







ಉಪ್ಪಿನಂಗಡಿ: ವಸತಿ ಸಮುಚ್ಚಯದ ಕೊಳಚೆ ನೀರನ್ನು ನೇರವಾಗಿ ರಸ್ತೆಗೆ ಹರಿಯ ಬಿಡುತ್ತಿರುವುದರಿಂದ ರಸ್ತೆಯಲ್ಲಿ ಸಂಚರಿಸುವುದೇ ಅಸಹನೀಯವಾಗಿದ್ದು, ದುರ್ನಾತ ಭರಿತ ಕೊಳಚೆ ನೀರನ್ನು ಮೆಟ್ಟಿಕೊಂಡೇ ಸ್ಥಳೀಯರು ಸಂಚರಿಸಬೇಕಾದ ಅವಸ್ಥೆ ಎದುರಾದರೂ ಸ್ಥಳೀಯಾಡಳಿತ ಮೌನವಾಗಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬಿಳಿಯೂರು ಗ್ರಾಮದ ಕರುವೇಲು ಎಂಬಲ್ಲಿ ನಡೆದಿದೆ.


ಕರುವೇಲು ಪ್ರದೇಶದ ವ್ಯಕ್ತಿಯೋರ್ವರ ಹಕ್ಕಿನ ವಸತಿ ಸಮುಚ್ಚಯದಿಂದ ತ್ಯಾಜ್ಯ ನೀರನ್ನು ನೇರವಾಗಿ ಹೆದ್ದಾರಿ ಬದಿಯ ಸರ್ವೀಸ್ ರಸ್ತೆಗೆ ಬಿಡಲಾಗುತ್ತಿದೆ ಎಂದು ಆರೋಪ ವ್ಯಕ್ತವಾಗಿದ್ದು, ಇದರಿಂದಾಗಿ ಪರಿಸರದಲ್ಲಿ ದುರ್ನಾತ ಭರಿತ ಅಸಹನೀಯ ಸ್ಥಿತಿ ನಿರ್ಮಾಣವಾಗಿದೆ. ಕೊಳಚೆ ನೀರಿನಿಂದಾಗಿ ರಸ್ತೆಯಲ್ಲಿ ನಡೆದಾಡಲೂ ಅಸಹ್ಯಕರವಾಗಿದ್ದು, ಇದೇ ತ್ಯಾಜ್ಯದ ನೀರನ್ನು ತುಳಿದುಕೊಂಡೇ ಆ ಭಾಗದಲ್ಲಿರುವ ವ್ಯವಹಾರ ಕೇಂದ್ರಗಳಿಗೆ ಜನರು ಹೋಗಬೇಕಾಗಿದೆ. ಇದರ ದುರ್ನಾತವು ಪರಿಸರದಲ್ಲೆಡೆ ಹರಡಿದ್ದು, ರೋಗರುಜಿನಗಳೂ ಪ್ರಸಹರಿಸುವ ಭೀತಿಯೂ ಮೂಡಿದೆ. ಈ ಬಗ್ಗೆ ಸ್ಥಳೀಯರು ಲಿಖಿತ ದೂರು ಸಲ್ಲಿಸಿದ್ದರು ಸ್ಥಳೀಯಾಡಳಿತ ದಿವ್ಯ ಮೌನಕ್ಕೆ ಶರಣಾಗಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.




ದೂರಿತ್ತರೂ ಇಲ್ಲದ ಸ್ಪಂದನೆ:
ಸಮಸ್ಯೆಯ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಸ್ಥಳೀಯ ನಿವಾಸಿ ಶ್ರೀಮತಿ ಸಾಜಿಯಾ ಅಬೂಬಕ್ಕರ್, ಕೊಳಚೆ ನೀರನ್ನು ಸಾರ್ವಜನಿಕ ರಸ್ತೆಗೆ ಬಿಡಬಾರದೆಂದು ಕಾನೂನು ಬದ್ದ ನಿಯಮವಿದೆ. ಪ್ರತಿಯೋರ್ವರೂ ತಮ್ಮ ತಮ್ಮ ಮನೆಯ ಕೊಳಚೆ ನೀರನ್ನು ಇಂಗು ಗುಂಡಿ ನಿರ್ಮಿಸಿ ವಿಲೇವಾರಿ ಮಾಡಬೇಕೆಂಬ ನಿಯಮಾನೂ ಇದೆ. ಆದರೆ ಕರುವೇಲು ಎಂಬಲ್ಲಿ ಈ ಎಲ್ಲಾ ನಿಯಮವನ್ನು ಕಡೆಗಣಿಸಿ , ರಸ್ತೆಗೆ ನೇರವಾಗಿ ತಮ್ಮ ಮನೆಯ ಕೊಳಚೆ ನೀರನ್ನು ಹರಿಯ ಬಿಟ್ಟರೂ ಯಾರು ತಡೆಯುತ್ತಿಲ್ಲ. ಗ್ರಾಮಸ್ಥರು ನಡೆದಾಡುವ ರಸ್ತೆಯಲ್ಲಿ ಅಸಹನೀಯ ಸ್ಥಿತಿ ನಿರ್ಮಾಣವಾದರೂ ಆಡಳಿತ ವ್ಯವಸ್ಥೆ ಮೌನವಾಗಿದೆ. ದಿನ ನಿತ್ಯ ದುರ್ವಾಸನೆಯಿಂದಾಗಿ ಮನೆಯಲ್ಲಿ ನೆಮ್ಮದಿಯಿಂದ ನಿದ್ರಿಸಲೂ ಆಗದ ಸ್ಥಿತಿ ಉಂಟಾಗಿದೆ. ಸ್ಥಳೀಯಾಡಳಿತಕ್ಕೆ ಮೌಖಿಕವಾಗಿ , ಲಿಖಿತವಾಗಿ ದೂರು ನೀಡುತ್ತಲೇ ಇದ್ದೇವೆ. ಯಾರೂ ಸ್ಪಂದಿಸುತ್ತಿಲ್ಲ. ಆಡಳಿತ ವ್ಯವಸ್ಥೆ ಇದೇ ರೀತಿ ಸಮಸ್ಯೆಯನ್ನು ಜೀವಂತವಾಗಿರಿಸಿದರೆ ನಾನು ಮಕ್ಕಳೊಂದಿಗೆ ಪಂಚಾಯತ್ ಕಚೇರಿಯ ಮುಂಭಾಗದಲ್ಲೇ ಧರಣಿ ಕುಳಿತುಕೊಳ್ಳುವುದು ಅನಿವಾರ್ಯವಾದೀತೆಂದು ಎಚ್ಚರಿಸಿದ್ದಾರೆ.










