ದಿ| ಗುಡ್ಡಪ್ಪ ಶೆಟ್ಟಿಯವರ ಉತ್ತರಕ್ರಿಯೆ, ನುಡಿನಮನ

0


ದಿ| ಗುಡ್ಡಪ್ಪ ಶೆಟ್ಟಿಯವರ ಉತ್ತಮ ಕೆಲಸಗಳು ಎಲ್ಲರಿಗೂ ಮಾದರಿಯಾಗಲಿ; ಆನಂದ ರೈ

ನೆಲ್ಯಾಡಿ: ಸೆ.23ರಂದು ಅನಾರೋಗ್ಯದಿಂದ ನಿಧನರಾದ ನಿವೃತ್ತ ಉಪತಹಶೀಲ್ದಾರ್, ನೆಲ್ಯಾಡಿ ಕಪಿಲಾ ಕಾಂಪ್ಲೆಕ್ಸ್ ನಿವಾಸಿ ಬಾಕ್ರಬೈಲು ಗುಡ್ಡಪ್ಪ ಶೆಟ್ಟಿಯವರ ಉತ್ತರಕ್ರಿಯೆ ಹಾಗೂ ನುಡಿನಮನ ಕಾರ್ಯಕ್ರಮ ಅ.3ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.


ಲಯನ್ಸ್ ಕ್ಲಬ್ ಮಾಜಿ ಪ್ರಾಂತೀಯ ಅಧ್ಯಕ್ಷ ಆನಂದ ರೈ ದೇವಿನಗರ ಅವರು ಮಾತನಾಡಿ, 1958ರಲ್ಲಿ ಬಾಕ್ರಬೈಲ್ ಕುಟುಂಬದಲ್ಲಿ ದಿ| ರಾಮಣ್ಣ ಶೆಟ್ಟಿ ಹಾಗೂ ದಿ| ಭಾಗೀರಥಿ ಶೆಟ್ಟಿ ದಂಪತಿ ಪುತ್ರರಾಗಿ ಜನಿಸಿದ ಗುಡ್ಡಪ್ಪ ಶೆಟ್ಟಿ ಅವರಿಗೆ ಮೂವರು ಸಹೋದರಿಯರು ಇದ್ದಾರೆ. ಇವರು ತನ್ನ 19ನೇ ವಯಸ್ಸಿನಲ್ಲೇ ಕಾವುನಲ್ಲಿ ಗ್ರಾಮಕರಣಿಕರಾಗಿ ಸರಕಾರಿ ಸೇವೆ ಆರಂಭಿಸಿದ್ದರು. ಬಳಿಕ ಉದನೆ, ಸವಣೂರು, ಶಿಶಿಲ, ಶಿಬಾಜೆ, ನೆಲ್ಯಾಡಿ, ಕೊಕ್ಕಡ ಮತ್ತಿತರರ ಕಡೆಗಳಲ್ಲಿ ಸುದೀರ್ಘ 41 ವರ್ಷ ಸೇವೆ ಸಲ್ಲಿಸಿದ್ದಾರೆ. 2018ರಲ್ಲಿ ಪುತ್ತೂರು ತಾಲೂಕು ಕಚೇರಿಯಲ್ಲಿ ಉಪ ತಹಶೀಲ್ದಾರ್ ಆಗಿದ್ದ ವೇಳೆ ವಯೋ ನಿವೃತ್ತಿ ಹೊಂದಿದ್ದರು. ತನ್ನ 26ನೇ ವಯಸ್ಸಿನಲ್ಲಿ ಬೋಳೋಡಿ ಶ್ಯಾಮಲಾ ಜಿ.ಶೆಟ್ಟಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಗುಡ್ಡಪ್ಪ ಶೆಟ್ಟಿಯವರಿಗೆ ಇಬ್ಬರು ಪುತ್ರಿಯರು. ಇವರದ್ದು ಸಂತೃಪ್ತ ಕುಟುಂಬ. ಗುಡ್ಡಪ್ಪ ಶೆಟ್ಟಿಯವರು ಸಾಮಾಜಿಕವಾಗಿಯೂ ಗುರುತಿಸಿಕೊಂಡಿದ್ದು ಹಲವು ದೈವಸ್ಥಾನ, ದೇವಸ್ಥಾನ, ಸಂಘ ಸಂಸ್ಥೆಗಳಲ್ಲೂ ತೊಡಗಿಕೊಂಡಿದ್ದಾರೆ. ನೆಲ್ಯಾಡಿಯಲ್ಲಿ ಕಪಿಲಾ ಕಾಂಪ್ಲೆಕ್ಸ್ ಮೂಲಕ ಉದ್ಯಮಿಯಾಗಿಯೂ ಗುರುತಿಸಿಕೊಂಡು ನೆಲ್ಯಾಡಿ ಪರಿಸರದ ಜನರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಬಾಲ್ಯದಲ್ಲೇ ಕೃಷಿ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಗುಡ್ಡಪ್ಪ ಶೆಟ್ಟಿಯವರು ನಿವೃತ್ತಿಯ ಬಳಿಕ ನೆಲ್ಯಾಡಿಯಲ್ಲಿ ಕೃಷಿ ಭೂಮಿ ಖರೀದಿಸಿ ಪತ್ನಿಯೊಂದಿಗೆ ಸ್ವಾಭಿಮಾನದ ಜೀವನ ನಡೆಸುತ್ತಿದ್ದರು. ಅವರ ಉತ್ತಮ ಕೆಲಸಗಳು ಎಲ್ಲರಿಗೂ ಮಾದರಿಯಾಗಲಿ. ಕುಟುಂಬಕ್ಕೆ ಅವರ ಅಗಲಿಕೆಯ ನೋವು ಸಹಿಸಿಕೊಳ್ಳುವ ಶಕ್ತಿ ಭಗವಂತ ನೀಡಲಿ. ಅವರ ದಿವ್ಯಾತ್ಮಕ್ಕೆ ಭಗವಂತನ ಸಾನಿಧ್ಯ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸಿ ನುಡಿನಮನ ಸಲ್ಲಿಸಿದರು.


ಮೃತರ ಪತ್ನಿ ಬೋಳೋಡಿ ಶ್ಯಾಮಲಾ ಜಿ.ಶೆಟ್ಟಿ, ಪುತ್ರಿಯರಾದ ಮೆಸ್ಕಾಂ ಕಾರ್ಕಳ ಶಾಖೆಯಲ್ಲಿ ಎಇಇ ಆಗಿರುವ ಶಿಲ್ಪಾ ಎಸ್.ಶೆಟ್ಟಿ, ಶ್ರುತಿ ಶೆಟ್ಟಿ, ಅಳಿಯಂದಿರಾದ ಉದ್ಯಮಿ ಸುದೇಶ್ ಶೆಟ್ಟಿ ನಿಟ್ಟೆ, ಕೆಯ್ಯೂರು ಶ್ರೀ ದೇವಿ ಕ್ಲಿನಿಕ್‌ನ ವೈದ್ಯ ಡಾ.ಶಿವಪ್ರಸಾದ್ ಶೆಟ್ಟಿ, ಮೊಮ್ಮಕ್ಕಳಾದ ಶ್ರೀದಾ, ಶ್ರಾಗ್ವಿ, ಶಾಶ್ನಿ, ಹಿರಿಯರಾದ ದಿವಾಕರ ನಿಡ್ಲೆ, ನಾಗೇಶ್, ವಿಶ್ವನಾಥ, ರಾಮಯ್ಯ ರೈ ಸಹಿತ ಕುಟುಂಬಸ್ಥರು, ಬಂಧುಮಿತ್ರರು, ಹಿತೈಷಿಗಳು ಆಗಮಿಸಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.

LEAVE A REPLY

Please enter your comment!
Please enter your name here