







ಪುತ್ತೂರು: ಚೆನ್ನೈಯಲ್ಲಿ ಕನ್ನಡದ ಕಂಪು ಪಸರಿಸಿದ ಪುತ್ತೂರಿನ ಹಿರಿಯ ಸಾಹಿತಿ, ವಿದ್ವಾಂಸ, ಅಧ್ಯಾಪಕ ಹಾಗೂ ಕನ್ನಡ ಸಂಘಟಕ ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆ (81ವ) ಅವರು ಅಲ್ಪಕಾಲದ ಅಸೌಖ್ಯದಿಂದ ಅ.3ರಂದು ಮುಂಜಾನೆ ಚೆನ್ನೈಯಲ್ಲಿರುವ ನಿವಾಸದಲ್ಲಿ ನಿಧನರಾದರು.


ಕನ್ನಡ ಸಾಹಿತ್ಯ, ಅಧ್ಯಾಪನ, ಸಂಶೋಧನೆ, ಅನುವಾದ ಹಾಗೂ ಕನ್ನಡ ಸಂಘಟನಾ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದ ಅವರು, ಸುಮಾರು ಮೂರು ದಶಕಗಳ ಕಾಲ ಮದ್ರಾಸ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದೊಂದಿಗೆ ನಿಕಟವಾಗಿ ತೊಡಗಿಸಿಕೊಂಡಿದ್ದರು. ಚೆನ್ನೈಯಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಚಟುವಟಿಕೆಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಸಾಹಿತಿ, ಪತ್ರಕರ್ತ ಹಾಗೂ ಯಕ್ಷಗಾನ ಅಭಿಮಾನಿಯಾಗಿದ್ದ ಅವರು ಕನ್ನಡ ಸಂಘಟನೆಯಲ್ಲಿಯೂ ಸಕ್ರಿಯರಾಗಿದ್ದರು. ಸದಾ ಹಸನ್ಮುಖಿ, ಸ್ನೇಹಮಯಿ ಹಾಗೂ ಮೃದುಭಾಷಿಯಾಗಿದ್ದ ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆ ಅವರು ಪತ್ನಿ ಸರಸ್ವತಿ, ಪುತ್ರ ಸಂಗೀತಗಾರ ಶ್ಯಾಮಪ್ರಕಾಶ್, ಸೊಸೆ ಸ್ವಾತಿ, ಸಹೋದರರಾದ ಪುತ್ತೂರಿನ ಹಿರಿಯ ಸಾಹಿತಿ ನಿವೃತ್ತ ಪ್ರೊ. ವಿ.ಬಿ.ಅರ್ತಿಕಜೆ ಮತ್ತು ಕೆನರಾಬ್ಯಾಂಕ್ ನಿವೃತ್ತ ಉದ್ಯೋಗಿ ಸುಬ್ರಹ್ಮಣ್ಯ ಅರ್ತಿಕಜೆ ಹಾಗೂ ಅಪಾರ ಶಿಷ್ಯರು, ಸ್ನೇಹಿತರು ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ. ಅವರ ನಿಧನದಿಂದ ಕನ್ನಡ ಸಾಹಿತ್ಯ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.



ಅರ್ತಿಕಜೆಯಿಂದ ಮದ್ರಾಸ್ ವಿಶ್ವವಿದ್ಯಾನಿಲಯದವರೆಗೆ
1945ರ ಏ.19ರಂದು ಪುತ್ತೂರು ತಾಲೂಕಿನ ಅರ್ತಿಕಜೆ ಗ್ರಾಮದಲ್ಲಿ ಶಾಮ್ ಭಟ್ ಮತ್ತು ಸಾವಿತ್ರಮ್ಮ ದಂಪತಿಯ ಪುತ್ರರಾಗಿ ಜನಿಸಿದ ಶ್ರೀಕೃಷ್ಣ ಭಟ್ ಅವರು ಕೃಷಿ ಕುಟುಂಬದ ಸರಳ ಬದುಕಿನಿಂದ ವಿದ್ಯಾಭ್ಯಾಸದ ಉನ್ನತ ಶಿಖರಕ್ಕೇರಿದವರು. ಆರ್ಥಿಕ ಸಂಕಷ್ಟಗಳ ನಡುವೆಯೂ ವಿದ್ಯಾಭ್ಯಾಸದ ಮೇಲಿನ ಅಪಾರ ಆಸಕ್ತಿಯಿಂದ ನದಿಯನ್ನು ದಾಟಿ ಶಾಲೆಗೆ ತೆರಳಿ ಶಿಕ್ಷಣ ಪಡೆದರು.
ಎಡನೀರು ಶ್ರೀ ಈಶ್ವರಾನಂದ ಭಾರತೀ ಸ್ವಾಮೀಜಿ ಹೈಸ್ಕೂಲ್ನಲ್ಲಿ ಪ್ರೌಢಶಿಕ್ಷಣ ಪಡೆದ ಅವರು ಬಳಿಕ ಅಲ್ಲಿಯೇ ಸುಮಾರು ಮೂರು ವರ್ಷ ಅಕೌಂಟೆಂಟ್ ಆಗಿ ಸೇವೆ ಸಲ್ಲಿಸಿದರು. 1969ರಲ್ಲಿ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಚಿನ್ನದ ಪದಕದೊಂದಿಗೆ ಪದವಿ ಹಾಗೂ 1971ರಲ್ಲಿ ಕನ್ನಡ ಎಂ.ಎ. ಪದವಿ ಪಡೆದರು. 1975ರವರೆಗೆ ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಬಳಿಕ ಮದ್ರಾಸ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗಕ್ಕೆ ಉಪನ್ಯಾಸಕರಾಗಿ ಸೇರ್ಪಡೆಗೊಂಡರು. ಬಳಿಕ ಪ್ರಾಧ್ಯಾಪಕರಾಗಿ, 1991ರಿಂದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. 1999ರಿಂದ 2000ರವರೆಗೆ ಮದ್ರಾಸ್ ವಿಶ್ವವಿದ್ಯಾನಿಲಯದ ಓರಿಯೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್ ನಿರ್ದೇಶಕರಾಗಿದ್ದರು. 2005ರಲ್ಲಿ ನಿವೃತ್ತರಾದ ಬಳಿಕವೂ ಅತಿಥಿ ಉಪನ್ಯಾಸಕರಾಗಿ ಶೈಕ್ಷಣಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಮದ್ರಾಸಿನಲ್ಲಿ ಕನ್ನಡ ಕಟ್ಟಿದ ಹಿರಿಯ ವಿದ್ವಾಂಸ: ವಿವೇಕ ರೈ
ನಿಡುಗಾಲದ ಸ್ನೇಹಿತ ಹಾಗೂ ಮದ್ರಾಸ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿದ್ದ ಪ್ರೊ. ಶ್ರೀಕೃಷ್ಣ ಭಟ್ ಅರ್ತಿಕಜೆ ಅವರ ನಿಧನದ ಸುದ್ದಿ ಬಹಳ ದುಃಖದಾಯಕವಾಗಿದೆ. ಮದ್ರಾಸು (ಚೆನ್ನೈ) ನಗರದಲ್ಲಿ ಕನ್ನಡವನ್ನು ಕಟ್ಟುವ ಮತ್ತು ಬೆಳೆಸುವ ಕಾರ್ಯದಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು. ಕನ್ನಡ ಸಂಘ-ಸಂಸ್ಥೆಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು ಹಿರಿಯ ವಿದ್ವಾಂಸರೂ, ಸಜ್ಜನರೂ ಆಗಿದ್ದರು. ಪ್ರೊ. ಶ್ರೀಕೃಷ್ಣ ಭಟ್ ಅರ್ತಿಕಜೆಯವರ ನಿಧನಕ್ಕೆ ನನ್ನ ತೀವ್ರ ಸಂತಾಪಗಳು. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹಿರಿಯ ಸಾಹಿತಿ ಬಿ.ಎ. ವಿವೇಕ ರೈ ಸಂತಾಪ ಸೂಚಿಸಿದ್ದಾರೆ.











ಚೆನ್ನೈ ಯಲ್ಲಿ ಕನ್ನಡದ ಬಗ್ಗೆ ಬಹಳ ಕೆಲಸ ಮಾಡಿದವರು ನಮ್ಮ ಅರ್ತಿಕಜೆ ಗುರುಗಳು. ೧೯೮೪ ರ ಲ್ಲಿ ಚೆನ್ನೈ ಯ ಓರಿಯೆಂಟಲ್ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಚುಕ್ಕಾಣಿಯನ್ನು ಹಿಡಿದು ಬೆಳೆಸಿದವರು ಪ್ರೊ. ಕೋಡಿ ಕುಶಾಲಪ್ಪ ಗೌಡರು. ಅವರ ಬಳಿಕ ಆ ಸ್ಥಾನವನ್ನು ತುಂಬಿ ಸಮರ್ಪಕವಾಗಿ ನಡೆಸಿದವರು ಪ್ರೊ. ಶ್ರೀಕೃಷ್ಣಭಟ್ ಅರ್ತಿಕಜೆಯವರು. ಆಗಾಗ ಊರಿಗೆ ಬಂದು ತಮ್ಮ ಕನ್ನಡ ವಿಭಾಗದ ಕುರಿತು ತಿಳಿಹೇಳಿ ಶಿಷ್ಯವೇತನವನ್ನು ಕೊಡಿಸಿ ಅಧ್ಯಯನ ಮಾಡುವಂತೆ ಪ್ರೋತ್ಸಾಹಿಸಿದರು ನನ್ನ ಗುರುಗಳು ಅರ್ತಿಕಜೆಯವರು. ತಮ್ಮ ವಿದ್ಯಾರ್ಥಿಗಳನ್ನು ಆಗಾಗ ಮನೆಗೆ ಕರೆಸಿ ಊಟ ತಿಂಡಿ ನೀಡಿ ಮನೆಯ ವಾತಾವರಣವನ್ನು ಕಲ್ಪಿಸಿ ಕೊಡುತ್ತಿದ್ದರು. ನನ್ನನ್ನು ಅನೇಕ ಸಲ ನನಗೆ ಆಕಾಶವಾಣಿಯಲ್ಲಿ ಹಾಡಲು ಅವಕಾಶ ಮಾಡಿ ಕೊಟ್ಟಿದ್ದರು.ಕನ್ನಡ ಸಂಘದ ವಿವಿಧ ಕೆಲಸ ಕಾರ್ಯಗಳಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತಿದ್ದರು. ಪರೀಕ್ಷಾ ಶುಲ್ಕವನ್ನು ಪಾವತಿಸಲು ಕಷ್ಟವಾದಾಗ ನನಗೆ ಸಾಲ ರೂಪದಲ್ಲಿ ಹಣವನ್ನು ನೀಡಿದ್ದರು. ನನಗೆ ಅಧ್ಯಯನ ಕಾಲದಲ್ಲಿ ವಸತಿ ನಿಲಯದಲ್ಲಿ ಪ್ರವೇಶ ದೊರಕಿಸಲು ಬಹಳ ಪ್ರಯತ್ನ ಮಾಡಿದ್ದರು. ಅವರ ಅಗಲಿಕೆ ಕನ್ನಡ ಭಾಷೆ ಸಾಹಿತ್ಯ, ಸಂಸ್ಕೃತಿ ಗೆ ತುಂಬಾ ನಷ್ಟವಾಗಿದೆ. ಹೋಗಿ ಬನ್ನಿ ಗುರುಗಳೇ, ನಿಮ್ಮಿಂದ ನಾವು ತುಂಬಾ ಉಪಕೃತರಾಗಿದ್ದೇವೆ. ನೀವು ನಮಗೆ ಕೊಟ್ಟದ್ದನ್ನು ಮುಂದಿನ ಪೀಳಿಗೆಗೆ ತಲುಪಿಸಿ ಗುರು ಋಣ ವನ್ನು ಸ್ವಲ್ಪ ಮಟ್ಟಿಗಾದರೂ ಋಣ ಮುಕ್ತರಾಗುವ ಪ್ರಯತ್ನ ಮಾಡುತ್ತೇವೆ ಎಂದು ನಿಮಗೆ ಆಶ್ವಾಸನೆ ಕೊಡುತ್ತೇವೆ. ನಿಮ್ಮ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ನಿಮ್ಮ ಮಗ, ಪತ್ನಿ ಮತ್ತು ಕುಟುಂಬಕ್ಕೆ ದೇವರು ಕರುಣಿಸಲಿ ಎಂದು ಬೇಡಿಕೊಳ್ಳುತ್ತೇನೆ