂದ ವರ್ಣಡ್ಕ ತನಕ ದೊಡ್ಡ ದೊಡ್ಡ ಹೊಂಡ ನಿರ್ಮಾಣಗೊಂಡಿದೆ. ಇಲ್ಲಿ ಪ್ಯಾಚ್ ವರ್ಕ್ ಮಾಡಲು ಕ್ರಮ ಕೈಗೊಳ್ಳಬೇಕೆಂದು ಧರ್ಮಪಾಲ ರಾವ್ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತಾಧಿಕಾರಿ ಭರತ್ ಬಿ.ಎಂ.ಅವರು, ತಾಲೂಕಿನಾದ್ಯಂತ ಗ್ರಾಮೀಣ ಪ್ರದೇಶದ ರಸ್ತೆಗಳ ದುರಸ್ತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. 15ನೇ ಹಣಕಾಸು ಯೋಜನೆ ಹಣ ಬಂದಿಲ್ಲ. ಪರಿಶೀಲನೆ ನಡೆಸಿ ಗ್ರಾಮ ಪಂಚಾಯತ್ ಹಂತದಲ್ಲೇ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮೆಸ್ಕಾಂ ಕಾರ್ಯವೈಖರಿಗೆ ಮೆಚ್ಚುಗೆ;
ವಿದ್ಯುತ್‌ಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ಒಂದೆರಡು ಗಂಟೆಗಳಲ್ಲಿ ಪರಿಹಾರ ಸಿಗುತ್ತಿದೆ. ಗ್ರಾಮದ ಪವರ್‌ಮ್ಯಾನ್‌ಗಳು ಉತ್ತಮ ಸ್ಪಂದನೆ ನೀಡುತ್ತಿದ್ದಾರೆ ಎಂದು ಹೇಳಿದ ರೋಹಿತ್ ಕಂಪ ಅವರು ಇಲಾಖೆಗೆ ಅಭಿನಂದನೆ ಸಲ್ಲಿಸಿದರು. ಈ ಹಿಂದೆ ಗೋಳಿತ್ತೊಟ್ಟಿನಲ್ಲಿ ಪವರ್‌ಮ್ಯಾನ್ ಆಗಿದ್ದ ದುರ್ಗಾಸಿಂಗ್, ಆಲಂಕಾರು ಮೆಸ್ಕಾಂ ಶಾಖೆಯ ಜೆ.ಇ.ಪ್ರೇಮ್‌ಕುಮಾರ್ ಅವರಿಂದಲೂ ಗ್ರಾಹಕರಿಗೆ ಉತ್ತಮ ಸ್ಪಂದನೆ ಸಿಗುತ್ತಿದೆ ಎಂದು ಗ್ರಾ.ಪಂ.ಮಾಜಿ ಅಧ್ಯಕ್ಷೆ ಮಾಲತಿ ಕದ್ರ ಹೇಳಿ ಅಭಿನಂದನೆ ಸಲ್ಲಿಸಿದರು. ಪೆರ್ಜಿ ವ್ಯಾಪ್ತಿಯಲ್ಲಿ ಹಳೆಯ ವಿದ್ಯುತ್ ತಂತಿಗಳ ಬದಲಾವಣೆ ಮಾಡುವಂತೆ ಧರ್ಮಪಾಲ ರಾವ್ ಆಗ್ರಹಿಸಿದರು.

ವಸತಿ ಯೋಜನೆ ಮನೆ ಬಂದಿಲ್ಲ;
ಕಳೆದ 5 ವರ್ಷದಿಂದ ವಸತಿ ಯೋಜನೆ ಮನೆ ಮಂಜೂರು ಆಗಿಲ್ಲ. ಅರ್ಜಿ ಹಾಕಿದ ಫಲಾನುಭವಿಗಳು ಕಾಯುತ್ತಿದ್ದಾರೆ. ವಸತಿ ಯೋಜನೆ ಮನೆ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕೆಂದು ಗ್ರಾ.ಪಂ.ಮಾಜಿ ಅಧ್ಯಕ್ಷೆ ಮಾಲತಿ ಕದ್ರ ಒತ್ತಾಯಿಸಿದರು. ಕೂಡುರಸ್ತೆಯಲ್ಲಿ ಹೈಮಾಸ್ಕ್ ದೀಪ ಅಳವಡಿಸುವಂತೆಯೂ ಮಾಲತಿ ಕದ್ರ ಒತ್ತಾಯಿಸಿದರು. ಈ ಬಗ್ಗೆ ತಾ.ಪಂ.ಗೆ ಪ್ರಸ್ತಾವನೆ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಯಿತು.

ಮೆಸ್ಕಾಂ ಆಲಂಕಾರು ಶಾಖೆಯ ಜೆ.ಇ.ಪ್ರೇಮ್‌ಕುಮಾರ್, ಉಪ್ಪಿನಂಗಡಿ ಶಾಖೆಯ ದುರ್ಗಾಸಿಂಗ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ನಂದನ, ಆರೋಗ್ಯ ಇಲಾಖೆಯ ರೇಖಾಕುಮಾರಿ, ಶಿಕ್ಷಣ ಇಲಾಖೆಯ ವಿಮಲ, ಗ್ರಾಮ ಆಡಳಿತಾಧಿಕಾರಿಗಳಾದ ಪಲ್ಲವಿ, ದಿನೇಶ್ ಕೆ., ಕೃಷಿ ಇಲಾಖೆಯ ಸ್ಮಿತ ಹೆಚ್.ಎನ್., ಅವರು ಇಲಾಖಾವಾರು ಮಾಹಿತಿ ನೀಡಿದರು. ಮಾಜಿ ಅಧ್ಯಕ್ಷೆ ಸುಚೇತಾ ಬರೆಂಬೆಟ್ಟು, ಮಾಜಿ ಸದಸ್ಯ ಸೂರಪ್ಪ ಕುಲಾಲ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಮೋಹನ್‌ಕುಮಾರ್ ಜಿ., ಸ್ವಾಗತಿಸಿದರು. ಕಾರ್ಯದರ್ಶಿ ಲಲಿತಾ ಜಿ.ಡಿ.ವಂದಿಸಿದರು. ಸಿಬ್ಬಂದಿಗಳಾದ ದುರ್ಗಾಪ್ರಸಾದ್, ವನಿತಕುಮಾರಿ ಪಿ., ನಾರಾಯಣ ಎಸ್., ದೀಕ್ಷಿತಾ, ಮಾಧವ , ಜಾನಕಿ , ಚೇತನಾ ಕೆ. ಸಹಕರಿಸಿದರು.

ಹಕ್ಕುಪತ್ರ ಕೊಟ್ಟರೂ ಜಾಗ ತೋರಿಸಿಲ್ಲ;
7 ತಿಂಗಳ ಹಿಂದೆ ಹಳೆನೇರೆಂಕಿಯಲ್ಲಿ ಮನೆ ನಿವೇಶನಕ್ಕೆ ಕಾದಿರಿಸಿದ ಜಾಗದಲ್ಲಿ 10 ಫಲಾನುಭವಿಗಳಿಗೆ ಜಾಗದ ಹಕ್ಕು ಪತ್ರ ನೀಡಲಾಗಿದೆ. ಆದರೆ ಫಲಾನುಭವಿಗಳಿಗೆ ಜಾಗ ಗುರುತು ಮಾಡಿಕೊಟ್ಟಿಲ್ಲ. ಸರ್ವೆಯರ್‌ಗೆ ಮನವಿ ಮಾಡಿದರೂ ಅವರು ಜಾಗ ಗುರುತು ಮಾಡಲು ಬರುತ್ತಿಲ್ಲ ಎಂದು ಗ್ರಾಮಸ್ಥ ಮಹೇಶ್ ಪಾತೃಮಾಡಿ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತಾಧಿಕಾರಿ ಭರತ್ ಅವರು, ಸರ್ವೆಯರ್ ಸ್ಥಳಕ್ಕೆ ಬಂದು ಜಾಗದ ಅಳತೆ ಮಾಡಿ ಗುರುತು ಮಾಡಿಕೊಡಲು ಸೂಚಿಸುವಂತೆ ತಹಶೀಲ್ದಾರ್‌ಗೆ ಗ್ರಾಮ ಪಂಚಾಯತ್‌ನಿಂದ ಪತ್ರ ಬರೆಯುವುದಾಗಿ ತಿಳಿಸಿದರು.

LEAVE A REPLY

Please enter your comment!
Please enter your name here