ಆಮಂತ್ರಣ ಪತ್ರಿಕೆ, ವೇದಿಕೆ ಫಲಕದಲ್ಲಿ ಕನ್ನಡ ಕಡ್ಡಾಯಗೊಳಿಸಲು ಒತ್ತಾಯ: ಪ್ರಾಧಿಕಾರದ ಅಧ್ಯಕ್ಷರಿಗೆ ಪುತ್ತೂರು ತಾಲೂಕು ಕಸಾಪ ಅಧ್ಯಕ್ಷರಿಂದ ಮನವಿ

0

ಪುತ್ತೂರು : ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿನೆಲೆ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅವರು ಕರ್ನಾಟಕದಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲಾ ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ಸಂಘ-ಸಂಸ್ಥೆಗಳ ಸಭೆ-ಸಮಾರಂಭಗಳ ಆಮಂತ್ರಣ ಪತ್ರಿಕೆ ಹಾಗೂ ವೇದಿಕೆ ಹಿಂಭಾಗದ ಫಲಕದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವಂತೆ ಸರ್ಕಾರದಿಂದ ಕಟ್ಟುನಿಟ್ಟಿನ ಆದೇಶ ಹೊರಡಿಸಲು ಸರ್ಕಾರಕ್ಕೆ ಒತ್ತಾಯ ಮಾಡಬೇಕೆಂದು ಮನವಿ ನೀಡಿದರು.

ಮನವಿಯ ವಿವರ:
ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಹಾಗೂ ನಮ್ಮ ಅನ್ನದ ಭಾಷೆ. ನಮ್ಮ ರಾಜ್ಯದಲ್ಲಿ ರೋಟರಿ, ಲಯನ್ಸ್, ಜೆಸಿಐ, ಬಿಎನ್‌ಐ, ಇನ್ನರ್ ವೀಲ್, ಟೋಸ್ಟ್‌ಮಾಸ್ಟರ್ಸ್, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಮುಂತಾದ ಹತ್ತಾರು ಜಾಗತಿಕ ಮತ್ತು ರಾಷ್ಟ್ರೀಯ ಮಟ್ಟದ ಸೇವಾ ಹಾಗೂ ವೃತ್ತಿಪರ ಸಂಸ್ಥೆಗಳು ಅತ್ಯಂತ ಬೃಹತ್ ಜಾಲವನ್ನು ಹೊಂದಿವೆ. ಈ ಪತ್ರದೊಂದಿಗೆ ಲಗತ್ತಿಸಲಾದ ಅನುಬಂಧದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಾದ್ಯಂತ ಇಂತಹ ಸಂಸ್ಥೆಗಳ ಸುಮಾರು 3,745 ಕ್ಕೂ ಹೆಚ್ಚು ಸಕ್ರಿಯ ಕ್ಲಬ್‌ಗಳಿದ್ದು, 1.28 ಲಕ್ಷಕ್ಕೂ ಅಧಿಕ ಪ್ರಭಾವಿ ಸದಸ್ಯರು ಕಾರ್ಯನಿರ್ವಹಿಸುತ್ತಿದ್ದಾರೆ.ಪ್ರಸ್ತುತ ಹೆಚ್ಚಿನ ಎಲ್ಲಾ ಅಂತರರಾಷ್ಟ್ರೀಯ ಸಂಸ್ಥೆಗಳು ತಮ್ಮ ನಿಯಮಾವಳಿಗಳಲ್ಲಿ ಸ್ಥಳೀಯ ಭಾಷೆಗಳನ್ನು ಬಳಸಲು ಮುಕ್ತ ಅನುಮತಿ ಹಾಗೂ ಪ್ರೋತ್ಸಾಹವನ್ನು ನೀಡಿದ್ದರೂ ಸಹ, ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಈ ಸಂಸ್ಥೆಗಳು (ಕೆಲವೊಂದು ಸಂಸ್ಥೆಗಳು- ಸಂಸ್ಥೆಯ ಶಾಖೆಗಳು ಹೊರತುಪಡಿಸಿ )ತಮ್ಮ ಆಮಂತ್ರಣ ಪತ್ರಿಕೆಗಳು, ವೇದಿಕೆಯ ಹಿಂಭಾಗದ ನಾಮಫಲಕಗಳು (ಬ್ಯಾಕ್‌ಡ್ರಾಪ್ ಬ್ಯಾನರ್‌ಗಳು) ಹಾಗೂ ಪ್ರಕಟಣೆಗಳನ್ನು ಸಂಪೂರ್ಣವಾಗಿ ಆಂಗ್ಲ ಭಾಷೆಯಲ್ಲೇ ಮುದ್ರಿಸುವುದನ್ನು ಒಂದು ‘ಪ್ಯಾಷನ್’ ಅಥವಾ ಪ್ರತಿಷ್ಠೆಯ ಹವ್ಯಾಸವನ್ನಾಗಿ ಮಾಡಿಕೊಂಡಿವೆ. ಕನ್ನಡಿಗರೇ ಹೆಚ್ಚಾಗಿರುವ ಹಾಗೂ ಸ್ಥಳೀಯ ಸಾರ್ವಜನಿಕರಿಗಾಗಿ ನಡೆಸುವ ಕಾರ್ಯಕ್ರಮಗಳಲ್ಲೂ ಆಂಗ್ಲ ಭಾಷೆಯನ್ನೇ ವೈಭವೀಕರಿಸುವುದು ನಮ್ಮ ಭಾಷೆಯ ಉಳಿವಿಗೆ ಗಂಭೀರ ಮಾರಕವಾಗಿದೆ. ಇಂತಹ ಸಂಸ್ಥೆಗಳ ಆಂಗ್ಲ ಭಾಷೆಯ ವ್ಯಾಮೋಹದ ಪದ್ಧತಿಯನ್ನೇ ನಮ್ಮ ಮುಂದಿನ ಯುವ ತಲೆಮಾರು ಅನುಸರಿಸಿಕೊಂಡು ಬಂದರೆ, ಭವಿಷ್ಯದಲ್ಲಿ ನಮ್ಮ ಸಾರ್ವಭೌಮ ಕನ್ನಡ ಭಾಷೆಯು ತನ್ನ ನೆಲದಲ್ಲೇ ಅಳಿವು-ಉಳಿವಿನ ಭೀಕರ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂಬುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ.

ಕನ್ನಡದ ಹಿತರಕ್ಷಣೆ ಮತ್ತು ಅನುಷ್ಠಾನದ ಅತ್ಯುನ್ನತ ಸಂಸ್ಥೆಯಾಗಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಕರ್ನಾಟಕ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿಯಮ ರೂಪಿಸಲು ಒತ್ತಾಯಿಸಬೇಕು. ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ತಮ್ಮ ಆಮಂತ್ರಣ ಪತ್ರಿಕೆಗಳನ್ನು ಕಡ್ಡಾಯವಾಗಿ ಕನ್ನಡದಲ್ಲೇ ಮುದ್ರಿಸಬೇಕು. ಒಂದು ವೇಳೆ ಆಂಗ್ಲ ಭಾಷೆಯಲ್ಲಿ ಮುದ್ರಿಸುವುದು ಅನಿವಾರ್ಯವಾದಲ್ಲಿ, ಅದರ ಜೊತೆಗೆ ಕಡ್ಡಾಯವಾಗಿ ಸಮಾನ ಪ್ರಾಮುಖ್ಯತೆಯ ಕನ್ನಡ ಆಮಂತ್ರಣ ಪತ್ರಿಕೆಯನ್ನು ನೀಡಲೇಬೇಕು ಎಂಬ ನಿಯಮ ಜಾರಿಯಾಗಬೇಕು.

ಸಭೆ-ಸಮಾರಂಭಗಳ ವೇದಿಕೆ ಬ್ಯಾನರ್‌ಗಳಲ್ಲಿ ಮತ್ತು ಇವರು ಸ್ಥಾಪಿಸುವ ಶಾಶ್ವತ ಯೋಜನಾ ಫಲಕಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸುವಂತೆ ಸರ್ಕಾರಿ ಆದೇಶ ಹೊರಡಿಸಬೇಕು. ಮಾನ್ಯ ಅಧ್ಯಕ್ಷರು ಸರ್ಕಾರಕ್ಕೆ ಈ ಬಗ್ಗೆ ಪ್ರಬಲ ಶಿಫಾರಸು ಮಾಡಿ, ರಾಜ್ಯದಾದ್ಯಂತ ಈ ಕಾಯ್ದೆ/ಆದೇಶ ಜಾರಿಗೆ ಬರುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here