







ಗ್ರಾಮದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವುದು ನನ್ನ ಧರ್ಮ, ನೀವು ಒಮ್ಮೆ ಬಿಜೆಪಿಗೆ ಬನ್ನಿ ಎನ್ನುತ್ತಿದ್ದಾರೆ….!: ಅಶೋಕ್ ಕುಮಾರ್ ರೈ


ಪುತ್ತೂರು: ನನಗೆ ಹಣ ಮಾಡುವ ಉದ್ದೇಶವಿಲ್ಲ ಏಕೆಂದರೆ ನನ್ನಲ್ಲಿ ನನ್ನ ಕುಟುಂಬವನ್ನು ಸಲಹುವಷ್ಟು ಹಣ ಇದೆ. ನನಗೆ ರಾಜಕೀಯ ಮಾಡುವುದೂ ಗೊತ್ತಿಲ್ಲ, ನನಗೆ ಇನ್ನೊಬ್ಬರನ್ನು ಬೈದು, ಅವರಿಗೆ ನೋವು ಮಾಡಿ ಏನೂ ಆಗಬೇಕೆಂದಿಲ್ಲ ನನ್ನದು ಏನಿದ್ದರೂ ಅಭಿವೃದ್ಧಿ ಪರ ರಾಜಕೀಯ. ಗ್ರಾಮದ ಕಟ್ಟ ಕಡೆಯ ವ್ಯಕ್ತಿಯ ಕಣ್ಣೀರು ಒರೆಸುವುದೇ ನನ್ನ ಉದ್ದೇಶ, ಅದಕ್ಕಾಗಿಯೇ ನಾನು ರಾಜಕೀಯಕ್ಕೆ ಬಂದಿದ್ದೇನೆ. ಆ ಕೆಲಸವನ್ನು ನಾನು ಮಾಡಿಯೇ ಮಾಡುತ್ತೇನೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.



ಅವರು ಕಂದಾಯ ಇಲಾಖೆಯ ಆಯೋಜನೆಯಲ್ಲಿ ಶಾಸಕರ ನಡೆ ಗ್ರಾಮದ ಕಡೆ ಎಂಬ ಧ್ಯೇಯವಾಕ್ಯದಲ್ಲಿ ಒಳಮೊಗ್ರು ಗ್ರಾಮದಲ್ಲಿ ಅ.13 ರಂದು ನಡೆದ ಅಕ್ರಮ ಸಕ್ರಮ ಬಗರ್ ಹುಕುಂ 29 ನೇ ಬೈಠಕ್ ಮತ್ತು ಹಕ್ಕು ಪತ್ರ ವಿತರಣಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಹಕ್ಕು ಪತ್ರ ವಿತರಣೆ ಮಾಡುವ ಮೂಲಕ ಮಾತನಾಡಿದರು.
4000 ಸಾವಿರ ಕುಟುಂಬಗಳಿಗೆ ದಾಖಲೆ ಪತ್ರ ಹಸ್ತಾಂತರ
ಇದುವರೆಗೆ ಪ್ರತಿ ಗ್ರಾಮಕ್ಕೆ ಬಂದು ಅಕ್ರಮ ಸಕ್ರಮ ಬೈಠಕ್ ಮಾಡಿದ ಉದಾಹರಣೆಗಳೇ ಇಲ್ಲ ಎಂದ ಶಾಸಕರು ಎರಡೂವರೇ ವರ್ಷದಲ್ಲಿ 2 ಸಾವಿರಕ್ಕೂ ಅಧಿಕ ಮಂದಿಗೆ ಅಕ್ರಮ ಸಕ್ರಮ, 2 ಸಾವಿರಕ್ಕೂ ಅಧಿಕ ಮಂದಿಗೆ 94ಸಿ ದಾಖಲೆ ಪತ್ರ ಸೇರಿದಂತೆ 4 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ದಾಖಲೆ ಪತ್ರಗಳನ್ನು ವಿತರಣೆ ಮಾಡುವ ಕೆಲಸ ಆಗಿದೆ ಎಂದು ಹೇಳಿದರು. ವಾರದ ಪ್ರತಿ ಮಂಗಳವಾರ ಬೈಠಕ್ ಆಗುತ್ತಿದ್ದು ಕರ್ನಾಟಕ ರಾಜ್ಯದಲ್ಲೇ 29 ಬಾರಿ ಬೈಠಕ್ ಮಾಡಿದ ಉದಾಹರಣೆ ಇಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಈ ಹಿಂದೆ ವಿನಯ ಕುಮಾರ್ ಸೊರಕೆ ಇದ್ದ ಸಮಯದಲ್ಲಿ ಬಹಳಷ್ಟು ಮಂದಿಗೆ ಹಕ್ಕು ಪತ್ರ ವಿತರಣೆ ಆಗಿದೆ ಆದರೆ ಅಂದಿನಿಂದ ಇಂದಿನವರೇಗೂ ಬಹಳಷ್ಟು ಮಂದಿ ಬಡವರು ಉಳಿದುಕೊಂಡಿದ್ದಾರೆ ಇಂತಹ ಬಡವರಿಗೆ ಹಕ್ಕು ಪತ್ರ ಸಿಗಬೇಕು ಅದೇ ನನ್ನ ಆಸೆ ಅದನ್ನು ಮಾಡಿಯೇ ಮಾಡುತ್ತೇನೆ ಎಂದು ಹೇಳಿದರು.
ನೀವು ಒಮ್ಮೆ ಬಿಜೆಪಿಗೆ ಬನ್ನಿ ಎನ್ನುತ್ತಿದ್ದಾರೆ….?!
ರಾಜಕೀಯ ರಹಿತವಾಗಿ ಯೋಚಿಸಿ ಅದೆಷ್ಟೋ ಮಂದಿ ದೊಡ್ಡ ದೊಡ್ಡವರು ಇಲ್ಲಿ ಇರಲಿಲ್ಲವಾ? ಅವರಿಗ್ಯಾಕೆ ಅಭಿವೃದ್ಧಿ ಮಾಡಲಿಕ್ಕೆ ಸಾಧ್ಯವಾಗಿಲ್ಲ? ಕರ್ನಾಟಕದಲ್ಲಿ 22 ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಇದೆ. ಇಲ್ಲದ್ದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮಾತ್ರ ಯೋಚನೆ ಮಾಡಿ ಇದು ನಮ್ಮ ದುರಾದೃಷ್ಟ ಅಲ್ಲವೇ? ಅಭಿವೃದ್ಧಿಯನ್ನು ಸ್ವಾಗತಿಸುವ ಗುಣ ನಮ್ಮಲ್ಲಿ ಬರಬೇಕು ಎಂಬ ಶಾಸಕ ಅಶೋಕ್ ಕುಮಾರ್ ರೈಗಳು, ಈಗ ಬಿಜೆಪಿಯವರು ಫೋನ್ ಮಾಡಿ ನೀವು ಒಮ್ಮೆ ಬಿಜೆಪಿಗೆ ಬನ್ನಿ ಎನ್ನುತ್ತಿದ್ದಾರೆ. ನಾನು ಅಲ್ಲಿಂದ ಸಾಕಾಗಿ ಇಲ್ಲಿಗೆ ಬಂದದ್ದು, ನನ್ನದು ಏನಿದ್ದರೂ ಅಭಿವೃದ್ಧಿ ಮಾತ್ರ ನಾವು ಮಾಡುವ ಅಭಿವೃದ್ಧಿ ಕೆಲಸಗಳು ಮಾತ್ರ ಕೊನೆಗೆ ಉಳಿಯುವುದು ಅದೇ ನನಗೆ ಬೇಕಾಗಿರುವುದು ಎಂದು ರೈ ಹೇಳಿದರು.
ಕಾಂಗ್ರೆಸ್ಗೆ ವೋಟು ಕೇಳಬೇಕಾದರೆ ಅಭಿವೃದ್ದಿ ಮಾಡಬೇಕು.. ಬಿಜೆಪಿಯವರಿಗೆ ಧರ್ಮರಾಜಕೀಯ ಸಾಕು
ಕಾಂಗ್ರೆಸ್ಸಿಗರು ವೋಟು ಕೇಳಬೇಕಾದರೆ ಅಭಿವೃದ್ದಿ ಕೆಲಸ ಮಾಡಬೇಕು, ಅಭಿವೃದ್ದಿ ಕೆಲಸ ಮಾಡದಿದ್ದರೆ ನಮಗೆ ವೋಟು ಕೇಳಲು ಕಷ್ಟ, ಅದಕ್ಕೆ ನಾವು ಅಕ್ರಮ ಸಕ್ರಮ, ಬಡವರಿಗೆ ನಿವೇಶನದ ಹಕ್ಕು ಪತ್ರ, ಉಚಿತ ನಿವೇಶನ, ಮೆಡಿಕಲ್ ಕಾಲೇಜು, ಕುಡಿಯುವ ನೀರಿನ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಮಾಡಿದ್ದೇವೆ ಆದರೆ ಬಿಜೆಪಿಯವರು ವೋಟು ಕೇಳಬೇಕಾದರೆ ಅಭಿವೃದ್ದಿ ಕೆಲಸ ಮಾಡಬೇಕಿಲ್ಲ ಚುನಾವಣೆ ಸಮಯದಲ್ಲಿ ಹಿಂದು ಮುಸ್ಲಿಂ ಧರ್ಮ ರಾಜಕೀಯ ಮಾಡಿದರೆ ಸಾಕಾಗುತ್ತದೆ. ಧರ್ಮದ ಹೆಸರು ಹೇಳಿ ವೋಟು ಪಡೆಯುತ್ತಾರೆ ಬಳಿಕ ಯಾವುದೇ ಅಭಿವೃದ್ದಿ ಕೆಲಸ ಮಾಡದೆ ಐದು ವರ್ಷ ಸುಮ್ಮನಿರುತ್ತಾರೆ ಮತ್ತೊಂದು ಚುನಾವಣೆ ಬಂದಾಗ ಮತ್ತೆ ಅದೇ ಧರ್ಮ ರಾಜಕಾರಣ ಮಾಡಿ ವೋಟು ಕೇಳುತ್ತಾರೆ ಎಂದು ಶಾಸಕರು ಆರೋಪ ಮಾಡಿದರು.

ವಂದೇ ಭಾರತ್ ರೈಲಿನ ಬಗ್ಗೆ ಪ್ರತಿಭಟನೆ ಮಾಡಿ ಬಿಜೆಪಿಯವರೇ ಒತ್ತಾಯ ಮಾಡಿದ್ದರು
ವಂದೇ ಭಾರತ್ ರೈಲು ಪುತ್ತೂರಿನಲ್ಲಿ ನಿಲುಗಡೆಯಿಲ್ಲ ಇದರ ವಿರುದ್ದ ನೀವು ಪ್ರತಿಭಟನೆ ಮಾಡಿ ಎಂದು ಬಿಜೆಪಿಯ ಕೆಲವು ನಾಯಕರು ನನಗೆ ಕರೆ ಮಾಡಿ ಹೇಳಿದ್ದರು. ನಾನು ಪ್ರತಿಭಟನೆ ಮಾಡುವುದಿಲ್ಲ ನೀವೇ ಪ್ರತಿಭಟನೆ ಮಾಡಿ , ಕೇಂದ್ರದಲ್ಲಿ ನಿಮ್ಮದೇ ಸರಕಾರ ಇದೆ ಎಂದು ಕರೆ ಮಾಡಿದವರಿಗೆ ಹೇಳಿದ್ದೆ. ವಂದೇ ಭಾರತ್ ರೈಲು ಕನಿಷ್ಟ ಪುತ್ತೂರಿಗೆ ಬಂತಲ್ಲ ಎಂಬುದಕ್ಕೆ ಸಂತೋಷಪಡುವುದನ್ನು ಬಿಟ್ಟು ನಿಲುಗಡೆ ಇಲ್ಲ ಎಂದು ಬಿಜೆಪಿಯವರು ಪ್ರತಿಭಟನೆ ಮಾಡಲು ಹೇಳುತ್ತಿರುವುದು ಧರ್ಮವಲ್ಲ. ಅಭಿವೃದ್ದಿಯಲ್ಲಿ ರಾಜಕೀಯ ಮಾಡುವ ವ್ಯಕ್ತಿ ನಾನಲ್ಲ. ಯಾರೇ ಅಭಿವೃದ್ದಿ ಮಾಡಿದರೂ ಅದನ್ನು ನಾನು ಸ್ವಾಗತಿಸುವೆ ಆದರೆ ಬಿಜೆಪಿಗೆ ಅಭಿವೃದ್ದಿ ಬೇಕಾಗಿಲ್ಲ ಅವರದ್ದು ಜನರ ಭಾವನೆಯ ಜೊತೆ ಚೆಲ್ಲಾಟದ ರಾಜಕೀಯ ಎಂದು ಶಾಸಕರು ಆರೋಪಿಸಿದರು.
ಕುರಿಯ ಗ್ರಾಮದವರಿಗೆ 94 ಸಿ ಹಕ್ಕು ಪತ್ರ ವಿತರಣೆ
ಕುರಿಯ ಗ್ರಾಮದ ಹಲವಾರು ಫಲಾನುಭವಿಗಳಿಗೆ 94 ಸಿ ಹಕ್ಕು ಪತ್ರ ನೀಡಿರಲಿಲ್ಲ. ಕುರಿಯ ಗ್ರಾಮದಲ್ಲಿ 94 ಸಿ ಕೊಡಲು ಸಾಧ್ಯವಿಲ್ಲ ಅವರಿಗೆ 94 ಸಿಸಿ ಹಕ್ಕು ಪತ್ರ ಕೊಡಬೇಕಾಗುತ್ತದೆ ಎಂದು ಈ ಹಿಂದೆ ತಿಳಿಸಲಾಗಿತ್ತು ಆದರೆ ಶಾಸಕರು 94 ಸಿಸಿ ಬದಲಾಗಿ 94 ಸಿ ಹಕ್ಕು ಪತ್ರ ಕೊಡಿಸುವುದಾಗಿ ಭರವಸೆ ನೀಡಿದ್ದರು ಅದರಂತೆ ಇಂದು 7 ಮಂದಿಗೆ 94 ಸಿ ಹಕ್ಕು ಪತ್ರವನ್ನು ಕೊಡಿಸಲಾಯಿತು.
ಅಕ್ರಮ ಸಕ್ರಮ ಸಮಿತಿಯ ಸದಸ್ಯರಾದ ಮಹಮ್ಮದ್ ಬಡಗನ್ನೂರು ಮಾತನಾಡಿ ಶಾಸಕರ ನಡೆ ಅಭಿವೃದ್ದಿಯ ಕಡೆ ಎಂಬಂತೆ ಗ್ರಾಮ ಗ್ರಾಮಗಳಲ್ಲಿ ಅಕ್ರಮ ಸಕ್ರಮ ಬೈಠಕ್ ನಡೆಸುತ್ತಿದ್ದಾರೆ. ವಾರದ ಪ್ರತೀ ಮಂಗಳವಾರ ಈ ಬೈಠಕ್ ನಿರಂತರ ಮುಂದುವರೆಯಲಿದೆ. ಅಭಿವೃದ್ದಿ ಕೆಲಸದತ್ತ ಪುತ್ತೂರು ದಾಪುಗಾಲಿಡುತ್ತಿದೆ. ಪುತ್ತೂರಿನ ಎಲ್ಲಾ ಸಮುದಾಯಕ್ಕೂ ನಿವೇಶನವನ್ನು ಕೊಡಲಿರುವ ಶಾಸಕರು ಸಾಮಾಜಿಕ ನ್ಯಾಯ ಮತ್ತು ರಾಜಧರ್ಮ ಪಾಲನೆಯನ್ನು ಮಾಡುತ್ತಿರುವುದು ಅಭಿನಂದನಾರ್ಹವಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಅಕ್ರಮ ಸಕ್ರಮ ಸಮಿತಿ ಕಾರ್ಯದರ್ಶಿ ತಹಶಿಲ್ದಾರ್ ಕೂಡ್ಲಿಗಿ, ಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ, ರೂಪರೇಖಾ ಆಳ್ವ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಉಮಾನಾಥ ಶೆಟ್ಟಿ ಪೆರ್ನೆ ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ಚಂದ್ರನಾಯ್ಕ್ ಸ್ವಾಗತಿಸಿ, ಒಳಮೊಗ್ರು ಗ್ರಾಮ ಆಡಳಿತಾಧಿಕಾರಿ ಸಂದೇಶ್ ವಂದಿಸಿದರು.
ನಾನು ಕಟ್ಟಾ ಬಿಜೆಪಿ , ನಾನು ಅಶೋಕ್ ರೈ ಅವರಂತಹ ಶಾಸಕರನ್ನು ಕಂಡಿಲ್ಲ. ಇಂದಿನ ಅಕ್ರಮ ಸಕ್ರಮ ಸಭೆಗೆ ಬಂದು ನಾನು ಶಾಸಕರ ಭಾಷಣ ಕೇಳಿದೆ, ಅವರ ಬಗ್ಗೆ ತಿಳಿದು ನನಗೆ ತುಂಬಾ ಸಂತೋಷವಾಯಿತು. ಅಕ್ರಮ ಸಕ್ರಮ ಸಭೆಯನ್ನು ನಾನು ಮೊದಲ ಬಾರಿಗೆ ನೋಡಿದ್ದೇನೆ. ನನ್ನ ಅಕ್ರಮ ಸಕ್ರಮ ಕಡತವನ್ನು ಮಂಜೂರು ಮಾಡಿದ್ದಾರೆ. ಇವರೇ ಮುಂದೆ ಶಾಸಕರಾಗಿ ಬರಬೇಕು ಎಂಬುದು ನನ್ನ ಆಸೆಯಾಗಿದೆ.
ಉಮಾ ಜೆ ಶೆಟ್ಟಿ, ಒಳಮೊಗ್ರು
ಅಶೋಕ್ ರೈ ಅವರು ಬೆಸ್ಟ್ ಶಾಸಕರು. ಜನರ ಮನೆ ಬಾಗಿಲಿಗೆ ಬಂದು ಅಕ್ರಮ ಸಕ್ರಮ ಮಂಜೂರು ಮಾಡುತ್ತಿದ್ದಾರೆ. ಮೊದಲ ಬಾರಿಗೆ ಈ ರೀತಿಯ ಅಕ್ರಮ ಸಕ್ರಮ ವಿಲೇವಾರಿ ನೋಡುತ್ತಿದ್ದೇನೆ. ಪುತ್ತೂರು ಅಭಿವೃದ್ದಿಯಾಗುತ್ತಿದೆ. ಅದೆಷ್ಟೋ ಶಾಸಕರು ಪುತ್ತೂರಿನಲ್ಲಿ ಬಂದು ಹೋಗಿದ್ದಾರೆ ಆದರೆ ಅಶೋಕ್ ರೈ ಪುತ್ತೂರು ಜನತೆ ಮರೆಯಲಾರದ ಅಭಿವೃದ್ದಿ ಕೆಲಸ ಮಾಡಿದ್ದಾರೆ, ಬಡವರ ಕೆಲಸವನ್ನು ಮಾಡಿದ್ದಾರೆ. ಮುಂದೆ ಅವರೇ ಶಾಸಕರಾಗಿ ಆಯ್ಕೆಯಾಗುತ್ತಾರೆ ಅದರಲ್ಲಿ ಸಂಶಯವಿಲ್ಲ
ನಿತ್ಯಾನಂದ ಶೆಟ್ಟಿ ಕೈಕಾರ
ಇಷ್ಟುವರ್ಷದ ಶಾಸಕರ ಪೈಕಿ ಅಶೋಕ್ ರೈ ಓರ್ವ ಉತ್ತಮ ಶಾಸಕರಾಗಿದ್ದಾರೆ. ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮೂಲಕ ಜನರ ಕೆಲಸವನ್ನು ಮಾಡುತ್ತಿದ್ದಾರೆ. ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿರುವ ಕಾರಣ ಜನರ ನಡುವೆ ಅವರ ಕಾರ್ಯವೈಖರಿ ಚರ್ಚೆಯಾಗುತ್ತಿದೆ. ಒಬ್ಬ ವಿಭಿನ್ನ ರೀತಿಯ ಶಾಸಕರಾಗಿ ರಾಜ್ಯದಲ್ಲೇ ಪ್ರಥಮ ಶಾಸಕ ಎಂಬಂತೆ ಕಟ್ಟಕಡೇಯ ವ್ಯಕ್ತಿಗೂ ನ್ಯಾಯ ಕೊಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಮಿತ್ರದಾಸ್ ರೈ, ಡೆಕ್ಕಳ










