







ಉಪ್ಪಿನಂಗಡಿ: ಅತ್ಯುತ್ತಮ ಉಪನ್ಯಾಸಕನೆಂಬ ನೆಲೆಯಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಇಬ್ರಾಹಿಂ ಎಂ. ರವರ ವಿದ್ಯಾರ್ಥಿ ಸ್ನೇಹಿ ಕಾರ್ಯಯೋಜನೆಯಿಂದಾಗಿ ಇಂದು ಉಪ್ಪಿನಂಗಡಿ ಕಾಲೇಜು ಗರಿಷ್ಟ ವಿದ್ಯಾರ್ಥಿಗಳನ್ನು ಹೊಂದಿರುವ ಸರಕಾರಿ ಕಾಲೇಜಾಗಿ ರಾಜ್ಯದಲ್ಲಿಯೇ ಮಾನ್ಯತೆ ಗಳಿಸುವಂತಾಗಿದೆ ಎಂದು ಹಿರಿಯ ದಂತ ವೈದ್ಯ ಡಾ ರಾಜಾರಾಮ ಕೆ.ಬಿ. ಅಭಿಪ್ರಾಯಿಸಿದರು.


ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸರಳವಾಗಿ ನಡೆದ ಪ್ರಶಸ್ತಿ ಪುರಸ್ಕೃತರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಅಜೀಜ್ ಬಸ್ತಿಕ್ಕಾರ್ ಮಾತನಾಡಿ, ರಾಜ್ಯ ಮಟ್ಟದ ಪ್ರಶಸ್ತಿ ಒಲಿದು ಬಂದ ಕಾರಣಕ್ಕೆ ದೊಡ್ಡ ಮಟ್ಟದ ಅಭಿನಂದನಾ ಕಾರ್ಯಕ್ರಮ ನಡೆಸುವ ಕಾಲೇಜಿನ ಆಡಳಿತ ಮಂಡಳಿಯ ಆಶಯವನ್ನು ನಯವಾಗಿ ತಿರಸ್ಕರಿಸಿದ ಪ್ರಾಂಶುಪಾಲ ಇಬ್ರಾಹೀಂರವರು ಅದಕ್ಕೆ ತಗಲುವ ವೆಚ್ಚವನ್ನು ಕಾಲೇಜಿನ ಅಭಿವೃದ್ದಿಗೆ ಬಳಸಲು ಸಲಹೆ ನೀಡುವ ಮೂಲಕ ತಮಗೆ ದೊರತೆ ಪ್ರಶಸ್ತಿಯಿಂದ ಕಾಲೇಜಿಗೂ ಪ್ರಯೋಜನವಾಗುವಂತೆ ಚಿಂತಿಸಿದ್ದಾರೆ. ಅವರ ಈ ನಡೆ ಮಾದರಿಯಾಗಿದೆ ಎಂದರು.



ವೇದಿಕೆಯಲ್ಲಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ರವಿರಾಜ್, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಪ್ರಮುಖರಾದ ಜೆ.ಕೆ. ಪೂಜಾರಿ, ಅಬ್ದುಲ್ ರಹಿಮಾನ್ , ವಿದ್ಯಾಲಕ್ಷ್ಮಿ ಪ್ರಭು, ಫಾರೂಕ್ ಜಿಂದಗಿ, ನಝೀರ್ ಮಠ, ಪ್ರೌಢ ಶಾಲಾ ವಿಭಾಗದ ಉಪ ಪ್ರಾಂಶುಪಾಲೆ ದೇವಕಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ನಾಗೇಶ್ ಪ್ರಭು, ನಝೀರ್ ಮಠ, ಮೊಯ್ದಿನ್ ಕುಟ್ಟಿ, ಆದಂ ಕೊಪ್ಪಳ, ಅಬ್ದುರ್ರಹ್ಮಾನ್ ಯುನಿಕ್, ಮಜೀದ್ ಮಠ, ಮರಿಯಮ್ಮ , ಗುಣವತಿ, ಪ್ರವೀಣ್ ಕುಡುಮಾರ್, ಜಾನ್ ಕೆನ್ಯೂಟ್ ಮಸ್ಕರೇನಸ್ ಮತ್ತಿತರರಿದ್ದರು.










