







ಮಂಗಳೂರಿನ ಬಜಾಲ್ ನಿವಾಸಿ ನಾಗರಾಜ್ ಬಜಾಲ್ ಅವರು ಸಂಪಾಜೆ ಗಡಿಯಿಂದ ಮಂಗಳೂರಿನವರೆಗೆ ಸ್ವಚ್ಛತಾ ದಂಡಯಾತ್ರೆ ನಡೆಸುತ್ತಿದ್ದಾರೆ. ನಾಗರಾಜ್ ಅವರು ಬಿಎ ಪದವೀಧರರು – ಹಿಸ್ಟರಿ, ಎಕನಾಮಿಕ್ಸ್. ತಂದೆ ದಿ. ರಾಘವ ಅಂಚನ್, ತಾಯಿ ವೇದಾವತಿ. ಪತ್ನಿ, ಇಬ್ಬರು ಮಕ್ಕಳ ಪುಟ್ಟ ಸಂಸಾರ. ಗಲ್ಫ್ಗೆ ಹೋಗಿ 14 ವರ್ಷ ಮರುಭೂಮಿಯಲ್ಲಿ ದುಡಿದು, ಕೈತುಂಬ ಸಂಬಳ ಗಳಿಸಿ ಊರಿಗೆ ಬಂದು ಬ್ಯುಸಿನೆಸ್ ಮಾಡುವ ಕನಸು ಕಂಡಿದ್ದರು. ಅಷ್ಟರಲ್ಲಿ ಕೊರೋನಾ ಬಂತು. ವಿಮಾನ ಇಲ್ಲ, ದಾರಿ ಇಲ್ಲ. ಮನೆಯ ನಾಲ್ಕು ಗೋಡೆ ಮಧ್ಯೆ ಕೂತಾಗ ಪರಿಚಯವಾದದ್ದು ಬೀದಿ ನಾಟಕ. ಆ ಬಳಿಕ ಪ್ಲಾಸ್ಟಿಕ್ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಅದುವೇ ಇಂದು ಅವರ ಬದುಕಾಗಿದೆ. ಸದ್ಯ ಬೆಂಗಳೂರಿನ ‘ಹಸಿರು ದಳ’ ಎನ್ಜಿಒನಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಎಸ್ಬಿಐ ಫೌಂಡೇಶನ್ ಬೆಂಬಲದೊಂದಿಗೆ ಕೆಲಸ ಮಾಡುತ್ತಿದ್ದಾರೆ.



ನೇತ್ರಾವತಿ ಸೇತುವೆ ಮೇಲೆ 6 ತಿಂಗಳು ಬೋರ್ಡ್ ಹಿಡಿದು ನಿಂತಿದ್ದರು
ನೇತ್ರಾವತಿಗೆ ಜನ ಕಸ ಎಸೆಯುವುದನ್ನು ನೋಡಿ ಸುಮ್ಮನಿರಲಾಗದೆ 2021ರಲ್ಲಿ ‘ನಮ್ಮ ನೇತ್ರಾವತಿ ನಮ್ಮ ಜವಾಬ್ದಾರಿ’ ಅಭಿಯಾನ ಆರಂಭಿಸಿದರು. ಉಳ್ಳಾಲದ ನೇತ್ರಾವತಿ ಸೇತುವೆ ಮೇಲೆ “ಕಸ ಎಸೆಯಬೇಡಿ” ಎಂಬ ಬೋರ್ಡ್ ಹಿಡಿದು ದಿನಾಲು ಬೆಳಿಗ್ಗೆ 5 ಗಂಟೆಯಿಂದ 9.30ರವರೆಗೆ ಒಬ್ಬರೇ ನಿಂತರು. ಒಂದು ದಿನವಲ್ಲ, ಆರು ತಿಂಗಳು! ಅಡ್ಯಾರ್, ಫರಂಗಿಪೇಟೆಯಲ್ಲೂ ಕಸದ ಜಾಗೃತಿ ಮೂಡಿಸುತ್ತಿದ್ದರು.



ಈ ವೇಳೆ ಅವರಿಗೆ ಮನವರಿಕೆಯಾದ್ದು, ಬರೀ ಬೋರ್ಡ್ ಸಾಲದು, ವ್ಯವಸ್ಥೆ ಸರಿ ಮಾಡಬೇಕು. ಪಂಚಾಯತ್ಗಳಿಗೆ ಹೋದಾಗ ಕಸ ಸಾಗಿಸಲು ಗಾಡಿ ಇಲ್ಲ, ಘಟಕ ಇಲ್ಲ, ವ್ಯವಸ್ಥೆಯೇ ಇಲ್ಲ ಎಂಬುದು ಗೊತ್ತಾಯಿತು. ಮೊದಲು ನೀರಿನಂಚಿನ 10 ಪಂಚಾಯತ್ಗಳನ್ನು ಆಯ್ಕೆ ಮಾಡಿ ‘ಶೂನ್ಯ ತ್ಯಾಜ್ಯ ಮಾದರಿ ಪಂಚಾಯತ್’ ಎಂದು ಹೆಸರಿಟ್ಟರು. ಎಸ್ಬಿಐ ಫೌಂಡೇಶನ್ ಕೈ ಜೋಡಿಸಿತು. ಮುಚ್ಚಿದ್ದ ಘಟಕಕ್ಕೆ ಜೀವ ಬಂತು, ಮಿಷಿನರಿ ಬಂತು, ಸಂಜೀವಿನಿ ಒಕ್ಕೂಟದ ಮಹಿಳೆಯರಿಗೆ ತರಬೇತಿ ನೀಡಿದರು. 2025ರ ಅಕ್ಟೋಬರ್ 27ರಿಂದ ನವೆಂಬರ್ 3ರವರೆಗೆ ಕಾರವಾರದಿಂದ ಮಂಗಳೂರಿಗೆ ಹಸಿರು ನಡಿಗೆ, ಮೈಕ್ ಮೂಲಕ ಜಾಗೃತಿ ಕೂಡ ಮಾಡಿದ್ದಾರೆ.

ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛ ದಂಡಯಾತ್ರೆ
ಅಕ್ಟೋಬರ್ 9. ಕೊಡಗಿನ ಸಂಪಾಜೆ ಗಡಿ. ಬೆಳಗಿನ ಮಂಜಿನ ನಡುವೆ ಒಂದು ಹೆಜ್ಜೆ ಆರಂಭವಾಯಿತು. ಹೆಗಲಲ್ಲಿ ‘ಸ್ವಚ್ಛ ದಂಡಯಾತ್ರೆ’ ನಾಮಫಲಕ, ಕೈಯಲ್ಲಿ ಖಾಲಿ ಗೋಣಿ. ಗುರಿ – ಮಂಗಳೂರು. ಮಾರ್ಗ – ಮಾಣಿ-ಸಂಪಾಜೆ ರಾಷ್ಟ್ರೀಯ ಹೆದ್ದಾರಿ 275. ದಿನಕ್ಕೆ 12 ಕಿಲೋಮೀಟರ್. ಹೆಜ್ಜೆ ಹೆಜ್ಜೆಗೂ ರಸ್ತೆ ಬದಿಯ ಕಸವನ್ನು ಹೆಕ್ಕಿ ಗೋಣಿಗೆ ತುಂಬುವುದು.ಇದು ಸುಮ್ಮನೆ ಕಸ ಹೆಕ್ಕುವ ಕೆಲಸವಲ್ಲ, ಒಂದು ವ್ಯವಸ್ಥಿತ ಯಾತ್ರೆ. ಕಸ ಹೆಕ್ಕುವ ಮೊದಲೇ ನಾಗರಾಜ್ ಪ್ರತಿ ಗ್ರಾಮ ಪಂಚಾಯತ್ಗೆ ಕರೆ ಮಾಡುತ್ತಾರೆ – “ನಾನು ಬರುತ್ತಿದ್ದೇನೆ, ಕಸವನ್ನು ಸಂಗ್ರಹಿಸಿ ಇಟ್ಟಿರುತ್ತೇನೆ, ದಯವಿಟ್ಟು ವಿಲೇವಾರಿ ಮಾಡಿ” ಎಂದು. ಅವರ ಈ ಕಳಕಳಿಗೆ ಜಿಲ್ಲಾ ಪಂಚಾಯತ್ ಸ್ಪಂದಿಸಿದೆ. ಎಲ್ಲಾ ಪಂಚಾಯತ್ಗಳಿಗೆ ಮಾಹಿತಿ ರವಾನಿಸಿ, ಹೆಕ್ಕಿದ ಕಸ ಪಂಚಾಯತ್ ಮೂಲಕವೇ ಸ್ವಚ್ಛತಾ ಘಟಕ ಸೇರುವಂತೆ ವ್ಯವಸ್ಥೆ ಮಾಡಿದೆ. ಜೊತೆಗೆ ಸ್ವಚ್ಛ ಭಾರತ್ ಮಿಷನ್ ನೀಡಿದ ಪತ್ರ ಅವರ ಈ ಹೋರಾಟಕ್ಕೆ ಅಧಿಕೃತ ಬಲ ತುಂಬಿದೆ.ದಾರಿಯುದ್ದಕ್ಕೂ ಈಗ ಒಂದು ಸುಂದರ ಬದಲಾವಣೆ ಕಾಣುತ್ತಿದೆ. ಆರಂಭದಲ್ಲಿ ಒಬ್ಬಂಟಿಯಾಗಿ ಹೆಕ್ಕುತ್ತಿದ್ದ ನಾಗರಾಜ್ ಅವರನ್ನು ನೋಡಿ ಈಗ ಜನ ನಿಲ್ಲುತ್ತಿದ್ದಾರೆ. ರಿಕ್ಷಾ ಚಾಲಕರು ರಿಕ್ಷಾ ನಿಲ್ಲಿಸಿ ಗೋಣಿ ಹಿಡಿಯುತ್ತಿದ್ದಾರೆ, ಅಂಗಡಿ ಮುಂದಿನ ಯುವಕರು ಜೊತೆ ಸೇರುತ್ತಿದ್ದಾರೆ, ಸಂಘ-ಸಂಸ್ಥೆಗಳು, ಶಾಲಾ ಮಕ್ಕಳು ಕೈಜೋಡಿಸುತ್ತಿದ್ದಾರೆ.ಒಬ್ಬರ ಹೆಜ್ಜೆ ಈಗ ಹಲವರ ನಡಿಗೆಯಾಗುತ್ತಿದೆ. ಸಂಪಾಜೆಯಿಂದ ಹೊರಟ ಈ ಸ್ವಚ್ಛತೆಯ ಸಂದೇಶ ಅಕ್ಟೋಬರ್ 17ರಂದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ತಲುಪಲಿದೆ. ಆದರೆ ಅವರ ನಿಜವಾದ ಗುರಿ ಕೇವಲ ಕಚೇರಿ ತಲುಪುವುದಲ್ಲ, ಪ್ರತಿಯೊಬ್ಬರ ಮನಸ್ಸು ತಲುಪುವುದು.

ಐದು ದಿನಗಳಲ್ಲಿ 10 ಟನ್ಗೂ ಹೆಚ್ಚು ಕಸ ಸಂಗ್ರಹ
ಕೊಡಗಿನ ಸಂಪಾಜೆಯಿಂದ ಆರಂಭವಾದ ನಡಿಗೆಯಲ್ಲಿ ಪುತ್ತೂರುವರೆಗೆ 5 ದಿನಗಳಲ್ಲಿ 10 ಟನ್ಗೂ ಹೆಚ್ಚು ಕಸ ಸಂಗ್ರಹವಾಗಿದೆ. ಸಂಪಾಜೆಯಿಂದ ಅರಂತೋಡು ಸಾಗುವ ಮಾರ್ಗದಲ್ಲೇ ಎರಡು ಲಾರಿಗಳಷ್ಟು ಕಸ ಸಂಗ್ರಹವಾಗಿತ್ತು ಎಂದು ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಜ್ಯೂಸ್ ಕುಡಿದ ಬಳಿಕ ಪ್ಲಾಸ್ಟಿಕ್ ಬಾಟಲಿಗಳನ್ನು ರಸ್ತೆ ಬದಿಗೆ ಎಸೆಯುವುದು, ತಿಂಡಿ ತಿಂದ ಪೊಟ್ಟಣಗಳನ್ನು ಅಲ್ಲಿಯೇ ಬಿಸಾಡುವುದು ಸಾಮಾನ್ಯವಾಗಿದೆ. ಪಾನ್ಪರಾಗ್ ಬಳಕೆಯ ನಂತರ ಉಗುಳುವುದು ಸೇರಿದಂತೆ ಸಾರ್ವಜನಿಕ ಸ್ಥಳಗಳನ್ನು ಮಲಿನ ಮಾಡುವ ನಡವಳಿಕೆಯೂ ಸಮಸ್ಯೆಯನ್ನು ಹೆಚ್ಚಿಸುತ್ತಿದೆ. ಕಸವನ್ನು ಸೂಕ್ತ ಸ್ಥಳದಲ್ಲಿ ವಿಲೇವಾರಿ ಮಾಡಲು ಅವಕಾಶವಿದ್ದರೂ, ಕೆಲವರು ಅದನ್ನು ಬಳಸಿಕೊಳ್ಳುತ್ತಿಲ್ಲ. ಪೆಟ್ರೋಲ್ ಬಂಕ್ಗಳು ಅಥವಾ ಅಂಗಡಿಗಳಲ್ಲಿ ಇರುವ ಕಸದ ಬುಟ್ಟಿಗಳನ್ನು ಬಳಸುವ ಬದಲು ರಸ್ತೆಯಲ್ಲೇ ಕಸ ಎಸೆಯುವ ಮನೋಭಾವ ಬದಲಾಗಬೇಕು ಎಂದು ಅವರು ಅಭಿಪ್ರಾಯಪಡುತ್ತಾರೆ.
300 ಶಾಲೆಗಳಲ್ಲಿ ಉಚಿತ ಪಾಠ
ಮಕ್ಕಳಲ್ಲಿ ಸ್ವಚ್ಛತೆಯ ಅರಿವು ಮೂಡಿಸಲು ನಾಗರಾಜ್ ವಿಶೇಷ ಆದ್ಯತೆ ನೀಡಿದ್ದಾರೆ. ತಮ್ಮ ಅನುಭವದ ಆಧಾರದಲ್ಲಿ ಸುಮಾರು 300ರಿಂದ 400 ಶಾಲೆಗಳಲ್ಲಿ ಯಾವುದೇ ಶುಲ್ಕ ಪಡೆಯದೆ ತ್ಯಾಜ್ಯ ನಿರ್ವಹಣೆಯ ಕುರಿತು ಪಾಠ ಮಾಡಿದ್ದಾರೆ. “ಮಕ್ಕಳು ಹಿರಿಯರನ್ನು ನೋಡಿ ಕಲಿಯುತ್ತಾರೆ. ವಾಹನದಲ್ಲಿ ಪ್ರಯಾಣಿಸುವಾಗ ದೊಡ್ಡವರು ಕಸವನ್ನು ಎಲ್ಲಿಯಾದರೂ ಎಸೆದರೆ, ಅದನ್ನೇ ಮಕ್ಕಳು ಸಹಜ ನಡವಳಿಕೆ ಎಂದು ಭಾವಿಸಬಹುದು. ಕಾರಿನಲ್ಲೂ ಒಂದು ಕಸದ ಬುಟ್ಟಿ ಇರಲಿ, ಅದೂ ಮಾದರಿ ನಡೆಯಾಗುತ್ತದೆ” ಎನ್ನುತ್ತಾರೆ.

ಅವರ ದಿನಚರಿ ಸರಳ
ಸಿಕ್ಕಲ್ಲಿ ಒಂದು ಊಟ, ಬೆಳಿಗ್ಗೆ ಒಂದು ಚಹಾ. ರಾತ್ರಿ ಪರಿಚಯಸ್ಥರ ಮನೆಯ ಜಗುಲಿ, ಅಂಗನವಾಡಿ ಕೇಂದ್ರದ ಮೂಲೆಯಲ್ಲಿ ನಿದ್ದೆ. ವೈಯಕ್ತಿಕವಾಗಿ ಯಾರ ಸಹಾಯವೂ ಬೇಡ, ನಿರೀಕ್ಷೆಯೂ ಇಲ್ಲ.”ಸ್ವಚ್ಛತೆ ಮನಸ್ಸಿನಲ್ಲಿ ಬರಬೇಕು, ಆಗ ಪ್ರಕೃತಿ ಸ್ವಚ್ಛವಾಗಿರುತ್ತದೆ. ಸರ್ಕಾರ ಎಷ್ಟೇ ಕಾರ್ಯಕ್ರಮ ಮಾಡಿದರೂ ಸಾರ್ವಜನಿಕರಲ್ಲಿ ಸಾಮಾಜಿಕ ಹೊಣೆಗಾರಿಕೆ ಬೆಳೆಯದಿದ್ದರೆ ಬದಲಾವಣೆ ಸಾಧ್ಯವಿಲ್ಲ. ನಿಜವಾದ ದೇಶಪ್ರೇಮವೆಂದರೆ ಘೋಷಣೆ ಅಲ್ಲ, ನೆಲ, ಜಲ, ಪರಿಸರವನ್ನು ಮುಂದಿನ ಪೀಳಿಗೆಗೆ ಸ್ವಚ್ಛವಾಗಿ ಹಸ್ತಾಂತರಿಸುವುದು” ಎನ್ನುತ್ತಾರೆ ನಾಗರಾಜ್.ರಸ್ತೆ ನಮ್ಮದು, ಪರಿಸರ ನಮ್ಮದು, ಜವಾಬ್ದಾರಿಯೂ ನಮ್ಮದೇ ಎಂಬ ಸಂದೇಶದೊಂದಿಗೆ ಕಸದ ಗೋಣಿ ಹೊತ್ತು ಸಾಗುತ್ತಿರುವ ಈ ಯಾತ್ರಿಕನ ಸಂಕಲ್ಪ ಸಮಾಜಕ್ಕೆ ನಿಜಕ್ಕೂ ಮಾದರಿಯಾಗಿದೆ.
ಬರಹ : ಅಕ್ಷಯ್ ಕುಮಾರ್ ಎ ಕಡೇಶಿವಾಲಯ










