







ಮಾಣಿಲ : ಮಾಣಿಲ ಗ್ರಾಮ ಪಂಚಾಯತ್ ಹಾಗೂ ನಿಟ್ಟೆ ವಿಶ್ವ ವಿದ್ಯಾನಿಲಯಗಳ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಸೋಮವಾರದಂದು ಮಾಣಿಲ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಪಂಚಾಯತ್ನ ಮಾಜಿ ಅಧ್ಯಕ್ಷ ಶ್ರೀಧರ ಬಾಳೆಕಲ್ಲು ಕಾರ್ಯಕ್ರಮವನ್ನು ಉದ್ಘಾಟಿಸಿ, ಗ್ರಾಮೀಣ ಪ್ರದೇಶದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸುವುದು ಸ್ವಾಗತಾರ್ಹ. ಗ್ರಾಮಸ್ಥರು ಇಂತಹ ಶಿಬಿರಗಳಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳುವುದು ಮುಖ್ಯ ಎಂದು ನುಡಿದರು.
ಮಾಣಿಲದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ದೇಲಂತಮಜಲು ಇಲ್ಲಿನ ಆಡಳಿತ ಸಮಿತಿಯ ಅಧ್ಯಕ್ಷ ಗಣೇಶ ಭಟ್ ದೇಲಂತಮಜಲು, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಾಣಿಲ ಬೀಡು ಇಲ್ಲಿನ ಆಡಳಿತ ಸಮಿತಿ ಅಧ್ಯಕ್ಷ ಜಯರಾಮ ಬಲ್ಲಾಳ, ಕೆಳಗಿನ ಮಾಣಿಲ ಜುಮ್ಮಾ ಮಸೀದಿಯ ಉಸ್ತಾದ್ ಉಮ್ಮರ್ ಹನೀಫ್, ನಿಟ್ಟೆ ಸಂಸ್ಥೆಯ ಡಿಪಾರ್ಟ್ಮೆಂಟ್ ಆಫ್ ಪಬ್ಲಿಕ್ ಹೆಲ್ತ್ ನ ಫ್ರೊಫೆಸರ್ ಡಾ|ಮಾಕ್ವಿನ್ ಡಿಮೆಲ್ಲೊ, ಕನ್ಸಲೆಂಟ್ ಡಾ|ಶೆರ್ಲಿ ಡಿ.ಅಲ್ಮೆಡಾ, ಎ.ಬಿ ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ಡಾ|ಸಹನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ|ಶೆರ್ಲಿ ಡಿ.ಅಲ್ಮೆಡಾ ಅವರು ಸ್ಲೈಡ್ ಶೋ ನಡೆಸಿ ಮರೆಗುಳಿತನ ಖಾಯಿಲೆಯ ಬಗ್ಗೆ ಅರಿವು ನೀಡಿದರು. ಎ.ಬಿ ಶೆಟ್ಟಿ ದಂತ ವೈದ್ಯಕೀಯ ತಂಡದವರು ಹಲ್ಲು ಸ್ವಚ್ಚಗೊಳಿಸುವುದು, ಹಲ್ಲು ಕೀಳುವುದು ಮುಂತಾದವುಗಳನ್ನು ನಡೆಸಿ ಕೊಟ್ಟರು ಡಿಪಾರ್ಟ್ಮೆಂಟ್ ಆಫ್ ಪಬ್ಲಿಕ್ ಹೆಲ್ತ್ , ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಸೈನ್ಸಸ್ ನ ವೈದ್ಯಕೀಯ ತಂಡದವರು ದೇಹದ ಎತ್ತರ, ತೂಕದ ಅಳತೆ, ಮಧುಮೇಹ, ರಕ್ತದೊತ್ತಡ ತಪಾಸಣೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಮಾಯಾ ಮತ್ತು ತಂಡದವರು ಪ್ರಾರ್ಥಿಸಿದರು. ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಕೃಷ್ಣಕುಮಾರ ಕಮ್ಮಜೆ ಸ್ವಾಗತಿಸಿದರು. ನಿಟ್ಟೆ ಸಂಸ್ಥೆಯ ಡಾ| ಶರಣ್ಯ ಕಾರ್ಯಕ್ರಮವನ್ನು ನಿರ್ವಹಿಸಿದರು. ಅಸಿಸ್ಟೆಂಟ್ ಫ್ರೊಫೆಸರ್ ಡಾ| ಶ್ರೀಶರತ್ ಕೆ ಧನ್ಯವಾದ ಸಮರ್ಪಿಸಿದರು.












