







ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಸೇರಿದಂತೆ ವಿವಿಧ ಬೆಳೆಗಳಿಗೆ ಹವಾಮಾನ ಆಧರಿತ ಬೆಳೆ ವಿಮೆ ಪರಿಹಾರ ನಿರೀಕ್ಷಿತ ಪ್ರಮಾಣಕ್ಕಿಂತ ಕಡಿಮೆಯಾಗಿರುವ ಕುರಿತು ರೈತರಲ್ಲಿ ಅಸಮಾಧಾನ ಹಾಗೂ ಹಲವು ಪ್ರಶ್ನೆಗಳು ಮೂಡಿವೆ. ಈ ಪ್ರಶ್ನೆಗಳಿಗೆ ರಾಜಕೀಯ ಆರೋಪ-ಪ್ರತ್ಯಾರೋಪಗಳ ಮೂಲಕ ಉತ್ತರ ನೀಡುವ ಬದಲು, ಬೆಳೆ ವಿಮಾ ವ್ಯವಸ್ಥೆಯ ಪ್ರತಿಯೊಂದು ಹಂತವನ್ನೂ ಪರಿಶೀಲಿಸಿ ವಾಸ್ತವಾಂಶಗಳನ್ನು ರೈತರ ಮುಂದಿಡಬೇಕು ಎಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಒತ್ತಾಯಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಕೃಷಿಕ ಪರವಾದ ಮಹತ್ವದ ಯೋಜನೆಯಾಗಿದೆ. ಯೋಜನೆ ಪರಿಣಾಮಕಾರಿಯಾಗಿ ಮುಂದುವರಿಯಬೇಕಾದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು, ವಿಮಾ ಸಂಸ್ಥೆಗಳು ಹಾಗೂ ರೈತ ಪ್ರತಿನಿಧಿಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.


ಪರಿಹಾರ ಮೊತ್ತದಲ್ಲಿ ಭಾರೀ ವ್ಯತ್ಯಾಸ
2016ರಲ್ಲಿ ಯೋಜನೆ ಜಾರಿಯಾದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ರೈತರಿಗೆ ಹಲವು ವರ್ಷಗಳಲ್ಲಿ ಉತ್ತಮ ಪ್ರಮಾಣದ ಬೆಳೆ ವಿಮೆ ಪರಿಹಾರ ದೊರೆತಿದೆ. ರೈತರಿಂದ ಲಭ್ಯವಾಗುತ್ತಿರುವ ಮಾಹಿತಿಯ ಪ್ರಕಾರ, 2018ರಲ್ಲಿ ಹೆಕ್ಟೇರ್ಗೆ ಸರಾಸರಿ ಸುಮಾರು 1.28 ಲಕ್ಷ, 2020-21ರಲ್ಲಿ ರೂ. 60 ಸಾವಿರದಿಂದ ರೂ90 ಸಾವಿರ ಹಾಗೂ 2023ರವರೆಗೆ ಸುಮಾರು ರೂ.70 ಸಾವಿರದಷ್ಟು ಪರಿಹಾರ ದೊರೆತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಹಲವು ಪ್ರದೇಶಗಳಲ್ಲಿ ಸರಾಸರಿ ಸುಮಾರು ರೂ.20 ಸಾವಿರದಷ್ಟೇ ಪರಿಹಾರ ದೊರೆಯುತ್ತಿದೆ ಎಂಬ ಅಸಮಾಧಾನ ರೈತರಲ್ಲಿದೆ. ಈ ವ್ಯತ್ಯಾಸಕ್ಕೆ ಕಾರಣವೇನು ಎಂಬುದನ್ನು ಸರಕಾರ ಮತ್ತು ವಿಮಾ ಸಂಸ್ಥೆಗಳು ದಾಖಲೆ ಸಹಿತವಾಗಿ ಸ್ಪಷ್ಟಪಡಿಸಬೇಕು ಎಂದು ಪುತ್ತಿಲ ಆಗ್ರಹಿಸಿದ್ದಾರೆ.



ಟರ್ಮ್ಶೀಟ್ ಬದಲಾವಣೆಗಳ ಬಗ್ಗೆ ಸ್ಪಷ್ಟನೆ ಅಗತ್ಯ
೨೦೨೩ರ ಬಳಿಕ ವಿಮಾ ಟರ್ಮ್ಶೀಟ್ನ ಕೆಲವು ಮಾನದಂಡಗಳಲ್ಲಿ ಬದಲಾವಣೆಗಳಾಗಿವೆ ಎಂಬ ಮಾತುಗಳು ರೈತರ ವಲಯದಲ್ಲಿ ಕೇಳಿಬರುತ್ತಿವೆ. ಹಿಂದಿನ ವರ್ಷಗಳ ಮಳೆ ಪ್ರಮಾಣ ಮತ್ತು ಪರಿಹಾರ ಲೆಕ್ಕಾಚಾರದ ಮಾನದಂಡಗಳಿಗೆ ಹೋಲಿಸಿದರೆ ಪ್ರಸ್ತುತ ನಿಯಮಗಳಲ್ಲಿ ಏನಾದರೂ ಬದಲಾವಣೆಗಳಿವೆಯೇ ಎಂಬುದನ್ನು ರಾಜ್ಯ ಸರ್ಕಾರ ಹಾಗೂ ವಿಮಾ ಸಂಸ್ಥೆಗಳು ಸ್ಪಷ್ಟಪಡಿಸಬೇಕು.ವಿಶೇಷವಾಗಿ ಮಳೆಯ ಪ್ರಮಾಣವನ್ನು ಅಳೆಯುವ ವಿಧಾನ, ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಮಳೆಯನ್ನು ಪರಿಗಣಿಸುವ ಮಾನದಂಡ ಹಾಗೂ ಅದರ ಆಧಾರದ ಮೇಲೆ ಪರಿಹಾರ ನಿಗದಿಪಡಿಸುವ ಪ್ರಕ್ರಿಯೆಯನ್ನು ರೈತರಿಗೆ ಸರಳವಾಗಿ ವಿವರಿಸಬೇಕು. ಇದು ಸರ್ಕಾರದ ವಿರುದ್ಧದ ಆರೋಪವಲ್ಲ; ಪರಿಹಾರ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರೈತರಲ್ಲಿ ಮೂಡಿರುವ ಅನುಮಾನಗಳಿಗೆ ಅಧಿಕೃತ ಉತ್ತರ ನೀಡಬೇಕೆಂಬ ಒತ್ತಾಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದ ವಿಮಾ ಕಂತಿನ ಪಾವತಿ ಬಗ್ಗೆಯೂ ಮಾಹಿತಿ ಬಹಿರಂಗವಾಗಲಿ
ವಿಮಾ ಕಂತಿನಲ್ಲಿ ರೈತರು, ಕೇಂದ್ರ ಮತ್ತು ರಾಜ್ಯ ಸರಕಾರಗಳ ಪಾಲಿನ ಪ್ರಮಾಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬದಲಾವಣೆಗಳಾಗಿದ್ದರೆ ಅದರ ಸಂಪೂರ್ಣ ವಿವರವನ್ನು ಸರಕಾರ ಪ್ರಕಟಿಸಬೇಕು. ರಾಜ್ಯ ಸರ್ಕಾರದ ಪಾಲಿನ ವಿಮಾ ಕಂತು ನಿಗದಿತ ಅವಧಿಯಲ್ಲಿ ಪಾವತಿಯಾಗಿದೆಯೇ, ಪಾವತಿಯಲ್ಲಿ ವಿಳಂಬವಾಗಿದ್ದರೆ ಅದರ ಪರಿಣಾಮ ಪರಿಹಾರ ವಿತರಣೆಯ ಮೇಲೆ ಬೀರಿದೆಯೇ ಎಂಬುದನ್ನೂ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಟಾಟಾ ಎಐಜಿ ಟೆಂಡರ್ ವಿಸ್ತರಣೆಯೂ ಪಾರದರ್ಶಕವಾಗಲಿ
ಟಾಟಾ ಎಐಜಿ ವಿಮಾ ಸಂಸ್ಥೆಗೆ ನೀಡಲಾಗಿದ್ದ ಟೆಂಡರ್ ಅವಧಿ ಪೂರ್ಣಗೊಂಡ ಬಳಿಕವೂ ಅದರ ಅವಧಿಯನ್ನು ವಿಸ್ತರಿಸಲಾಗಿದ್ದರೆ, ಅದರ ಆಡಳಿತಾತ್ಮಕ ಹಾಗೂ ಕಾನೂನುಬದ್ಧ ಆಧಾರವೇನು ಎಂಬುದನ್ನು ಸರಕಾರ ಬಹಿರಂಗಪಡಿಸಬೇಕು. ಹೊಸ ಟೆಂಡರ್ ಪ್ರಕ್ರಿಯೆ ಏಕೆ ನಡೆಯಲಿಲ್ಲ ಅಥವಾ ವಿಸ್ತರಣೆ ಯಾವ ನಿಯಮದಡಿ ಮಾಡಲಾಗಿದೆ ಎಂಬುದನ್ನೂ ಸಾರ್ವಜನಿಕರಿಗೆ ತಿಳಿಸಬೇಕು. ಸರಕಾರ ಮತ್ತು ವಿಮಾ ಸಂಸ್ಥೆಯ ನಡುವಿನ ಹಣಕಾಸು ಹಾಗೂ ಆಡಳಿತಾತ್ಮಕ ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಾರ್ವಜನಿಕಗೊಳಿಸುವ ಮೂಲಕ ಯಾವುದೇ ಅನುಮಾನಗಳಿಗೆ ಅವಕಾಶವಿಲ್ಲದಂತೆ ನೋಡಿಕೊಳ್ಳಬೇಕು. ಯಾವುದೇ ಅಕ್ರಮ ನಡೆದಿದೆ ಎಂದು ಹೇಳುತ್ತಿಲ್ಲ; ಆದರೆ ರೈತರಲ್ಲಿ ಅನುಮಾನ ಮೂಡದಂತೆ ಸರ್ಕಾರ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಪುತ್ತಿಲ ಹೇಳಿದ್ದಾರೆ.
ಗ್ರಾಮವಾರು ಮಳೆ ದಾಖಲೆ ಪರಿಶೀಲಿಸಲಿ;
ಹವಾಮಾನ ಆಧರಿತ ಬೆಳೆ ವಿಮೆಯಲ್ಲಿ ಗ್ರಾಮ ಮಟ್ಟದ ಹವಾಮಾನ ದಾಖಲೀಕರಣ ಅತ್ಯಂತ ಮಹತ್ವದ್ದಾಗಿದೆ. ಕಳೆದ ವರ್ಷ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ಕೆಲವು ಪ್ರದೇಶಗಳಲ್ಲಿ ವಾರ್ಷಿಕ ಮಳೆ ಸುಮಾರು 5,೦೦೦ ಮಿ.ಮೀ. ಆಸುಪಾಸಿನಲ್ಲಿತ್ತು. ಇಂತಹ ಸಂದರ್ಭದಲ್ಲಿ ರೈತರು ಹೆಚ್ಚಿನ ಪ್ರಮಾಣದ ವಿಮೆ ಪರಿಹಾರದ ನಿರೀಕ್ಷೆಯಲ್ಲಿದ್ದರು. ಆದರೆ ಅನೇಕ ಕಡೆ ನಿರೀಕ್ಷೆಗಿಂತ ಕಡಿಮೆ ಪರಿಹಾರ ದೊರೆತಿರುವುದರಿಂದ ಗ್ರಾಮವಾರು ವಾಸ್ತವ ಮಳೆ ಪ್ರಮಾಣ ಹಾಗೂ ವಿಮಾ ಲೆಕ್ಕಾಚಾರಕ್ಕೆ ಬಳಸಲಾದ ಅಧಿಕೃತ ಮಳೆ ಪ್ರಮಾಣ ಒಂದೇ ಆಗಿದೆಯೇ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ. ಹವಾಮಾನ ದಾಖಲೀಕರಣ ಯಂತ್ರಗಳ ಕಾರ್ಯನಿರ್ವಹಣೆಯಲ್ಲಿ ಕಳೆದ ವರ್ಷ ಎದುರಾದ ಸಮಸ್ಯೆಗಳು ಸಂಪೂರ್ಣವಾಗಿ ಪರಿಹಾರವಾಗಿವೆಯೇ, ಪ್ರತಿಯೊಂದು ಗ್ರಾಮದಲ್ಲಿಯೂ ನಿರಂತರವಾಗಿ ದತ್ತಾಂಶ ದಾಖಲಾಗುತ್ತಿದೆಯೇ ಎಂಬುದನ್ನು ಸರ್ಕಾರ ಖಚಿತಪಡಿಸಬೇಕು ಎಂದು ಅವರು ಹೇಳಿದ್ದಾರೆ.
ಸ್ಥಳೀಯ ಸಂಸ್ಥೆಗಳಿಗೂ ನಿರ್ವಹಣಾ ಹೊಣೆ
ಹವಾಮಾನ ದಾಖಲೀಕರಣ ಯಂತ್ರಗಳನ್ನು ಅಳವಡಿಸುವುದಷ್ಟೇ ಸಾಕಾಗುವುದಿಲ್ಲ. ಅವುಗಳ ನಿರಂತರ ನಿರ್ವಹಣೆ ಮತ್ತು ದಾಖಲಾಗುವ ದತ್ತಾಂಶದ ವಿಶ್ವಾಸಾರ್ಹತೆಯೂ ಮುಖ್ಯ. ಆದ್ದರಿಂದ ಗ್ರಾಮ ಪಂಚಾಯಿತಿಗಳು, ಸಹಕಾರ ಸಂಘಗಳು ಅಥವಾ ವಿಶ್ವಾಸಾರ್ಹ ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ವ್ಯವಸ್ಥೆಯನ್ನು ನಿರ್ವಹಿಸುವ ಬಗ್ಗೆ ಸರಕಾರ ಚಿಂತಿಸಬೇಕು ಎಂದು ಸಲಹೆ ನೀಡಿದ್ದಾರೆ. ಪ್ರತಿ ತಾಲೂಕು ಮಟ್ಟದಲ್ಲೂ ಬೆಳೆ ವಿಮೆಗೆ ಸಂಬಂಧಿಸಿದ ರೈತರ ಪ್ರಶ್ನೆಗಳಿಗೆ ಉತ್ತರಿಸುವ ಸಮಿತಿ ಸಕ್ರಿಯವಾಗಬೇಕು. ಗ್ರಾಮವಾರು ಮಳೆ ದಾಖಲೆ, ವಿಮಾ ವ್ಯಾಪ್ತಿ, ಪರಿಹಾರ ಲೆಕ್ಕಾಚಾರ ಹಾಗೂ ತಿರಸ್ಕೃತ ಪ್ರಕರಣಗಳ ಮಾಹಿತಿಯನ್ನು ಈ ಸಮಿತಿಯ ಬಳಿ ಲಭ್ಯವಾಗುವಂತೆ ಮಾಡಬೇಕು ಎಂದಿದ್ದಾರೆ.
ವಿಮಾ ಮಾಹಿತಿಯನ್ನು ಸಾರ್ವಜನಿಕಗೊಳಿಸುವುದು ಅಗತ್ಯ:
ಗ್ರಾಮವಾರು ಮಳೆ ದಾಖಲೆ, ವಿಮಾ ಘಟಕ, ಟರ್ಮ್ಶೀಟ್ನ ಪ್ರಮುಖ ಮಾನದಂಡಗಳು, ಅರ್ಹ ರೈತರ ಸಂಖ್ಯೆ, ಪರಿಹಾರ ಲೆಕ್ಕಾಚಾರದ ವಿಧಾನ ಹಾಗೂ ಪಾವತಿಸಲಾದ ಮೊತ್ತದ ವಿವರಗಳನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಬೇಕು. ಹವಾಮಾನ ದಾಖಲೆಗಳನ್ನು ಪಡೆಯಲು ಹೆಚ್ಚಿನ ಮೊತ್ತ ಪಾವತಿಸಬೇಕಾದ ಪರಿಸ್ಥಿತಿ ಇದ್ದರೆ, ಸರಕಾರ ಅಥವಾ ಸಹಕಾರ ಕ್ಷೇತ್ರದ ಮೂಲಕ ರೈತರಿಗೆ ಕಡಿಮೆ ವೆಚ್ಚದಲ್ಲಿ ದಾಖಲೆಗಳನ್ನು ಒದಗಿಸುವ ವ್ಯವಸ್ಥೆ ರೂಪಿಸಬೇಕು. ಸ್ಥಳೀಯ ರೈತರು ಅಥವಾ ಸಂಘ-ಸಂಸ್ಥೆಗಳು ದಾಖಲಿಸುವ ಮಳೆ ಪ್ರಮಾಣವನ್ನು ಅಧಿಕೃತ ದಾಖಲೆಗಳೊಂದಿಗೆ ಹೋಲಿಕೆ ಮಾಡುವ ವ್ಯವಸ್ಥೆಯನ್ನೂ ರೂಪಿಸಬಹುದು. ದೊಡ್ಡ ಪ್ರಮಾಣದ ವ್ಯತ್ಯಾಸ ಕಂಡುಬಂದಲ್ಲಿ ಪರಿಶೀಲನೆ ಹಾಗೂ ದೂರು ಸಲ್ಲಿಸಲು ರೈತರಿಗೆ ಅವಕಾಶ ನೀಡಬೇಕು ಎಂದು ಪುತ್ತಿಲ ಹೇಳಿದ್ದಾರೆ.
ರಾಜಕೀಯಕ್ಕಿಂತ ವ್ಯವಸ್ಥೆಯ ಸುಧಾರಣೆಗೆ ಆದ್ಯತೆ
ರೈತರ ಅಸಮಾಧಾನವನ್ನು ರಾಜಕೀಯವಾಗಿ ಬಳಸಿಕೊಳ್ಳುವುದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ. ಅದೇ ರೀತಿ ಯಾವುದೇ ಸರಕಾರ ಅಥವಾ ವಿಮಾ ಸಂಸ್ಥೆಯ ವಿರುದ್ಧ ಪರಿಶೀಲನೆಯಿಲ್ಲದೆ ಆರೋಪ ಮಾಡುವುದು ಕೂಡ ಸರಿಯಲ್ಲ. ವಾಸ್ತವಾಂಶಗಳು ಬಹಿರಂಗವಾಗಬೇಕು, ದಾಖಲೆಗಳು ಸಾರ್ವಜನಿಕವಾಗಬೇಕು, ನಿಯಮಗಳು ಸ್ಪಷ್ಟವಾಗಬೇಕು, ಹವಾಮಾನ ದಾಖಲೀಕರಣ ನಿಖರವಾಗಬೇಕು ಹಾಗೂ ಪರಿಹಾರ ಲೆಕ್ಕಾಚಾರ ಪಾರದರ್ಶಕವಾಗಬೇಕು ಎಂಬುದೇ ಮುಖ್ಯ ಎಂದು ಅವರು ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಸೇರಿದಂತೆ ಎಲ್ಲ ಬೆಳೆಗಾರರಿಗೆ ನ್ಯಾಯಯುತ ಬೆಳೆ ವಿಮೆ ಪರಿಹಾರ ದೊರೆಯುವಂತೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಕಳೆದ ವರ್ಷದ ಭಾರೀ ಮಳೆಯ ಹಿನ್ನೆಲೆಯಲ್ಲಿ ಗ್ರಾಮವಾರು ಹವಾಮಾನ ದಾಖಲೆಗಳು ಹಾಗೂ ಪರಿಹಾರ ಲೆಕ್ಕಾಚಾರವನ್ನು ಮರುಪರಿಶೀಲಿಸಿ, ಯಾವುದೇ ತಾಂತ್ರಿಕ ಅಥವಾ ಆಡಳಿತಾತ್ಮಕ ಲೋಪ ಕಂಡುಬಂದರೆ ಸರಿಪಡಿಸಬೇಕು ಎಂದು ಅರುಣ್ ಕುಮಾರ್ ಪುತ್ತಿಲ ಆಗ್ರಹಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಈ ವಿಚಾರದಲ್ಲಿ ರೈತರ ಪರವಾಗಿ ಸರ್ಕಾರದ ಗಮನ ಸೆಳೆದು, ಅಗತ್ಯ ಮಾಹಿತಿಯನ್ನು ಬಹಿರಂಗಪಡಿಸುವಂತೆ ಒತ್ತಾಯಿಸಬೇಕು. ಬೆಳೆ ವಿಮೆ ರಾಜಕೀಯ ಆರೋಪ-ಪ್ರತ್ಯಾರೋಪಗಳ ವಿಷಯವಾಗದೆ, ರೈತರ ಹಿತ ಕಾಪಾಡುವ ಪಾರದರ್ಶಕ ಮತ್ತು ವೈಜ್ಞಾನಿಕ ವ್ಯವಸ್ಥೆಯಾಗಿ ಬಲಪಡಿಸಬೇಕು.
ಅರುಣ್ ಕುಮಾರ್ ಪುತ್ತಿಲ










