ʼಅಲ್ಪಸಂಖ್ಯಾತ ಸೇವಾ ಕೇಂದ್ರ ಯಥಾಸ್ಥಿತಿಯಲ್ಲಿ ಉಳಿಸಿ ಉದ್ಘಾಟಿಸಿʼ – ಬೇರೆ ಉದ್ದೇಶಕ್ಕೆ ಬಳಸಿದರೆ ಕಾನೂನು ಹೋರಾಟ – ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಎಚ್ಚರಿಕೆ

0

ಪುತ್ತೂರು: ಬಿಜೆಪಿ ಸರಕಾರದ ಅವಧಿಯಲ್ಲಿ ಪುತ್ತೂರಿನ ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗಾಗಿ ನಿರ್ಮಿಸಲಾಗಿರುವ ದರ್ಬೆಯ ಸಿಟಿ ಗುಡ್ಡೆಯ ಅಲ್ಪಸಂಖ್ಯಾತ ಸಾಮಾನ್ಯ ಸೇವಾ ಕೇಂದ್ರವನ್ನು ಯಥಾಸ್ಥಿತಿಯಲ್ಲಿ ಉಳಿಸಿ, ಶೀಘ್ರ ಉದ್ಘಾಟಿಸಿ ನೈಜ ಸೇವೆಗೆ ನಿಯೋಜಿಸಬೇಕು. ಕಟ್ಟಡವನ್ನು ಬೇರೆ ಉದ್ದೇಶಕ್ಕೆ ಬಳಸಲು ಮುಂದಾದರೆ ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಎಚ್ಚರಿಕೆ ನೀಡಿದೆ.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಅಧ್ಯಕ್ಷ ಟಿ.ಎ. ಸಹನವಾಜ್, ಪುತ್ತೂರಿನ ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗೆ ಬಿಜೆಪಿ ಸರಕಾರದ ಅವಧಿಯಲ್ಲಿ ಹಲವು ಯೋಜನೆಗಳು ಮಂಜೂರಾಗಿವೆ ಎಂದು ಹೇಳಿದರು.


ರೂ. 1.40 ಕೋಟಿ ವೆಚ್ಚದಲ್ಲಿ ನಿರ್ಮಾಣ
ಬಿಜೆಪಿ ಸರಕಾರದ ಅವಧಿಯಲ್ಲಿ ದರ್ಬೆಯ ಸಿಟಿಒ ರಸ್ತೆಯಲ್ಲಿ ಸುಮಾರು ರೂ.1.40 ಕೋಟಿ ವೆಚ್ಚದಲ್ಲಿ 4 ಸಾವಿರ ಚದರ ಅಡಿ ವಿಸ್ತೀರ್ಣದ ಅಲ್ಪಸಂಖ್ಯಾತ ಸಾಮಾನ್ಯ ಸೇವಾ ಕೇಂದ್ರ ನಿರ್ಮಿಸಲಾಗಿದೆ. ಕಟ್ಟಡ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಿದ್ದ ಸಂದರ್ಭದಲ್ಲಿ ಚುನಾವಣೆ ಘೋಷಣೆಯಾಗಿದ್ದರಿಂದ ಉದ್ಘಾಟನೆ ಸಾಧ್ಯವಾಗಲಿಲ್ಲ. ಬಳಿಕವೂ ಕಟ್ಟಡವನ್ನು ಉದ್ಘಾಟಿಸಿ ಸೇವೆಗೆ ಬಳಸದೆ ಕಳೆದ ನಾಲ್ಕು ವರ್ಷಗಳಿಂದ ಪಾಳುಬಿದ್ದ ಸ್ಥಿತಿಯಲ್ಲಿದೆ ಎಂದು ಸಹನವಾಜ್ ಆರೋಪಿಸಿದರು. ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ನಿರ್ಮಿಸಲಾದ ಈ ಕಟ್ಟಡವನ್ನು ಇದೀಗ ಬೇರೆ ಉದ್ದೇಶಕ್ಕೆ ಬಳಸಲು ಮುಂದಾಗಿರುವುದು ವಿಪರ್ಯಾಸ. ಅಲ್ಪಸಂಖ್ಯಾತರಿಗಾಗಿ ನಿರ್ಮಿಸಿರುವ ಕಟ್ಟಡವನ್ನು ಅದೇ ಉದ್ದೇಶಕ್ಕೆ ಬಳಸಬೇಕು ಎಂದು ಅವರು ಒತ್ತಾಯಿಸಿದರು.


ಕಾಂಗ್ರೆಸ್ ಆಡಳಿತದಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯ: ಆರೋಪ
ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ರಫೀಕ್ ದರ್ಬೆ ಅವರು ಮಾತನಾಡಿ ಪುತ್ತೂರಿನ ಇತಿಹಾಸದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಅಗತ್ಯವಾದ ವ್ಯವಸ್ಥಿತ ಕಟ್ಟಡಗಳು ನಿರ್ಮಾಣವಾಗಿರಲಿಲ್ಲ. ಬಿಜೆಪಿ ಸರಕಾರವು ಎಲ್ಲ ಸಮುದಾಯಗಳಿಗೂ ಸಮಾನ ಹಕ್ಕು ಮತ್ತು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹಲವು ಕೋಟಿ ರೂ.ಗಳ ಯೋಜನೆಗಳನ್ನು ಮಂಜೂರು ಮಾಡಿದೆ ಎಂದು ಹೇಳಿದರು. ಮಾಜಿ ಶಾಸಕ ಸಂಜೀವ ಮಠಂದೂರು ಅವರ ಅವಧಿಯಲ್ಲಿ ವಾಜಪೇಯಿ ಅವರ ಅಲ್ಪಸಂಖ್ಯಾತರ ಅಭಿವೃದ್ಧಿಯ ಕನಸಿನ ಭಾಗವಾಗಿ ಸುಮಾರು ರೂ 2.50 ಕೋಟಿ ವೆಚ್ಚದಲ್ಲಿ 2020ರಲ್ಲಿ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಶಾಲೆ ನಿರ್ಮಾಣಗೊಂಡಿದೆ. ಇದರೊಂದಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಯೋಜನೆಗಳನ್ನು ಅಲ್ಪಸಂಖ್ಯಾತರಿಗೆ ತಲುಪಿಸುವ ಉದ್ದೇಶದಿಂದ ಸೇವಾ ಕೇಂದ್ರ ನಿರ್ಮಿಸಲಾಗಿದೆ ಎಂದರು.


ಹಾಸ್ಟೆಲ್ ಮಾಡಿದರೆ ವಿರೋಧ:
ಪುತ್ತೂರಿನ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿ ಬಾಲಕರ ಹಾಗೂ ಬಾಲಕಿಯರ ಹಾಸ್ಟೆಲ್ ನಿರ್ಮಿಸುವಲ್ಲಿ ವಿಫಲವಾಗಿರುವವರು ಬಿಜೆಪಿ ಸರಕಾರ ನಿರ್ಮಿಸಿದ ಸೇವಾ ಕೇಂದ್ರವನ್ನು ಹಾಸ್ಟೆಲ್ ಆಗಿ ಪರಿವರ್ತಿಸಲು ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದ ಮೊಹಮ್ಮದ್ ರಫೀಕ್ ದರ್ಬೆ ಅವರು “ನಿಮಗೆ ತಾಕತ್ತಿದ್ದರೆ ಪುತ್ತೂರಿನ ಅಲ್ಪಸಂಖ್ಯಾತ ಸಮುದಾಯಕ್ಕೆ ಬಾಲಕರ ಮತ್ತು ಬಾಲಕಿಯರ ಎರಡು ಹಾಸ್ಟೆಲ್ ಕಟ್ಟಡ ಹಾಗೂ ಒಂದು ಸಮುದಾಯ ಭವನ ನಿರ್ಮಿಸಿ ತೋರಿಸಿ. ಬಿಜೆಪಿ ಸರಕಾರ ನಿರ್ಮಿಸಿದ ಕಟ್ಟಡದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬೇಡಿ” ಎಂದು ಅವರು ಸವಾಲು ಹಾಕಿದರು. ದರ್ಬೆಯ ಸಿಟಿ ಗುಡ್ಡೆ ಪ್ರದೇಶದಲ್ಲಿ ಈಗಾಗಲೇ ವಾಣಿಜ್ಯ ತೆರಿಗೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಇಲಾಖೆಯ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಪುತ್ತೂರಿನ ಎರಡನೇ ನಗರವಾಗಿ ದರ್ಬೆ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಸೇವಾ ಕೇಂದ್ರವೂ ಈ ಭಾಗದಲ್ಲಿರುವುದು ಸಮುದಾಯದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಹೇಳಿದರು. ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಂಬಲಿಸುತ್ತಾ ಬಂದಿದ್ದರೂ, ಅವರ ಅಭಿವೃದ್ಧಿಗೆ ಅಗತ್ಯವಾದ ವ್ಯವಸ್ಥೆಗಳನ್ನು ಕಲ್ಪಿಸುವಲ್ಲಿ ಕಾಂಗ್ರೆಸ್ ಸರಕಾರ ವಿಫಲವಾಗಿದೆ ಎಂದು ರಫೀಕ್ ದರ್ಬೆ ಆರೋಪಿಸಿದರು.


4 ವರ್ಷದಲ್ಲಿ ಶಾಸಕರ ಕೊಡುಗೆ ಏನು ?
ಬಿಜೆಪಿ ಸರಕಾರ ನಿರ್ಮಿಸಿರುವ ಸೇವಾ ಕೇಂದ್ರದಿಂದ ಅಲ್ಪಸಂಖ್ಯಾತರು ಬಿಜೆಪಿ ಪರ ಒಲವು ತೋರಬಹುದು ಎಂಬ ಆತಂಕ ಕಾಂಗ್ರೆಸ್‌ಗೆ ಇದೆ. ಈಗಿನ ಶಾಸಕರ ನಾಲ್ಕು ವರ್ಷಗಳ ಕೊಡುಗೆ ಏನಿದೆ ಎಂದು ಪ್ರಶ್ನಿಸಿದ ಹಿರೇಬಂಡಾಡಿ ಪಂಚಾಯತ್ ಮಾಜಿ ಅಧ್ಯಕ್ಷ ಸೌಕತ್ ಆಲಿ ಅವರು ಬಿಜೆಪಿ ಸರಕಾರ ನಿರ್ಮಿಸಿದ ಸೇವಾ ಕೇಂದ್ರವನ್ನು ಶೀಘ್ರ ಉದ್ಘಾಟಿಸಿ ಅಲ್ಪಸಂಖ್ಯಾತರ ಬಹು ಉಪಯೋಗಕ್ಕೆ ಮುಕ್ತಗೊಳಿಸಬೇಕು. ಸೇವಾ ಕೇಂದ್ರವನ್ನು ಬೇರೆ ಉದ್ದೇಶಕ್ಕೆ ಬಳಸಲು ಮುಂದಾದರೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಸುಮ್ಮನಿರುವುದಿಲ್ಲ. ಅಗತ್ಯವಿದ್ದರೆ ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎಚ್ಚರಿಸಿದರು. ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫೆಡ್ರಿಕ್ ಪೌಲ್, ಉಪಾಧ್ಯಕ್ಷ ಅಸ್ಗರ್ ಮುಡಿಪು, ಮಾಧ್ಯಮ ಪ್ರಮುಖ್ ರಾಜೇಶ್ ಬನ್ನೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here