







ವಿಶ್ವ ಪ್ರಸಿದ್ಧ ಸಾಹಿತಿ, ಕಾದಂಬರಿಕಾರ, ಚಿಂತಕ, ವಿಜ್ಞಾನಿ, ಪರಿಸರ ಪ್ರೇಮಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರ ಕರ್ಮಭೂಮಿ ಪುತ್ತೂರಿನ ಅಂಗಳದಲ್ಲೇ ಬೆಳೆದ ಎಸ್. ಕೆ. ಆನಂದ್ ಅವರಿಗೆ 10.10.2026ರಂದು ನೀಡಿದ ಡಾ| ಶಿವರಾಮ ಕಾರಂತ ಬಾಲವನ ರಾಜ್ಯ ಪರಿಸರ ಪ್ರಶಸ್ತಿ, ಆಯ್ಕೆ ಸಮಿತಿಯ ಪ್ರೌಢಿಮೆಗೆ ಸಾಕ್ಷಿಯಾಗಿ ನಿಂತಿದೆ. ಅವರಿಗೆ ಮೊತ್ತ ಮೊದಲ ಅಭಿನಂದನೆಗಳು.


ಮರ ಮನುಷ್ಯನ ಉಸಿರು
ಮನುಷ್ಯನ ಬದುಕಿನಲ್ಲಿ ವೃಕ್ಷಗಳಿಗೆ ಬಹುದೊಡ್ಡ ಸ್ಥಾನವಿದೆ. 30-40 ವರ್ಷಗಳ ಹಿಂದಕ್ಕೆ ತಿರುಗಿ ನೋಡಿದರೆ ಮನೆ ಕಟ್ಟಲು ಮರ ಬೇಕು, ಸೋಫಾ, ಮಂಚ, ಕಪಾಟು, ಶಾಲೆಯ ಬೆಂಚು, ಚಾವಣಿ, ಅಟ್ಟ, ಹಲಗೆ ಎಲ್ಲದಕ್ಕೂ ಮರ…. ಮರ….. ಮರ. ಹೆಚ್ಚು ದೂರ ಹೋಗಬೇಕೆಂದಿಲ್ಲ. ಹಳ್ಳಿಯ ಬಹುತೇಕ ಹಳೆಯ ಮನೆಗಳಲ್ಲಿ ಇಂದಿಗೂ ಕಾಣುತ್ತಿರುವುದು ಮರದ ಭಾಗಗಳೇ.
ಪ್ರಕೃತಿ ನೀಡಿದ ಮರದ ಸಂಪತ್ತು ಅಪರಿಮಿತವಾದರೂ ಅಪಾರ ಬಳಕೆಯಿಂದಾಗಿ ಪರಿಮಿತವಾಯಿತು. ಮೂರು-ನಾಲ್ಕು ದಶಮಾನಗಳಿಂದ ನಾವು ಕಡಿದ ಮರಗಳ ವೇಗಕ್ಕೆ ತಕ್ಕಂತೆ ಬೆಳೆಯುವ ವೇಗ ಇರಲಿಲ್ಲ. ಭೀಮ ಗಾತ್ರದ ಮರವೊಂದು ತಲೆ ಎತ್ತಿ ನಿಲ್ಲಲು ಒಬ್ಬನ ಆಯಸ್ಸು ಸಾಲದು. ಎರಡು-ಮೂರು ತಲೆಗಳು ಉರುಳಬೇಕು. ನಮ್ಮ ಅಗತ್ಯಕ್ಕೆ ತಕ್ಕಷ್ಟು ಪ್ರಕೃತಿ ಮಾತೆ ಒದಗಿಸಲು ಸಾಧ್ಯವೇ?



ಮರದ ಬಳಕೆಗೆ ಪರ್ಯಾಯ ಹುಡುಕಿದರು
ಪುತ್ತೂರಿನ ’ಮಾಸ್ಟರ್ ಪ್ಲಾನರಿ’ ಕಟ್ಟಿ ಬೆಳೆಸಿದ ಸಿವಿಲ್ ಇಂಜಿನಿಯರ್ ಎಸ್. ಕೆ. ಆನಂದ್ ಅವರು 76ರ ಯುವಕ. ಹುಟ್ಟುವಾಗ ಸಾಕಷ್ಟು ಮರಗಳ ಕಂಡು ಅವುಗಳ ನಡುವೆಯೇ ಬೆಳೆದವರು. ಪುತ್ತೂರು ನೆಹರು ನಗರದಲ್ಲಿ ತಂದೆ ನಿವೃತ್ತ ಶಿಕ್ಷಕ ಈಶ್ವರ ಭಟ್, ಪುತ್ತೂರಿನಲ್ಲೇ ಶಿಕ್ಷಕರಾಗಿ ಹಿರಿಯ ತಲೆಮಾರಿಗೆಲ್ಲ ಪರಿಚಿತರು. ಸಂಸ್ಕಾರ ಕಲಿಸಿಕೊಟ್ಟ ತಾಯಿ ಶಾರದಾ.ಹಳ್ಳಿ ಜನರ ನಡುವೆ ಬೆಳೆದು ಮಣ್ಣಿನ ಮಡಕೆಯ ಬಳಕೆ ಕಂಡವರು. ಒಂದಷ್ಟು ತಾಗಿದರೆ ಸಾಕು ಅದು ಪುಡಿಪುಡಿ. ಜನರ ಬಳಕೆಗೆ ಸಿಮೆಂಟ್ ಬಳಸಿ ನೀರು ತುಂಬಿಸಲು, ಪಶುಗಳಿಗೆ ನೀರು ಕುಡಿಯಲು ಬೇಕಾದ, ಸಾಗಿಸಬಲ್ಲ ತೂಕದ ಚಿಕ್ಕ ಟ್ಯಾಂಕ್ ಇತ್ಯಾದಿ ತಯಾರಿಸಿದರೆ ದೀರ್ಘ ಬಾಳಿಕೆ ಅಲ್ಲವೇ ಎಂದು ಅವರ ತಲೆಯೊಳಗೆ ತಿರುಗಲಾರಂಭಿಸಿತು. ಹೌದು, ಉತ್ಪನ್ನಗಳ ಸಾಮ್ರಾಜ್ಯ ಹುಟ್ಟು ಹಾಕಿದರು.
ಆಗ ತಾನೇ ಎಸ್. ಕೆ. ಆನಂದ್ ಅವರು ಪ್ರತಿಷ್ಠಿತ ಸುರತ್ಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಮುಗಿಸಿ, ಯಜ್ಡ್ ಬೈಕ್ ಹತ್ತಿ ಉದ್ಯೋಗ ಹುಡುಕಲು ಆರಂಭಿಸಿದರು. ಸ್ವಲ್ಪ ಕಾಲ ಬೋಧನೆಗೂ ಇಳಿದರು. ಅವರನ್ನು ಇಂದಿಗೂ ’ಆನಂದ್ ಮಾಸ್ಟ್ರು’ ಎನ್ನುವ ಅಭಿಮಾನಿಗಳಿದ್ದಾರೆ. ಕೊನೆಗೆ ಅಪ್ಪ ಕಟ್ಟಿದ ಸಣ್ಣ ಉದ್ದಿಮೆಯಲ್ಲಿ ದೊಡ್ಡ ಕನಸು ಕಂಡರು. ಮಾಸ್ತರರೊಬ್ಬರು ಯೋಚಿಸಿ ಆರಂಭಿಸಿದ ಉದ್ದಿಮೆಗೆ ’ಮಾಸ್ಟರ್ ಪ್ಲಾನರಿ’ ಎಂದೇ ಹೆಸರುಬಂತು. ದಿನ ಕಳೆದಂತೆ ಜನರ ಅಗತ್ಯ ವಸ್ತುಗಳ ಪೂರೈಕೆಗೆ ಸಂಶೋಧನೆಯಲ್ಲಿ ತೊಡಗಿದರು.

ಮರದ ಬಳಕೆಗೆ ಪರ್ಯಾಯ ಹುಡುಕಿದ ಇಂಜಿನಿಯರ್
ಮರದ ನಡುವೆ ಬೆಳೆದ ಆನಂದರ ಕಣ್ಣ ಮುಂದೆ ಕೊಡಲಿ ಏಟಿಗೆ ಮರಗಳು ಉರುಳುತ್ತಲೇ ಇದ್ದವು. ಅದನ್ನು ಕಂಡು ಮರಕ್ಕೆ ಪರ್ಯಾಯ ಮಾರ್ಗ ಹುಡುಕಲೇ ಬೇಕೆಂದು ಟೊಂಕ ಕಟ್ಟಿ ನಿಂತರು. ಇಲ್ಲದೆ ಹೋದರೆ ಪ್ರಕೃತಿ ಮಾತೆ ಬೆತ್ತಲಾಗುವಳೆಂದು ಚಿಂತಿಸಿದರು. ಜೀವ ಜಲ, ಪ್ರಾಣ ವಾಯು, ತಂಪು ಹವೆ ಇಲ್ಲದೆ ಹೋದರೆ ಬದುಕು ಸಾಧ್ಯವೇ ಎಂದು ಮರುಕ ಪಟ್ಟರು. ಆಗಲೇ ಹೊಳೆದದ್ದು ಕಾಂಕ್ರೀಟ್ ಬಳಸಿ ವುಡ್ಗೆ ಪರ್ಯಾಯ ಸೃಷ್ಟಿ. ಅದಕ್ಕೆ ‘ಕಾಂಕೂಡ್’ ಎಂದು ನಾಮಕರಣ ಮಾಡಿ ನೋಂದಾಯಿಸಿಯೇ ಬಿಟ್ಟರು.
ಮನೆಯ ಪೀಠೋಪಕರಣದಿಂದ ಶಾಲೆಯ ಬೆಂಚುಗಳವರೆಗೆ
ಕಾಂಕೂಡ್ ಎಷ್ಟು ಜನಪ್ರಿಯವಾಯಿತೆಂಬುದಕ್ಕೆ ಒಂದು ಚಿಕ್ಕ ಉದಾಹರಣೆ – ಹಳ್ಳಿಯಲ್ಲಿ ಕೃಷಿಕರಿಗೆ ಪಂಪ್ ಶೆಡ್ ನಿತ್ಯ ಸಂಗಾತಿ. ಇವರು ಎರಡು ಕಂಬದ ಮೇಲೆ ನಿಂತ, ಒಂದು ಅಡಿ ಅಗಲ, ಐದಡಿ ಉದ್ದ, ಎರಡಡಿ ಎತ್ತರದ ಪಂಪ್ ಶೆಡ್ ನಿರ್ಮಿಸಿ ರೂ 2,೦೦೦ಕ್ಕೆ ಮಾರಾಟಕ್ಕಿಟ್ಟರು. ಅಚ್ಚರಿಯಿಂದ ಕಂಡ ಜನ, 2೦-3೦ ಸಾವಿರ ಖರ್ಚು ಮಾಡುವುದಕ್ಕಿಂತ ಇದುವೇ ಮೇಲಲ್ಲವೇ ಎಂದು ಖರೀದಿಸತೊಡಗಿದರು. ತುಕ್ಕು ಹಿಡಿಯದು, ಗೆದ್ದಲು ಬಾರದು. ಇಂದು ಎಲ್ಲೆಲ್ಲೂ ಕಾಂಕ್ರೀಟ್ ಶೆಡ್ಡುಗಳ ಸಾಮ್ರಾಜ್ಯ.
ಇದು ಒಂದು ಕಥೆಯಾದರೆ, ಮರವಿಲ್ಲದೆ ಕಂಗೆಟ್ಟ ಜನ ಮಾಸ್ಟರ್ ಪ್ಲಾನರಿಯ ಸಿಮೆಂಟ್ ಉತ್ಪನ್ನಗಳಿಗೆ ಸಾಲು ಸಾಲಾಗಿ ಕಾದು ನಿಂತರು. ಮನೆಯಲ್ಲಿ ಪೀಠೋಪಕರಣಗಳು ಏನೇನು ಬೇಕು, ಅವುಗಳಲ್ಲಿ ಬಹುತೇಕ ಇವರಲ್ಲಿ ಸಿಗುವುದು. ಮಂಚ – ಸೋಫಾ, ಟೀಪಾಯಿ – ಕಪಾಟು, ಅದೆಲ್ಲ ಹೋಗಲಿ, ಆನೆ – ಕುದುರೆ, ಒಂಟೆ – ಜಿರಾಫೆ, ನರಿ – ನಾಯಿ ಹೀಗೆ ಇನ್ನೂರಕ್ಕೂ ಹೆಚ್ಚು ಉತ್ಪನ್ನಗಳಿವೆ.
ವ್ಯಾಪಾರಕ್ಕಾಗಿ ಸಿಮೆಂಟ್ ಉತ್ಪನ್ನ ತಯಾರಿಸಿದರು ಎಂಬ ಸರಳ ಕಥೆಯಲ್ಲ
ಇವರ ಸಾಹಸ ಅಲ್ಲಿಗೆ ಮುಗಿಯಲಿಲ್ಲ. ಅನ್ನ, ನೀರು, ಗಾಳಿ ಇಲ್ಲದೆ ಸಿಮೆಂಟ್ ಮಾತ್ರ ಬದುಕು ಕಟ್ಟಿಕೊಳ್ಳಲು ಸಾಲದು ಎಂಬ ಅರಿವು ಅವರಿಗಿತ್ತು. ತನ್ನ ಕಂಪನಿಯಿಂದ ಹಲವು ಕಡೆಗಳಲ್ಲಿ ಕೃಷಿ ಭೂಮಿ ಕೊಂಡರು. ಅಲ್ಲಿಯೂ ಸಿಮೆಂಟ್ ಉತ್ಪನ್ನ ತಯಾರಿ ಘಟಕ ತೆರೆದು, ಊರವರಿಗೆ ಆಗಬಲ್ಲ ಉದ್ಯೋಗ ಕೊಟ್ಟರು. ಕೃಷಿ ಮರೆತವರಲ್ಲ. ತೆಂಗು, ಕಂಗು, ಭತ್ತ, ಬಾಳೆ ಬೆಳೆದರು. ಭೂಮಿಯ ಒಂದಷ್ಟು ಭಾಗದಲ್ಲಿ, ಬೆಳೆದು ದೊಡ್ಡ ವೃಕ್ಷವಾಗಲು ದೀರ್ಘಕಾಲ ಬೇಕಾದ ತೇಗ, ಹೊನ್ನೆ, ಮಾವು ಮರಗಳನ್ನು ಬೆಳೆದರು. ಬಂಜರು ಭೂಮಿಯಲ್ಲಿ ಎಂಟು-ಹತ್ತು ವರ್ಷಗಳಲ್ಲಿ ಶೀಘ್ರ ಬೆಳೆಯುವ, ಉದ್ಯಮಕ್ಕೆ ಬೇಕಾದಂತಹ ಗಾಳಿ ಮರ, ಅಕೇಶಿಯಾ ಮರಗಳನ್ನು ಬೆಳೆದು ಬಳಸಿಕೊಂಡರು.
ಕರ್ನಾಟಕ ಕರಾವಳಿಯ ಪುತ್ತೂರಿನಲ್ಲಿ ಹುಟ್ಟಿದ ಸಂಸ್ಥೆಯ ಉತ್ಪನ್ನಗಳಿಗೆ ಗುಣಮಟ್ಟದಲ್ಲಿ ಯಾವುದೂ ಸರಿಸಾಟಿ ಇಲ್ಲ. ಗುಣಮಟ್ಟ ಬಯಸುವ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸಾರ್ವಜನಿಕರ ಬಳಕೆಗೆ ಬೇಕಾದ ಉತ್ಪನ್ನಗಳಿಗೆ ಮಾಸ್ಟರ್ ಪ್ಲಾನರಿಗೆ ಬರುವರು. ಶಾಲಾ-ಕಾಲೇಜು, ಮೆಡಿಕಲ್ ಕಾಲೇಜು, ವಿಶ್ವವಿದ್ಯಾಲಯ, ಬಸ್ ನಿಲ್ದಾಣ , ರೈಲ್ವೆ ನಿಲ್ದಾಣ, ಉದ್ಯಾನ, ಎಲ್ಲೆಲ್ಲಿ ನೋಡಲಿ… ಮಾಸ್ಟರ್ ಪ್ಲಾನರಿ ಉತ್ಪನ್ನಗಳನ್ನೇ ಕಾಣುವೆ ….ಎಂಬಂತಿದೆ.
ಪುತ್ತೂರಿನ ಗಡಿ ಮೀರಿ ಬೆಳೆದರು
ಪುತ್ತೂರಿನ ಮಣ್ಣಿನಿಂದ ಹೊರಟ ಒಬ್ಬ ಸಿವಿಲ್ ಇಂಜಿನಿಯರ್ ತನ್ನ ವಿದ್ಯೆಯನ್ನು ಸಮಾಜದ ನೈಜ ಅಗತ್ಯಗಳಿಗೆ ಅನ್ವಯಿಸಿ ಪರ್ಯಾಯ ನಿರ್ಮಾಣ ರೂಪಿಸಿದ್ದು ಚಿಕ್ಕ ಕಥೆಯಲ್ಲ. ಡಾ| ಶಿವರಾಮ ಕಾರಂತರ ಕರ್ಮಭೂಮಿಯ ಅಂಗಳದಲ್ಲೇ ಬೆಳೆದ ಇವರಿಗೆ ಡಾ| ಶಿವರಾಮ ಕಾರಂತ ಬಾಲವನ ಪರಿಸರ ರಾಜ್ಯ ಪ್ರಶಸ್ತಿ – 2026 ದೊರೆಯುತ್ತಿರುವುದು ಪರಿಸರ ಪ್ರಿಯರಿಗೆ ಸಂತೋಷ ನೀಡಿದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಕೇಂದ್ರ ಸರ್ಕಾರದ ಪದ್ಮ ಪ್ರಶಸ್ತಿಗಳು ಇನ್ನೂ ಇವರ ಬಳಿ ಬಾರದಿರುವುದು ಅನೇಕರಿಗೆ ಬೇಸರ ತಂದಿದೆ.
ಪತ್ರಿಕೆಯಲ್ಲಿ ಬರಹದ ವ್ಯಾಪ್ತಿಗೆ ಮಿತಿ ಇದೆ. ಆದರೆ ಇವರ ಉದ್ಯಮದ ಮಿತಿ ರಾಜ್ಯದ ಗಡಿಯನ್ನು ದಾಟಿದೆ. ಅದೆಲ್ಲ ಬರೆಯುವಷ್ಟು ಅವಕಾಶವಿಲ್ಲ. ಬಾಗಲಕೋಟೆ, ರಾಮನಗರ, ನಾಗರಹೊಳೆ, ಬೆಂಗಳೂರು ಇನ್ನೂ ಅನೇಕ ಕಡೆ ಸಾವಿರಾರು ಮನೆ ನಿರ್ಮಿಸಿರುವರು. ನಮ್ಮ ಮೆಟ್ರೋದಲ್ಲೂ ಇವರ ಉತ್ಪನ್ನಗಳು ರಾರಾಜಿಸುತ್ತಿವೆ. ಗುಣಮಟ್ಟ ಬಯಸುವ ಇವರನ್ನು ತಿಳಿದ ಎಸಿ, ಡಿಸಿ, ಸಚಿವರು ಮಾಸ್ಟರ್ ಪ್ಲಾನರಿಗೆ ಮೊರೆ ಹೋಗುವರು. ಇವರೊಬ್ಬ ಭಾವಜೀವಿ.ಕವಿ. ಅನೇಕ ಕವಿತೆ, ಕವನಗಳು ಸಂಚಾರದ ವೇಳೆ ಗುನುಗುತ್ತಿರುತ್ತವೆ. ಬರಹ ರೂಪಕ್ಕೆ ಇಳಿಸುತ್ತಾರೆ. ಅವುಗಳನ್ನು ಸಂಪಾದಿಸುವ ಕಾಯಕ ಪತ್ನಿ ರೇಖಾ ಆನಂದ್ ಅವರದು. ಅವರ ಯಶಸ್ಸಿನ ಬೆನ್ನೆಲುಬು ಆಕೆ.
ಇಂದು ಇಂಜಿನಿಯರ್ಗಳು ಭವಿಷ್ಯ ಅರಸುತ್ತಾ ಪರದೇಶವಾಸಿಗಳಾಗುವುದನ್ನು ಕಂಡಿರುವೆವು. ಆದರೆ ಇವರ ಮಕ್ಕಳು ಅಕ್ಷಯ್ ಎಸ್. ಕೆ., ಅರ್ಜುನ್ ಎಸ್. ಕೆ., ಆಕಾಶ್ ಎಸ್. ಕೆ., ಆರತಿ ಎಸ್. ಕೆ. ಎಲ್ಲರೂ ಅಮೆರಿಕ, ಸ್ಕಾಟ್ಲೆಂಡ್ಗಳಲ್ಲಿ ಓದಿ, ಒಂದಷ್ಟು ಕಾಲ ದುಡಿದು, ಆ ದೇಶವನ್ನೇ ಅಪ್ಪಿಕೊಳ್ಳದೆ ಪುತ್ತೂರಿಗೆ ಬಂದರು. ಅಪ್ಪ ಕಟ್ಟಿದ ಉದ್ಯಮವನ್ನು ಮತ್ತಷ್ಟು ಜನಸ್ನೇಹಿಯಾಗಿ ವಿಸ್ತರಿಸುತ್ತಿರುವುದು ಪುತ್ತೂರು ಮಾತ್ರವಲ್ಲ, ರಾಜ್ಯದ ಪುಣ್ಯ ಮತ್ತು ಹೆಮ್ಮೆ. ಆನಂದರ ಸೊಸೆಯಂದಿರು, ಮಕ್ಕಳು ಒಂದೇ ಸಂಸ್ಥೆಯಲ್ಲಿ ದುಡಿಯುತ್ತಿರುವಂತೆ, ರಾಜ್ಯದ ಅನೇಕ ಕುಟುಂಬಗಳು ಇವರ ಸಂಸ್ಥೆಯಲ್ಲಿ ದುಡಿಯುತ್ತಿರುವುದು ಕಂಡಾಗ ಕಣ್ಣು ತುಂಬಿ ಬರುವುದು. ಆದರೆ ಇವರು ಸಾವಿರಾರು ಮಂದಿಗೆ ನೀಡಿರುವ ಅನ್ನದ ಬಟ್ಟಲು ಮಾತ್ರ ಕಾಂಕೂಡ್ ನಿರ್ಮಿತವಾಗಿಲ್ಲ, ಅದಕ್ಕೂ ಮೀರಿದ ಭಾವನೆಯ ಬಟ್ಟಲು ನೀಡಿರುವರು.
ಪ್ರಶಸ್ತಿಯ ಸಂಭ್ರಮದ ನಡುವೆ ಎಸ್. ಕೆ. ಆನಂದ್ ಹೇಳುತ್ತಾರೆ, ಇದು ನನ್ನೊಬ್ಬನ ಸಾಧನೆ ಅಲ್ಲ. ಇದು ನಮ್ಮ ಸಾವಿರ – ಸಾವಿರ ಮಂದಿಯ ಸಂಸಾರಕ್ಕೆ ಸಿಕ್ಕಿದ ಪ್ರಶಸ್ತಿ ಎನ್ನುತ್ತಾ ಭಾವುಕರಾಗಿ ಹೋದರು.











