ಒಬ್ಬ ಶಿಷ್ಯನಿಂದ ನೂರಾರು ಚಾಂಪಿಯನ್‌ಗಳವರೆಗೆ: ಮಂಗಳೂರಿನ ಮಹೇಶ್ ಕುಮಾರ್ ಸಾಧನಗಾಥೆ

0

ಪುತ್ತೂರು: ಮಂಗಳೂರಿನ ಚಿಕ್ಕ ಹಳ್ಳಿಯ ಜಯಂತ್ ನಾಯಕ್ ಮತ್ತು ಶಾರದಾ ದೇವಿ ದಂಪತಿಯ ಪುತ್ರ ಮಹೇಶ್ ಕುಮಾರ್ ಅಂತಾರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ಕೋಚಿಂಗ್‌ನಲ್ಲಿ ಸಾಧನೆ ಮಾಡಿದ ಸಾಧಕ.

ಬೋಳಾರ್ ಹೈಯರ್ ಪ್ರೈಮರಿಯಲ್ಲಿ ಪ್ರಾಥಮಿಕ, ರುಝರಿಯೊ ಹೈಸ್ಕೂಲ್‌ನಲ್ಲಿ ಪ್ರೌಢ, ಸರ್ಕಾರಿ ಕಾಲೇಜು ಮಂಗಳೂರಿನಲ್ಲಿ ಪದವಿ ಶಿಕ್ಷಣ ಪಡೆದ ಇವರು ಬಾಲ್ಯದಿಂದಲೇ ಸ್ಕೇಟಿಂಗ್‌ನಲ್ಲಿ ಆಸಕ್ತಿ ಹೊಂದಿದ್ದರು. 1980ರಲ್ಲಿ ಬೆಂಗಳೂರಿನ ಗಾರ್ಡನ್ ಸ್ಕೇಟಿಂಗ್ ಕ್ಲಬ್‌ನಲ್ಲಿ ತರಬೇತಿ ಪಡೆದು, ನಂತರ ಕಂಠೀರವ ಸ್ಟೇಡಿಯಂನಲ್ಲಿ ತರಬೇತಿ ಆರಂಭಿಸಿದರು.

1991ರಲ್ಲಿ ಮಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಭಾರತೀಯ ವಿದ್ಯಾಭವನ ಪಾಂಡೇಶ್ವರದಲ್ಲಿ ರೋಲರ್ ಸ್ಕೇಟಿಂಗ್ ಕ್ಲಬ್ ಆರಂಭಿಸುವ ಮೂಲಕ ಮಂಗಳೂರಿಗೆ ಸ್ಕೇಟಿಂಗ್ ಪರಿಚಯಿಸಿದ ಕೀರ್ತಿ ಇವರದ್ದು. ಒಬ್ಬ ವಿದ್ಯಾರ್ಥಿಯಿಂದ ಆರಂಭಿಸಿ ಇಂದು ಹಲವು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. 1992ರಲ್ಲಿ ಇವರ ವಿದ್ಯಾರ್ಥಿ ದಕ್ಷಿಣ ಕನ್ನಡಕ್ಕೆ ಪ್ರಪ್ರಥಮ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ತಂದುಕೊಟ್ಟರು. 35 ವರ್ಷಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದು, ಇವರ ವಿದ್ಯಾರ್ಥಿ ಕರ್ನಾಟಕದ ಅತ್ಯುನ್ನತ ಏಕಲವ್ಯ ಪ್ರಶಸ್ತಿ ಪಡೆದಿದ್ದಾರೆ.

ಇವರ ಪುತ್ರಿ ಶರಣ್ಯ ಮಹೇಶ್ ಏಷ್ಯನ್ ಸ್ಕೇಟಿಂಗ್ ಪದಕ ವಿಜೇತೆ ಹಾಗೂ ರಾಷ್ಟ್ರೀಯ ಚಾಂಪಿಯನ್ ಆಗಿದ್ದಾರೆ. ತಸ್ಮಯ್ ಶೆಟ್ಟಿ, ಹನಾ ಫೆರ್ನಾಂಡಿಸ್, ಕೃತಿ, ಶ್ರೇಷ್ಠ ಸೇರಿದಂತೆ ಹಲವರು ರಾಷ್ಟ್ರೀಯ ಸಾಧನೆ ಮಾಡಿದ್ದಾರೆ. ವಿಕಲಚೇತನ ಮಕ್ಕಳಿಗೆ ಸ್ವಂತ ಖರ್ಚಿನಲ್ಲಿ ಉಚಿತ ತರಬೇತಿ ನೀಡಿ, ಸ್ಕೇಟಿಂಗ್ ಪರಿಕರಗಳನ್ನು ತಾವೇ ಒದಗಿಸಿ ಅವರನ್ನು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡಿದ್ದಾರೆ.

ಅಬುಧಾಬಿ, ಐರ್ಲೆಂಡ್, ಗ್ರೀಸ್, ಚೀನಾ ವರ್ಡ್ ಗೇಮ್ಸ್‌ನಲ್ಲಿ ಇವರ ವಿದ್ಯಾರ್ಥಿಗಳು ಗೆಲುವು ಸಾಧಿಸಿದ್ದಾರೆ.ಆದರೆ 35 ವರ್ಷಗಳ ಇಂತಹ ಸಾಧನೆ ಮಾಡಿದರೂ ತರಬೇತಿಗೆ ಸ್ವಂತ ಗ್ರೌಂಡ್ ಸಿಗದಿರುವುದು ವಿಪರ್ಯಾಸ. ಅನೇಕ ಸರ್ಕಾರಿ ಕಚೇರಿಗಳನ್ನು ಅಲೆದಾಡಿದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಇಂತಹ ಸಾಧಕನ ಸಾಧನೆಯನ್ನು ಗುರುತಿಸಿ ಸರ್ಕಾರದ ಸವಲತ್ತುಗಳು ಸಿಗಲಿ ಎಂಬುದು ಆಶಯ.

LEAVE A REPLY

Please enter your comment!
Please enter your name here