ವಿಮಾನದಲ್ಲಿ ಸಹಪ್ರಯಾಣಿಕನಿಗೆ ಕಾಣಿಸಿಕೊಂಡ ಎದೆನೋವು : ಪ್ರಾಣ ಉಳಿಸಿದ ಈಶ್ವರಮಂಗಲದ ಡಾ.ಶ್ರೀಕುಮಾರ್ ಕತ್ರಿಬೈಲು

0

ಪುತ್ತೂರು:ವಿಮಾನದಲ್ಲಿ ಸಹಪ್ರಯಾಣಿಕರೋರ್ವರಿಗೆ ಎದೆನೋವು ಕಾಣಿಸಿಕೊಂಡು ಚಡಪಡಿಸುತ್ತಿದ್ದ ವೇಳೆ ಈಶ್ವರಮಂಗಲದ ವೈದ್ಯ ಡಾ.ಶ್ರೀಕುಮಾರ್ ಕತ್ರಿಬೈಲು ಅವರು ಕೂಡಲೇ ಉಪಚರಿಸಿ,ಸೂಕ್ತ ಚಿಕಿತ್ಸೆಯನ್ನು ನೀಡಿ ಪ್ರಾಣ ಉಳಿಸಿದ್ದಾರೆ.ಡಾ.ಶ್ರೀಕುಮಾರ್ ಅವರ ಕಾರ್ಯಕ್ಕೆ ವಿಮಾನದಲ್ಲಿದ್ದ ಎಲ್ಲರೂ ಚಪ್ಪಾಳೆ ತಟ್ಟುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ ಘಟನೆ ವರದಿಯಾಗಿದೆ.


ಉತ್ತರ ಭಾರತದ ಪ್ರವಾಸ ಮುಗಿಸಿಕೊಂಡು ಬೆಂಗಳೂರಿಗೆ ವಾಪಾಸ್ ಬರುತ್ತಿದ್ದ ವೇಳೆ, ಲಕ್ನೋದಿಂದ ಮುಂಬೈಗೆ ಆಗಮಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಸೆ.29ರ ಬೆಳಗ್ಗೆ 9.30ರ ವೇಳೆಗೆ ಸಹಪ್ರಯಾಣಿಕರೊಬ್ಬರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿತ್ತು.ಎದೆಯನ್ನು ಗಟ್ಟಿಯಾಗಿ ಹಿಡಿದು ಚಡಪಡಿಸುತ್ತಿದ್ದ ಆತನಿಗೆ,ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು.ಅವರೊಂದಿಗೆ ಪತ್ನಿ ಹಾಗೂ ಸುಮಾರು 2 ವರ್ಷದ ಮಗು ಕೂಡ ಇದ್ದರು.ಪ್ರಯಾಣಿಕ ಎದೆನೋವಿನಿಂದ ಚಡಪಡಿಸುತ್ತಿದ್ದುದನ್ನು ಗಮನಿಸಿದ ವಿಮಾನ ಸಿಬ್ಬಂದಿ ತಕ್ಷಣ, ‘ವಿಮಾನದಲ್ಲಿ ಯಾರಾದರೂ ವೈದ್ಯರು ಇರುವಿರೇ?’ ಎಂದು ಕೇಳಿದ್ದಾರೆ.ಸುಮಾರು 40 ವರ್ಷಗಳ ವೈದ್ಯಕೀಯ ಅನುಭವ ಹೊಂದಿರುವ ಡಾ. ಶ್ರೀಕುಮಾರ್ ಕತ್ರಿಬೈಲ್ ಅವರು ಕೂಡಲೇ ಸ್ಪಂದಿಸಿದ್ದಾರೆ.ಪ್ರಯಾಣಿಕನ ಬಳಿ ತೆರಳಿ ಆತನ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿದ ಡಾ.ಶ್ರೀಕುಮಾರ್,ಅಗತ್ಯ ಪ್ರಥಮ ಚಿಕಿತ್ಸೆಗಳನ್ನು ಮಾಡಿದ್ದಾರೆ.ಹೃದಯದ ಕಾರ್ಯವನ್ನು ಗಮನಿಸಿ, ರಕ್ತದೊತ್ತಡ ಪರಿಶೀಲಿಸಿ, ಅಗತ್ಯ ಔಷಧ ನೀಡಿ ತುರ್ತು ವೈದ್ಯಕೀಯ ನೆರವು ಒದಗಿಸಿದ್ದಾರೆ.ಕೆಲವೇ ಸಮಯದಲ್ಲಿ ಪ್ರಯಾಣಿಕ ನಿಧಾನವಾಗಿ ಚೇತರಿಸಿಕೊಳ್ಳಲಾರಂಭಿಸಿದ್ದಾರೆ.ಲಕ್ನೋದಿಂದ ಮುಂಬೈ ತಲುಪುವಷ್ಟರಲ್ಲಿ ಪ್ರಯಾಣಿಕನ ಆರೋಗ್ಯ ಸ್ಥಿತಿ ಸುಧಾರಿಸಿತ್ತು.ಮುಂಬೈ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಸಿಬ್ಬಂದಿ ವ್ಹೀಲ್‌ಚೇರ್ ಹಾಗೂ ಆಂಬುಲೆನ್ಸ್ ವ್ಯವಸ್ಥೆ ಮಾಡಿ, ಮುಂದಿನ ಚಿಕಿತ್ಸೆಗೆ ಸಹಕರಿಸಿದ್ದಾರೆ.


ಬಿಎಂಎಸ್, ಎಂಡಿ ಪದವೀಧರರಾಗಿರುವ ಡಾ.ಶ್ರೀಕುಮಾರ್ ಕತ್ರಿಬೈಲು ಅವರು ಕಳೆದ ಸುಮಾರು 41 ವರ್ಷಗಳಿಂದ ಈಶ್ವರಮಂಗಲದಲ್ಲಿ ಗ್ರಾಮೀಣ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೂಡಬಿದ್ರೆ ಆಳ್ವಾಸ್ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದಾರೆ.

ಥ್ಯಾಂಕ್ಯೂ ಡಾಕ್ಟರ್..ನೀವು ಒಂದು ಜೀವ ಉಳಿಸಿ ಬಿಟ್ಟಿರಿ
ಒಂದು ಜೀವ ಅಪಾಯದಲ್ಲಿದ್ದ ಸಂದರ್ಭದಲ್ಲಿ ವೈದ್ಯರಾಗಿ ತಮ್ಮ ಕರ್ತವ್ಯ ಮೆರೆದು ಮಾನವೀಯತೆಯಿಂದ ಸ್ಪಂದಿಸಿದ ಡಾ. ಶ್ರೀಕುಮಾರ್ ಕತ್ರಿಬೈಲ್ ಅವರ ಕಾರ್ಯಕ್ಕೆ ವಿಮಾನದಲ್ಲಿದ್ದ ಪ್ರಯಾಣಿಕರು ಹಾಗೂ ಸಿಬ್ಬಂದಿ ಕೃತಜ್ಞತೆ ಸಲ್ಲಿಸಿದ್ದಾರೆ.ಅವರು ನೀಡಿದ ಕೆಲವೇ ನಿಮಿಷಗಳ ವೈದ್ಯಕೀಯ ನೆರವು ಒಂದು ಕುಟುಂಬಕ್ಕೆ ಬದುಕಿನ ಭರವಸೆಯನ್ನು ನೀಡಿತು.“ಥ್ಯಾಂಕ್ಯೂ ಡಾಕ್ಟರ್ ನೀವು ಒಂದು ಜೀವವನ್ನು ಉಳಿಸಿ ಬಿಟ್ಟಿರಿ” ಎಂದು ವಿಮಾನದ ಸಿಬ್ಬಂದಿ ಹೇಳಿ,ಕೃತಜ್ಞತೆ ಸಲ್ಲಿಸಿದಾಗ ವಿಮಾನದಲ್ಲಿದ್ದ 250 ಮಂದಿ ಕೂಡಾ ಎದ್ದು ನಿಂತು ಚಪ್ಪಾಳೆ ತಟ್ಟಿದ ಕ್ಷಣ ವೈದ್ಯರ ಕಣ್ಣಂಚಿನಲ್ಲಿ ನೀರು ತುಂಬಿತ್ತು.

LEAVE A REPLY

Please enter your comment!
Please enter your name here