







- ಗಾಂಧೀಜಿ ಕಂಡ ಸ್ವಚ್ಛ ಭಾರತದ ಕನಸನ್ನು ನನಸು ಮಾಡಿದ್ದು ಪ್ರಧಾನಿ ಮೋದಿ-ಕಿಶೋರ್ ಬೊಟ್ಯಾಡಿ
ಪುತ್ತೂರು: ಪ್ರಧಾನಿ ನರೇಂದ್ರ ಮೋದಿಯವರ ಸಾರ್ವಜನಿಕ ಸೇವಾ ಅವಧಿ 25 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲ, ಗ್ರಾಮಾಂತರ ಮಂಡಲ ರೈತ ಮೋರ್ಚಾ, ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಬೊಟ್ಯಾಡಿ ಮೊದಲಾದವರ ಸಹಯೋಗದೊಂದಿಗೆ `ಸೇವಾ ಸಂಕಲ್ಪ ಅಭಿಯಾನ’ ಅ.೨ರಂದು ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ನಡೆಯಿತು.



ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿದ ಬಳಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿದ ಎಂಎಲ್ಸಿ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ ದೇಶದ ಭವಿಷ್ಯದ ದೃಷಿಯಲ್ಲಿ ತನ್ನನ್ನು ತಾನು ಸಮರ್ಪಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು ದೇಶಕ್ಕೆ ಬೇಕಾಗಿ ದಿನದ 18 ಗಂಟೆ ಕೆಲಸ ಮಾಡುತ್ತಿದ್ದು ಕಳೆದ 25 ವರ್ಷಗಳಿಂದ ಜನರ ಸೇವೆ ಮಾಡುತ್ತಾ ನಮಗಾಗಿ ಜೀವನವನ್ನೇ ತ್ಯಾಗ ಮಾಡುತ್ತಿದ್ದಾರೆ ಎಂದು ಹೇಳಿದರು. ಗಾಂಧೀಜಿ ಕಂಡ ಸ್ವಚ್ಛ ಭಾರತದ ಕನಸನ್ನು ನನಸು ಮಾಡಿದ್ದು ಪ್ರಧಾನಿ ಮೋದಿ, ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಮೋದಿಯವರು ದೇಶದಲ್ಲಿ ಅಮೂಲಾಗ್ರ ಬದಲಾವಣೆ ತಂದಿದ್ದಾರೆ ಎಂದ ಅವರು ದೇಶದ ಅಭಿವೃದ್ಧಿಗೆ ವಿದ್ಯಾರ್ಥಿಗಳ ಕೊಡುಗೆಯೂ ಮುಖ್ಯವಾಗಿದೆ ಎಂದು ಹೇಳಿದರು.




ಸೇವೆಗೆ ಇನ್ನೊಂದು ಹೆಸರು ಮೋದಿ-ಯತೀಶ್ ಆರ್ವಾರ್
ಬಿಜೆಪಿ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ್ ಮಾತನಾಡಿ ಸೇವೆಗೆ ಇನ್ನೊಂದು ಹೆಸರು ಮೋದಿ, ಈ ವಯಸ್ಸಲ್ಲೂ ದೇಶಕ್ಕಾಗಿ ದಿನದ 18 ಕೆಲಸ ಮಾಡುವ ಪ್ರಧಾನಿ ಮೋದಿಯವರು 2047ರಲ್ಲಿ ದೇಶ `ವಿಕಸಿತ ಭಾರತ’ ಆಗಲು ಪಣ ತೊಟ್ಟಿದ್ದಾರೆ ಎಂದು ಹೇಳಿದರು. ದೇಶದ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳು ಅಮಲು ಪದಾರ್ಥಗಳತ್ತ ಕಣ್ಣೆತ್ತಿಯೂ ನೋಡಬಾರದು, ತಂದೆ ತಾಯಿಗೆ ಒಳ್ಳೆಯ ಹೆಸರು ತರುವ ಮಕ್ಕಳಾಗಬೇಕು ಎಂದು ಅವರು ಹೇಳಿದರು.

ಮೋದಿ ದೇಶದ ಭವಿಷ್ಯದ ಬಗ್ಗೆ ಚಿಂತಿಸುತ್ತಾರೆ-ಜಯರಾಮ ಕೆದಿಲಾಯ
ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ ಮಾತನಾಡಿ ದೇಶದ ಭವಿಷ್ಯದ ಬಗ್ಗೆ ಚಿಂತಿಸುವ ಪ್ರಧಾನಿ ನರೇಂದ್ರ ಮೋದಿಯವರು ದೇಶಕ್ಕಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ, ದೇಶ ಕಟ್ಟುವ ವಿಚಾರದಲ್ಲಿ ವಿದ್ಯಾರ್ಥಿಗಳು ಕೂಡಾ ಶೂರರಾಗಬೇಕು ಎಂದು ಹೇಳಿದರು.

ಮೋದಿಯವರ ದೃಷ್ಟಿಕೋನಕ್ಕೆ ಪೂರಕವಾಗಿ ನಾವು ಕೆಲಸ ಮಾಡಬೇಕು-ದಯಾನಂದ ಶೆಟ್ಟಿ
ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರು ಸೇವಾ ಕ್ಷೇತ್ರದಲ್ಲಿ ೨೫ ವರ್ಷ ಪೂರೈಸಿದ್ದು ಅದಕ್ಕಾಗಿ ಸೇವಾ ಸಂಕಲ್ಪ ಅಭಿಯಾನ ನಡೆಸುತ್ತಿದ್ದೇವೆ, ಪ್ರಧಾನಿಯವರ ದೃಷ್ಟಿಕೋನಕ್ಕೆ ಪೂರಕವಾಗಿ ನಾವು ಕೂಡಾ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಾಗ ಅವರ ಕನಸು ನನಸಾಗಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
1 ಸಾವಿರ ಗಿಡ ನೆಡುವ ಗುರಿ:
ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಪುತ್ತೂರು ಗ್ರಾಮಾಂತರ ಮಂಡಲ ವ್ಯಾಪ್ತಿಯಲ್ಲಿ ಸುಮಾರು ೧ ಸಾವಿರ ಗಿಡಗಳನ್ನು ನೆಡುವ ಯೋಜನೆಯಿದೆ ಎಂದು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಘೋಷಿಸಿದರು.
ಸನ್ಮಾನ:
ಕಳೆದ ಹಲವಾರು ವರ್ಷಗಳಿಂದ ಲಕ್ಷಾಂತರ ಗಿಡಗಳನ್ನು ನೆಟ್ಟು ಪೋಷಿಸಿರುವ ಮಾಧವ ಉಳ್ಳಾಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಬಿಜೆಪಿ ಪುತ್ತೂರು ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ರೈತ ಮೋರ್ಚಾದ ಅಧ್ಯಕ್ಷ ಶರತ್‌ಚಂದ್ರ ಬೈಪಡಿತ್ತಾಯ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ಬಿಜೆಪಿ ನರಿಮೊಗರು ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಸತೀಶ್ ಪಾಂಬಾರು ಉಪಸ್ಥಿತರಿದ್ದರು. ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಯತೀಶ್ ದೇವ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನರಿಮೊಗರು ಮಹಾ ಶಕ್ತಿಕೇಂದ್ರದ ಕಾರ್ಯದರ್ಶಿ ಪ್ರವೀಣ್ ಸೇರಾಜೆ ವಂದಿಸಿದರು.










