







ಪುತ್ತೂರು: ನಿವೃತ್ತ ಕನ್ನಡ ಪ್ರಾಧ್ಯಾಪಕ, ಲೇಖಕ, ಅಂಕಣಕಾರ, ಪರಿಸರಾಸಕ್ತರು ಹಾಗೂ ಕೃಷಿಕ ಡಾ. ನರೇಂದ್ರ ರೈ ದೇರ್ಲ ಅವರಿಗೆ ಪ್ರತಿಷ್ಠಿತ ಕಾಂತಾವರ ಕನ್ನಡ ಸಂಘದ 2026ನೇ ಸಾಲಿನ ಮೊಗಸಾಲೆ ಪ್ರಶಸ್ತಿ ಪ್ರಕಟವಾಗಿದೆ.


10,000 ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುವ ಪ್ರಶಸ್ತಿಯನ್ನು ನ.1ರಂದು ಕಾಂತಾವರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಹಿರಿಯ ಜಾನಪದ ಸಂಶೋಧಕ ಡಾ. ಚಿನ್ನಪ್ಪ ಗೌಡ ಅವರಿಗೆ ಮಹೋಪಾಧ್ಯಾಯ ಪ್ರಶಸ್ತಿ ಸೇರಿದಂತೆ ಇನ್ನೂ ಐವರು ಸಾಧಕರಿಗೆ ವಿವಿಧ ಪ್ರಶಸ್ತಿ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ನಾ. ಮೊಗಸಾಲೆ ತಿಳಿಸಿದ್ದಾರೆ.



ಡಾ. ದೇರ್ಲ ಅವರು ‘ತರಂಗ’ ವಾರಪತ್ರಿಕೆಯಲ್ಲಿ ಏಳು ವರ್ಷ ಸಹ ಸಂಪಾದಕರಾಗಿ, ಸರ್ಕಾರಿ ಪದವಿ ಕಾಲೇಜುಗಳಲ್ಲಿ 28 ವರ್ಷ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಪ್ರಸ್ತುತ ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ನಿರ್ದೇಶಕರಾಗಿದ್ದಾರೆ. ಮಂಗಳೂರು ವಿವಿಯಿಂದ ‘ಕನ್ನಡ ಸಾಹಿತ್ಯದಲ್ಲಿ ಬೇಟೆ ಪರಿಕಲ್ಪನೆ’ ವಿಷಯದಲ್ಲಿ ಪಿಎಚ್.ಡಿ ಪಡೆದಿದ್ದಾರೆ.

1,200ಕ್ಕೂ ಹೆಚ್ಚು ನುಡಿಚಿತ್ರಗಳು, 50ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದು, ಅವರ 24 ಕೃಷಿ-ಪರಿಸರ ಬರಹಗಳು ಶಾಲಾ-ಪದವಿ ಪಠ್ಯಗಳಲ್ಲಿ ಸೇರಿವೆ. ‘ಪ್ರಜಾವಾಣಿ’ಯಲ್ಲಿ ‘ಅಜ್ಜನ ಜಗಲಿ’, ‘ವಿಜಯವಾಣಿ’ಯಲ್ಲಿ ‘ಹಸಿರು ಉಸಿರು’ ಸೇರಿದಂತೆ ಹಲವು ಅಂಕಣಗಳನ್ನು ಬರೆದಿದ್ದಾರೆ.
‘ತೇಜಸ್ವಿ ಪತ್ರಗಳು’ ಸೇರಿದಂತೆ ‘ಹಸಿರು-ಉಸಿರು’, ‘ನೆಲಮುಖಿ’, ‘ನೆಲದವರು’, ‘ಬೀಜಧ್ಯಾನ’ ಮೊದಲಾದವು ಅವರ ಪ್ರಮುಖ ಕೃತಿಗಳು. ‘ಹಸಿರು-ಉಸಿರು’ ಕೃತಿಗೆ ಕೃಷಿ ವಿವಿ ಪ್ರಶಸ್ತಿ, ‘ನೆಲಮುಖಿ’ಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಕರ್ನಾಟಕ ಕೃಷಿ ಕಥನ ಮಾಲಿಕೆ ಮೂಲಕ ರೈತರ ಬದುಕನ್ನು ದಾಖಲಿಸುತ್ತಿದ್ದಾರೆ. ಈವರೆಗೆ ಸಾಹಿತ್ಯ ಅಕಾಡೆಮಿ, ಪರಿಸರ ಪತ್ರಿಕೋದ್ಯಮ, ಕುವೆಂಪು ಭಾಷಾ ಭಾರತಿ ಅನುವಾದ, ಫ.ಗೋ. ಪತ್ರಿಕೋದ್ಯಮ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.










