







ಮಹಾಪುರುಷರ, ದಾರ್ಶನಿಕರ ಸಂದೇಶಗಳು ಚರ್ಚೆಗೆ ಒಳಪಡಬೇಕು- ಮುಹಮ್ಮದ್ ಕುಂಞಿ


ನಾವೆಲ್ಲರೂ ಸೋದರ ಸೋದರಿಯರು ಎಂದು ತಿಳಿದು ಬದುಕಬೇಕು- ಡಾ. ಸುರೇಶ ಪುತ್ತೂರಾಯ
ನಾವು ಬಯಲಾಗಬೇಕು ಪರಸ್ಪರ ಬೇಲಿ ಕಟ್ಟಿ ಕೊಳ್ಳಬಾರದು- ಡಾ| ನರೇಂದ್ರ ರೈ ದೇರ್ಲ
ಸಮಾನ ಮನಸ್ಥಿತಿ ಭಾರತದ ಪುಣ್ಯ ಭೂಮಿಯನ್ನು ಉಳಿಸಲಿ- ಇಬ್ರಾಹಿಂ ಎಂ.
ಜೀವನದಲ್ಲಿ ಹೊಣೆಗಾರಿಕೆ ಸಮರ್ಥವಾಗಿ ನಿರ್ವಹಿಸಬೇಕು- ಇಸ್ಬಾಕ್ ಸಿ. ಎ.



ಪುತ್ತೂರು: ಪುತ್ತೂರು ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಪ್ರವಾದಿ ಮಹಮ್ಮದ್(ಸ) ಜೀವನ ಮತ್ತು ಸಂದೇಶ ಸಾರುವ ಕ್ರಾಂತಿಯ ಜ್ಯೋತಿ ಸೀರತ್ ಸಮಾವೇಶ ಬೊಳುವಾರು ಪಡಿವಾಳ್ ಗ್ರ್ಯಾಂಡ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.
ಮಂಗಳೂರು ಶಾಂತಿ ಪ್ರಕಾಶನ ಸಂಸ್ಥೆಯ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಮಾತನಾಡಿ ಕ್ರಾಂತಿ ಎಂದರೆ ಬದಲಾವಣೆ, ಸುಧಾರಣೆಯಾಗಿದೆ. ಪ್ರವಾದಿಯವರ, ಮಹಾಪುರುಷರ ಸಂದೇಶಗಳಿಂದ ಆದ ಸಮಾಜದ ಬದಲಾವಣೆ ಇಂದಿಗೂ ಚರ್ಚೆ ಆಗಬೇಕು ಎಂದು ಜಮಾ ಅತ್ ಬಯಸುತ್ತದೆ ಎಂದರು. ತಪ್ಪು ಕಲ್ಪನೆಗಳು, ನಿಗೂಢತೆಗಳು ಜನರ ಅಂತರವನ್ನು ಹೆಚ್ಚಿಸುತ್ತದೆ. ಮಹಾಪುರುಷರ, ದಾರ್ಶನಿಕರ ಸಂದೇಶ ಗಳು ಚರ್ಚೆಗೆ ಒಳಪಡಬೇಕು. ಅವರು ಸತ್ಯ, ನ್ಯಾಯಕ್ಕಾಗಿ ಕೆಲಸ ಮಾಡಿದವರು. ಇದಕ್ಕಾಗಿ ಜಮಾಅತೆ ಇಸ್ಲಾಂ ಅಭಿಯಾನ ನಡೆಸುತ್ತಿದೆ ಎಂದರು.
ಪ್ರವಾದಿಯವರು ದೇವಾಂಶ ಸಂಭೂತ, ದೇವಮಾನವ ಎಂದು ಹೇಳಿಲ್ಲ ದೇವರದಾಸ ಎಂದು ಹೇಳಿದರು. ನೀವೆಲ್ಲರೂ ದೇವರ ಸೃಷ್ಟಿಕರ್ತರು. ಎಲ್ಲರೂ ಬಾಚಣಿಗೆಯ ಹಲ್ಲಿನ ಹಾಗೆ ಸಮಾನರು. ಧರ್ಮ ಜಾತಿ ಹೆಸರಲ್ಲಿ ಬೆರ್ಪಡುವುದು ತಪ್ಪು ಎಂದು ಪ್ರವಾದಿಯವರು ಹೇಳಿದ್ದಾರೆ. ಆದುದರಿಂದ 6ನೇ ಶತಮಾನದ ಸಮಾನತೆಯ ಪಾಠ, ತಂದೆ ತಾಯಿಯಾರನ್ನು ಚೆನ್ನಾಗಿ ನೋಡಿ ಕೊಳ್ಳುವುದು, ಬದುಕಿನ ನಿಯಮಗಳು, ಮಾನವೀಯತೆ, ಮೌಲ್ಯಗಳು ಬೇಕೋ 21 ನೇ ಶತಮಾನದ ಜನಾಂಗಿಯತೆ ಆಧಾರದ ಚಿಂತನೆಗಳು, ವಿಭಜನೆಯ ಪಾಠಗಳು, ಅಮಾನವೀಯತೆ ಅಗತ್ಯವಿದೆಯೇ ಎಂದ ಅವರು ಪ್ರವಾದಿಯವರ ಮಾರ್ಗದರ್ಶನವನ್ನು ಬೆಳೆಸಿಕೊಳ್ಳೋಣ ಎಂದರು.
ನಾವೆಲ್ಲರೂ ಸೋದರ ಸೋದರಿಯರು ಎಂದು ತಿಳಿದು ಬದುಕಬೇಕು:
ಮಹಾವೀರ ಮೆಡಿಕಲ್ ಆಸ್ಪತ್ರೆಯ ವೈದ್ಯ ಡಾ. ಸುರೇಶ ಪುತ್ತೂರಾಯ ಮಾತನಾಡಿ ಇಂದು ಜಾತಿ ಧರ್ಮ ಗಳ ಮಧ್ಯೆ ಕಂದಕ ಸೃಷ್ಟಿಯಾಗುತ್ತಿದೆ. ವಿವಿಧತೆಯಲ್ಲಿ ಏಕತೆ ಎಂದು ಗಾಂಧೀಜಿಯವರು ಬೋಧಿಸಿದ್ದಾರೆ. ರೋಗಿಗಳಿಗೆ ಖಾಯಿಲೆಯಲ್ಲಿ ಭೇಧ ಭಾವ ಇಲ್ಲ. ನಮ್ಮಲ್ಲಿ ಭೇದ ಭಾವ ಯಾಕೆ? ಎಲ್ಲರೂ ಮನುಷ್ಯರು. ಇನ್ನೊಬ್ಬರ ಧರ್ಮ ಪ್ರಶ್ನಿಸದೆ ಗೌರವ ಕೊಡೋಣ. ಧರ್ಮಕ್ಕೆ ರಾಜಕೀಯ ಬೆಸೆಯಬಾರದು. ನಾವೆಲ್ಲರೂ ಸೋದರ ಸೋದರಿಯರು ಎಂದು ತಿಳಿದು ಬದುಕಬೇಕು ಎಂದರು.

ನಾವು ಬಯಲಾಗಬೇಕು ಪರಸ್ಪರ ಬೇಲಿ ಕಟ್ಟಿ ಕೊಳ್ಳಬಾರದು:
ನಿವೃತ್ತ ಪ್ರಾಧ್ಯಾಪಕರು ಹಾಗೂ ಲೇಖಕ ಡಾ| ನರೇಂದ್ರ ರೈ ದೇರ್ಲ ಮಾತನಾಡಿ ಇದು ಅರ್ಥಪೂರ್ಣ ಕಾರ್ಯಕ್ರಮ. ನಾವು ವಿದ್ಯಾವಂತರಾಗುತ್ತಾ ಗೋಡೆ ಸೃಷ್ಟಿ ಮಾಡಿಕೊಳ್ಳುತ್ತಿದ್ದೇವೆ. ವಿಷದ ಬೇರು ಮೊಳಕೆ ಒಡೆಯುತ್ತಿದೆ. ಭಾರತವನ್ನು ಜಗತ್ತಿಗೆ ಕಟ್ಟಿ ಕೊಡುವ ನಾವು ಜಾತಿ- ಧರ್ಮ ಎಂದು ಗುರುತಿಸಿಕೊಳ್ಳುವ ಕೆಲಸ ಆಗುತ್ತಿದೆ ಎಂದರು. ಕರಾವಳಿ ಜಿಲ್ಲೆ ಬುದ್ಧಿವಂತರ ಜಿಲ್ಲೆ. ಇಲ್ಲಿಯೇ ಅತೀ ಹೆಚ್ಚು ಕೋಮು ಗಲಭೆ ಗಳಾಗುತ್ತಿದೆ. ಈಗ ನಮ್ಮ ಬುದ್ದಿವಂತಿಕೆ ಎಲ್ಲಿ ಹೋಯಿತು?. ಇದಕ್ಕೆ ಕಾರಣ ನಮ್ಮ ಹೊಟ್ಟೆ ತುಂಬಿದ ಕಾರಣ ಆಗಿದೆ. ನಾವು ಬಯಲಾಗಬೇಕು ಪರಸ್ಪರ ಬೇಲಿ ಕಟ್ಟಿ ಕೊಳ್ಳಬಾರದು. ಇಂದು ಸಮುದಾಯಕ್ಕೆ ಒಂದರಂತೆ ಶಾಲೆ ನಿರ್ಮಾಣ ವಾಗುತ್ತಿದೆ. ನಮ್ಮ ಶಿಕ್ಷಣ ನಮ್ಮನ್ನು ತೋರಿಸುವುದರ ಜತೆಗೆ ಜಗತ್ತನ್ನು ತೋರಿಸಬೇಕು. ಎಲ್ಲಾ ಧರ್ಮ ಗ್ರಂಥಗಳ ಉದ್ದೇಶ ಮಾನವ ಧರ್ಮವೇ ಆಗಿದೆ ನಾವೆಲ್ಲರೂ ಮನುಷ್ಯರು ಎಂಬ ಭಾವನೆ ಬರಬೇಕು ಎಂದರು.
ಸಮಾನ ಮನಸ್ಥಿತಿ ಭಾರತದ ಪುಣ್ಯ ಭೂಮಿಯನ್ನು ಉಳಿಸಲಿ:
ಉಪ್ಪಿನಂಗಡಿ ಕಾಲೇಜು ಪ್ರಾಶುಪಾಲರಾದ ಇಬ್ರಾಹಿಂ ಎಂ. ಮಾತನಾಡಿ ಮಹಾತ್ಮಾ ಗಾಂಧಿಯವರು ಎಲ್ಲಾ ಧರ್ಮಗಳ ಸಾರ ಅರಿತು ಸಂದೇಶವನ್ನು ಜೀವನದಲ್ಲಿ ಅಳವಡಿಸಿದರು. ನಮ್ಮ ದೇಶ ಮಾನವೀಯತೆ, ಮನುಷ್ಯತ್ವದ ಕಡೆಯಿಂದ ದೂರವಾಗುತ್ತಿದೆ. ಸಮಾನ ಮನಸ್ಥಿತಿ ಭಾರತದ ಪುಣ್ಯ ಭೂಮಿಯನ್ನು ಉಳಿಸಲಿ ಎಂದರು.
ಜೀವನದಲ್ಲಿ ಹೊಣೆಗಾರಿಕೆ ಸಮರ್ಥವಾಗಿ ನಿರ್ವಹಿಸಬೇಕು:
ಪುತ್ತೂರು ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಇಸ್ಬಾಕ್ ಸಿ. ಎ. ಪುತ್ತೂರು ಮಾತನಾಡಿ ಜಗತ್ತಿನಲ್ಲಿ ಹಲವಾರು ಪ್ರವಾದಿಗಳು ನಿಯುಕ್ತಿಗೊಳಿಸಲ್ಪಟ್ಟಿದ್ದಾರೆ. ನಿಮ್ಮನ್ನು ಸೃಷ್ಟಿಸಿದ ಪ್ರಭುವನ್ನು ಆರಾಧಿಸಬೇಕೆಂದು ಪ್ರವಾದಿಯವರು ಹೇಳಿದ್ದಾರೆ. ದೇವರೊಂದಿಗೆ ಸಂಬಂಧ ಗಟ್ಟಿಯಾಗಲು ಆರಾಧನೆ ತಿಳಿಸಿದರು. ಜೀವನದಲ್ಲಿ ಹೊಣೆಗಾರಿಕೆ ಸಮರ್ಥವಾಗಿ ನಿರ್ವಹಿಸಬೇಕು ಎಂದರು. ತಂದೆ ತಾಯಿಯನ್ನು ತೃಪ್ತಿಕರವಾಗಿ ನೋಡಿಕೊಳ್ಳಬೇಕು. ಪ್ರವಾದಿ ಕಳಿಸಿದ ಧರ್ಮ ಎಂಬದು ಹೊಣೆಗಾರಿಕೆ, ನಿರ್ವಹಣೆ ಆಗಿದೆ. ದೇವರ ಮುಂದೆ ಜವಾಬ್ದಾರರು ಎಂದು ತಿಳಿದು ಕೊಳ್ಳಬೇಕು. ಧರ್ಮ ಕೋಮುವಾದಕ್ಕೆ ಪ್ರೇರಣೆ ನೀಡಬಾರದು. ಕೋಮುವಾದದಿಂದ ಮೌಲ್ಯಗಳು ನಾಶವಾಗುತ್ತದೆ ಎಂದರು.
ವಲಯ ಸಂಚಾಲಕ ರಿಯಾಜ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ ಜಮಾ ಅತ್ ಇಸ್ಲಾಂ ರಾಜ್ಯದಾದ್ಯಂತ ಸೀರತ್ ಅಭಿಯಾನ ಹಮ್ಮಿಕೊಳ್ಳುತ್ತಿದೆ. ಪ್ರವಾದಿಯವರ ಜೀವನ ಸಂದೇಶವನ್ನು ಜನರಿಗೆ ತಿಳಿಸುವುದು ಇದರ ಉದ್ಧೇಶವಾಗಿದೆ. ಇದರಿಂದ ಕೋಮು ಸಹಾರ್ದತೆ ಸಾರುತ್ತಿದೆ. ಜನರನ್ನು ಒಟ್ಟುಗೂಡಿಸಲಾಗುತ್ತಿದೆ. ಪ್ರಾದೇಶಿಕ ಭಾಷೆಯಲ್ಲಿ ಪಸರಿಸುತ್ತಾ ಬಂದಿದೆ. ಪ್ರವಾದಿಯವರ ಸಂದೇಶವನ್ನು ಜನರು ಅರಿಯಲು ಅಭಿಯಾನ ಮಾಡಲಾಗುತ್ತಿದೆ ಎಂದರು.

ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಸಂಚಾಲಕ ಅಬ್ದುಲ್ ಕರೀಮ್ ಉಳ್ಳಾಲ, ಜಮಾಅತೆ ಇಸ್ಲಾಮಿ ಹಿಂದ್ ವಲಯ ಸಂಚಾಲಕ ಸಈದ್ ಇಸ್ಮಾಯಿಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪವಿತ್ರ ಕುರಾನ್ ವಚನದ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಅಬ್ದುಲ್ ಹಸಿಬ್ ಉಪ್ಪಿನಂಗಡಿ ವಂದಿಸಿದರು. ಅಸ್ಲಾಂ ಪಂಜಳ ಕಾರ್ಯಕ್ರಮ ನಿರೂಪಿಸಿದರು.










