







ಪುತ್ತೂರು:ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದ ಪಡುಬಿದ್ರೆ ನಿವಾಸಿ ಯುವಕನೋರ್ವ ಮಲಗಿದ್ದ ಸ್ಥಿತಿಯಲ್ಲಿಯೇ ಅನುಮಾನಾಸ್ಪವಾಗಿ ಮೃತಪಟ್ಟಿರುವುದು ಅ.7ರಂದು ಸಂಜೆ ವೇಳೆ ಬೆಳಕಿಗೆ ಬಂದಿದೆ.
ಪಡುಬಿದ್ರಿ ನಿವಾಸಿ ವಿನೀಶ್ ಮೃತಪಟ್ಟವರು ಎಂದು ಗುರುತಿಸಲಾಗಿದೆ.


ಮಂಗಳೂರಿನ ಆಡಿಟಿಂಗ್ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿರುವ ವಿನೇಶ್ ಅವರು ದರ್ಬೆ ಜಿನಸು ಸಾಮಾಗ್ರಿಗಳ ಮಳಿಗೆಯೊಂದರಲ್ಲಿ ಕಳೆದ ಸುಮಾರು ಕೆಲ ತಿಂಗಳುಗಳಿಂದ ಆಡಿಟಿಂಗ್ ಕೆಲಸ ನಿರ್ವಹಿಸುತ್ತಿದ್ದು ಎಪಿಎಂಸಿ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಇದ್ದರು. ಅವಿವಾಹಿತರಾಗಿದ್ದ ಅವರು ಒಬ್ಬಂಟಿಯಾಗಿ ವಾಸ್ತವ್ಯ ಇದ್ದರು.



ಅ. 6ರಂದು ಸಂಜೆ ಎಂದಿನಂತೆ ಕೆಲಸ ಮುಗಿಸಿ ರೂಂಗೆ ತೆರಳಿದ್ದ ಅವರು ಅ.7ರಂದು ಕೆಲಸಕ್ಕೆ ಬಂದಿರಲಿಲ್ಲ.ಎಷ್ಟೇ ಕರೆ ಮಾಡಿದರೂ ಅವರ ಕರೆ ಸ್ವೀಕರಿಸುತ್ತಿರಲಿಲ್ಲ. ಮಧ್ಯಾಹ್ನ ಊಟಕ್ಕೆ ತೆರಳುವ ಸಮಯದಲ್ಲಿ ಅವರ ಜೊತೆಗೆ ಕೆಲಸ ಮಾಡುತ್ತಿದ್ದ ಸಂಗಡಿಗರು ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ.ಅನುಮಾನಗೊಂಡ ಅವರು ಬಾಡಿಗೆ ಮನೆಯ ಬಾಗಿಲ ಬಳಿ ಬಂದಾಗ ಮನೆಗೆ ಒಳಗಿನಿಂದ ಚಿಲಕ ಹಾಕಿತ್ತು. ಅಲ್ಲಿಂದ ಅವರ ಮೊಬೈಲ್ಗೆ ಕರೆ ಮಾಡಿದಾಗ ಮೊಬೈಲ್ ಮನೆಯೊಳಗೆ ರಿಂಗ್ ಅಗುವ ಶಬ್ದ ಕೇಳುತ್ತಿದ್ದರೂ ಕರೆ ಸ್ವೀಕರಿಸಲಿಲ್ಲ.
ಬಳಿಕ ಮನೆಯ ಸ್ಲಾಬ್ ನ ಇನ್ಫುಲೇಟರ್ ಮೂಲಕ ಮೊಬೈಲ್ ನಲ್ಲಿ ವೀಡಿಯೋ ಚಿತ್ರೀಕರಣ ಮಾಡಿ ನೋಡಿದಾಗ ವಿನೇಶ್ ಅವರು ಮೃತಪಟ್ಟಿರುವ ಸ್ಥಿತಿಯಲ್ಲಿರುವುದು ಕಂಡು ಬಂದಿತ್ತು. ನಂತರ ಅವರು ಪೊಲೀಸರು ಹಾಗೂ ಮನೆಯವರಿಗೆ ಮಾಹಿತಿ ನೀಡಿ, ಅವರು ಸ್ಥಳಕ್ಕೆ ಆಗಮಿಸಿದ ಬಳಿಕ ಬಾಗಿಲು ಒಡೆದು ನೋಡಿದಾಗ ವಿನೇಶ್ ಅವರು ಮೃತ ಪಟ್ಟಿರುವುದು ಕಂಡುಬಂದಿದೆ ಎಂದು ತಿಳಿದು ಬಂದಿದೆ.ಹೆಚ್ಚಿನ ಮಾಹಿತಿ ಇನ್ನಷ್ಟೆ ಲಭಿಸಬೇಕಾಗಿದೆ.










