ಬಜತ್ತೂರು : ಉಪ್ಪಿನಂಗಡಿ ಹೋಬಳಿ ಅಕ್ರಮ ಸಕ್ರಮ ಬೈಠಕ್- ಹಕ್ಕುಪತ್ರ ವಿತರಣೆ

0

ಹಣ ಕೊಡದವರ ಅಕ್ರಮ ಸಕ್ರಮ ಫೈಲುಗಳಿಗೆ ಕುಮ್ಕಿ ಎಂದು ಬರೆದು ಮೋಸ ಮಾಡಲಾಗಿದೆ: ಶಾಸಕ ಅಶೋಕ್ ರೈ


ಪುತ್ತೂರು: ಪುತ್ತೂರಿನ ಗ್ರಾಮಾಂತರ ಭಾಗದಲ್ಲಿ ಅನೇಕ ಕೃಷಿಕರು ತಮ್ಮ ಜಮೀನಿಗೆ ತಾಗಿಕೊಂಡಿದ್ದ ಅಥವಾ ಅವರ ಸ್ವಾಧೀನದಲ್ಲಿದ್ದ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಹಲವು ವರ್ಷಗಳಿಂದ ಇದ್ದು ಅದರ ಸಕ್ರಮಕ್ಕೆ ಅರ್ಜಿ ಹಾಕಿದ್ದವರ ಪೈಕಿ ಹಣ ಕೊಟ್ಟವರ ಕಡತಗಳನ್ನು ಸಕ್ರಮ ಮಾಡಲಾಗಿದ್ದು, ಹಣ ಕೊಡದೇ ಇದ್ದವರ ಕಡತವನ್ನು ಹಿಂದೆ ಅರ್ಜಿ ವಿಲೇವಾರಿ ಮಾಡಿದವರು ಕುಮ್ಕಿ ಎಂದು ಬರೆದು ಕೃಷಿಕರಿಗೆ ಮೋಸ ಮಾಡಿದ್ದಾರೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಆರೋಪಿಸಿದರು.


ಅವರು ಸೆ.29ರಂದು ಬಜತ್ತೂರು ಗ್ರಾಪಂ ನಲ್ಲಿ ನಡೆದ ಉಪ್ಪಿನಂಗಡಿ ಹೋಬಳಿ ಮಟ್ಟದ ಅಕ್ರಮ ಸಕ್ರಮ ಬೈಠಕ್ ಹಾಗೂ 94 ಸಿ ಹಕ್ಕು ಪತ್ರ ವಿತರಣೆ ಮಾಡಿ ಮಾತನಾಡಿದರು.
ನಾನು ಶಾಸಕನಾಗುವ ಮೊದಲು ಅಕ್ರಮ ಸಕ್ರಮ ಕಡತಗಳನ್ನು ನಿಮ್ಮ ಮನೆ ಬಾಗಿಲಿಗೆ ಬಂದು ವಿಲೇವಾರಿ ಮಾಡುವುದಾಗಿ ಭರವಸೆ ಕೊಟ್ಟಿದ್ದೆ, 3 ವರ್ಷದಲ್ಲಿ 28 ನೇ ಬೈಠಕ್‌ ಮಾಡುತ್ತಿದ್ದೇನೆ. ಗ್ರಾಮಗಳಿಗೆ ತೆರಳಿ ಗ್ರಾಮಸ್ಥರ ಸಮ್ಮುಖದಲ್ಲೇ ಅರ್ಜಿ ವಿಲೇವಾರಿ ನಡೆಯುತ್ತಿದೆ. ಈ ಹಿಂದಿನವರು ನಾಲ್ಕು ಗೋಡೆಯ ಮಧ್ಯೆ ತಮಗೆ ಬೇಕಾದ ಹಾಗೆ ಅರ್ಜಿ ವಿಲೇವಾರಿ ಮಾಡುತ್ತಿದ್ದರು, ಉಳ್ಳವರಿಂದ ಪಡೆದು ಮಂಜೂರು ಮಾಡಿ ಕೊಡದವರ ಫೈಲುಗಳನ್ನು ಕುಮ್ಕಿ ಎಂದು ಬರೆದು ಎಂದೆಂದೂ ಅವರಿಗೆ ಜಾಗ ಮಂಜೂರು ಮಾಡದಂಂತೆ ಮಾಡಿದ್ದಾರೆ ಎಂದು ಶಾಸಕರು ಹೇಳಿದರು.

ಅಭಿವೃದ್ದಿಯಲ್ಲಿ ರಾಜಕೀಯ ಮಾಡಿಲ್ಲ
ಶಾಸಕನಾದ ಮೇಲೆ ರಾಜಧರ್ಮ ಪಾಲನೆ ಮಾಡಿದ್ದೇನೆ, ರಾಜಕೀಯ ಮಾಡಿಲ್ಲ. ಅನೇಕ ಮಂದಿ ಬಿಜೆಪಿಯಲ್ಲಿ ರಾತ್ರಿ ಹಗಲು ಕೆಲಸ ಮಾಡಿದವರು, ಬೂತ್ ಏಜೆಂಟುಗಳು, ಪಕ್ಷದ ಮುಖಂಡರುಗಳು, ಶಕ್ತಿ ಕೇಂದ್ರದ ಅಧ್ಯಕ್ಷರುಗಳು ಬಂದು ನನ್ನಲ್ಲಿ ಅಕ್ರಮ ಸಕ್ರಮ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಅಂತವರ ಕಡತವನ್ನೂ ವಿಲೇವಾರಿ ಮಾಡಿದ್ದೇನೆ. ಅವರದೇ ಪಕ್ಷದ ಶಾಸಕರಿದ್ದಾಗಲೂ ಇವರಿಗೆ ಮಾಡಿಸಲು ಸಾಧ್ಯವಾಗಿಲ್ಲ ಮತ್ತು ಮಾಡಿಕೊಟ್ಟಿಲ್ಲ. ಕನಿಷ್ಠ ಪಕ್ಷ ಪಕ್ಷಕ್ಕಾಗಿ ಕೆಲಸ ಮಾಡಿದವರ ಕಡತವನ್ನು ವಿಲೇವಾರಿ ಮಾಡದವರ ಬಡವರ ಕಡತವನ್ನು ವಿಲೇವಾರಿ ಮಾಡುತ್ತಾರಾ? ಎಂದು ಶಾಸಕರು ಪ್ರಶ್ನಿಸಿದರು. ಅಶೋಕ್ ರೈ ಎಂದೂ ಅಭಿವೃದ್ದಿಯಲ್ಲಿ ರಾಜಕೀಯ ಮಾಡುವುದೂ ಇಲ್ಲ, ಮಾಡಿಯೂ ಗೊತ್ತಿಲ್ಲ. ಜಾತಿ, ಧರ್ಮ, ಪಕ್ಷ ಮೀರಿದ ಸೇವೆ ನಮ್ಮದಾಗಿದ್ದು ಅದು ಎಂದೆಂದೂ ಮುಂದುವರೆಯುತ್ತದೆ ಎಂದು ಹೇಳಿದರು.

ಮಕ್ಕಳ ಭವಿಷ್ಯದ ಕಡೆ ಗಮನಕೊಡಿ
ನಿಮ್ಮ ಮಕ್ಕಳ ಭವಿಷ್ಯ ನಿಮ್ಮ ಕೈಯ್ಯಲ್ಲಿದೆ. ಅವರಿಗೆ ಈಗಲೇ ಗುಣಮಟ್ಟದ ಶಿಕ್ಷಣ ಕೊಡಿಸಿ. ಇಲ್ಲಿ ಬಡವರ ಮಕ್ಕಳು ಬಡವರಾಗಿಯೇ ಇರಬೇಕು ಎಂಬ ನಿಯಮವೇನು ಇಲ್ಲ. ಬೀಡಿ ಕಟ್ಟುವ ಬಡಮಹಿಳೆಯ ಮಗಳೂ ಇಲ್ಲಿ ವೈದ್ಯೆಯಾಗಬೇಕು, ಇಂಜಿನಿಯರ್ , ಐಪಿಎಸ್, ಐಎಎಸ್ ಆಗಬೇಕೆಂಬುದೇ ನನ್ನ ಕನಸು. ಈ ಕಾರಣಕ್ಕಾಗಿಯೇ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 18 ಕೆಪಿಎಸ್ ಶಾಲೆಗಳನ್ನು ಮಂಜೂರು ಮಾಡಿಸುವೆ, ಮೆಡಿಕಲ್ ಕಾಲೇಜು ಮಾಡಿದ್ದೇನೆ, ಆಯುರ್ವೇದ ಮೆಡಿಕಲ್ ಕಾಲೇಜು ಮಾಡುತ್ತೇನೆ, ನರ್ಸಿಂಗ್ ಕಾಲೇಜು ಮಾಡುತ್ತೇನೆ. ನಮ್ಮ ಮಕ್ಕಳು ಉನ್ನತ ವ್ಯಾಸಂಗಕ್ಕೆ ದೂರಕ್ಕೆ ಹೋಗಬಾರದು ಅದೆಲ್ಲವೂ ಪುತ್ತೂರಲ್ಲೇ ದೊರೆಯುವಂತೆ ಮಾಡುತ್ತೇನೆ. ರಾಜಕೀಯದವರ ಕೆಟ್ಟ ಭಾಷಣ ಕೇಳಿ ನಿಮ್ಮ ಮಕ್ಕಳು ಕೆಟ್ಟವರಾಗದಂತೆ ಜಾಗೃತೆ ವಹಿಸಿ. ಭಾಷಣ ಮಾಡಿ ಗಲಾಟೆ ಎಬ್ಬಿಸುವವನ ಮಕ್ಕಳು ವಿದೇಶದಲ್ಲಿ ಉನ್ನತ ವ್ಯಾಸಂಗದಲ್ಲಿದ್ದಾನೆ, ಭಾಷಣ ಕೇಳುವ ಬಡವರ ಮಕ್ಕಳು ಅವರ ಚಾಳಿಗೆ ಬಲಿಯಾಗುತ್ತಿದ್ದಾರೆ ಎಂದು ಶಾಸಕರು ಹೇಳಿದರು.

ಅಭಿವೃದ್ದಿ ಇದ್ದಾಗ ಟೀಕೆಗಳು ಸಹಜ: ಮಹಮ್ಮದ್ ಬಡಗನ್ನೂರು
ಯಾವುದೇ ವಿಚಾರದಲ್ಲಿ ಊರು ಅಭಿವೃದ್ದಿಯಾಗುತ್ತಿದೆ, ಜನರಿಗೆ ಒಳ್ಳೆಯದಾಗುತ್ತಿದೆ ಎಂದಾಗ ಅಲ್ಲಿ ಟೀಕೆಗಳು, ವಿರೋಧಗಳು ಸಹಜವಾಗಿಯೇ ಸೃಷ್ಟಿಯಾಗುತ್ತದೆ, ಅಭಿವೃದ್ದಿ ವಿರೋಧಿಗಳು ಎಲ್ಲಾ ಕಡೆಗಳಲ್ಲೂ ಇದ್ದೇ ಇರುತ್ತಾರೆ ಅವರಿಗೆಲ್ಲ ಜನರೇ ತಕ್ಕ ಉತ್ತರವನ್ನು ಕೊಡುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ ಎಂದು ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಹೇಳಿದರು. ಪುತ್ತೂರು ಬಿಟ್ರೆ ರಾಜ್ಯದ ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮ ಸಕ್ರಮ ಬೈಠಕ್ ಆಗುತ್ತಿಲ್ಲ., ನಮ್ಮ ಅಕ್ಕ ಪಕ್ಕದ ಕ್ಷೇತ್ರದಲ್ಲೂ ಆಗುತ್ತಿಲ್ಲ ಇದೆಲ್ಲವನ್ನೂ ಗಮನಿಸುವಾಗ ಪುತ್ತೂರಿನಲ್ಲಿ ಹೇಗೆ ಸಾಧ್ಯವಾಯಿತು ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕಿದೆ. ಅನೇಕ ವರ್ಷಗಳಿಂದ ತಾಲೂಕು ಕಚೇರಿಯಲ್ಲೇ ಕೊಳೆಯುತ್ತಿದ್ದ ಅಕ್ರಮ ಸಕ್ರಮ ಕಡತಗಳನ್ನು ಗ್ರಾಮಕ್ಕೆ ಬಂದು ಶಾಸಕರು ವಿಲೇವಾರಿ ಮಾಡುತ್ತಿದ್ದಾರೆ, ಈ ಪದ್ದತಿ ಹಿಂದೆಯೂ ಇರಲಿಲ್ಲ, ಮುಂದೆಯೂ ಬರಲು ಸಾಧ್ಯವಿಲ್ಲ ಅದು ನಡೆಯುವುದಿದ್ದರೆ ಅಶೋಕ್ ರೈ ಕಾಲದಲ್ಲಿ ಮಾತ್ರ ಸಾಧ್ಯ ಎಂಬುದು ಕ್ಷೇತ್ರದ ಪ್ರತೀಯೊಬ್ಬ ಮತದಾರರಿಗೂ ಅರಿವಾಗಿದೆ. ಪುತ್ತೂರು ಅಭಿವೃದ್ದಿಯತ್ತ ದಾಫುಗಾಲಿಡುವ ಕಾಲದಲ್ಲಿ ನಾವು ಶಾಸಕರ ಕೈ ಬಲಡಪಡಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.


ವೇದಿಕೆಯಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಉಮಾನಾಥ ಶೆಟ್ಟಿ ಪೆರ್ನೆ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ,ರೂಪರೇಖಾ ಆಳ್ವ, ತಹಶಿಲ್ದಾರ್ ಕೂಡ್ಲಿಗಿ, ವಲಯ ಅರಣ್ಯಾಧಿಕಾರಿ ಕಿರಣ್ ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ಗೋಪಾಲ ಸ್ವಾಗತಿಸಿ ವಂದಿಸಿದರು. ಶಾಸಕರ ಕಚೇರಿ ಅಪ್ತ ಸಹಾಯಕ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು.

28 ವರ್ಷಗಳಿಂದ ನಾನು ನನ್ನ ಜಾಗದಲ್ಲಿ ಕೃಷಿ ಮಾಡಿಕೊಂಡಿದ್ದೆ. ಅಕ್ರಮ ಸಕ್ರಮಕ್ಕೆ ಅರ್ಜಿ ಹಾಕಿದರೂ ಅದು ಆಗಿರಲಿಲ್ಲ. ತುಂಬಾ ಪ್ರಯತ್ನ ಪಟ್ಟಿದ್ದೆ. ಕಳೆದ ಕೆಲವು ದಿನಗಳ ಹಿಂದೆ ಶಾಸಕ ಅಶೋಕ್ ರೈ ಅವರ ಬಳಿ ಈ ವಿಚಾರ ಹೇಳಿಕೊಂಡೆ. ಮಾಡಿಕೊಡುವುದಾಗಿ ಮಾತುಕೊಟ್ಟಿದ್ರು, ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಯಾವುದೇ ರಾಜಕೀಯ ಮಾಡದೆ ನನ್ನ ಕಡತವನ್ನು ವಿಲೇವಾರಿ ಮಾಡಿದ್ದಾರೆ. ಶಾಸಕರಿಗೆ ಅಭಿನಂದನೆಗಳು.
ಶಯನಾಜಯಾನಂದ್, ಜಿಪಂ ಮಾಜಿ ಸದಸ್ಯರು, ಬಿಜೆಪಿ ನಾಯಕಿ

ನಮ್ಮ ಕೋಡಿಂಬಾಡಿ ಗ್ರಾಮ ಏರ್‌ಲೈನ್ ವ್ಯಾಪ್ತಿಗೆ ಬರುವ ಕಾರಣ ಕಷ್ಟ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದ್ದರು. ಕಡತ ಮಂಜೂರು ಮಾಡಿದ್ದರೂ ಅದು ಇನ್ನೂ ಪರಿಪೂರ್ಣವಾಗಿರಲಿಲ್ಲ. ನಮ್ಮೂರಿನವರೇ ಆದ ಶಾಸಕ ಅಶೋಕ್ ರೈ ಅವರಲ್ಲಿ ಈ ಬಗ್ಗೆ ಹೇಳಿದ್ದೆ. ಈದಿನ ಕಡತವನ್ನು ವಿಲೇವಾರಿ ಮಾಡಿದ್ದಾರೆ. ಅಭಿವೃದ್ದಿಯ ವಿಚಾರದಲ್ಲಿ ಶಾಸಕರಿಗೆ ಅಭಿನಂದನೆ ಸಲ್ಲಿಸಬೇಕಾಗುತ್ತದೆ.
ದೇವಾನಂದ, ವಕೀಲರು ಕೋಡಿಂಬಾಡಿ

ವಿ ಎ ಗೆ ಸನ್ಮಾನ
ಅಕ್ರಮ ಸಕ್ರಮ ಕಡತ ಫೈಲ್ ರೆಡಿಮಾಡುವ ವೇಳೆ ಉಪ್ಪಿನಂಗಡಿ ವಿ ಎ ಜಂಗಪ್ಪ ನಮ್ಮಿಂದ ಯಾವುದೇ ಲಂಚ ಪಡೆಯಲಿಲ್ಲ, ನಮ್ಮಿಂದ ಅವರು ಏನೂ ಅಪೇಕ್ಷೆಯನ್ನು ಕೇಳಿಲ್ಲ ಎಂದು ಆ ಭಾಗದ ಮಹಿಳೆಯರು ಬಂದು ಶಾಸಕರಲ್ಲಿ ತಿಳಿಸಿದಾಗ ಲಂಚಮುಕ್ತ ವಿ ಎ ಎಂದು ಹೊಗಳಿದ ಶಾಸಕರು ವೇದಿಕೆಯಲ್ಲೇ ಶಾಲು ಹೊದಿಸಿ ಸನ್ಮಾನ ಮಾಡಿದರು. ಇಂತಹ ಸನ್ಮಾನ ನಿಮಗೂ ಬೇಕಾದರೆ ಪುತ್ತೂರನ್ನು ಲಂಚ ಮುಕ್ತವನ್ನಾಗಿ ಮಾಡಿ ಎಂದು ಶಾಸಕರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

LEAVE A REPLY

Please enter your comment!
Please enter your name here