







ವಿಟ್ಲ: ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ, ಒಕ್ಕೆತ್ತೂರು ಕೊಣಾಜೆ ನಿವಾಸಿ ಯುಮುನಾ (59ವ.) ರವರು ಅಸೌಖ್ಯದಿಂದಾಗಿ ಅ.27ರಂದು ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.


ಈ ಶೈಕ್ಷಣಿಕ ವರ್ಷದ ಆರಂಭದಲ್ಲಿ ಒಕ್ಕೆತ್ತೂರು ಶಾಲೆಗೆ ಮುಖ್ಯ ಶಿಕ್ಷಕಿಯಾಗಿ ನಿಯುಕ್ತಿಗೊಂಡಿದ್ದ ಯಮುನಾ ಅವರು, ತದನಂತರ ಅನಾರೋಗ್ಯದಿಂದ ಬಳಲುತ್ತಿದ್ದರು. ಹಲವು ಸಮಯಗಳಿಂದ ಅನಾರೋಗ್ಯದ ನಿಮಿತ್ತ ಕರ್ತವ್ಯಕ್ಕೆ ಗೈರು ಹಾಜರಾಗಿದ್ದ ಅವರು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು.
ಯಮುನಾರವರು ಈ ಹಿಂದೆ ಕಡಂಬು, ಅನಿಲಕಟ್ಟೆ ಸರಕಾರಿ ಶಾಲೆಗಳಲ್ಲಿ ಹಾಗೂ ವಿಟ್ಲದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು. ಅಲ್ಲಿಂದ 2026ರ ಎಪ್ರಿಲ್ 19 ರಂದು ಒಕ್ಕೆತ್ತೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಮುಖ್ಯ ಶಿಕ್ಷಕಿಯಾಗಿ ವರ್ಗಾವಣೆಗೊಂಡು ಬಂದಿದ್ದರು. ಆದರೆ ಅನಾರೋಗ್ಯದ ಕಾರಣದಿಂದ ಅವರಿಗೆ ಪೂರ್ಣಾವಧಿಯಲ್ಲಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಿರಲಿಲ್ಲ. ಮೃತರು ಪತಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.



ಶಾಲೆಗೆ ರಜೆ :
ಶಿಕ್ಷಕಿ ಮೃತಪಟ್ಟ ಹಿನ್ನೆಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕರಾದ ಜಯಪ್ರಕಾಶ್ ಅವರು ಮಧ್ಯಾಹ್ನದ ನಂತರ ಶಾಲೆಗೆ ರಜೆ ಘೋಷಿಸಿದ್ದರು. ಮೃತರ ಅಂತಿಮ ಸಂಸ್ಕಾರವು ಅವರ ತಾಯಿ ಮನೆಯಾದ ಮೂಡಬಿದ್ರೆಯಲ್ಲಿ ನಡೆಯಲಿದೆ ಎಂದು ಮಾಹಿತಿ ಲಭಿಸಿದೆ.










