ಹಿರೇಬಂಡಾಡಿ ಗ್ರಾ.ಪಂ.ನಲ್ಲಿ ಪ್ರಜಾಸೇವಾ ಅಭಿಯಾನ

0

ಪ್ರಜಾಸೇವೆ ಮೂಲಕ ಸರಕಾರ ಜನರ ಮನೆಬಾಗಿಲಿಗೆ: ಅಶೋಕ್ ಕುಮಾರ್ ರೈ

ಉಪ್ಪಿನಂಗಡಿ: ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದಕ್ಕಾಗಿ, ಪೆಂಡಿಂಗ್ ಆಗಿ ಉಳಿದ ಕಡತಗಳ ಶೀಘ್ರ ವಿಲೇವಾರಿಗಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಜಾಸೇವಾ ಇಲಾಖೆಯನ್ನು ರಚಿಸಿದ್ದು, ಈ ಮೂಲಕ ಸರಕಾರವೇ ಜನರ ಮನೆಬಾಗಿಲಿಗೆ ಬಂದು ಸಮಸ್ಯೆಗೆ ಪರಿಹಾರ ನೀಡುತ್ತದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.


ಹಿರೇಬಂಡಾಡಿ ಗ್ರಾ.ಪಂ.ನಲ್ಲಿ ಅ.3ರಂದು ನಡೆದ ಪ್ರಜಾಸೇವಾ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನರ ಸಮಸ್ಯೆಗಳ ಶೀಘ್ರ ಪರಿಹಾರಕ್ಕಾಗಿ ಪ್ರಜಾಸೇವಾ ಇಲಾಖೆಯನ್ನು ಮುಖ್ಯಮಂತ್ರಿಗಳು ಆರಂಭಿಸಿದ್ದಾರೆ. ಅದೆಷ್ಟೋ ವರ್ಷಗಳಿಂದ ಪೆಂಡಿಂಗ್ ಆಗಿ ಉಳಿದಿರುವ ಜನರ ಅರ್ಜಿಗಳಿಗೆ ಆಗುವುದಿದ್ದಲ್ಲಿ ಸ್ಥಳದಲ್ಲೇ ಪರಿಹಾರ ದೊರಕಿಸಿಕೊಡಲಾಗುವುದು. ಇಲ್ಲದಿದ್ದಲ್ಲಿ 21 ದಿನಗಳೊಳಗೆ ಪರಿಹಾರ ಒದಗಿಸಲಾಗುವುದು. ಇಲ್ಲಿ ಜನರು ಕಚೇರಿಯಿಂದ ಕಚೇರಿಗೆ ಅಲೆದಾಡುವ ಅಗತ್ಯವಿಲ್ಲ. ತಾಲೂಕು, ಹೋಬಳಿ, ಗ್ರಾಮ ಮಟ್ಟದಲ್ಲಿ ಈ ಅಭಿಯಾನ ನಡೆಯುವುದರಿಂದ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಅಲ್ಲಿಗೆ ಬರುತ್ತಾರೆ. ಅಲ್ಲಿಯೇ ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂದನೆ ನೀಡುತ್ತಾರೆ ಎಂದರು.


ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಬಡವರ ಮೇಲೆ ಅಪಾರ ಕಾಳಜಿಯಿದ್ದು, ಪಂಚ ಗ್ಯಾರಂಟಿ ಯೋಜನೆ ಸೇರಿದಂತೆ ಬಡವರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಅಭಿವೃದ್ಧಿಗೆ ಬೇಕಾದಷ್ಟು ಅವಕಾಶಗಳಿದ್ದು, ಆದರೆ ಅದರ ಬಳಕೆ ಸರಿಯಾಗಿ ಆಗುತ್ತಿಲ್ಲ. ಆದ್ದರಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದ.ಕ. ಜಿಲ್ಲೆಯಲ್ಲಿ ಕ್ಯಾಬಿನೆಟ್ ಸಭೆ ನಡೆಸಿ 32 ಸಾವಿರ ಕೋ.ರೂ. ಅನುದಾನವನ್ನು ನೀಡಿದ್ದಾರೆ. ಪುತ್ತೂರಿನಲ್ಲಿ ನಿರ್ಮಾಣವಾಗಲಿರುವ ಸರಕಾರಿ ಮೆಡಿಕಲ್ ಕಾಲೇಜಿಗೆ ಅನುದಾನ ನೀಡಿದ್ಧಾರೆ. ಗ್ರಾಮಾಂತರ ಭಾಗದ ರಸ್ತೆ ನಿರ್ಮಾಣಕ್ಕಾಗಿ 16 ಸಾವಿರ ಕೋ.ರೂ. ನೀಡಿದ್ದಾರೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 1006 ಕೋ.ರೂ. ನೀಡಿದ್ದಾರೆ. ವಿಟ್ಲ ಪಟ್ಟಣ ಪಂಚಾಯತ್‌ಗೆ ಕುಡಿಯುವ ನೀರಿನ ಯೋಜನೆಗೆ 100 ಕೋ.ರೂ. ಅನುದಾನ ನೀಡಿದ್ದಾರೆ. ಕೇವಲ ಭಾಷಣ ಕೇಳುವುದರಿಂದ ಅಭಿವೃದ್ಧಿಯೂ ಸಾಧ್ಯವಿಲ್ಲ. ಯುವ ಜನಾಂಗ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ನಮಗೆ ಬೇಕಾಗಿರುವುದು ಧರ್ಮಾಧಾರಿತ ಚುನಾವಣೆಯಲ್ಲ ಬದಲಿಗೆ ವಿದ್ಯಾಭ್ಯಾಸ, ಉದ್ಯೋಗ ಹಾಗೂ ಆರೋಗ್ಯ. ಇದಕ್ಕಾಗಿಯೇ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಗ್ರಾಮೀಣ ಪ್ರದೇಶಗಳಿಗೂ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳನ್ನು ಮಂಜೂರು ಮಾಡುತ್ತಿದೆ. ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ 250ರಿಂದ 300 ಎಕರೆ ಜಾಗವನ್ನು ನಿವೇಶನಕ್ಕೆ ಕಾಯ್ದಿರಿಸಲಾಗಿದ್ದು, ನಿವೇಶನ ರಹಿತರಿಗೆ 2.45 ಸೆಂಟ್ಸ್ ಜಾಗ ಹಾಗೂ ಸರಕಾರದಿಂದ 2 ಲಕ್ಷ ರೂ.ವನ್ನು ನೀಡಲಿದೆ. ಈ ಕೆಲಸವನ್ನು 4-5 ತಿಂಗಳೊಳಗೆ ಮಾಡಿ ಮುಗಿಸಲಾಗುವುದು ಎಂದರು.


ವೇದಿಕೆಯಲ್ಲಿ ಪಂಚಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪುತ್ತೂರು ತಹಶೀಲ್ದಾರ್ ಎಸ್.ಬಿ.ಕೂಡಲಗಿ, ತಾ.ಪಂ. ಕಾರ್ಯನಿರ್ವಾಹಕಾಧಿಕಾರಿ ನವೀನ್ ಭಂಡಾರಿ, ಪುತ್ತೂರು ವಲಯ ಅರಣ್ಯ ಸಂರಕ್ಷಣಾಧಿಕಾರಿ ಕಿರಣ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರುದ್ರೇಗೌಡ ಉಪಸ್ಥಿತರಿದ್ದರು.
ಸಭೆಯಲ್ಲಿ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸೀಫ್, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಹಿರೇಬಂಡಾಡಿ ಗ್ರಾ.ಪಂ. ಮಾಜಿ ಸದಸ್ಯರಾದ ಸತೀಶ್ ಶೆಟ್ಟಿ ಹೆನ್ನಾಳ, ಗೀತಾ ದಾಸರಮೂಲೆ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯ ದೇವಿದಾಸ್ ರೈ, ಹಿರೇಬಂಡಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ರವಿ ಪಟಾರ್ತಿ ಮತ್ತಿತರರು ಉಪಸ್ಥಿತರಿದ್ದರು.
ಹಿರೇಬಂಡಾಡಿ ಗ್ರಾ.ಪಂ. ಪ್ರಭಾರ ಪಿಡಿಒ ಸತೀಶ್ ಬಂಗೇರ ಸ್ವಾಗತಿಸಿದರು. ಉಪ್ಪಿನಂಗಡಿ ಹೋಬಳಿ ಕಂದಾಯ ನಿರೀಕ್ಷಕ ಕೆ.ಟಿ. ಗೋಪಾಲ್ ಕಾರ್ಯಕ್ರಮ ನಿರೂಪಿಸಿದರು.

ಹಿರೇಬಂಡಾಡಿಗೆ 6.20 ಕೋ.ರೂ. ಅನುದಾನ
ಯಾವುದೇ ರಾಜಕೀಯ ಬೇಧ ಮಾಡದೇ ಪುತ್ತೂರು ವಿಧಾನ ಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿಯಾಗಿದ್ದು, ಈವರೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಹಿರೇಬಂಡಾಡಿ ಗ್ರಾ.ಪಂ.ಗೆ 6.20 ಕೋ.ರೂ. ಅನುದಾನವನ್ನು ನೀಡಿದ್ದೇನೆ. ಇನ್ನು ಮುಂದಕ್ಕೂ ಗ್ರಾಮದ ಅಭಿವೃದ್ಧಿಗೆ ಇನ್ನಷ್ಟು ಅನುದಾನಗಳನ್ನು ನೀಡಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.

LEAVE A REPLY

Please enter your comment!
Please enter your name here