







ಪುತ್ತೂರು: ನಾವೂರು ಪೇಟೆಯ ಸ್ವಾತಿ ಕಟ್ಟಡದಲ್ಲಿ ಡಾ. ಪ್ರದೀಪ್ ಅವರು ನಡೆಸುತ್ತಿದ್ದ ಆರೋಗ್ಯ ಕ್ಲಿನಿಕ್ಗೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸರು ನಾವೂರು ನಿವಾಸಿ ರವಿ ಪೂಜಾರಿ ಎಂಬಾತನನ್ನು ಬಂಧಿಸಿದ್ದಾರೆ.


ಇನ್ನಿಬ್ಬರು ಶಂಕಿತರಾದ ನಾವೂರು ನಿವಾಸಿ ಸುರೇಶ್ ಇಂಚರ ಮತ್ತು ಪುತ್ತೂರಿನ ಕೌಡಿಚ್ಚಾರಿನಲ್ಲಿ ದಿನೇಶ್ ಪ್ರಭು ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.



ಅ.6ರಂದು ತಡರಾತ್ರಿ ದುಷ್ಕರ್ಮಿಗಳು ಕ್ಲಿನಿಕ್ಗೆ ಡೀಸೆಲ್ ಸುರಿದು ಬೆಂಕಿ ಹಚ್ಚಿ ಸುಟ್ಟುಹಾಕುವ ಪ್ರಯತ್ನ ನಡೆಸಿದ್ದರು. ಈ ಕೃತ್ಯದಿಂದ ಔಷಧಿಗಳು, ವೈದ್ಯಕೀಯ ಸಲಕರಣೆಗಳು ಸುಟ್ಟು ಸುಮಾರು 2 ರಿಂದ 3 ಲಕ್ಷ ರೂ. ನಷ್ಟ ಉಂಟಾಗಿತ್ತು. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ BNS ಕಲಂ 326, 324ರಡಿ ಪ್ರಕರಣ ದಾಖಲಾಗಿತ್ತು.
“ಈ ಕೃತ್ಯ ಯಾಕೆ ನಡೆದಿದೆ ಎಂದು ತನಿಖೆಯಾಗಬೇಕು. ನಾವೂರು ಗ್ರಾಮದಲ್ಲಿ ಈ ರೀತಿ ಘಟನೆಗಳು ಪದೇ ಪದೇ ನಡೆಯುತ್ತಿದೆ” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಶಾಸಕ ಹರೀಶ್ ಪೂಂಜ, ಜನಪ್ರತಿನಿಧಿಗಳು, ವೈದ್ಯರು, ಉದ್ಯಮಿಗಳು ಸೇರಿದಂತೆ ನಾಗರಿಕರು ಕೃತ್ಯವನ್ನು ಖಂಡಿಸಿದ್ದರು.
ಘಟನೆ ನಡೆದು 7 ದಿನ ಕಳೆದರೂ ಆರೋಪಿಗಳ ಬಂಧನವಾಗಿಲ್ಲ ಎಂದು ವಿಶ್ವ ಹಿಂದೂ ಪರಿಷತ್ – ಬಜರಂಗದಳ, ಬೆಳ್ತಂಗಡಿ ಪ್ರಖಂಡದವರು ಅ.13ರಂದು ಆಕ್ರೋಶ ವ್ಯಕ್ತಪಡಿಸಿ, ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿದ್ದರು.
ಹೆಚ್ಚುವರಿ ಎಸ್ಪಿ ಅನಿಲ್ ಕುಮಾರ್ ಬೂಮರೆಡ್ಡಿ, ಡಿವೈಎಸ್ಪಿ ರೋಹಿಣಿ ಸಿ.ಕೆ. ಮಾರ್ಗದರ್ಶನದಲ್ಲಿ, ವೃತ್ತ ನಿರೀಕ್ಷಕ ರವಿ ಬಿ.ಎಸ್ ನೇತೃತ್ವದಲ್ಲಿ, ಪಿಎಸ್ಐಗಳಾದ ಆನಂದ್ ಹಾಗೂ ಸಿಕಂದರ್ ಪಾಷಾ ಅವರ ತಂಡ ಕಾರ್ಯಾಚರಣೆ ನಡೆಸಿದೆ.










