







ನೆಲ್ಯಾಡಿ: ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರವು ವಿದ್ಯಾರ್ಥಿಗಳಲ್ಲಿ ಜೀವನ ಮೌಲ್ಯಗಳನ್ನು ಬೆಳೆಸುವುದರೊಂದಿಗೆ ಸ್ವಾರ್ಥ ಮನೋಭಾವದಿಂದ ಸೇವಾ ಮನೋಭಾವದ ಕಡೆಗೆ ಪರಿವರ್ತನೆಯಾಗಲು ಉತ್ತಮ ಅವಕಾಶವಾಗಿದೆ ಎಂದು ನೆಲ್ಯಾಡಿ ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್ ಹೇಳಿದರು.


ಅವರು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕದ ವತಿಯಿಂದ ’ನಶಾಮುಕ್ತ ಭಾರತ ಅಭಿಯಾನ’ದ ಘೋಷವಾಕ್ಯದೊಂದಿಗೆ ಹೊಸಮಜಲು ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ವಾರ್ಷಿಕ ವಿಶೇಷ ಶಿಬಿರವನ್ನು ಅ.೮ರಂದು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಚಾಲಕ ರೆ.ಫಾ.ನೋಮಿಸ್ ಪಿ. ಕುರಿಯಾಕೊಸ್ ಅವರು ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಇಂತಹ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಹಲವು ಜೀವನ ಪಾಠಗಳನ್ನು ಕಲಿಯುವುದರೊಂದಿಗೆ ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೇರಲು ಸಹಕಾರಿಯಾಗುತ್ತದೆ ಎಂದರು. ಹೊಸಮಜಲು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಬಾಣಜಾಲು, ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ಸಂತಜಾರ್ಜ್ ಪದವಿಪೂರ್ವ ಕಾಲೇಜಿನ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುರಳಿ ಎಚ್., ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಡಬ ತಾಲೂಕು ಸ್ಥಾಪಕಾಧ್ಯಕ್ಷ ಮಹೇಶ್ ಕೆ. ಸವಣೂರು, ಕಡಬ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ವಿಮಲ್ ಕುಮಾರ್, ಹೊಸಮಜಲು ಶಾಲೆಯ ಮುಖ್ಯಶಿಕ್ಷಕಿ ವೀಣಾ ಮಸ್ಕರೇನಸ್, ಕಾಲೇಜಿನ ಪ್ರಾಚಾರ್ಯ ಏಲಿಯಾಸ್ ಎಂ.ಕೆ. ಅವರು ಸಂದರ್ಭೋಚಿತವಾಗಿ ಮಾತನಾಡಿ, ಶುಭ ಹಾರೈಸಿದರು.



ಎನ್‌ಎಸ್‌ಎಸ್ ಘಟಕ ನಾಯಕರಾದ ರಕ್ಷಿತ್, ಅಶ್ವಿನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು ವಿದ್ಯಾರ್ಥಿಗಳು ಎನ್‌ಎಸ್‌ಎಸ್ ಧ್ಯೇಯಗೀತೆಯನ್ನು ಹಾಡಿದರು. ಸಂಸ್ಥೆಯ ಕನ್ನಡ ಉಪನ್ಯಾಸಕಿ ಸವಿತಾ ಸ್ವಾಗತಿಸಿದರು. ಶಿಬಿರಾಧಿಕಾರಿ ಹಾಗೂ ಉಪನ್ಯಾಸಕ ವಿಶ್ವನಾಥ ಶೆಟ್ಟಿ ಕೆ. ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯ ಉಪನ್ಯಾಸಕಿ ಗೀತಾ ವಂದಿಸಿದರು.










