ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲಿ IEEE ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ

0


ಪುತ್ತೂರು: ಭಾರತವು ವಿಶ್ವದಲ್ಲಿಯೇ IEEE ಯ ಅತ್ಯಂತ ವೇಗವಾಗಿ ಬೆಳೆಯುವ ವಿಭಾಗವಾಗಿದ್ದು, ವೃತ್ತಿಪರ ಸಂಪರ್ಕ ಜಾಲವನ್ನು ವಿಸ್ತರಿಸಿಕೊಳ್ಳುವ ದೃಷ್ಟಿಯಿಂದ ಒಂದಲ್ಲ ಒಂದು ರೀತಿಯಲ್ಲಿ ಇದರ ಭಾಗವಾಗುವುದು ಮಹತ್ವದ ವಿಚಾರ ಎಂದು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಸೆಂಟರ್ ಆಫ್ ನ್ಯಾನೋ ಸೈನ್ಸಸ್ ಎಂಡ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಡಾ.ನವಕಾಂತ ಭಟ್ ಹೇಳಿದರು.


ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ, IEEE ಬೆಂಗಳೂರು ವಿಭಾಗ ಮತ್ತು IEEE ಮಂಗಳೂರು ಉಪವಿಭಾಗ ಇದರ ಸಂಯುಕ್ತ ಆಶ್ರಯದಲ್ಲಿ ಡಿಸ್ಟ್ರಿಬ್ಯೂಟೆಡ್ ಕಂಪ್ಯೂಟಿಂಗ್, ವಿಎಲ್‌ಎಸ್‌ಐ, ಇಲೆಕ್ಟ್ರಿಕಲ್ ಸರ್ಕ್ಯೂಟ್ಸ್ ಮತ್ತು ರೊಬೋಟಿಕ್ಸ್ ವಿಷಯಗಳನ್ನೊಳಗೊಂಡ IEEE ಅಂತಾರಾಷ್ಟ್ರೀಯ ಸಮ್ಮೇಳನ ಡಿಸ್ಕವರ್ 2026ಕ್ಕೆ ಚಾಲನೆ ನೀಡಿ ಮಾತಾಡಿದರು. ಇದು ಭವಿಷ್ಯದ ತಂತ್ರಜ್ಞಾನ ನಿರೂಪಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದ್ದು, ತಂತ್ರಜ್ಞರು ಇದರ ಭಾಗವಾಗುವುದರಿಂದ ವಿಶ್ವದಾದ್ಯಂತ ಇರುವ ತಂತ್ರಜ್ಞಾನ ಕ್ಷೇತ್ರದ ಪರಿಣತರೊಂದಿಗೆ ಸಂಪರ್ಕ ಬೆಳೆಸಲು, ಅಗತ್ಯವಾದ ತಾಂತ್ರಿಕ ಮಾಹಿತಿಯನ್ನು ಪಡೆಯಲು, ತಮ್ಮ ವೃತ್ತಿ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.


ಗೌರವ ಅತಿಥಿಗಳಾಗಿದ್ದ ಟಿಸಿಎಸ್ ಸಂಸ್ಥೆಯ ಹಿರಿಯ ವಿಜ್ಞಾನಿ ಹಾಗೂ IEEE ಬೆಂಗಳೂರು ವಿಭಾಗದ ಮುಖ್ಯಸ್ಥ ಡಾ. ಪ್ರಶಾಂತ್ ಮಿಶ್ರ ಮಾತನಾಡಿ ತಾಂತ್ರಿಕ ಸಮುದಾಯಗಳ ನಿರ್ಮಾಣ, ಸಮ್ಮೇಳನಗಳು ಮತ್ತು ಮಾನದಂಡಗಳಿಂದ IEEE ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದೆ ಎಂದರು. ಇದರ ಬೆಂಗಳೂರು ವಿಭಾಗಕ್ಕೆ 50 ವರ್ಷಗಳ ಸಂಭ್ರಮ ಮತ್ತು ಮಂಗಳೂರು ಉಪವಿಭಾಗಕ್ಕೆ 10ರ ಸಡಗರ ಹಾಗಾಗಿ ಈ ಸಮ್ಮೇಳನವು ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ ಎಂದರು. 50 ವರ್ಷಗಳ ಸಂಭ್ರಮದಲ್ಲಿ ಮಿಶನ್-31 ಎನ್ನುವ ಯೋಜನೆಯನ್ನು ರೂಪಿಸಲಾಗಿದ್ದು ಕರ್ನಾಟಕದ ಎಲ್ಲಾ 31 ಜಿಲ್ಲೆಗಳನ್ನು IEEE ಯ ಭಾಗವಾಗಿಸುವುದು ಇದರ ಉದ್ದೇಶ ಎಂದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ರವಿಕೃಷ್ಣ.ಡಿ.ಕಲ್ಲಾಜೆ ಮಾತನಾಡಿ ಇದು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪಯಣದಲ್ಲಿ ಮಹತ್ವದ ಕ್ಷಣವಾಗಿದೆ. ನಾವೀನ್ಯತೆಗಳು ಹೊಸ ದಾರಿಗಳನ್ನು ಕಂಡುಕೊಳ್ಳುವ ಪರಿಕಲ್ಪನೆ ಇಲ್ಲಿ ಮೂರ್ತರೂಪ ಪಡೆಯುತ್ತಿದೆ ಎಂದರು. ತರಗತಿಯ ಆಚೆಗೂ ಕನಸುಗಳನ್ನು ವಿಸ್ತರಿಸಿ, ಪರಿಧಿಯನ್ನು ದಾಟಿ ಹೊಸತನವನ್ನು ಕಂಡುಕೊಳ್ಳಿ ಮತ್ತು ಸಾಮಾಜಿಕ ಪರಿವರ್ತನೆಯನ್ನು ತರುವ ರೀತಿಯಲ್ಲಿ ಸಮಸ್ಯೆಗಳಿಗೆ ಪರಿಹಾರವನ್ನು ರೂಪಿಸಿ ಯಶಸ್ಸನ್ನು ಸಾಧಿಸಿ ಎಂದರು.


ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಪ್ರಸನ್ನ ದರ್ಭೆ, ಕಾರ್ಯಕ್ರಮ ಸಂಯೋಜಕಿಯರಾದ ಡಾ.ಜೀವಿತಾ.ಬಿ.ಕೆ., ಡಾ.ರಜನಿ ರೈ.ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮ್ಮೇಳನದಲ್ಲಿ ಮಂಡಿಸುವ ಪ್ರಬಂಧಗಳ ಸಾರಾಂಶದ ಪುಸ್ತಕವನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ರವೀಂದ್ರ.ಪಿ, ಸಮಿತಿಯ ಸದಸ್ಯರು, ತೀರ್ಪುಗಾರರು, ಪ್ರತಿನಿಧಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.


ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ ಸ್ವಾಗತಿಸಿದರು. ಐಇಇಇ ಮಂಗಳೂರು ಉಪವಿಭಾಗದ ಮುಖ್ಯಸ್ಥ ಡಾ.ವೇಣುಗೋಪಾಲ್.ಪಿ.ಎಸ್ ಪ್ರಸ್ತಾವನೆಗೈದರು. ಎಐಎಂಎಲ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ.ಹರ್ಷಿತಾ.ಕೆ ಅತಿಥಿಗಳನ್ನು ಪರಿಚಯಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ.ಸ್ವಪ್ನಲಕ್ಷ್ಮಿ.ಕೆ ವಂದಿಸಿದರು. ಎಂಸಿಎ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ.ನೀಮಾ.ಎಚ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here