ಗೋಳಿತ್ತೊಟ್ಟು ವಲಯದ ಒಕ್ಕೂಟಗಳ ಪದಗ್ರಹಣ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

0

ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಗ್ರಾಮದ ಅಭಿವೃದ್ಧಿ; ಭಾಗೀರಥಿ ಮುರುಳ್ಯ

  • ಸಾಂಕೇತಿಕವಾಗಿ ಇಬ್ಬರು ವಿದ್ಯಾರ್ಥಿಗಳಿಗೆ ಸುಜ್ಞಾನ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣೆ
  • ಶಾಂತಿನಗರ ಶಾಲೆಗೆ ನೇಮಕಗೊಂಡ ಜ್ಞಾನದೀಪ ಶಿಕ್ಷಕಿಗೆ ಮಂಜೂರಾತಿ ಪತ್ರ ವಿತರಣೆ
  • ಜನಮಂಗಳ ಯೋಜನೆಯಡಿ ಶೀನಪ್ಪ ಪೂಜಾರಿ ಅವರಿಗೆ ವ್ಹೀಲ್ ಚೇರ್ ಹಸ್ತಾಂತರ

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಡಬ ತಾಲೂಕು, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಗೋಳಿತ್ತೊಟ್ಟು ವಲಯ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಗೋಳಿತ್ತೊಟ್ಟು ಇದರ ಸಹಯೋಗದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಗೋಳಿತ್ತೊಟ್ಟು ಶ್ರೀ ಸಿದ್ಧಿವಿನಾಯಕ ಕಲಾ ಮಂದಿರದಲ್ಲಿ ಅ.11ರಂದು ನಡೆಯಿತು.

ಬೆಳಗ್ಗೆ ಪುರೋಹಿತರಾದ ಶ್ರೀವತ್ಸ ಅವರ ನೇತೃತ್ವದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ತೆಂಗಿನ ಹಿಂಗಾರ ಅರಳಿಸಿ ಮಾತನಾಡಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರಾಜ್ಯದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸ ಆಗಿದೆ. ಕೇವಲ ಸಾಲ ನೀಡುವುದು ಮಾತ್ರವಲ್ಲ, ರೈತರೂ ಅಭಿವೃದ್ಧಿಯಾಗಬೇಕೆಂಬ ನಿಟ್ಟಿನಲ್ಲಿ ಹಲವಾರು ಯೋಜನೆ ಜಾರಿಗೊಳಿಸಿದ್ದು ಜನ ಆರ್ಥಿಕವಾಗಿ ಸದೃಢರಾಗಿದ್ದಾರೆ. ಜನಜಾಗೃತಿ ವೇದಿಕೆ ಮೂಲಕ ದುಶ್ಚಟ ಮುಕ್ತ ಸಮಾಜ ನಿರ್ಮಾಣ ಆಗುತ್ತಿದೆ. ಇದರಿಂದಾಗಿ ಮನೆಗಳಲ್ಲಿ ಸಂಸ್ಕಾರ, ಸಂಸ್ಕೃತಿ, ನೆಮ್ಮದಿ ಕಾಣುತ್ತಿದ್ದೇವೆ ಎಂದರು.

ಯೋಜನೆಯ ಬಗ್ಗೆ ಜನರಲ್ಲಿ ನಂಬಿಕೆ, ವಿಶ್ವಾಸ-ಅಜಿತ್ ಪಾಲೇರಿ;
ದೀಪ ಪ್ರಜ್ವಲಿಸಿ ಮಾತನಾಡಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಜಿತ್ ಕುಮಾರ್ ಪಾಲೇರಿ ಅವರು, ಹಿಂದೆ ಸಾಲ ಮೇಳ ನಡೆಯುತ್ತಿತ್ತು. ದಾಖಲೆ ನೀಡಿ ಸಾಲ ಪಡೆಯಬೇಕಿತ್ತು, ಆದರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬ್ಯಾಂಕಿಂಗ್ ವ್ಯವಹಾರ ನಂಬಿಕೆ, ವಿಶ್ವಾಸದ ಮೇಲೆ ನಡೆಯುತ್ತಿದೆ. ದೇವರ ಮೇಲೆ ಭಯ, ಭಕ್ತಿ ಇರಬೇಕು. ಇದರಿಂದ ಧಾರ್ಮಿಕ ಆಚರಣೆ, ಸಂಸ್ಕೃತಿ. ಸಂಸ್ಕಾರ ಉಳಿಯಲು ಸಾಧ್ಯವಿದೆ ಎಂದರು.

ವ್ಯಕ್ತಿ ಶಕ್ತಿಯಾಗಿ ಬೆಳೆಯಬೇಕು-ಬಾಬು ನಾಯ್ಕ್;
ಒಕ್ಕೂಟದ ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರ ಮಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದ.ಕ. ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ಅವರು ಮಾತನಾಡಿ, ವ್ಯಕ್ತಿ ಶಕ್ತಿಯಾಗಿ ಬೆಳೆಯಬೇಕು, ಆತ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸ್ವಾವಲಂಬಿಯಾಗಿ ಬೆಳೆಯಬೇಕು ಎಂಬ ದೂರದೃಷ್ಟಿ ಇಟ್ಟುಕೊಂಡು ಪೂಜ್ಯರಾದ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಗ್ರಾಮಾಭಿವೃದ್ಧಿ ಯೋಜನೆ ಆರಂಭಿಸಿದ್ದರು. ರಾಜ್ಯದಲ್ಲಿ ಸುಮಾರು 6.15 ಲಕ್ಷ ಸ್ವಸಹಾಯ ಸಂಘಗಳಿವೆ. ಈ ಸಂಘಗಳ ಮೂಲಕ ೪೫೦೦ ಕೋಟಿ ರೂ ಉಳಿತಾಯ ಆಗಿದೆ. 22 ಸಾವಿರ ಹಳ್ಳಿಗಳಿಗೆ ಗ್ರಾಮಾಭಿವೃದ್ಧಿ ಯೋಜನೆ ವಿಸ್ತಾರಗೊಂಡಿದೆ. ಮಹಾತ್ಮ ಗಾಂಧೀಜಿ ಅವರ ರಾಮ ರಾಜ್ಯದ ಕನಸು ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಮೂಲಕ ನನಸು ಆಗುತ್ತಿದೆ ಎಂದು ಹೇಳಿದ ಅವರು ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿ ಬಗ್ಗೆ ತಿಳಿಸಿದರು.

ಲಕ್ಷಾಂತರ ಕುಟುಂಬ ಸಬಲೀಕರಣ-ಲಲಿತಾ ಜಿ.ಡಿ.:
ಸುಜ್ಞಾನ ಶಿಷ್ಯ ವೇತನ ವಿತರಿಸಿದ ಗೋಳಿತ್ತೊಟ್ಟು ಗ್ರಾ.ಪಂ.ಪಿಡಿಒ ಲಲಿತಾ ಜಿ.ಡಿ.ಅವರು ಮಾತನಾಡಿ, ಅನ್ನದಾನ, ಔಷಧದಾನ, ವಿದ್ಯಾದಾನಕ್ಕೆ ಹೆಸರುವಾಸಿಯಾದ ಕ್ಷೇತ್ರ ಧರ್ಮಸ್ಥಳ. ಪ್ರಗತಿಬಂಧು, ಸ್ವಸಹಾಯ ಸಂಘಗಳ ಮೂಲಕ ಲಕ್ಷಾಂತರ ಕುಟುಂಬಗಳು ಆರ್ಥಿಕವಾಗಿ ಸಬಲೀಕರಣಗೊಂಡಿವೆ ಎಂದು.

ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಅನಿಲ ಶುಭಹಾರೈಸಿದರು. ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಗೋಳಿತ್ತೊಟ್ಟು ವಲಯಾಧ್ಯಕ್ಷ ಬಾಲಕೃಷ್ಣ ಅಲೆಕ್ಕಿ ಅಧ್ಯಕ್ಷತೆ ವಹಿಸಿದ್ದರು. ಗೋಳಿತ್ತೋಟ್ಟು ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ನೋಣಯ್ಯ ಪೂಜಾರಿ ಅಂಬರ್ಜೆ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಮಹೇಶ್ ಪಿ., ಗೋಳಿತ್ತೊಟ್ಟು ವಲಯ ಭಜನಾ ಪರಿಷತ್ ಅಧ್ಯಕ್ಷ ಲಿತಿನ್ ಕುಮಾರ್, ಗೋಳಿತ್ತೋಟ್ಟು ವಲಯ ಶೌರ್ಯ ವಿಪತ್ತು ಘಟಕ ಅಧ್ಯಕ್ಷ ಜನಾರ್ದನ ಪೂಜಾರಿ, ಹಳೆನೇರೆಂಕಿ ಒಕ್ಕೂಟದ ಅಧ್ಯಕ್ಷೆ ಸವಿತಾ ಕೆ.ಹೆಚ್., ತಿರ್ಲೆ ಒಕ್ಕೂಟದ ಅಧ್ಯಕ್ಷ ಸೀತಾರಾಮ ಮಡಿವಾಳ ಅಗರ್ತ, ಆಲಂತಾಯ ಒಕ್ಕೂಟದ ಅಧ್ಯಕ್ಷ ಅಶೋಕ ಸಿ.ಬಿ. ಪಾಲೇರಿ, ರಾಮಕುಂಜ ಎ ಒಕ್ಕೂಟದ ಅಧ್ಯಕ್ಷ ರಮೇಶ ಕುಂಡಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪುರುಷೋತ್ತಮ ಶಾಂತಿನಗರ, ವೀರೇಂದ್ರ ಪಾಲೆತ್ತಡ್ಡ, ಶಾಲಿನಿಶೇಖರ ಪೂಜಾರಿ, ನೇಮಿರಾಜ್ ಕಲಾಯಿ, ಲಲಿತಾ ಶಿವಾರು, ಹೇಮಾವತಿ, ರಾಜಿವಿ, ಪುಷ್ಪಲತಾ, ಪ್ರೇಮಲತಾ, ವೀರಪ್ಪ ಪೂಜಾರಿ ಅಂಬರ್ಜೆ, ಪ್ರತಿಮಾ, ಲೀಲಾವತಿ ಶಿವಾರು, ಹೇಮಲತಾ ಮತ್ತಿತರರು ಅತಿಥಿಗಳಿಗೆ ಶಾಲು ಹಾಕಿ ಹೂ ನೀಡಿ ಸ್ವಾಗತಿಸಿದರು. ಕಡಬ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕೆ. ಅವರು ಸ್ವಾಗತಿಸಿ, ಗ್ರಾಮಾಭಿವೃದ್ಧಿ ಯೋಜನೆ ನಡೆದು ಬಂದ ಹಾದಿಯ ಕುರಿತು ಪ್ರಾಸ್ತಾವಿಕ ಮಾತುಗಳಲ್ಲಿ ತಿಳಿಸಿದರು. ಗೋಳಿತ್ತೊಟ್ಟು ವಲಯ ಮೇಲ್ವಿಚಾರಕಿ ಸುಜಾತ ವರದಿ ಮಂಡಿಸಿದರು. ಸ್ವಸಹಾಯ ಸಂಘದ ಸದಸ್ಯೆ ಶ್ವೇತಾ ವಂದಿಸಿದರು. ಮೇಲ್ವಿಚಾರಕ ರವಿಪ್ರಸಾದ್ ನಿರೂಪಿಸಿದರು. ಲಿತಿನ್ ಕುಮಾರ್ ಪ್ರಾರ್ಥಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವೀಳ್ಯ, ದಾಖಲೆ ಹಸ್ತಾಂತರಿಸಿ ಪದಗ್ರಹಣ:
ಗೋಳಿತ್ತೊಟ್ಟು ವಲಯದ ಗೋಳಿತ್ತೊಟ್ಟು, ಕೊಣಾಲು, ತಿರ್ಲೆ, ಹಳೆನೇರೆಂಕಿ, ಶಾಂತಿನಗರ, ಆಲಂತಾಯ, ರಾಮಕುಂಜ ಒಕ್ಕೂಟದ ಪದಾಧಿಕಾರಿಗಳು ನೂತನ ಪದಾಧಿಕಾರಿಗಳಿಗೆ ವೀಳ್ಯ ಹಾಗೂ ದಾಖಲೆ ಹಸ್ತಾಂತರಿಸುವ ಮೂಲಕ ಪದಗ್ರಹಣ ನಡೆಯಿತು. ಅಲ್ಲದೇ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಇಬ್ಬರು ವಿದ್ಯಾರ್ಥಿಗಳಿಗೆ ಸುಜ್ಞಾನ ಶಿಷ್ಯ ವೇತನ ಮಂಜೂರಾತಿ ಪತ್ರ, ಶಾಂತಿನಗರ ಶಾಲೆಗೆ ನೇಮಕಗೊಂಡ ಜ್ಞಾನದೀಪ ಶಿಕ್ಷಕಿಗೆ ಮಂಜೂರಾತಿ ಪತ್ರ ಹಾಗೂ ಜನಮಂಗಳ ಯೋಜನೆಯಡಿ ಶೀನಪ್ಪ ಪೂಜಾರಿ ಅವರಿಗೆ ವ್ಹೀಲ್ ಚೇರ್ ಹಸ್ತಾಂತರ ಮಾಡಲಾಯಿತು. ಗ್ರಾಮಾಭಿವೃದ್ಧಿ ಯೊಜನೆ ಪುತ್ತೂರು ತಾಲೂಕಿನಲ್ಲಿ ಆರಂಭಗೊಂಡು 24 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆರಂಭದಿಂದ ಈ ತನಕ ಇದ್ದ ಅತ್ಯುತ್ತಮ ಸ್ವಸಹಾಯ ಸಂಘಗಳ ಸದಸ್ಯರಿಗೆ ಶಾಲು ಗೌರವಿಸಲಾಯಿತು.

LEAVE A REPLY

Please enter your comment!
Please enter your name here