







ವಿಟ್ಲ: ಬಾಂಬೆ ಜೂಡೋ ಕ್ಲಬ್ ವತಿಯಿಂದ ನಡೆದ ಸ್ಪೋರ್ಟ್ಸ್ ಜೂಡೋದಲ್ಲಿ ವಿಟ್ಲದ ಮೌಶ್ಮಿ ಶೆಟ್ಟಿ ಬ್ರೌನ್ ಬೆಲ್ಟ್ ಪಡೆದು ವಿಶೇಷ ಸಾಧನೆಗೈದಿದ್ದಾರೆ.


ಶ್ರೀ ದುರ್ಗಾ ಪರಮೇಶ್ವರಿ ಸೇವಾ ಟ್ರಸ್ಟ್ ಮತ್ತು ತಾರಿಕಿಟ ಕಲಾ ಕಮ್ಮಟ ಬಿ.ಸಿ.ರೋಡ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಾಂಬೆ ಜೂಡೋ ಕ್ಲಬ್ (ಮುಂಬೈ ಜೂಡೋ ಅಸೋಸಿಯೇಷನ್ ಮಾನ್ಯತೆ) ವತಿಯಿಂದ ನಡೆದ ಕ್ರೀಡಾ ಜೂಡೋದ ಕ್ಯೂ ವಿಭಾಗದಲ್ಲಿ ಇವರು ಬ್ರೌನ್ ಬೆಲ್ಟ್ ಪಡೆದಿದ್ದಾರೆ.



ಅಳಿಕೆ ಮಾಧವ ಸೆನ್ಸಾಯಿ ಅವರಿಂದ ಕರಾಟೆ ತರಬೇತಿ ಪಡೆಯುತ್ತಿರುವ ಮೌಶ್ಮಿ ಈಗಾಗಲೇ ಕಿರಿಯ ವಯಸ್ಸಿನಲ್ಲೇ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿದ್ದಾರೆ. ಇದೀಗ ಜೂಡೋ 7ನೇ ಡಾನ್ ಮಾಸ್ಟರ್ ಯತೀಶ್ ಬಂಗೇರ ಮುಂಬೈ ಅವರಿಂದ ಜೂಡೋ ತರಬೇತಿ ಪಡೆದು ಬ್ರೌನ್ ಬೆಲ್ಟ್ ಗಳಿಸಿದ್ದಾರೆ.
ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಜೂಡೋ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದ ಇವರು ಅ.8ರಿಂದ 10ರವರೆಗೆ ಬಾಗಲಕೋಟೆಯಲ್ಲಿ ನಡೆಯಲಿರುವ 2026-27ನೇ ಸಾಲಿನ 14/17 ವಯೋಮಿತಿಯ ರಾಜ್ಯ ಮಟ್ಟದ ಜೂಡೋ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಮೌಶ್ಮಿ ಶೆಟ್ಟಿ ವಿಟ್ಲ ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯಾಗಿದ್ದು, ಸ್ನೇಹ – ರಾಮದಾಸ್ ಶೆಟ್ಟಿ ದಂಪತಿಯ ಪುತ್ರಿ.










