







ನೆಲ್ಯಾಡಿ: ಕಾರು ಡಿಕ್ಕಿಯಾದ ಪರಿಣಾಮ ಕಡವೆಯೊಂದು ಮೃತಪಟ್ಟ ಘಟನೆ ಗುಂಡ್ಯ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಗುಂಡ್ಯ ಸಮೀಪದ ಅನಿಲ ಎಂಬಲ್ಲಿ ಅ.2ರಂದು ರಾತ್ರಿ ನಡೆದಿದೆ. ಘಟನೆಯಲ್ಲಿ ಕಾರು ಜಖಂಗೊಂಡಿದ್ದು ಕಾರಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.



ಸುಬ್ರಹ್ಮಣ್ಯದಿಂದ ಗುಂಡ್ಯ ಕಡೆಗೆ ಬರುತ್ತಿದ್ದ ಯಾತ್ರಾರ್ಥಿಗಳ ಕಾರು ಗುಂಡ್ಯ ಸಮೀಪದ ಅನಿಲ ಎಂಬಲ್ಲಿಗೆ ತಲುಪುತ್ತಿದ್ದಂತೆ ಪಕ್ಕದ ಅರಣ್ಯ ಪ್ರದೇಶದಿಂದ ಏಕಾಏಕಿ ರಸ್ತೆಗೆ ಬಂದ ಕಡವೆಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಡವೆ ರಸ್ತೆಯಂಚಿಗೆ ಎಸೆಯಲ್ಪಟ್ಟು ತೀವ್ರವಾಗಿ ಗಾಯಗೊಂಡು ಮೃತಪಟ್ಟಿದೆ. ಅಪಘಾತದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಬಳಿಕ ಮೃತಪಟ್ಟ ಕಡವೆಯ ಕಳೇಬರವನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.



ರಸ್ತೆ ಆವರಿಸಿಕೊಂಡಿರುವ ಗಿಡ ಬಳ್ಳಿ;
ಅನಿಲ ಭಾಗದಲ್ಲಿ ರಸ್ತೆಯು ಅರಣ್ಯ ಮಧ್ಯೆ ಹಾದುಹೋಗಿದ್ದು ರಸ್ತೆಯ ಎರಡೂ ಬದಿಗೆ ವ್ಯಾಪಕವಾಗಿ ಗಿಡ ಬಳ್ಳಿಗಳು ಬೆಳೆದಿವೆ. ಇದರಿಂದ ವಾಹನ ಸವಾರರಿಗೆ ರಸ್ತೆ ಸರಿಯಾಗಿ ಗೋಚರಿಸದೆ ಇರುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಅರಣ್ಯದಿಂದ ಏಕಾಏಕಿ ಕಾಡುಪ್ರಾಣಿಗಳು ರಸ್ತೆಗೆ ಪ್ರವೇಶಿಸುವ ಸಂದರ್ಭ ಅಪಾಯ ಎದುರಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದೇ ಪ್ರದೇಶದಲ್ಲಿ ಈ ಹಿಂದೆ ಕಾಡಾನೆಯೊಂದು ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದ ಘಟನೆಯೂ ನಡೆದಿತ್ತು. ಆಗ ಅರಣ್ಯ ಇಲಾಖೆ ವತಿಯಿಂದ ರಸ್ತೆಯ ಎರಡೂ ಬದಿಗಳಲ್ಲಿದ್ದ ಪೊದೆಗಳನ್ನು ತೆರವುಗೊಳಿಸಲಾಗಿತ್ತು. ಇದೀಗ ಮತ್ತೆ ಪೊದೆಗಳು ಬೆಳೆದು ರಸ್ತೆಯನ್ನು ಆವರಿಸಿಕೊಂಡಿದ್ದು ಸಂಬಂಧಪಟ್ಟವರು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ.










