







ನೃತ್ಯ ಜೀವನ ಪ್ರೀತಿ, ವಯಸ್ಸಿನ ಮಿತಿಯಿಲ್ಲ – ಡಾ| ಶೋಭಿತಾ ಸತೀಶ್


ಪುತ್ತೂರು: ನವರಾತ್ರಿ ಅಂಗವಾಗಿ ಇನರ್ ವೀಲ್ಹ್ ಕ್ಲಬ್ ವತಿಯಿಂದ ನೃತ್ಯ ಜೀವನದಲ್ಲಿ ವಿಶೇಷ ಕಾರ್ಯಗಾರವು ಅ.13ರಂದು ಮುಕ್ರಂಪಾಡಿ ಸುಭದ್ರ ಸಭಾಭವನದಲ್ಲಿ ನಡೆಯಿತು.



ನೃತ್ಯ ಜೀವನ ಪ್ರೀತಿ, ವಯಸ್ಸಿನ ಮಿತಿಯಿಲ್ಲ:
ಡಾ.ಶೋಭಿತಾ ಸತೀಶ್ ಅವರು ತಮ್ಮ ನಿತ್ಯ ಜೀವನದಲ್ಲಿ ನೃತ್ಯ ವಿಶೇಷ ಉಪನ್ಯಾಸ ನೀಡಿದರು. ನಮ್ಮ ನಿತ್ಯ ಜೀವನದಲ್ಲಿ ನೃತ್ಯ ಹಾಸುಹೊಕ್ಕಾಗಿದೆ. ಆದರೆ ನಾವು ಅದನ್ನು ಗಮನಿಸುವುದಿಲ್ಲ ಅಷ್ಟೇ. ನಾವು ಮಾತನಾಡುವಾಗ, ಚರ್ಚಿಸುವಾಗ, ಮತ್ತೊಬ್ಬರೊಂದಿಗೆ ವಿಚಾರಗಳನ್ನು ಹಂಚಿಕೊಳ್ಳುವಾಗ ಅಥವಾ ಮಕ್ಕಳಿಗೆ ಕಥೆ ಹೇಳುವಾಗ ನಮ್ಮ ಕೈಗಳು, ಕಣ್ಣುಗಳು, ಮುಖಭಾವಗಳು ಹಾಗೂ ಭಾವನೆಗಳು ಸಹಜವಾಗಿಯೇ ಅಭಿನಯ ಮತ್ತು ಭಂಗಿಗಳ ಮೂಲಕ ವ್ಯಕ್ತವಾಗುತ್ತವೆ. ಇವೆಲ್ಲವೂ ನೃತ್ಯದ ವಿವಿಧ ಅಭಿವ್ಯಕ್ತಿಗಳೇ ಆಗಿವೆ ಎಂದು ಹೇಳಬಹುದು. ನೃತ್ಯ ಕಲಿಯಬೇಕು ಅಥವಾ ಮಾಡಬೇಕು ಎಂದಾಗ ಅದಕ್ಕೆ ವಯಸ್ಸಿನ ಮಿತಿ ಇದೆ ಎಂದು ಕೆಲವರು ಭಾವಿಸುತ್ತಾರೆ. ಆದರೆ ನೃತ್ಯಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಅದೊಂದು ಜೀವನ ಪ್ರೀತಿ. ಯಾವುದೇ ವಯಸ್ಸಿನಲ್ಲಿ ಬೇಕಾದರೂ ನೃತ್ಯವನ್ನು ಕಲಿಯಬಹುದು, ಅಭ್ಯಾಸ ಮಾಡಬಹುದು ಮತ್ತು ಅದರ ಆನಂದವನ್ನು ಅನುಭವಿಸಬಹುದು. ನೃತ್ಯ ಕೇವಲ ಕಲೆಯಲ್ಲ; ಅದೊಂದು ಉತ್ತಮ ವ್ಯಾಯಾಮವೂ ಹೌದು. ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ನೃತ್ಯ ಸಹಕಾರಿಯಾಗಿದೆ. ಅದೇ ರೀತಿ, ನಮ್ಮಲ್ಲಿರುವ ದುಃಖ, ದುಮ್ಮಾನ, ಕೋಪ, ಆಯಾಸ ಹಾಗೂ ಖಿನ್ನತೆಯಂತಹ ಭಾವನೆಗಳನ್ನು ಹಗುರಗೊಳಿಸಿಕೊಳ್ಳಲು ನೃತ್ಯ ನೆರವಾಗಬಲ್ಲದು. ನೃತ್ಯದ ಮೂಲಕ ಮನಸ್ಸಿಗೆ ಸಂತೋಷ, ಉಲ್ಲಾಸ ಮತ್ತು ನೆಮ್ಮದಿಯನ್ನು ಪಡೆದುಕೊಳ್ಳಲು ಸಾಧ್ಯವಿದೆ ಎಂದವರು ಹೇಳಿದರು. ಇನ್ನರ್ವೀಲ್ಹ್ ಕ್ಲಬ್ ಅಧ್ಯಕ್ಷೆ ಮನೋರಮ ಸೂರ್ಯ ಅವರು ಅಧ್ಯಕ್ಷತೆ ವಹಿಸಿದ್ದರು.

ನೃತ್ಯಪ್ರಸ್ತುತಿ:
ಸಿವಿಲ್ ಡಿಸೈನರ್ ಆಗಿರುವ ವಿದುಷಿ ಪೂರ್ಣಿಮಾ ಪ್ರದೀಪ್ ಅವರು ಮುಕ್ರಂಪಾಡಿ ಸುಭದ್ರಕಲಾ ಮಂದಿರದಲ್ಲಿ ಆರಾಧನ ನೃತ್ಯ ತಂಡದ ಮೂಲಕ ಮಹಿಳೆಯರಿಗೆ ನೃತ್ಯವನ್ನು ಕಲಿಸುತ್ತಿದ್ದು, ಅವರಿಂದ ನೃತ್ಯಪ್ರಸ್ತುತಿ ನಡೆಯಿತು.
ಕಾರ್ಯಕ್ರಮದಲ್ಲಿ ಇನ್ನರ್ ವೀಲ್ಹ್ ಕ್ಲಬ್ ಅಧ್ಯಕ್ಷೆ ಮನೋರಮಾ ಸೂರ್ಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎಡಿಟರ್ ಜ್ಯೋತಿ ಎಸ್, ಖಜಾಂಚಿ ಕವಿತಾ ಕೊಳತ್ತಾಯ, ಮಾಜಿ ಅಧ್ಯಕ್ಷೆ ರೂಪಲೇಖಾ, ನಿರ್ದೇಶಕರಾದ ಮಂಜುಳಾ ಭಾಸ್ಕರ್, ವೀಣಾ ಬಿ.ಕೆ ಸಹಿತ 25 ಮಂದಿ ಸದಸ್ಯೆಯರು ಉಪಸ್ಥಿತರಿದ್ದರು.










